ಅಧ್ಯಾಪಕರಿಗೆ ಬೇಡವೇ ಪ್ರಾಯೋಗಿಕ ಜ್ಞಾನ? ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ನೀಡುವ ಕರ್ನಾಟಕ ರಾಜ್ಯ ಮುಕ್ತ ವಿವಿಯ `ಆಕ್ಷೇಪಾರ್ಹ ವೈಖರಿ~ ಬಗ್ಗೆ ಗಮನ ಸೆಳೆದು ಡಾ.ನಿರಂಜನ ವಾನಳ್ಳಿಯವರು ಒಳ್ಳೆಯ ಕೆಲಸವನ್ನೇ ಮಾಡಿದ್ದಾರೆ. ಪ್ರಯೋಗಶೀಲ ಗುಣವನ್ನು ನೆಚ್ಚಿಕೊಳ್ಳದ ಶಿಕ್ಷಣದಿಂದ ಆಗುವ ಪ್ರಯೋಜನಗಳ ಬಗ್ಗೆ ಅವರು ವ್ಯಕ್ತಪಡಿಸಿರುವ ಅನುಮಾನಗಳು ನಿಜವಾದದ್ದೇ. ಇದೇ ವೇಳೆ, ಪತ್ರಿಕೋದ್ಯಮ ಕಲಿಸುವ ಬಹುತೇಕ ಪೂರ್ಣಾವಧಿ ಕಾಲೇಜುಗಳಲ್ಲಿ ಎಷ್ಟರ ಮಟ್ಟಿಗೆ ಪ್ರಾಯೋಗಿಕ ಬೋಧನೆ ನಡೆಯುತ್ತಿದೆ? ಅಲ್ಲಿನ ಅಧ್ಯಾಪಕರು ಎಷ್ಟರ ಮಟ್ಟಿಗೆ ಥಿಯರಿ ಜೊತೆಗೆ ಪ್ರಾಯೋಗಿಕವಾಗಿ ಪತ್ರಿಕೋದ್ಯಮ ಕಲಿತಿದ್ದಾರೆ ಮತ್ತು ಬೋಧಿಸುತ್ತಿದ್ದಾರೆ ಎಂಬ ಪ್ರಶ್ನೆಗಳನ್ನು ಇಲ್ಲಿ ಕೇಳಲೇಬೇಕಾಗುತ್ತದೆ. ಪತ್ರಿಕೋದ್ಯಮದ ಇತಿಹಾಸ, ನೈತಿಕತೆ ಮತ್ತು ಕಾನೂನುಗಳ ಬಗ್ಗೆ ಪಠ್ಯಪುಸ್ತಕಗಳಲ್ಲಿ ಇರುವುದನ್ನು ನೀರಸವಾಗಿ, ಹೇಗಿದೆಯೋ ಹಾಗೆ ವಿವರಿಸುವ ಮಟ್ಟಿಗಷ್ಟೆ ಸೀಮಿತಗೊಳಿಸಿಕೊಂಡಿರುವ ಹಲವರು, ಆ ದಿನದ ಜಾಗತಿಕ-ಸ್ಥಳೀಯ ವಿದ್ಯಮಾನಗಳ ಉದಾಹರಣೆಗಳನ್ನು ಕೊಟ್ಟು ತೌಲನಿಕ ವಿಶ್ಲೇಷಣೆಗೆ ಒಳಪಡಿಸಿ ಪಾಠ ವಿವರಿಸುವ ಜಾಯಮಾನವನ್ನೇ ರೂಢಿಸಿಕೊಂಡಿಲ್ಲ. ಬೆರಳೆಣಿಕೆಯಷ್ಟು ಮಂದಿಯನ್ನು ಹೊರತುಪಡಿಸಿದರೆ ಬಹಳಷ್ಟು ಪತ್ರಿಕೋದ್ಯಮ ಶಿಕ್ಷಕರು ಯಾವುದೇ ಪತ್ರಿಕೆ ಅಥವಾ ದೃಶ್ಯ ಮಾಧ್ಯಮದಲ್ಲಿ ಕೆಲಸ ಮಾಡಿ ಗೊತ್ತಿಲ್ಲದವರು. ಹೆಚ್ಚು ದಿನಪತ್ರಿಕೆಗಳನ್ನು ಓದುವ ಅಭ್ಯಾಸವೇ ಇಲ್ಲದವರು. ವರದಿ ಎಂದರೇನು ಎಂದು ಅತ್ಯದ್ಭುತವಾಗಿ ವಿವರಿಸಬಲ್ಲ ಅಧ್ಯಾಪಕ ಅಂಥ ಒಂದು ಉದಾಹರಣೆಯನ್ನು ವಿದ್ಯಾರ್ಥಿಗಳಿಗೆ ನೀಡಲು ಹಲವು ಪತ್ರಿಕೆಗಳನ್ನು, ದೃಶ್ಯಗಳನ್ನು ಗಮನಿಸಬೇಕಾಗುತ್ತದೆ. ಪುಟವಿನ್ಯಾಸದ ಬಗ್ಗೆ ವಿವರಿಸುವಾಗ ಅದರ ಸೌಂದರ್ಯಾತ್ಮಕ ಮತ್ತು ವೃತ್ತಿಪರ ಆಯಾಮಗಳ ಜೊತೆಗೆ, ಪುಟವಿನ್ಯಾಸದ ಹೊಸ ತಂತ್ರಜ್ಞಾನದ ಮಾಹಿತಿಯನ್ನು ನೀಡಬೇಕಾಗುತ್ತದೆ. ಪತ್ರಿಕಾ ಕಚೇರಿ/ ಟಿವಿ ಚಾನೆಲ್‌ನ ಕಾರ್ಯವೈಖರಿ ಬಗ್ಗೆ ತರಗತಿಯಲ್ಲಿ ವಿವರಿಸಿದರಷ್ಟೆ ಸಾಕಾಗುವುದಿಲ್ಲ. ಅಲ್ಲಿಗೆ ಕರೆದುಕೊಂಡು ಹೋಗಿ ಬಂದರೆ ಸಾಕೆ? ಸಾಲದು. ಪತ್ರಿಕೋದ್ಯಮ ಶಿಕ್ಷಕ ದಿನವೂ ಸುದ್ದಿಮನೆಯ ಸಂಗಾತಿಯಾಗಬೇಕಾಗುತ್ತದೆ. ಆದರೆ ಈ ಸಾಂಗತ್ಯದ ವಿಚಾರಕ್ಕೆ ಬಂದರೆ ಬಹಳಷ್ಟು ಮಂದಿಗೆ ಪತ್ರಿಕೋದ್ಯಮವನ್ನು ಪಾಠ ಮಾಡುವುದೆಂದರೆ ಇತರೆ ಮಾನವಿಕ ವಿಷಯಗಳನ್ನು ಪ್ರಶ್ನೆ-ಉತ್ತರದ ಮಾದರಿಯಲ್ಲಿ ಬೋಧಿಸಿದಂತೆ ಮಾತ್ರವೇ ಹೊರತು ಹೆಚ್ಚುವರಿಯಾಗಿ ಇನ್ನೇನೂ ಅಲ್ಲ. ಹೀಗಾಗಿಯೇ ಬಹಳಷ್ಟು ಕಾಲೇಜುಗಳಿಂದ ಹೊರಬರುವ ಪತ್ರಿಕೋದ್ಯಮ ವಿದ್ಯಾರ್ಥಿಗಳು ಇಂಟರ್ನ್‌ಶಿಪ್‌ಗೆಂದೋ, ಟ್ರೈನಿಗಳಾಗಿಯೇ ಕಚೇರಿ ಪ್ರವೇಶಿಸುತ್ತಿದ್ದಂತೆಯೇ ತಬ್ಬಿಬ್ಬಾಗುತ್ತಾರೆ. ಅದುವರೆಗೂ ಪತ್ರಿಕೋದ್ಯಮದ ಬಗ್ಗೆ ಓದಿದ್ದೆಲ್ಲ ಇಲ್ಲಿ ಏನೂ ಇಲ್ಲ ಎನ್ನಿಸಿಬಿಡುತ್ತದೆ. ಪತ್ರಿಕಾ ಹೇಳಿಕೆಯೊಂದನ್ನು ಸುದ್ದಿರೂಪಕ್ಕೆ ತರುವ ಸಣ್ಣ ಕೆಲಸವೂ ಅವರಲ್ಲಿ ಗಾಬರಿ ಮತ್ತು ಆತಂಕ ಮೂಡಿಸುತ್ತದೆ. ವೈವಿಧ್ಯಮಯ ವಿಷಯಗಳ ಕುರಿತು ಅಪಾರವಾಗಿ ಓದುವ ಪರಿಶ್ರಮ, ಸ್ವಂತಿಕೆಯ ಲೇಖನ ಶೈಲಿಯನ್ನು ರೂಢಿಸಿಕೊಳ್ಳುವುದು, ತನ್ನ ಆಸಕ್ತಿಯ ಕ್ಷೇತ್ರ ಯಾವುದೆಂದು ಗುರುತಿಸಿಕೊಳ್ಳುವುದು, ಅದರಲ್ಲಿ ಇದುವರೆಗೆ ಬಂದಿರುವ ಲೇಖನಗಳು, ಸಂಶೋಧನೆ, ಸಮಕಾಲಿನ ವಿಷಯ ಜ್ಞಾನ, ಸುದ್ದಿಗಳು, ವರದಿ, ಲೇಖನಗಳ ಸಾಚಾತನವನ್ನು ಅಂದಾಜಿಸುವುದು- ಇವೆಲ್ಲವೂ ಪತ್ರಿಕೋದ್ಯಮ ವಿದ್ಯಾರ್ಥಿಗಳಲ್ಲಿ ವೃತ್ತಿಗೆ ಬರುವ ಮುನ್ನವೇ ಇರಬೇಕಾದ ಗುಣಗಳು. ಆದರೆ ಇವುಗಳ ಬಗ್ಗೆ ಅವರನ್ನು ಏನಾದರೂ ಪ್ರಶ್ನಿಸಿದರೆ ಈ ಪ್ರಶ್ನೆಗಳು ನಮ್ಮ ಪಠ್ಯಪುಸ್ತಕಗಳಲ್ಲಿ ಇರಲಿಲ್ಲ ಎನ್ನುತ್ತಾರೆ! ಮುಕ್ತ ವಿವಿಯಲ್ಲಿ ಪತ್ರಿಕೋದ್ಯಮವನ್ನು ಓದಲು ಬರುವ ಕಾರ್ಯನಿರತ ಪತ್ರಕರ್ತರು ಪದವಿ ಪ್ರಮಾಣಪತ್ರಕ್ಕೆಂದೇ ಸೇರುತ್ತಾರೆ. ಸಂಪರ್ಕ ತರಗತಿಗಳಲ್ಲಿ ಸಂಪನ್ಮೂಲ ವ್ಯಕ್ತಿಗಳೆನಿಸಿಕೊಂಡ ಹಲವರು ತಾತನ ಕಾಲದ ಅದೇ ಮಾತುಗಳನ್ನು ಆಡುತ್ತಿದ್ದರೆ ಹಿಂದಿನ ಸಾಲಿನಲ್ಲಿ ಕುಳಿತು ಬಿದ್ದುಬಿದ್ದು ನಗುವ ಪತ್ರಕರ್ತರನ್ನು ನಾನು ಕಂಡಿದ್ದೇನೆ. ಉಳಿದವರಿಗೆ ತಾವೂ ಜರ್ನಲಿಸಂ ಓದಿದ್ದೇವೆ ಎಂದು ಹೇಳಿಕೊಳ್ಳಲು ಮುಕ್ತ ವಿವಿ ಬೇಕು. ಉದ್ಯೋಗಿಗಳಿಗೆ ಪ್ರಮೋಷನ್‌ಗಾಗಿ ಬೇಕು. ಗೃಹಿಣಿಯರಿಗೆ, ಗೃಹಸ್ಥರಿಗೆ ಹೆಚ್ಚುವರಿ ವಿದ್ಯಾರ್ಹತೆಗಾಗಿ ಬೇಕು. ಸಾವಿರಾರು ಮಂದಿಯಲ್ಲಿ ಕೆಲವರು ಮಾತ್ರ ವಿಷಯ ತಿಳಿದುಕೊಳ್ಳುವ ಉತ್ಸಾಹದಿಂದ (ಅದರಿಂದ ಕೆಲಸ ಸಿಕ್ಕಲಿ ಬಿಡಲಿ ಎಂಬ ಪ್ರಾಮಾಣಿಕತೆಯೂ ಇರುತ್ತದೆ) ಬರುತ್ತಾರೆ. ಮುಕ್ತ ವಿವಿಗಳಲ್ಲಿ ಪಾಠ ಮಾಡುವವರಿಗಿಂತಲೂ ವೃತ್ತಿ ನಿರ್ವಹಣೆಯಲ್ಲಿ ತಾವು ಶ್ರೇಷ್ಠರು ಎಂಬ ಭಾವನೆ ಪೂರ್ಣಾವಧಿ ಕಾಲೇಜುಗಳ ಪತ್ರಿಕೋದ್ಯಮ ವಿಭಾಗದ ಅನೇಕ ಬೋಧಕರಲ್ಲಿ ಇದ್ದಂತಿದೆ (ಇತರೆ ವಿಷಯಗಳಿಗೂ ಇದನ್ನೂ ಅನ್ವಯಿಸಬಹುದು). ಆದರೆ ರೆಗ್ಯುಲರ್ ಆಗಿ ಪಾಠ ಮಾಡುವವರು ಮತ್ತು ಮುಕ್ತ ವಿವಿಗಳಲ್ಲಿ ಪಾಠ ಮಾಡುವವರ ವಿದ್ಯಾರ್ಹತೆಯಲ್ಲಿ ವ್ಯತ್ಯಾಸವಿರುವುದಿಲ್ಲ ಎಂಬುದನ್ನು ಗಮನಿಸಬೇಕು. ಅಲ್ಲದೆ, ಕೆಲಸಕ್ಕೆ ಸೇರಿದ ಬಳಿಕ ತಮ್ಮ ಬೋಧನೆಯ ಅರ್ಹತೆಯನ್ನು ಬೋಧಕರು ಎಷ್ಟರ ಮಟ್ಟಿಗೆ ಹೆಚ್ಚಿಸಿಕೊಂಡಿದ್ದಾರೆ, ಅದರಿಂದ ವಿದ್ಯಾರ್ಥಿಗಳಿಗೆ ಹೇಗೆ ಅನುಕೂಲವಾಗಿದೆ ಎಂಬುದೇ ಮುಖ್ಯ. ಆದರೆ ಆ ಬಗ್ಗೆ ಹೆಚ್ಚು ಚರ್ಚೆಗಳಾಗುವುದೇ ಇಲ್ಲ ಎಂಬುದು ಸದ್ಯದ ವಿಪರ್ಯಾಸ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.