ಮಕ್ಕಳಿಗೆ ಬೇಕು ಭಾಷಾ ಕೌಶಲ `ಇಂದಿನ ಕಾಲೇಜು ವಿದ್ಯಾರ್ಥಿಗಳಿಗೆ ಕೂಡ ಪತ್ರಲೇಖನ, ಪ್ರಬಂಧ ಮಾದರಿಯ ಹತ್ತಾರು ವಾಕ್ಯಗಳನ್ನು ರಚಿಸುವ ಕೌಶಲವಿಲ್ಲ~ ಎಂಬ ಮಾತು ಕೇಳಿಬರುತ್ತಿದೆ. ಇದರಿಂದ ಭಾಷಾ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವುದೂ ಉಂಟು, ಹಾಗಾದರೆ ಈ ಕೌಶಲವನ್ನು ಹೇಗೆ, ಎಲ್ಲಿ ಬೆಳೆಸುವುದು ಎಂಬ ಪ್ರಶ್ನೆಯೂ ಮೂಡಬಹುದು. ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಈ ಕೌಶಲ ಬೆಳೆಸಿದರೆ ಕಾಲೇಜು ಹಂತಕ್ಕೆ ಪ್ರಬುದ್ಧವಾಗುತ್ತದೆ. ಶಿಕ್ಷಕ ಸರಿಯಾಗಿ ಶಾಲೆಗೆ ಬರಬೇಕು, ದಿನನಿತ್ಯ ಮಕ್ಕಳನ್ನು ನೋಡಬೇಕು. ಆಗ ಮಾತ್ರ ಅನಿಸಿದ್ದನ್ನು ಸಾಧಿಸಬಹುದು. ಶೈಕ್ಷಣಿಕ ವರ್ಷದ ಪ್ರತಿ ತಿಂಗಳು ಒಂದಲ್ಲ ಒಂದು ಕಾರ್ಯಕ್ರಮ ಇದ್ದೇ ಇರುತ್ತದೆ. ಜೂನ್ ತಿಂಗಳಲ್ಲಿ ಪೂರ್ವ ಸಿದ್ಧತಾ ಪರೀಕ್ಷೆ ಹಾಗೂ ಸಾಫಲ್ಯ. ಇದು ಮುಗಿಯುತ್ತಿದ್ದಂತೆ ಕ್ರೀಡಾಕೂಟದಲ್ಲಿ ಭಾಗವಹಿಸಲು ಮಕ್ಕಳಿಗೆ ತರಬೇತಿ. ಜೊತೆಯಲ್ಲಿ ಸ್ವಾತಂತ್ರ್ಯೋತ್ಸವದ ಬಗ್ಗೆಯೂ ತರಬೇತಿ. ಇವೆಲ್ಲ ಮುಗಿಯುತ್ತಿದ್ದಂತೆ ಮೊದಲ ಸೆಮಿಸ್ಟರ್ ಪರೀಕ್ಷೆ ಸಮೀಪಿಸುವುದರಿಂದ ನೀಲನಕ್ಷೆ ತಯಾರಿ. ಜೂನ್‌ನಿಂದ ಸೆಪ್ಟೆಂಬರ್ ತಿಂಗಳವರೆಗೆ ಸಿಆರ್‌ಸಿ ಸಭೆಗಳು, ತರಬೇತಿಗಳು. ಇದರ ಮಧ್ಯೆ ಸರ್ಕಾರಿ ರಜೆ, ಹಬ್ಬದ ರಜೆ. ಇವೆಲ್ಲವನ್ನು ಕಳೆದಾಗ ಶಿಕ್ಷಕರು ಶಾಲೆಯಲ್ಲಿ ಎಷ್ಟು ದಿನ ಸಂಪೂರ್ಣ ಪಾಠ ಬೋಧನೆಯಲ್ಲಿ ತೊಡಗಿರುತ್ತಾರೆ? ಮಧ್ಯಂತರ ರಜೆ ಮುಗಿಯುತ್ತಿದ್ದಂತೆ ಪ್ರತಿಭಾ ಕಾರಂಜಿ, ಟಿಎಲ್‌ಎಂ ಮೇಳಗಳಿಗೆ ತಯಾರಿ... ಹೀಗೆ ಒಂದಲ್ಲ ಒಂದು ಕಾರ್ಯಕ್ರಮ. ಅದರ ಜೊತೆಜೊತೆಗೆ ಪಕ್ಕದ ಏಕೋಪಾಧ್ಯಾಯ ಶಾಲೆಗೆ ಆಗಾಗ ನಿಯೋಜನೆ. ಸಾಲದೆಂಬಂತೆ ಇಲಾಖೆಯ ಕೆಲಸ ಕಾರ್ಯಗಳನ್ನೂ ಮಾಡಬೇಕು. ಉದಾಹರಣೆಗೆ ಮಧ್ಯಂತರ ರಜೆ ಮುಗಿಯುತ್ತಿದ್ದಂತೆ ಐದು ದಿನಗಳ ತರಬೇತಿ ಪ್ರಾರಂಭ. ನಂತರ ಏಕೋಪಾಧ್ಯಾಯ ಶಿಕ್ಷಕ ತರಬೇತಿ, ಅದಕ್ಕಾಗಿ ಪಕ್ಕದ ಶಾಲೆಯ ಶಿಕ್ಷಕರ ಜಾಗ ತುಂಬಲು ಅಲ್ಲಿಗೆ ನಿಯೋಜನೆ. ಎರಡು ದಿನ ಮೂಲ ಶಾಲೆಯಲ್ಲಿ ಇರುವಾಗಲೇ ಮತ್ತೆ ಐದು ದಿನದ ತರಬೇತಿ. ಅದು ಮುಗಿಸಿಕೊಂಡು ಬರುತ್ತಿದ್ದಂತೆ ವಿಶೇಷ ಅಗತ್ಯಯುಳ್ಳ ಸಮೀಕ್ಷೆ ಕಾರ್ಯ ಮೂರು ದಿವಸ. ಮತ್ತೆ ಎರಡು ದಿವಸ ಶಾಲೆಯಲ್ಲಿರುವಾಗಲೇ ಏಕೋಪಾಧ್ಯಾಯ ಶಾಲೆಯ ಶಿಕ್ಷಕರಿಗೆ ಮೂರು ದಿನದ ತರಬೇತಿ. ಅಲ್ಲಿಗೆ ಈ ಶಿಕ್ಷಕರ ನಿಯೋಜನೆ. ಹಾಗಾದರೆ ತನ್ನ ಮೂಲ ಶಾಲೆಯ ಮಕ್ಕಳಿಗೆ ಒಬ್ಬ ಶಿಕ್ಷಕ ಎಷ್ಟು ಅವಧಿ ಪಾಠ ಬೋಧನೆ ಮಾಡಲು ಸಾಧ್ಯ? ಹೀಗೆ ಪಾಠ ಬೋಧನೆಗೆ ತೊಂದರೆಯಾದಾಗ, ಲಭ್ಯವಿರುವ ಅವಧಿಯಲ್ಲಿ ತನಗೆ ಕೊಟ್ಟಿರುವ ಪಠ್ಯ ವಿಷಯವನ್ನು ಮುಗಿಸಲು ಪ್ರಯತ್ನಿಸುವುದು ಸಹಜ. ಆದರೆ ಇತರೆ ಚಟುವಟಿಕೆಗಳ ಕಡೆ ಗಮನಹರಿಸುವುದು ನಿಲ್ಲುತ್ತದೆ. ಆಗ ಮಕ್ಕಳಲ್ಲಿ ಬೆಳೆಯಬೇಕಾದ ಕೌಶಲಗಳು ಬೆಳೆಯದೆ ಮುಂದೆ ತೊಂದರೆ ಅನುಭವಿಸುತ್ತಾರೆ. ಇದಕ್ಕೆ ಯಾರು ಹೊಣೆ? ಆದರೂ ಶಿಕ್ಷಕ ಈ ನಿಟ್ಟಿನಲ್ಲಿ ಸುಮ್ಮನಿರಬಾರದು. ಪರಿಹಾರೋಪಾಯಗಳನ್ನು ಕಂಡುಕೊಂಡರೆ ಮಕ್ಕಳಲ್ಲಿ ಬರವಣಿಗೆ ಕೌಶಲವನ್ನು ಬೆಳೆಸಬಹುದು. ಬಿಡುವಿನ ಸಮಯವನ್ನು ಹಾಳು ಮಾಡಿಕೊಳ್ಳದಂತೆ ಗ್ರಂಥಾಲಯದ ಪುಸ್ತಕಗಳನ್ನು ಮಕ್ಕಳು ಸಮರ್ಪಕವಾಗಿ ಬಳಸುವಂತೆ ಪ್ರೇರೇಪಿಸಬೇಕು. ಪುಸ್ತಕಗಳನ್ನು ತೆರೆದ ಕಪಾಟಿನಲ್ಲಿ ಇಡಬೇಕು. ಇಬ್ಬರು ವಿದ್ಯಾರ್ಥಿಗಳನ್ನು ನಾಯಕರನ್ನಾಗಿ ಮಾಡಿ ಪುಸ್ತಕ ಕೊಡುವ- ಪಡೆಯುವ ಹೊಣೆ ವಹಿಸಬೇಕು. ಓದುವ ಹವ್ಯಾಸ ಮಕ್ಕಳಲ್ಲಿ ಬೆಳೆದಂತೆ ಬರೆಯುವ ಹವ್ಯಾಸಕ್ಕೆ ತಯಾರಿ ಮಾಡಬೇಕು. 5, 6, 7ನೇ ತರಗತಿಯ ವಿದ್ಯಾರ್ಥಿಗಳನ್ನು ಕೇಂದ್ರವಾಗಿ ಇಟ್ಟುಕೊಂಡು ತರಗತಿಗೆ ಇಬ್ಬರು ಮುಖಂಡರನ್ನು ನೇಮಿಸಬೇಕು. ಒಬ್ಬ ಸಂಪಾದಕ, ಮತ್ತೊಬ್ಬ ಉಪಸಂಪಾದಕ ಎಂದು ತಿಳಿಸಬೇಕು. ಇದರಿಂದ `ಸಂಪಾದಕ~ ಪದದ ಅರ್ಥ ಮಕ್ಕಳಿಗೆ ಸುಲಭವಾಗಿ ತಿಳಿಯುತ್ತದೆ. ಆ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಒಂದಲ್ಲ ಒಂದು ರೀತಿಯ ಬರವಣಿಗೆ ಯಲ್ಲಿ ತೊಡಗುವಂತೆ ಪ್ರೇರೇಪಿಸಬೇಕು, ಕವಿತೆ, ಕತೆ, ಚುಟುಕು, ಗಾದೆ, ಒಗಟು, ಚಿತ್ರ ಬರವಣಿಗೆ ಹೀಗೆ ಏನಾದರೂ ಬರೆಯಲು ಹೇಳಬೇಕು. ಈ ಹಂತದ ವಿದ್ಯಾರ್ಥಿಗಳಿಗೆ ಸ್ವಂತ ಬರವಣಿಗೆ ಕಷ್ಟ. ನಕಲು ಮಾಡಿದರೂ ಮಹಾಪರಾಧ ಏನಲ್ಲ. ಇವೆಲ್ಲವನ್ನೂ ಸಂಪಾದಕ ಶೇಖರಿಸಿ ಒಂದು ದೊಡ್ಡ ಹಾಳೆಗೆ ಬರೆದು ಆ ಹಾಳೆಯನ್ನು ಅಗಲವಾದ ರಟ್ಟಿಗೆ ಅಂಟಿಸಿ, ಬರವಣಿಗೆಯ ಕೆಳಗೆ ಆಯಾಯ ವಿದ್ಯಾರ್ಥಿಗಳ ಹೆಸರನ್ನು ನಮೂದಿಸಬೇಕು. ಅದನ್ನು ಯಥಾ ಪ್ರಕಾರ ಗೋಡೆಗೆ ತೂಗುಹಾಕಬೇಕು. ಪ್ರತಿ ಸೋಮವಾರ ಈ ಕಾರ್ಯ ನಡೆಯಬೇಕು. ಇದಕ್ಕೆ `ಚಿಣ್ಣರ ವಾರಪತ್ರಿಕೆ~ ಅಥವಾ ಅವರಿಗಿಷ್ಟ ಬಂದ ಹೆಸರಿಡಬಹುದು. ಮತ್ತೆ ಮಂಗಳವಾರದಿಂದ ಶನಿವಾರದ ವರೆಗೆ ಸಂಗ್ರಹ ಕಾರ್ಯ ಮಾಡಿ ಸೋಮವಾರ ಪತ್ರಿಕೆ ಬಿಡುಗಡೆಯಾಗಬೇಕು. ಹೀಗೆ ಪ್ರತಿ ವಾರವೂ ಅಂಟಿಸಿದ ಕೈ ಬರವಣಿಗೆಯ ಪತ್ರಿಕೆಗಳು ರಟ್ಟಿನಲ್ಲೇ ಉಳಿಯಬೇಕು. ವರ್ಷ ಪೂರ್ತಿ ಶೇಖರಣೆಯಾದ ಈ ಪತ್ರಿಕೆಗಳಲ್ಲಿನ ಉತ್ತಮ ಬರವಣಿಗೆಯನ್ನು ಆಯ್ದು ಒಂದು ಸ್ಮರಣ ಸಂಚಿಕೆ ಹೊರತರಬಹುದು. ಈ ವಾರಪತ್ರಿಕೆ ಬಿಡುಗಡೆಯ ಕಾರ್ಯ ನಿರಂತರವಾಗಿ ವಿದ್ಯಾರ್ಥಿಗಳ ಸಹಾಯದಿಂದಲೇ ನಡೆಯುವಂತೆ ವ್ಯವಸ್ಥೆ ಮಾಡಬೇಕು. ಇದರಿಂದ ಮಕ್ಕಳಲ್ಲಿ ಬರವಣಿಗೆಯ ಕೌಶಲ ವೃದ್ಧಿಸುವುದು. ಮುಂದೆ ಭಾಷಾ ಬೆಳವಣಿಗೆಗೆ ಅನುಕೂಲವಾಗುವುದು. ಇಲ್ಲವಾದರೆ ಇಂಗ್ಲಿಷ್ ವ್ಯಾಮೋಹಕ್ಕೆ ಬಲಿಯಾಗಿ ನಮ್ಮ ಭಾಷೆಗೆ ಪೆಟ್ಟು ಬೀಳುವುದು. ಮಾತೃಭಾಷೆಯ ಬೆಳವಣಿಗೆಯ ಜೊತೆಜೊತೆಯಲ್ಲೇ ಇಂಗ್ಲಿಷ್ ಭಾಷೆ ಕಲಿತರೇನೂ ಅಡ್ಡಿಯಿಲ್ಲ. ಈ ನಿಟ್ಟಿನಲ್ಲಿ ಶಿಕ್ಷಕರು ಮನಸ್ಸು ಮಾಡಬೇಕು. ಮಕ್ಕಳಿಗೆ ಮಾರ್ಗದರ್ಶನ ನೀಡಿದರೆ ಸಾಕು. ಮುಂದೆ ಅವರು ಸಾಧಿಸುತ್ತಾರೆ. ಭಾಷೆ ಬೆಳೆಯುತ್ತದೆ ಉಳಿಯುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.