ಪ್ರಶ್ನೆ ಉತ್ತರ ಕಾಲಿಬ್, ಬಾಳೆಹೊನ್ನೂರು ನಾನು ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ವಿದ್ಯಾಭ್ಯಾಸ ಮುಗಿಸಿದ್ದೇನೆ. ನನಗೆ ಪೋಲೀಸ್ ಇಲಾಖೆಯಲ್ಲಿ ಎಸಿಪಿ, ಡಿಎಸ್‌ಪಿ ಆಗುವ ಹಂಬಲ ಇದೆ. ದಯಮಾಡಿ ಇದಕ್ಕೆ ಪೂರಕ ಮಾರ್ಗದರ್ಶನ ಕೊಡಿ. ಅಸಿಸ್ಟೆಂಟ್ ಕಮಿಷನರ್ ಆಫ್ ಪೋಲೀಸ್ ಆಗಬೇಕೆಂಬ ಆಸೆ ನಿಮಗೆ ಏಕೆ ಬಂತೋ ತಿಳಿಯದು. ಬಹುಶಃ ನಿಮ್ಮ ಬಂಧುವರ್ಗದಲ್ಲಿ ಇಂತಹವರು ಯಾರಾದರೂ ಇದ್ದು ಅವರು ನಿಮ್ಮ ಮೇಲೆ ಪ್ರಭಾವ ಬೀರಿರಬಹುದು ಅಥವಾ ಬಹಳ ಜರ್ಬಾಗಿ ಉಡುಪು ಧರಿಸಿ ತನ್ನ ಕರ್ತವ್ಯದಲ್ಲಿ ಮೆರೆಯುತ್ತಿರುವ ಇಂತಹ ಅಧಿಕಾರಿಗಳು ಯಾರಾದರೂ ನಿಮಗೆ ಮಾದರಿ ಎನಿಸಿರಬಹುದು. ಇದು ಹೇಗಾದರೂ ಇರಲಿ, ನಿಮ್ಮ ಯೋಚನೆ ಒಳ್ಳೆಯದೆ. ಕಾನೂನು ಪಾಲನೆಯನ್ನು ಜಾರಿಗೆ ತರುವುದು ಪೋಲೀಸ್ ಅಧಿಕಾರಿಗಳ ಪವಿತ್ರ ಕರ್ತವ್ಯ. ನೀವು ಪಿಯು ನಂತರ ನಿಮಗೆ ಇಷ್ಟವಾದ ಯಾವುದಾದರೂ ಕೋರ್ಸನ್ನು ತೆಗೆದುಕೊಂಡು ಪದವೀಧರರಾಗಿ. ಅನಂತರ ಸಾಧ್ಯವಾದರೆ ನಿಮ್ಮ ಇಷ್ಟದ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆಯಿರಿ. ಅನಂತರ ಕೆಪಿಎಸ್‌ಸಿ, ಯುಪಿಎಸ್‌ಸಿ ಸ್ಪರ್ಧಾ ಪರೀಕ್ಷೆ ತೆಗೆದುಕೊಂಡು ನಿಮ್ಮ ಕನಸನ್ನು ಸಾಕಾರ ಮಾಡಿಕೊಳ್ಳಬಹುದು. ಸತೀಶ್ ನಾನು ಬಿಬಿಎಂ ಮುಗಿಸಿ ನಂತರ ಎಂಬಿಎ ಮಾಡಿರುತ್ತೇನೆ. ನನಗೆ ಅಕೌಂಟ್ಸ್ ಎಗ್ಸಿಕ್ಯೂಟಿವ್ ಆಗಿ ಮೂರು ವರ್ಷ ಕೆಲಸ ಮಾಡಿರುವ ಅನುಭವವಿದೆ. ಎಂಬಿಎ ನಾಲ್ಕನೇ ಸೆಮಿಸ್ಟರ್‌ನಲ್ಲಿ ಪರೀಕ್ಷೆಗಾಗಿ ರಜೆ ದೊರಕದ ಕಾರಣ ಕೆಲಸಕ್ಕೆ ರಾಜೀನಾಮೆ ಕೊಟ್ಟಿದ್ದೆ. ಸದ್ಯಕ್ಕೆ ಉದ್ಯೋಗವಿಲ್ಲದೆ ಪರದಾಡುವಂತಾಗಿದೆ. ಎಷ್ಟು ಪ್ರಯತ್ನಪಟ್ಟರೂ ಕೆಲಸ ಸಿಗುತ್ತಿಲ್ಲ. ಏನು ಮಾಡಲಿ ಎಂದು ದಯಮಾಡಿ ಸಲಹೆ ಕೊಡಿ. ನಿಮಗೆ ಈಗಾಗಲೇ ಮೂರು ವರ್ಷ ಕೆಲಸ ಮಾಡಿರುವ ಅನುಭವ ಇದೆ. ಬಿಬಿಎಂ ಮತ್ತು ಎಂಬಿಎ ಡಿಗ್ರಿಗಳೂ ಇವೆ. ಹೀಗಾಗಿ ನಿರಾಶರಾಗುವ ಅಗತ್ಯವಿಲ್ಲ. ಕೆಲಸ ಸಿಕ್ಕೇ ಸಿಗುತ್ತದೆ. ಸ್ವಲ್ಪ ಕಾಯಬೇಕಾಗಬಹುದು. ನಿಮ್ಮ ಪದವಿಗೆ ತಕ್ಕ ದೊಡ್ಡ ಉದ್ಯೋಗ ತಕ್ಷಣವೇ ದೊರಕದಿದ್ದರೂ, ಸಿಕ್ಕ ಸಣ್ಣ ಉದ್ಯೋಗಗಳನ್ನೇ ಮೊದಲು ತೆಗೆದುಕೊಂಡು ಅದರ ಮೂಲಕವೇ ಮೇಲೇರಲು ಪ್ರಯತ್ನಿಸಿ. ನಿಮಗೆ ಉದ್ಯೋಗ ನೀಡುವ ಸಂಸ್ಥೆ ನಿಮ್ಮಿಂದ ನಿರೀಕ್ಷಿಸುವ ಸಾಮರ್ಥ್ಯಗಳನ್ನು ಮೊದಲೇ ಊಹಿಸಿ ಅವುಗಳನ್ನು ಬೆಳೆಸಿಕೊಳ್ಳಿ. ಸನಿ ಅಂಜುಮ್ ನಾನು 2007ರಲ್ಲಿ ಪಿಯುಸಿ (ವಿಜ್ಞಾನ) ಮುಗಿಸಿದ್ದೇನೆ. ನಾಲ್ಕು ವರ್ಷಗಳ ನಂತರ ದೂರಶಿಕ್ಷಣ ಮಾಧ್ಯಮದಲ್ಲಿ ಬಿಎ ಮಾಡುತ್ತಿದ್ದೇನೆ. ಹಾಗಾಗಿ ಬಿಎ ನಂತರ ಎಂಎ ಮಾಡುವುದೋ ಅಥವಾ ಬಿಇಡಿ ಮಾಡಿದರೆ ಸರಿಯೋ ಅಥವಾ ಕಂಪ್ಯೂಟರ್ ವಿಜ್ಞಾನದಲ್ಲಿ ಡಿಪ್ಲೊಮಾ ಮಾಡಲೋ? ದಯಮಾಡಿ ಸೂಕ್ತ ಮಾರ್ಗದರ್ಶನ ಕೊಡಿ. ಈಗಾಗಲೇ ನಿಮ್ಮ ಅಧ್ಯಯನದಲ್ಲಿ ನಾಲ್ಕು ವರ್ಷಗಳ ಕಂದಕ ಏರ್ಪಟ್ಟಿದೆ. ಆದ್ದರಿಂದ ಬಿಎ ನಂತರ ನೀವು ಬಿಇಡಿ ಮಾಡಿಕೊಳ್ಳುವುದು ಒಳ್ಳೆಯದು. ಇದರಿಂದ ಸರ್ಕಾರಿ ಅಥವಾ ಖಾಸಗೀ ಪ್ರೌಢಶಾಲೆಗಳಲ್ಲಿ ನೀವು ಅಧ್ಯಾಪಕರಾಗಬಹುದು. ಮುಂದೆ ದೂರಶಿಕ್ಷಣದ ಮೂಲಕ ಎಂಎ ಮಾಡಬಹುದು. ಕಂಪ್ಯೂಟರ್ ವಿಜ್ಞಾನ ನಿಮ್ಮ ಸದ್ಯದ ಅಧ್ಯಯನಕ್ಕೆ ಪೂರಕವಾಗಿಲ್ಲ. ವೀಣಾ ಜಿ ನಾನು ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದೇನೆ. ನಾನು ಒಂದನೇ ತರಗತಿಯಿಂದಲೂ ಕನ್ನಡ ಮಾಧ್ಯಮದಲ್ಲೆೀ ಓದಿರುತ್ತೇನೆ. ಪಿಯುಸಿಯಲ್ಲಿ ಪಿಸಿಎಂಬಿ ಪಡೆದುಕೊಂಡಿದ್ದೆ. ನನಗೆ ಜಿಲ್ಲಾಧಿಕಾರಿ (ಡಿಸಿ) ಆಗಬೇಕೆಂಬ ಕನಸಿದೆ. ಪಿಯು ನಂತರ ನನ್ನ ಮನಸ್ಸಿನಲ್ಲಿ ಎರಡು ಆಯ್ಕೆಗಳಿವೆ: ಕೃಷಿ ಬಿಎಸ್ಸಿ ಮಾಡುವುದು ಅಥವಾ ಎಂಜಿನಿಯರಿಂಗ್. ಈ ಎರಡರಲ್ಲಿ ಯಾವುದು ಉತ್ತಮ? ಯಾವುದರಲ್ಲಿ ಉತ್ತಮ ಭವಿಷ್ಯವಿದೆ ಎಂದು ತಿಳಿಸಿಕೊಡಿ ಮಾರ್ಗದರ್ಶಿಸಿ. ದ್ವಿತೀಯ ಪಿಯುನಲ್ಲಿರುವಾಗಲೇ ಮುಂದೆ ಜಿಲ್ಲಾಧಿಕಾರಿ ಆಗಬೇಕೆಂಬ ಕನಸನ್ನು ಹೊಂದಿರುವ ನೀವು ಶ್ಲಾಘನೀಯರು. ಜಿಲ್ಲಾಧಿಕಾರಿಯಾಗಲು ನೀವು ಮುಂದೆ ಐಎಎಸ್ ಪರೀಕ್ಷೆಯಲ್ಲಿ ತೇರ್ಗಡೆ ಆಗಬೇಕಾಗುತ್ತದೆ. ಅದಕ್ಕೂ ಮೊದಲು ಯಾವುದಾದರೂ ಕ್ಷೇತ್ರದಲ್ಲಿ ನೀವು ಪದವೀಧರರೋ ಅಥವಾ ಸ್ನಾತಕೋತ್ತರ ಪದವೀಧರರೋ ಆಗಬೇಕಾಗಿರುತ್ತದೆ. ಇದು ಎಂಜಿನಿಯರಿಂಗ್‌ನಲ್ಲಿ ಆಗಬಹುದು ಅಥವಾ ಕೃಷಿ ಕ್ಷೇತ್ರದಲ್ಲಿ ಆಗಬಹುದು. ನಿಮಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಅಧ್ಯಯನ ಮಾಡಿ. ಎಲ್ಲೇ ಓದಿದರೂ ಪದವಿ ಇದ್ದರೆ ಸಾಕು, ಐಎಎಸ್ ಮಾಡಬಹುದು. ರಾಜೇಶ್ ನಾನು ಈಗ ತಾನೇ ಪ್ರಥಮ ಪಿಯುಸಿ (ವಿಜ್ಞಾನ) ಮುಗಿಸಿದ್ದೇನೆ. ಮುಂದೆ ಸಿಇಟಿಯಲ್ಲಿ ಹೇಗೆ ಉತ್ತಮವಾದ ಅಂಕಗಳನ್ನು ಗಳಿಸಬೇಕೆಂದು ತಿಳಿಸಿಕೊಡಿ. ದ್ವಿತೀಯ ಪಿಯುಸಿ ಪ್ರಾರಂಭದಲ್ಲೆೀ ಸಿಇಟಿ ಪರೀಕ್ಷೆಯ ಬಗ್ಗೆ ಯೋಚಿಸುತ್ತಿರುವುದು ಒಳ್ಳೆಯದು. ಬಹಳ ವಿದ್ಯಾರ್ಥಿಗಳು ದ್ವಿತೀಯ ಪಿಯು ಬೋರ್ಡ್ ಪರೀಕ್ಷೆಯ ನಂತರ, ತರಾತುರಿಯಲ್ಲಿ ಸಿಇಟಿ ಸಿದ್ಧತೆ ನಡೆಸಿ ತೊಂದರೆಗೆ ಒಳಗಾಗುತ್ತಾರೆ. ಬೋರ್ಡ್ ಪರೀಕ್ಷೆಯ ಸಿದ್ಧತೆ ಮತ್ತು ಸಿಇಟಿ ಸಿದ್ಧತೆ ಜೊತೆಜೊತೆಯಲ್ಲೆೀ ಸಾಗಬೇಕು. ಕಾಲೇಜಿನಲ್ಲಿ ಪ್ರತೀ ವಿಷಯದಲ್ಲಿ ಒಂದೊಂದು ಅಧ್ಯಾಯ ಮುಗಿದ ತಕ್ಷಣ ಅದಕ್ಕೆ ಸಂಬಂಧಪಟ್ಟ ಸಿಇಟಿ ಪ್ರಶ್ನೆಗಳನ್ನು ಉತ್ತರಿಸಬೇಕು. ಮೊದಲು ಆ ಅಧ್ಯಾಯದಲ್ಲಿ ಹಿಂದಿನ ವರ್ಷಗಳಲ್ಲಿ ಬಂದ ಪರೀಕ್ಷಾ ಪ್ರಶ್ನೆಗಳನ್ನು ಬಿಡಿಸಬೇಕು. ಅನಂತರ ಯಾವುದಾದರೂ ಉತ್ತಮ ಮಾರ್ಗದರ್ಶಿ ಪುಸ್ತಕದ ಪ್ರಶ್ನೆಗಳನ್ನು ಉತ್ತರಿಸಬೇಕು. ಸಿಇಟಿಯಲ್ಲಿ ಒಂದು ಪ್ರಶ್ನೆಯನ್ನು ಉತ್ತರಿಸಲು ಸರಾಸರಿ ಒಂದು ನಿಮಿಷ ಮಾತ್ರ ದೊರೆಯುವುದರಿಂದ ವೇಗವಾಗಿ ಪ್ರಶ್ನೆಗಳನ್ನು ಓದಿ ಅರ್ಥಮಾಡಿಕೊಂಡು ಬಿಡಿಸುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು. ಇದಕ್ಕಾಗಿ ಮನೆಯಲ್ಲಿಯೇ ಕೆಲವು ಅಣಕು ಪರೀಕ್ಷೆಗಳನ್ನು ತೆಗೆದುಕೊಂಡು ಕೌಶಲ್ಯ ಬೆಳೆಸಿಕೊಳ್ಳಬೇಕು. ಸುಮಾ ನಾನು ಪ್ರಥಮ ಪಿಯುಸಿ ಪರೀಕ್ಷೆ ಮುಗಿಸಿದ್ದೇನೆ. ನನಗೆ ಐಎಎಸ್ ಮಾಡಬೇಕೆಂಬ ಹಂಬಲ ಇದೆ. ದಯವಿಟ್ಟು ಇದಕ್ಕೆ ಬೇಕಾದ ಸೂಕ್ತ ಮಾಹಿತಿ ಒದಗಿಸಿಕೊಡಿ. ಪಿಯು ಓದುತ್ತಿರುವಾಗಲೇ ಮುಂದೆ ಐಎಎಸ್ ಮಾಡಬೇಕೆಂದು ಕನಸು ಕಾಣುತ್ತಿರುವುದು ಸಂತೋಷದ ವಿಷಯ. ಐಎಎಸ್ ಪರೀಕ್ಷೆ ತೆಗೆದುಕೊಳ್ಳುವ ಮೊದಲು ನೀವು ಯಾವುದಾದರೂ ಒಂದು ಕ್ಷೇತ್ರದಲ್ಲಿ (ವಿಜ್ಞಾನ, ಕಲೆ, ವಾಣಿಜ್ಯ, ಎಂಜಿನಿಯರಿಂಗ್, ವೈದ್ಯಕೀಯ ಇತ್ಯಾದಿ) ಪದವೀಧರರಾಗಬೇಕು. ಸ್ನಾತಕೋತ್ತರ ಪದವಿಯನ್ನು ಹೊಂದಿರುವುದು ಅಪೇಕ್ಷಣೀಯ. ನೀವು ಪಿಯು ನಂತರ ನಿಮ್ಮ ಆಸಕ್ತಿಗೆ ಅನುಸಾರವಾಗಿ ಯಾವುದೇ ಕ್ಷೇತ್ರವನ್ನಾದರೂ ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳಿ. ಆದರೆ ಈಗಿನಿಂದಲೇ ಐಎಎಸ್ ಬಗ್ಗೆ ಗಮನವಿರಲಿ. ಪ್ರಪಂಚದಲ್ಲಿ ನಡೆಯುತ್ತಿರುವ ಎಲ್ಲಾ ವಿದ್ಯಮಾನಗಳನ್ನು ಕುತೂಹಲದಿಂದ ಗಮನಿಸಿ. ಕಲೆ, ಕ್ರೀಡೆ, ಸಂಸ್ಕೃತಿ, ರಾಜಕೀಯ ಮುಂತಾದ ಎಲ್ಲಾ ಕ್ಷೇತ್ರಗಳ ಬಗ್ಗೆಯೂ ಕುತೂಹಲವನ್ನು ಬೆಳೆಸಿಕೊಳ್ಳಿ. ಇಂಗ್ಲಿಷ್ ಭಾಷೆಯ ಮೇಲೆ ಪ್ರಭುತ್ವವನ್ನು ಸಾಧಿಸಿ ಸಂವಹನ ಸಾಮರ್ಥ್ಯವನ್ನು ಬೆಳೆಸಿಕೊಳ್ಳಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.