ಪ್ರಶ್ನೆ ಉತ್ತರ ರಮ್ಯ, ಹರಿಹರ ನಾನು 10ನೇ ತರಗತಿಯಲ್ಲಿ 84% ಪಡೆದಿದ್ದೆ. ಆದರೆ ಪಿಯುಸಿಯಲ್ಲಿ ಕೇವಲ 48% ಪಡೆದೆ. ಸಿ.ಇ.ಟಿ. ಪರೀಕ್ಷೆಯಿಂದ ಆಯುರ್ವೇದ ವಿಭಾಗದಲ್ಲಿ ಶ್ರೇಯಾಂಕ ಪಡೆದರೂ ಸೇರಿಕೊಳ್ಳಲಿಲ್ಲ. ನಂತರ ಬಿಎಸ್ಸಿ ಸಿಬಿಝಡ್ ತೆಗೆದುಕೊಂಡೆ. ನಾನು ಪಿಯುಸಿಯಲ್ಲಿ ಇರಬೇಕಾದರೆ ಉಪನ್ಯಾಸಕರು ರಸಾಯನಶಾಸ್ತ್ರದಲ್ಲಿ ಎಂಎಸ್ಸಿ ಮಾಡುವುದಾದರೆ ಸಿಬಿಝಡ್ ಆರಿಸಿಕೊಳ್ಳಬೇಕು ಎನ್ನುತ್ತಿದ್ದರು. ಆದರೆ ಈಗ ಕೆಲವರು ಸಸ್ಯಶಾಸ್ತ್ರದಲ್ಲಿ ಎಂಎಸ್ಸಿ ಮಾಡಿದರೆ ಉತ್ತಮ ಎನ್ನುತ್ತಿದ್ದಾರೆ. ನಾನು ಸಸ್ಯಶಾಸ್ತ್ರದಲ್ಲೂ ಉತ್ತಮ ಅಂಕಗಳನ್ನು ಪಡೆಯುತ್ತಿದ್ದೇನೆ. ಆದರೆ ಮನೆಯಲ್ಲಿ ಎಲ್ಲರೂ ಎಂಸಿಎ ಮಾಡು ಎನ್ನುತ್ತಿದ್ದಾರೆ. ಜೊತೆಗೆ ಮನೆಯಲ್ಲಿ ಕಂಪ್ಯೂಟರ್ ಕೂಡ ಇದೆ. ಆದರೆ ನನಗೆ ಇದು ಇಷ್ಟವಿಲ್ಲ. ನನಗೆ ರಸಾಯನ ಶಾಸ್ತ್ರದಲ್ಲಿ ಹೆಚ್ಚಿನ ಆಸಕ್ತಿ ಇದೆ. ಗೊಂದಲದಲ್ಲಿದ್ದೇನೆ ದಯಮಾಡಿ ಸಲಹೆ ಕೊಡಿ. - ಹತ್ತನೇ ತರಗತಿಯಲ್ಲಿ 84% ಅಂಕಗಳನ್ನು ತೆಗೆದ ನೀವು ಪಿಯುಸಿಯಲ್ಲಿ 48% ನಷ್ಟು ಕಡಿಮೆ ಅಂಕ ತೆಗೆದಿದ್ದೀರಿ. ವಿದ್ಯಾಭ್ಯಾಸದ ಯಾವುದೇ ಹಂತದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೆ ಎಂತಹ ಪರಿಣಾಮಗಳಾಗುತ್ತವೆ ಎಂಬುದಕ್ಕೆ ಇದು ನಿದರ್ಶನ. ಇದರಿಂದ ನೀವು ಸೂಕ್ತ ಪಾಠ ಕಲಿತಿರುವಿರಾದರೆ ಮುಂದೆಂದೂ ಹೀಗಾಗದ ಹಾಗೆ ನೋಡಿಕೊಳ್ಳುತ್ತೀರಿ. ನಿಮ್ಮ ಆಸಕ್ತಿ ಜೀವಶಾಸ್ತ್ರ ಮತ್ತು ರಸಾಯನಶಾಸ್ತ್ರದಲ್ಲಿ ಇದೆ ಎಂಬುದು ನಿಚ್ಚಳ. ಹೀಗಾಗಿ ನೀವು ಈ ವಿಷಯಗಳಲ್ಲೇ ಎಂಎಸ್ಸಿ ಮಾಡುವುದು ಸೂಕ್ತ. ಅನಂತರ ಘೆಉಒ್ಕಊ ಈ ಪರೀಕ್ಷೆ ತೆಗೆದುಕೊಂಡು ಸಂಶೋಧನಾ ಕ್ಷೇತ್ರವನ್ನು ಪ್ರವೇಶಿಸಬಹುದು. ಈ ವಿಷಯಗಳಲ್ಲಿ ಪ್ರಾಧ್ಯಾಪಕರೂ ಆಗಬಹುದು. ನಿಮ್ಮ ಕಂಪ್ಯೂಟರನ್ನು ಜೀವಶಾಸ್ತ್ರ ಅಥವಾ ರಸಾಯನಶಾಸ್ತ್ರದ ಓದಿಗೇ ಬಳಸಬಹುದು. ಅಂತರ್ಜಾಲದಲ್ಲಿ ನಿಮ್ಮ ಓದಿಗೆ ನೆರವಾಗುವ ಸಾವಿರಾರು ತಾಣಗಳಿವೆ. ಬಿಎಸ್ಸಿ ನಂತರ ಮೆಡಿಕಲ್‌ಗೆ ಹೋಗಲು ನೀವು ಪುನಃ ಸಿಇಟಿ ಪರೀಕ್ಷೆಯನ್ನು ತೆಗೆದುಕೊಂಡು ಉತ್ತಮ ಶ್ರೇಯಾಂಕ ಪಡೆಯಬೇಕು. ಜೊತೆಗೆ ಪಿಯುಸಿಯಲ್ಲಿ ನೀವು ಕನಿಷ್ಠ 60% ಅಂಕಗಳನ್ನು ಪಡೆದಿರಬೇಕು. ಪಿಯುಸಿಯಲ್ಲಿ ನಿಮ್ಮ ಅಂಕಗಳು 48% ಇರುವುದರಿಂದ ಈ ದಾರಿ ನಿಮಗೆ ಮುಚ್ಚಿದೆ ಆದ್ದರಿಂದ ನಿಮ್ಮ ಹೃದಯಕ್ಕೆ ಹತ್ತಿರವಾದ ಸಸ್ಯಶಾಸ್ತ್ರ ಅಥವಾ ರಸಾಯನಶಾಸ್ತ್ರದಲ್ಲೇ ವಿದ್ಯಾಭ್ಯಾಸ ಮುಂದುವರೆಸಿರಿ. ಚಂದನ ನಾನು 10ನೇ ತರಗತಿ (ಸಿಬಿಎಸ್ಸಿ) ಮುಗಿಸಿದ್ದೇನೆ. ನನಗೆ 10+2 ನಂತರ ಬಿ.ಆರ್ಕ್ ತೆಗೆದುಕೊಳ್ಳಬೇಕು ಎಂಬ ಆಸೆ ಇದೆ. ಆದರೆ ನಾನು ಈಗ 11ನೇ ತರಗತಿಯಲ್ಲಿ ಏನು ಆಯ್ದುಕೊಳ್ಳಬೇಕು ಎಂಬ ಗೊಂದಲದಲ್ಲಿದ್ದೇನೆ. ಪಿಯುಸಿ ಅಥವಾ ಡಿಪ್ಲೊಮಾ ಮಾಡುವುದೋ ತೋಚುತ್ತಿಲ್ಲ. ದಯಮಾಡಿ ಮಾರ್ಗದರ್ಶನ ಕೊಡಿ. - ನಿಮಗೆ ವಿನ್ಯಾಸಶಾಸ್ತ್ರ (ಆರ್ಕಿಟೆಕ್ಚರ್)ದಲ್ಲಿ ಆಸಕ್ತಿ ಇದ್ದರೆ ಪಿಯುಸಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತವನ್ನು ಅಭ್ಯಾಸ ಮಾಡುವುದು ಒಳ್ಳೆಯದು. ಪಿಯು ಬೋರ್ಡ್ ಮತ್ತು ಸಿಇಟಿ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಿದರೆ ಒಳ್ಳೆಯ ಎಂಜನಿಯರಿಂಗ್ ಕಾಲೇಜಿನಲ್ಲಿ ವಿನ್ಯಾಸಶಾಸ್ತ್ರದಲ್ಲಿ ಬಿ.ಇ. ಮಾಡಬಹುದು. ವಿನ್ಯಾಸದಲ್ಲಿ ಡಿಪ್ಲೊಮಾ ಮಾಡುವುದಕ್ಕಿಂತ ಇದು ಉತ್ತಮ. ಶ್ರೀಕಾಂತ್ ನಾನು 2007ರಲ್ಲಿ ಬಿಬಿಎಂ ಮುಗಿಸಿಕೊಂಡೆ. 2008ರಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಎರಡು ವರ್ಷ ಉದ್ಯೋಗದಲ್ಲಿದ್ದೆ. ಕಾರಣಾಂತರಗಳಿಂದ ಆ ಕಂಪೆನಿಯನ್ನು ಬಿಟ್ಟು ಬೇರೆ ಕಂಪೆನಿಗೆ ಸೇರಿಕೊಂಡೆ. ಈಗ ಎರಡು ವರ್ಷಗಳಿಂದ ಅಲ್ಲೇ ಕಾರ್ಯನಿರ್ವಹಿಸುತ್ತಿದ್ದೇನೆ. ವಿದ್ಯಾಭ್ಯಾಸವನ್ನು ಮುಂದುವರೆಸಬೇಕೆಂಬ ಹಂಬಲದಿಂದ ಈಗ ಐಇಅ ತರಬೇತಿಗೆ ಸೇರಿಕೊಂಡಿದ್ದೇನೆ. ಈಗ ನನಗೆ ಉದ್ಯೋಗ ಮತ್ತು ವಿದ್ಯಾಭ್ಯಾಸ ಎರಡನ್ನೂ ನಿಭಾಯಿಸುವುದು ಕಷ್ಟವೆನಿಸುತ್ತಿದೆ. ದಯಮಾಡಿ ಸೂಕ್ತ ಸಲಹೆ ನೀಡಿ ಮಾರ್ಗದರ್ಶನ ಕೊಡಿ. - ಎರಡು ಕಂಪೆನಿಗಳಲ್ಲಿ ಕೆಲಸ ಮಾಡಿ ನಾಲ್ಕು ವರ್ಷಗಳ ಅನುಭವವಿರುವ ನಿಮಗೆ ಐಇಅ ಕಷ್ಟವಾಗದು. ಕೆಲವೊಮ್ಮೆ ಕೆಲಸ ಮತ್ತು ಓದಿನ ಒತ್ತಡಗಳು ಹೆಚ್ಚಾದಾಗ ಯಾವುದಾದರೂ ಒಂದನ್ನು ಬಿಡುವ ಯೋಚನೆ ಮನಸ್ಸಿಗೆ ಬರುತ್ತದೆ. ಆದರೆ ಧೃತಿಗೆಡದೆ ಎರಡರಲ್ಲೂ ಮುಂದುವರಿಯುವುದು ಒಳ್ಳೆಯದು. ಕೆಲಸವಿಲ್ಲದಿದ್ದರೆ ಪೂರ್ಣಕಾಲ ಓದಿನಲ್ಲೇ ಮಗ್ನರಾಗಬಹುದು ಎಂದು ಅನ್ನಿಸಿದರೂ ಕೆಲಸದ ಅನುಭವ ಓದಿಗೆ ನೀಡುವ ಪುಷ್ಟಿ ಕಡಿಮೆಯೇನಲ್ಲ. ಕೆಲಸದ ಮಧ್ಯೆ ಸಿಗುವ ಬಿಡುವನ್ನೇ ಸಮರ್ಥವಾಗಿ ಓದಿಗೆ ಬಳಸಿಕೊಳ್ಳುವುದೇ ಜಾಣತನ. ಸೈಯದ್ ಹಫೀಸುಲ್ಲಾ ಹುಸೈನಿ ನಾನು ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್‌ಗೆ ಪ್ರವೇಶ ಪಡೆದಿದ್ದೇನೆ (ಸಿವಿಲ್). ಆದರೆ ಭವಿಷ್ಯದಲ್ಲಿ ಇದಕ್ಕೆ ಬೆಲೆ ಇದೆಯೇ? ಉತ್ತಮ ಉದ್ಯೋಗಾವಕಾಶಗಳು ಸಿಗುತ್ತವೆಯೇ ಎಂದು ದಿಗಿಲಾಗುತ್ತಿದೆ. - ಸಿವಿಲ್ ಎಂಜನಿಯರಿಂಗ್ ತುಂಬಾ ಬೇಡಿಕೆ ಇರುವ ಕ್ಷೇತ್ರ. ಸಾಫ್ಟವೇರ್ ಕ್ಷೇತ್ರದ ಹಾಗೆ ಇಲ್ಲಿ ಏಳು ಬೀಳುಗಳಿಲ್ಲ. ಬೇಡಿಕೆ ಸಿವಿಲ್ ಎಂಜನಿಯರಿಂಗ್ ಕ್ಷೇತ್ರದಲ್ಲಿ ಒಂದೇ ಸಮನಾಗಿ ಇರುತ್ತದೆ. ಉತ್ತಮ ಅಭ್ಯಾಸದೊಂದಿಗೆ ಈ ಕ್ಷೇತ್ರದಲ್ಲಿ ನೀವು ಪರಿಣತಿಯನ್ನು ಸಾಧಿಸಿದರೆ ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ. ಪ್ರಶಾಂತ್ ಅಗರವಾಲ್, ಬಿಜಾಪುರ ನಾನು ಕಲಾ ವಿಭಾಗದಲ್ಲಿ ಪಿಯುಸಿ ಓದುತ್ತಿದ್ದೇನೆ. ಪಿಯು ಮುಗಿದ ಮೇಲೆ ಏನು ಮಾಡಬೇಕೆಂದು ತಿಳಿಸಿ. ಅಂತೆಯೇ ಇದರ ಜೊತೆಗೆ ನಾನು ಬೇರೆ ಯಾವುದಾದರೂ ಡಿಪ್ಲೊಮಾ ಕೋರ್ಸ್ ಮಾಡಬಹುದೇ ತಿಳಿಸಿ. - ಮುಂದೆ ನೀವು ಏನು ಮಾಡಬೇಕು ಎಂಬುದು ನಿಮ್ಮ ಆಸಕ್ತಿಯನ್ನೇ ಅವಲಂಬಿಸಿದೆ. ಪಿಯು. ಓದುವಾಗ ನೀವು ಇಂಗ್ಲಿಷ್ ಭಾಷೆ, ಕನ್ನಡ ಭಾಷೆ, ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ ಮೊದಲಾದ ವಿಷಯಗಳನ್ನು ಅಭ್ಯಾಸ ಮಾಡುತ್ತೀರಿ. ಶ್ರದ್ಧೆಯಿಂದ ಈ ವಿಷಯಗಳನ್ನು ಅಭ್ಯಾಸ ಮಾಡುವಾಗ ಯಾವ ವಿಷಯ ನಿಮಗೆ ಹೆಚ್ಚು ಆಸಕ್ತಿಕರವೆಂಬುದು ತಿಳಿಯುತ್ತದೆ. ನಿಮ್ಮ ಆಸಕ್ತಿಯ ಕ್ಷೇತ್ರವನ್ನು ಗುರುತಿಸಿಕೊಂಡರೆ ಮುಂದಿನ ನಡೆ ನಿಚ್ಚಳವಾಗುತ್ತದೆ. ಪಿಯು ನಂತರ ಉದ್ಯೋಗವೇ ನಿಮ್ಮ ಆದ್ಯತೆಯಾದರೆ ಡಿಪ್ಲೊಮಾ ಕೋರ್ಸ್‌ಗೆ ಸೇರಬಹುದು. ಇನ್ನೂ ಹೆಚ್ಚಿನ ಓದಿನಲ್ಲಿ ಆಸಕ್ತಿ ಇದ್ದರೆ, ಬಿ.ಎ, ಎಂ.ಎ. ಮಾಡಬಹುದು. ಘೆಉ ಪರೀಕ್ಷೆ ಮಾಡಿಕೊಂಡು ಪ್ರಾಧ್ಯಾಪಕರಾಬಹುದು. ಕಾನೂನು ಶಾಸ್ತ್ರವನ್ನು ಓದಿ ವಕೀಲನಾಗಬಹುದು. ಪತ್ರಿಕೋದ್ಯಮ ಅಭ್ಯಾಸ ಮಾಡಿ ಪತ್ರಿಕಾರಂಗವನ್ನು ಪ್ರವೇಶಿಸಬಹುದು. ಹೀಗೆ ನಿಮ್ಮ ಮುಂದೆ ಹಲವಾರು ಅವಕಾಶಗಳಿವೆ. ನಿಮ್ಮ ಆಸಕ್ತಿಯನ್ನು ಗುರುತಿಸಿಕೊಂಡರೆ ಮುಂದಿನ ನಡೆ ಸುಲಭ. ಪ್ರಶ್ನೆ ಕಳಿಸಬೇಕಾದ ವಿಳಾಸ: ಸಂಪಾದಕರು, ಶಿಕ್ಷಣ ವಿಭಾಗ, ಪ್ರಜಾವಾಣಿ, 75 ಎಂಜಿ ರಸ್ತೆ,ಬೆಂಗಳೂರು 560001 ಪ್ರಶ್ನೆಗಳನ್ನು ಇಮೇಲ್‌ನಲ್ಲೂ ಕಳಿಸಬಹುದು: @. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.