ರಜೆಯಲ್ಲೂ ಕಲಿಕೆ ಯಾಕೆ? ಪರೀಕ್ಷೆ ಮುಗಿಯುತ್ತಿದ್ದಂತೆ ಮಕ್ಕಳಿಗೆ ಹಿಗ್ಗೋ ಹಿಗ್ಗು; ಸ್ವಾತಂತ್ರ್ಯ ಪಡೆದಂತಹ ಅನುಭವ. ಶಾಲಾ ಅವಧಿಯಲ್ಲಿ ಕಳೆದುಕೊಂಡ ಸಂತಸ ಒಮ್ಮೆಲೇ ಮರುಕಳಿಸಿಬಿಡುತ್ತದೆ. ಸ್ವಚ್ಛಂದ ಜಗತ್ತಿನಲ್ಲಿ ಹಕ್ಕಿಯಂತಾಗುತ್ತಾರೆ. ಪುಸ್ತಕದ ಚೀಲಗಳು ಯಾರಿಗೂ ಕಾಣಿಸದ ಜಾಗ ಸೇರುತ್ತವೆ. ಇದರ ಮಧ್ಯೆ, `ರಜೆಯಲ್ಲಿ ಏನು ಮಾಡಬೇಕು? ಎಲ್ಲಿಗೆ ಹೋಗಬೇಕು? ಹೊಸದು ಯಾವುದನ್ನು ಕಲಿಯಬೇಕು? ಈ ಬಾರಿ ಅಪ್ಪ- ಅಮ್ಮ ನನ್ನನ್ನು ಅಜ್ಜಿಯ ಮನೆಗೆ ಕಳಿಸುವರೇ? ಊರಲ್ಲಿ ಯಾರ ಮದುವೆ ಇದೆ? ಹೋದಾಗ ಮಾಮ ನನ್ನನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಾರೆ? ಏನೆಲ್ಲಾ ತಿಂಡಿಯನ್ನು ಮಾಮಿ ನಮಗಾಗಿ ಮಾಡುತ್ತಾರೆ?~ ಹೀಗೆ ಪ್ರಶ್ನೆಗಳು ಅವರನ್ನು ವಿಧವಾಗಿ ಕಾಡುತ್ತವೆ. ಒಂದು ರೀತಿ ವ್ಯವಸ್ಥಿತ ಲೆಕ್ಕಾಚಾರಗಳೊಂದಿಗೆ ಹಲವು ಗೊಂದಲಗಳು ಅವರ ತಲೆಯಲ್ಲಿರುತ್ತವೆ. ಜತೆಗೆ `ಚೆನ್ನಾಗಿ ಅಭ್ಯಾಸ ಮಾಡು, ಉತ್ತಮ ಅಂಕ ಗಳಿಸು, ಈ ಬಾರಿ ರಜೆಯಲ್ಲಿ ನಿನ್ನನ್ನು ಅಲ್ಲಿಗೆ- ಇಲ್ಲಿಗೆ ಕರೆದುಕೊಂಡು ಹೋಗುತ್ತೇನೆ~ ಎಂಬ ಆಶ್ವಾಸನೆಗಳಿಗೇನೂ ಕಡಿಮೆಯಿರುವುದಿಲ್ಲ. ಪುಟ್ಟ ಮಕ್ಕಳಂತೂ `ನಮ್ಗೆ ಸಿಕ್ಸ್‌ಟಿ ಡೇಸ್ ರಜವಂತಲ್ಲಮ್ಮ~ ಎಂದು ಬೀಗುತ್ತಿರುತ್ತವೆ. ರಜೆ-ಅದರ ಸದ್ಭಳಕೆ ರಜಾ ಸಮಯ ಕೂಡ ಅತ್ಯಮೂಲ್ಯ. ಏಕತಾನತೆಯಿಂದ ಮಕ್ಕಳು ಹೊರಬರಲು, ತಮ್ಮದೇ ಲೋಕದಲ್ಲಿ ಕ್ರಿಯಾಶೀಲತೆ ಮೈಗೂಡಿಸಿಕೊಳ್ಳಲು, ಸುಪ್ತ ಕೌಶಲಕ್ಕೆ ಸಾಣೆ ಹಿಡಿಯಲು, ಅನ್ವೇಷಣಾ ಪ್ರವೃತ್ತಿಯಲ್ಲಿ ತೊಡಗಿಸಿಕೊಳ್ಳಲು ಇರುವ ಸಕಾಲವೂ ಹೌದು. ನಿಜವಾಗಿ ಹೇಳುವುದಾದರೆ, ಮಕ್ಕಳಲ್ಲಿನ ಸುಪ್ತ ಪ್ರತಿಭೆಗಳು ಹೆತ್ತವರಿಗೆ ಗೋಚರವಾಗುವ ಕಾಲವೂ ಇದಾಗಿರುತ್ತದೆ. ಈ ಸಂದರ್ಭದಲ್ಲಿ ಪಠ್ಯ ಕಲಿಕೆಗಿಂತ ಭಿನ್ನವಾಗಿ ಇತರೆ ಚಟುವಟಿಕೆಗಳಲ್ಲಿ ಮಕ್ಕಳನ್ನು ಹೇಗೆ ತೊಡಗಿಸಬೇಕು ಎಂಬುದರ ಮೂಲಜ್ಞಾನದ ಅವಶ್ಯಕತೆ ಪೋಷಕರಿಗೆ ಇರುವುದು ಒಳಿತು. ಬಿಗಿಯಾದ ನಿಯಂತ್ರಣವಿರದೆ, ಸ್ವಾತಂತ್ರ್ಯಕ್ಕೆ ಅವಕಾಶ ಕಲ್ಪಿಸುವ ಉದಾರತೆ ರಜಾ ದಿನಗಳಲ್ಲಿ ಅಗತ್ಯ. ರಜೆಯ ಅವಧಿಯಲ್ಲಿ ಮಕ್ಕಳನ್ನು ಸಂಬಾಳಿಸುವುದು ದುಸ್ತರ. ಅದರಲ್ಲೂ ತಂದೆ- ತಾಯಿ ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದರಂತೂ ಅಸಾಧ್ಯ. `ಯಾಕಾದ್ರೂ ಶಾಲೆಗಳು ರಜೆ ಕೊಡುತ್ತವೋ~ ಎಂದು ಶಪಿಸುವವರೇ ಜಾಸ್ತಿ. ಏಕೆಂದರೆ ಮಕ್ಕಳನ್ನು ಮತ್ತು ಅವರ ಕೀಟಲೆಗಳನ್ನು ಸಹಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿ ಮನೆಯಲ್ಲಿ ನಿರ್ಮಾಣವಾಗಿ ಬಿಡುತ್ತದೆ. ಪರಸ್ಪರರ ಜಗಳ ಬಿಡಿಸಿ ನ್ಯಾಯ ಹೇಳುವುದೇ ಒಂದು ಕೆಲಸವಾಗುತ್ತದೆ. ಎಲ್ಲಿಗಾದ್ರೂ ಇವರನ್ನು ಸಾಗ ಹಾಕಬೇಕು ಎಂದುಕೊಳ್ಳುವ ಮಂದಿಯೇ ಹೆಚ್ಚು. ಶಾಲೆಗಳ ಮಹತ್ವ ಮತ್ತು ಶಿಕ್ಷಕರು ಹೇಗೆ ಇವರನ್ನು ಸಂಬಾಳಿಸುತ್ತಾರೆ ಎನ್ನುವುದು ಹೆತ್ತವರಿಗೆ ಅರ್ಥವಾಗುವುದೇ ರಜಾ ಕಾಲದಲ್ಲಿ. ವಿರಾಮ ಕಾಲದ ಸದ್ಬಳಕೆ ಬಗ್ಗೆ ಒಂದಷ್ಟು ಚಿಂತನೆ ಅಗತ್ಯ. ಪೋಷಕರು ಸ್ವಲ್ಪ ರಿಸ್ಕ್ ತೆಗೆದುಕೊಂಡಾದ್ರೂ ಸರಿ; ತಮ್ಮ ಮಕ್ಕಳಲ್ಲಿ ಉತ್ತಮ ಹವ್ಯಾಸ ಬೆಳೆಯಲು ಪ್ರೇರಣೆ ನೀಡಬೇಕು. ಅವರ ಆಸಕ್ತಿಯ ವಿಷಯಗಳ ಬಗೆಗೆ ಕಣ್ಣಾಡಿಸಬೇಕು. ಬಹಳಷ್ಟು ಕಡೆ ಬೇಸಿಗೆಯ ಶಿಬಿರಗಳು ನಡೆಯುತ್ತವೆ, ಸೃಜನಶೀಲ ಚಟುವಟಿಕೆ ಹಮ್ಮಿಕೊಳ್ಳುತ್ತವೆ, ವೈಯಕ್ತಿಕ ಭಾಗವಹಿಸುವಿಕೆಗೆ ಮಹತ್ವ ನೀಡುತ್ತವೆ. ಯೋಗ್ಯವೆನಿಸಿದಲ್ಲಿ ಅಲ್ಲಿಗೆ ದಾಖಲಿಸುವುದು ಸಹ ಉತ್ತಮ ಬೆಳವಣಿಗೆ. ಹುಡುಗಿಯರಿಗೆ ಸಜೆ ಮನೆಯಲ್ಲಿ ಒಂದೇ ಸಮನೆ ಟಿವಿ ನೋಡುವ ಬದಲಿಗೆ ಅವರ ಏಕಾಗ್ರತೆಯನ್ನು ಬೇರೆಡೆ ಸೆಳೆಯುವುದು ಅವಶ್ಯ. ಶೌರ್ಯ ಆಧಾರಿತ ಮಕ್ಕಳ ಸಿನಿಮಾಗಳು ಖುಷಿ ನೀಡಬಲ್ಲವು. ಗ್ರಾಮಾಂತರ ಪ್ರದೇಶದಲ್ಲಿ ಮಕ್ಕಳು ಎಮ್ಮೆ ಮೇಲೆ ಕೂತು ಸವಾರಿ ಮಾಡುತ್ತಾ, ಹೊಲಗದ್ದೆ, ತೋಟಗಳಲ್ಲಿ ಅಲೆಯುವುದೇ ಒಂದು ವೈಭವ. ಗ್ರಾಮೀಣ ಭಾಗಕ್ಕೆ ಬಂದರೆ ಈ ಖುಷಿಯೆಲ್ಲ ಗಂಡುಮಕ್ಕಳಿಗೆ ಮೀಸಲು. ಹೆಣ್ಣುಮಕ್ಕಳ ಪಾಲಿಗೆ ರಜೆ ಒಂದು ಸಜೆಯಾಗುತ್ತದೆ. ಏಕೆಂದರೆ ಅವರಿಗೆ ಮನೆ ಕೆಲಸ ಹಚ್ಚಿ ಕೂಡಿಹಾಕುತ್ತಾರೆ. ಕೆಲ ಸಂಪ್ರದಾಯಸ್ಥ ಕುಟುಂಬಗಳಲ್ಲಿ ಬಾಲ್ಯವಿವಾಹಕ್ಕೆ ನೂಕುತ್ತಾರೆ. ಆದ್ದರಿಂದ ಗ್ರಾಮಸ್ಥರು, ಗ್ರಾಪಂ ನಾಗರಿಕ ಸ್ಥಾಯಿ ಸಮಿತಿಗಳು (ಸಿಎಸಿ) ಇವರಿಗಾಗಿ ಏನಾದರೊಂದು ರಚನಾತ್ಮಕ ಕಾರ್ಯಕ್ರಮವನ್ನು ಬೇಸಿಗೆಯಲ್ಲಿ ಆಯೋಜಿಸುವುದು ಉತ್ತಮ. ಆಟಗಳು ಕ್ರಿಯಾಶೀಲತೆಯ ಆಯಾಮಗಳು. ಸಹಕಾರ, ಹೊಂದಾಣಿಕೆ, ಕೌಶಲ, ಸಮನ್ವಯತೆ, ತಾರ್ಕಿಕತೆ ಇತ್ಯಾದಿ ಅಂಶಗಳ ಬೆಳವಣಿಗೆಗೆ ಪೂರಕವಾದ ಮಾಧ್ಯಮಗಳು. ಯಾವ ಮಗು ಆಟಗಳಲ್ಲಿ ತನ್ನ ಬಾಲ್ಯವನ್ನು ಹೆಚ್ಚಾಗಿ ತೊಡಗಿಸಿಕೊಂಡಿರುತ್ತದೋ, ಅದು ಬುದ್ಧಿಶಕ್ತಿಯಲ್ಲೂ ಮೇಲುಗೈ ಪ್ರದರ್ಶಿಸುತ್ತದೆ ಎನ್ನುತ್ತಾರೆ ಶೈಕ್ಷಣಿಕ ಮನೋವಿಜ್ಞಾನಿಗಳು. ಸಾಂಘಿಕ ಸಾಮರ್ಥ್ಯ ಗಳಿಕೆಗೆ ಆಟಗಳು ಮುಖ್ಯವಾಗುತ್ತವೆ. ಸಾಂಘಿಕ ಮನೋಬಲವನ್ನು ವೃದ್ಧಿಸುತ್ತವೆ. ಸ್ವಾರ್ಥ ಬಿಟ್ಟು ಕೂಡಿ ಬಾಳುವ ಮನೋಭಾವ, ನಾಯಕತ್ವ ಗುಣ, ಸಮೂಹದಲ್ಲಿ ಹೇಗೆ ವರ್ತಿಸಬೇಕೆನ್ನುವ ಪ್ರಾಥಮಿಕ ತಿಳಿವಳಿಕೆ ಸಹಜವಾಗಿ ಮೂಡುವುದು ಇಲ್ಲಿಯೇ. ಆದರೆ ಬಹಳಷ್ಟು ಪೋಷಕರು ಮಕ್ಕಳನ್ನು ಆಡಲು ಬಿಡುವುದೇ ಇಲ್ಲ. ಲಗೋರಿ, ಐಸ್‌ಪ್ರೈಸ್, ಉಪ್ಪಿನಾಟ, ಅಳಗುಳಿ, ಚೌಕಾಬಾರ, ಗೋಲಿ, ಜೂಟಾಟ, ಮರಕೋತಿ, ಕುಂಟೇಬಿಲ್ಲೆ, ಕಣ್ಣಾಮುಚ್ಚಾಲೆಯಂತಹ ಆಟಗಳು ದಿನಗಳೆದಂತೆ ಮರೀಚಿಕೆಯಾಗುತ್ತಿವೆ. ಆಧುನಿಕ ಶೈಲಿಯ ಆಟಗಳ ಆವಿಷ್ಕಾರದಲ್ಲಿ ಅದೇ ವಿಡಿಯೋ ಗೇಮ್, ಅಬಾಕಸ್. ಬರೀ ಮೆದುಳಿಗೆ ಕಸರತ್ತು ನೀಡುವ ಪ್ರಯತ್ನವಷ್ಟೇ. ಶಾಲೆಯಲ್ಲಿ ಕಲಿಯದಂತಹ ಬಹುತೇಕ ಮೌಲ್ಯಗಳ ರೂಢಿಸಿಕೊಳ್ಳುವಿಕೆಗೆ ಆಟಗಳು ಕೊಡುವ ಅನುಭವ ಮಹತ್ವದ್ದು. ಏನೆಲ್ಲ ಮಾಡಬಹುದು! ಹವ್ಯಾಸಗಳು ಅಂತರ್ಗತವಾಗಿರುವ ಕಲೆಯನ್ನು ಬೆಳಕಿಗೆ ತರುತ್ತವೆ. ಇಷ್ಟವಾದ ಪುಸ್ತಕಗಳನ್ನು ಓದುತ್ತಾ ಅಭಿಪ್ರಾಯವನ್ನು ಲಿಖಿತವಾಗಿ ದಾಖಲಿಸುವುದು, ಚಿತ್ರಕಲೆಯಲ್ಲಿ ತೊಡಗಿಸಿಕೊಳ್ಳುವುದು, ನಾಣ್ಯ, ಬೀಜ, ಎಲೆ, ಅಂಚೆಚೀಟಿ ಇತ್ಯಾದಿಗಳ ಸಂಗ್ರಹ, ಕಥೆ ಕಟ್ಟುವುದು, ಸರಳ ಪ್ರಯೋಗಗಳ ಮೂಲಕ ಮಾಡಿ ಕಲಿಯುವುದು, ಕವನಗಳ ರಚನೆ, ನಾಟಕಗಳ ಅಭ್ಯಾಸ ಮತ್ತು ಪ್ರದರ್ಶನ, ನೃತ್ಯ ಅಭ್ಯಾಸ, ಕ್ಷೇತ್ರ ಅಧ್ಯಯನ, ಸ್ಥಳೀಯ ಪ್ರದೇಶದ ಐತಿಹಾಸಿಕ ಮಹತ್ವದ ಸಂಗತಿಗಳ ಕ್ರೋಢೀಕರಣ, ಸ್ಥಳೀಯ ಪ್ರದೇಶದ ಬಗೆಗೆ ಇರುವ ದಂತಕತೆ, ಗ್ರಾಮದಲ್ಲಿನ ಜನಪದ ಕಲೆಗಳ ಸಮೀಕ್ಷೆ, ಸಂಸ್ಕೃತಿಗಳ ವಿಶ್ಲೇಷಣೆ, ಪ್ರಾದೇಶಿಕ ಭೂಗೋಳಗಳ ಅಧ್ಯಯನ, ತಂತ್ರಜ್ಞಾನ ಕೌಶಲ ಕಲಿಕೆ ಮುಂತಾದವು ಮಕ್ಕಳನ್ನು ವಿರಾಮದ ಸದ್ಬಳಕೆಗೆ ಪ್ರಚೋದಿಸುವಂತಹ ಚಟುವಟಿಕೆಗಳು. ನಿರುದ್ಯೋಗಿ ವಿದ್ಯಾವಂತರು ತಮ್ಮಲ್ಲಿರುವ ವಿಶೇಷ ಕಲೆಯನ್ನು, ಜ್ಞಾನವನ್ನು ಮಕ್ಕಳಿಗೆ ಪರಿಚಯಿಸಲು ಮತ್ತು ಧಾರೆ ಎರೆಯಲು ರಜೆ ಅವಧಿ ಹೇಳಿ ಮಾಡಿಸಿದ್ದು. ರಜೆಯಲ್ಲಿ ಮಕ್ಕಳ ಲಕ್ಷಣಗಳು ಆಟೋಟ ಇತ್ಯಾದಿ ದೈಹಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದರಿಂದ ಆಯಾಸಗೊಳ್ಳುತ್ತಾರೆ. ಬಿಸಿಲ ಬೇಗೆಯಿಂದ ಪದೇ ಪದೇ ದಾಹಕ್ಕೆ ಒಳಗಾಗುತ್ತಾರೆ. ಗಂಟೆಗೊಮ್ಮೆ ಏನಾದ್ರೂ ತಿನ್ನಬೇಕು ಎನಿಸುತ್ತದೆ. ಈಗಲೂ ಪಠ್ಯ ವಿಷಯಗಳ ಕಲಿಕೆಗೆ ಒತ್ತಾಯಿಸುವುದು ಅವರಿಗೆ ರುಚಿಸುವುದಿಲ್ಲ. ಅದಮ್ಯ ಉತ್ಸಾಹ ಮತ್ತು ಕ್ರಿಯಾಶೀಲತೆ ಅವರನ್ನು ಚಂಚಲಗೊಳಿಸುತ್ತದೆ. ಹವ್ಯಾಸಗಳು, ಸೃಜನಶೀಲ ಚಟುವಟಿಕೆಗಳು, ಹೊಸತನ್ನು ಸೃಷ್ಟಿಸುವ ಇನ್ನಿತರ ಕಲೆ ಅವರಲ್ಲಿನ ಏಕತಾನತೆಯನ್ನು ದೂರ ಮಾಡುತ್ತದೆ. ಹೆಚ್ಚು ನಿಯಂತ್ರಣ ಹಾಕಿದಲ್ಲಿ ಹಟಮಾರಿತನ ಹೆಚ್ಚಬಹುದು. ಕಲಿಕೆಯು ನಿರಂತರವಾದ್ದರಿಂದ ಕೌಶಲ ಆಧಾರಿತ ಕಲಿಕೆ ಹೆಚ್ಚು ಇಷ್ಟವಾಗುವುದು. ನಿಗಾ ಇರಲಿ ಮಕ್ಕಳು ರಜೆಯಲ್ಲಿ ಆಡಿಕೊಳ್ಳಲಿ ಎಂಬು ಬಿಡಿ. ಆದರೆ ಅವರ ಮೇಲೆ ನಿಗಾ ಇಡಿ. ನೀರು, ಬೆಂಕಿ, ರಸ್ತೆ ಹಾಗೂ ಮನೆಯಲ್ಲಿನ ಅಪಾಯಕಾರಿ ವಸ್ತು ಇತ್ಯಾದಿಗಳ ಬಗ್ಗೆ ಜಾಗರೂಕರಾಗಿರಬೇಕು. ಬಿಸಿಲ ಬೇಗೆ ತಾಳಲಾರದೆ ನದಿ, ಹೊಳೆ, ಬಾವಿ ಇತ್ಯಾದಿ ಅಸುರಕ್ಷಿತ ಪ್ರದೇಶಗಳಿಗೆ ಹೋಗುವ ಚಪಲ ಇರುವ ಮಕ್ಕಳ ಬಗ್ಗೆ ಗಮನ ಇರಲಿ. ಯಾರನ್ನೂದರೂ ನಂಬಿ ಮಕ್ಕಳನ್ನು ಇತರರ ಮನೆಯಲ್ಲಿ ಬಿಟ್ಟು ಹೊಣೆಗಾರಿಕೆ ವಹಿಸುವುದು ಸರಿಯಲ್ಲ. ಅವರ ಜವಾಬ್ದಾರಿ ಮತ್ತು ಬದ್ಧತೆ ಬಗ್ಗೆ ನಿಮ್ಮಲ್ಲಿ ವಿಶ್ವಾಸವಿರಬೇಕು. ಅನಾರೋಗ್ಯ ಅಥವಾ ಆರೋಗ್ಯ ಸಮಸ್ಯೆ ಇದ್ದಲ್ಲಿ ತಪಾಸಣೆ ಮತ್ತು ಚಿಕಿತ್ಸೆಗೆ ರಜಾ ಅವಧಿ ಉಪಯುಕ್ತ. ವಿಶ್ರಾಂತಿಗೆ ಸಮಯವಿರುತ್ತದೆ. ವಿಶೇಷ ಅವಶ್ಯಕತೆಯುಳ್ಳ ಮಕ್ಕಳಿಗೆ ಪ್ರೀತಿ ಮುಖ್ಯ. ತಾಳ್ಮೆ, ಸಹನೆಯಿಂದ ನೋಡಿಕೊಳ್ಳುವವರು ಹತ್ತಿರವಿರಲಿ. ತೆರೆದಿಟ್ಟ ಪದಾರ್ಥಗಳು ಮಕ್ಕಳನ್ನು ಆಕರ್ಷಿಸುವುದರಿಂದ ಕಾಯಿಲೆಗಳಿಗೆ ದಾರಿಯಾಗುತ್ತದೆ. ಎಚ್ಚರವಿರಲಿ. ರಜೆ ಮಕ್ಕಳಲ್ಲಿ ಹರ್ಷ ತರಲಿ. ವಿರಾಮ ಕಾಲ ಸದ್ಭಳಕೆಯಾಗಲಿ. ಊರಿಗೆ ಏಕೆ ಹೋಗಬೇಕು? ಯಾವುದೇ ಮಗುವಿಗಾಗಲಿ ಭಾವನಾತ್ಮಕ ಭದ್ರತೆ ಮುಖ್ಯ. ತನ್ನನ್ನು ಪ್ರೀತಿಸುವವರನ್ನು ಪ್ರತಿಯಾಗಿ ಪ್ರೀತಿಸುತ್ತದೆ. ಮುದ್ದು ಮಾಡುವವರನ್ನು ಕಂಡಾಗ ಹಟ ಮಾಡುತ್ತದೆ. ಸಾಮಾನ್ಯವಾಗಿ ಇಂತಹ ಪ್ರೀತಿ ಮತ್ತು ಮುದ್ದು ಅವರಿಗೆ ಸಿಗುವುದು ಅವರವರ ಇಷ್ಟವಾದ ಊರುಗಳಿಗೆ ಹೋದಾಗ ಮಾತ್ರ. ಅಲ್ಲಿನ ಸಂಬಂಧಗಳು ವಿಶೇಷವಾದ ಪ್ರಾಮುಖ್ಯತೆಯನ್ನು ಇವರಿಗೆ ಒದಗಿಸುತ್ತವೆ, ಎಂತಹುದೇ ಅಭಿವ್ಯಕ್ತಿಯನ್ನು ಮಾನ್ಯ ಮಾಡುತ್ತವೆ. ಭಾಷೆಯ ನಿರರ್ಗಳ ಅಭಿವ್ಯಕ್ತಿ ಇಲ್ಲಿ ಸಾಧ್ಯ. ಹೆತ್ತವರಿಗಾದರೆ ನಿತ್ಯವೂ ಈ ಮಕ್ಕಳ ಚೇಷ್ಟೆ ತಲೆಚಿಟ್ಟು ಹಿಡಿಸಬಹುದು. ಆದರೆ, ಅಜ್ಜ-ಅಜ್ಜಿ ಮನೆಯ ವಾತಾವರಣ ಹೀಗಿರುವುದಿಲ್ಲ. ಮಕ್ಕಳಿಗೆ ಅಕ್ಕರೆ, ಆಟ, ಸ್ವಾತಂತ್ರ್ಯ ಎಲ್ಲವೂ ಸಿಗುತ್ತದೆ. ಅವರ ಮನಸ್ಸಿನ ಅಪೇಕ್ಷೆ ಮತ್ತು ಬೇಡಿಕೆಗಳನ್ನು ಪೂರೈಸುತ್ತದೆ. ಕುಟುಂಬದಲ್ಲಿನ ಬೇರೆ ಬೇರೆ ಸಂಬಂಧಗಳು, ಬಾಂಧವ್ಯ ಅರ್ಥೈಸಿಕೊಳ್ಳಲು ಅವಕಾಶ ಕಲ್ಪಿಸುತ್ತದೆ. ನೆರೆಹೊರೆ, ಹಬ್ಬ, ಜಾತ್ರೆ ಇತ್ಯಾದಿಗಳು ಮಕ್ಕಳನ್ನು ಸಾಮಾಜಿಕ ಬದುಕಿನಲ್ಲಿ ಬೆರೆಯಲು ಉತ್ತೇಜಿಸುತ್ತವೆ. ಹೀಗಾಗಿ ಪ್ರಾದೇಶಿಕ ಭಿನ್ನತೆಗಳನ್ನು ಅರಿಯಲು, ಸಾಂಸ್ಕೃತಿಕ ವೈವಿಧ್ಯ ತಿಳಿಯಲು, ಜ್ಞಾನದ ಹರಿವು ವಿಸ್ತರಿಸಲು ಮಕ್ಕಳನ್ನು ಬೇರೊಂದು ಸ್ಥಳಕ್ಕೆ ಕರೆದುಕೊಂಡು ಹೋಗುವುದು ಅತ್ಯಗತ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.