ಪಿಯುಸಿ ನಂತರ ಅವಕಾಶಗಳ ಹೆಬ್ಬಾಗಿಲು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಪ್ರಮುಖವಾದ ಘಟ್ಟಗಳು. ಈ ಎರಡೂ ಪರೀಕ್ಷೆಗಳ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಲಕ್ಷಾಂತರ ವಿದ್ಯಾರ್ಥಿಗಳು, ಪೋಷಕರು ಭವಿಷ್ಯದ ಚಿಂತನೆಯಲ್ಲಿ ತೊಡಗಿದ್ದಾರೆ. ಮೊದಲಿನಿಂದಲೂ ಎಂಜಿನಿಯರ್, ಡಾಕ್ಟರ್ ಆಗಬೇಕೆಂದು ಬಯಸಿರುವ ವಿದ್ಯಾರ್ಥಿಗಳು, ಅದಕ್ಕೆ ಒತ್ತಾಸೆಯಾಗಿ ನಿಂತಿರುವ ಪೋಷಕರು ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಫಲಿತಾಂಶಕ್ಕೆ ಕಾಯುತ್ತಿದ್ದಾರೆ. ಈ ಕೋರ್ಸ್‌ಗಳತ್ತ ಆಸಕ್ತಿ ಇಲ್ಲದ ಅಥವಾ ಈ ಕೋರ್ಸ್‌ಗಳ ವ್ಯಾಸಂಗಕ್ಕೆ ತಗಲುವ ವೆಚ್ಚವನ್ನು ಭರಿಸಲಾಗದ ವಿದ್ಯಾರ್ಥಿಗಳು ಬೇರೆ ಯಾವ ಕೋರ್ಸ್‌ಗೆ ಸೇರಿದರೆ ಒಳ್ಳೆಯದು ಎಂಬ ಯೋಚನೆಯಲ್ಲಿದ್ದಾರೆ. ಕೇವಲ ಎಂಜಿನಿಯರಿಂಗ್, ವೈದ್ಯಕೀಯ ಕ್ಷೇತ್ರದಲ್ಲಿ ಅಷ್ಟೇ ಅಲ್ಲದೆ ಈಚೆಗೆ ಬೇರೆ ಬೇರೆ ಕ್ಷೇತ್ರಗಳಲ್ಲೂ ಹೇರಳವಾಗಿ ಉದ್ಯೋಗಾವಕಾಶಗಳು ದೊರೆಯುತ್ತಿವೆ. ಈ ಅವಕಾಶಗಳನ್ನು ನಮ್ಮದಾಗಿಸಿಕೊಳ್ಳಬೇಕಾದರೆ ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳುತ್ತೇವೆ ಎಂಬುದಕ್ಕಿಂತ ಹೇಗೆ ಓದುತ್ತೇವೆ ಎಂಬುದು ಬಹಳ ಮುಖ್ಯ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಾವುದೇ ಕೋರ್ಸ್ ಆಯ್ಕೆ ಮಾಡಿಕೊಂಡರೂ ಅದಕ್ಕೆ ಅದರದ್ದೇ ಆಗಿರುವ ಅವಕಾಶಗಳಿವೆ. ಯಾವುದೂ ಮೇಲಲ್ಲ, ಕೀಳಲ್ಲ. ಅದನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದರ ಮೇಲೆ ಯಶಸ್ಸು ನಿರ್ಧಾರವಾಗುತ್ತದೆ. ಅವರವರ ಆಸಕ್ತಿ, ಅಭಿರುಚಿಗಳಿಗೆ ಅನುಗುಣವಾಗಿ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಂಡರೆ ಗುರಿ ಮುಟ್ಟುವುದು ಸುಲಭ. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯಲಾಗದಿದ್ದರೆ, ಎಂಜಿನಿಯರಿಂಗ್, ವೈದ್ಯಕೀಯ ಕೋರ್ಸ್‌ಗಳಿಗೆ ಸೀಟು ಸಿಗದೆ ಇದ್ದರೆ ಹತಾಶರಾಗುವ ಅಗತ್ಯವಿಲ್ಲ. ಎಂಜಿನಿಯರ್, ಡಾಕ್ಟರ್ ಆಗುವುದೇ ಜೀವನದ ಸರ್ವಸ್ವ ಅಲ್ಲ ಎಂಬುದನ್ನು ವಿದ್ಯಾರ್ಥಿಗಳು, ಪೋಷಕರು ಅರ್ಥ ಮಾಡಿಕೊಳ್ಳಬೇಕು. ಏಕೆಂದರೆ ಇವುಗಳ ಹೊರತಾಗಿ ಇಷ್ಟೇ ಮಹತ್ವದ, ಸಾಕಷ್ಟು ಬೆಡಿಕೆ ಇರುವ ಹಲವಾರು ಕೋರ್ಸ್‌ಗಳಿವೆ. ಯಾವುದೇ ಕೋರ್ಸ್‌ಗೆ ಸೇರ್ಪಡೆಯಾಗುವ ಮುನ್ನ ಅವರವರ ಅಭಿರುಚಿ, ಸಾಮರ್ಥ್ಯ, ಆರ್ಥಿಕ ಶಕ್ತಿ, ಎಷ್ಟು ವರ್ಷಗಳಲ್ಲಿ ಕೋರ್ಸ್ ಪೂರ್ಣಗೊಳಿಸಬಹುದು, ಆ ಕ್ಷೇತ್ರದಲ್ಲಿರುವ ಅವಕಾಶಗಳು ಯಾವುವು ಎಂಬುದನ್ನು ತಿಳಿದುಕೊಂಡರೆ ತಮ್ಮದೇ ಆದ ಬದುಕು ರೂಪಿಸಿಕೊಳ್ಳಬಹುದಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವೈದ್ಯಕೀಯ ಇತ್ಯಾದಿ ಕ್ಷೇತ್ರಗಳಲ್ಲಿ ಆಗಿರುವ ಕ್ರಾಂತಿಯಿಂದಾಗಿ ಸಾಂಪ್ರದಾಯಿಕ ಕೋರ್ಸ್‌ಗಳ ಜೊತೆಗೆ ಹತ್ತು ಹಲವು ಹೊಸ ಕೋರ್ಸ್‌ಗಳು ಆರಂಭವಾಗಿವೆ. ಅದನ್ನು ಮಾಡಿದವರಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯೂ ಇದೆ. ಭವಿಷ್ಯದ ದಾರಿ ದ್ವಿತೀಯ ಪಿಯುಸಿ ನಂತರ ಎಂಜಿನಿಯರಿಂಗ್, ವೈದ್ಯಕೀಯ ಕ್ಷೇತ್ರಕ್ಕೆ ಆದ್ಯತೆ ನೀಡುವವರ ಸಂಖ್ಯೆ ಜಾಸ್ತಿ. ಇವುಗಳನ್ನು ಹೊರತುಪಡಿಸಿದರೆ ವಿಜ್ಞಾನ, ವಾಣಿಜ್ಯ ಕಲಾ ವಿಭಾಗದಲ್ಲಿ ಹಲವು ಕೋರ್ಸ್‌ಗಳಿವೆ. ವಿಜ್ಞಾನಿಯಾಗಬೇಕು, ಸಂಶೋಧನಾ ಕ್ಷೇತ್ರದಲ್ಲಿ ತೊಡಗಬೇಕು ಎಂದು ಬಯಸುವ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಬಿಎಸ್ಸಿಗೆ ಸೇರಬಹುದು. ಬಿಎಸ್ಸಿ ನಂತರ ಬಿಇಡಿ ಅಥವಾ ಎಂಎಸ್ಸಿ ಮಾಡಿಕೊಂಡು ಶಿಕ್ಷಕರು, ಉಪನ್ಯಾಸಕರಾಗಬಹುದು. ಬೋಧನಾ ವೃತ್ತಿ ಇಷ್ಟವಿಲ್ಲದಿದ್ದರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಕೆಎಎಸ್, ಐಎಎಸ್ ಅಧಿಕಾರಿಗಳಾಗಬಹುದು. ಎಫ್‌ಡಿಎ ಪರೀಕ್ಷೆ ಬರೆದು ಗುಮಾಸ್ತರಾಗಬಹುದು. ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಹತ್ತು ಹಲವು ಅವಕಾಶಗಳಿವೆ. ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು ವಿಶ್ವವಿದ್ಯಾಲಯ ಸೇರಿದಂತೆ ಹಲವೆಡೆ ನಾಲ್ಕು ವರ್ಷಗಳ ಬಿಎಸ್ ಕೋರ್ಸ್ ಆರಂಭಿಸಲಾಗಿದೆ. ಪಿಯುಸಿ ನಂತರ ಈ ಕೋರ್ಸ್‌ಗೆ ಸೇರ್ಪಡೆಯಾಗಬಹುದು. ಅಲ್ಲದೆ ಕೆಲವು ವಿಷಯಗಳಲ್ಲಿ ಐದು ವರ್ಷದ ಇಂಟಿಗ್ರೇಟೆಡ್ ಕೋರ್ಸ್‌ಗಳಿವೆ. ಪಿಯು ನಂತರ ಇವಕ್ಕೆ ಸೇರ್ಪಡೆಯಾದರೆ ಎಂಎಸ್ಸಿ ಸ್ನಾತಕೋತ್ತರ ಪದವಿ ಪಡೆದಂತಾಗುತ್ತದೆ. ಬೆಂಗಳೂರು ವಿವಿ ಸೇರಿದಂತೆ ರಾಜ್ಯದ ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ಇಂಟಿಗ್ರೇಟೆಡ್ ಕೋರ್ಸ್‌ಗಳಿವೆ. ಬಿಎಸ್ಸಿ ಕೃಷಿ, ತೋಟಗಾರಿಕೆ, ಅರಣ್ಯ, ಕೃಷಿ ಮಾರಾಟ ಮತ್ತು ಸಹಕಾರ, ಪಶು ಸಂಗೋಪನೆ, ಡೇರಿ ತಂತ್ರಜ್ಞಾನ, ಮೀನುಗಾರಿಕೆ, ಕಾನೂನು ಇತ್ಯಾದಿ ಪದವಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯಬಹುದಾಗಿದೆ. ಪದವಿ ತರಗತಿಗೆ ಸೇರಲು ಇಷ್ಟವಿಲ್ಲದಿದ್ದರೆ ಡಿಪ್ಲೊಮಾ ಇನ್ ಎಜುಕೇಷನ್ (ಡಿಇಡಿ) ಮಾಡಿಕೊಂಡು ಪ್ರಾಥಮಿಕ ಶಾಲಾ ಶಿಕ್ಷಕರಾಗಬಹುದು. ಕಲೆ, ವಾಣಿಜ್ಯ, ವಿಜ್ಞಾನ ಸೇರಿದಂತೆ ಯಾವುದೇ ಸಂಯೋಜನೆಯ ವಿದ್ಯಾರ್ಥಿಗಳು ಡಿಇಡಿಗೆ ಸೇರ್ಪಡೆಯಾಗಲು ಅವಕಾಶವಿದೆ. ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಮೂರು ವರ್ಷದ ಬಿಕಾಂ, ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ (ಬಿಸಿಎ), ಬ್ಯಾಚುಲರ್ ಆಫ್ ಬಿಸಿನೆಸ್ ಮ್ಯಾನೇಜ್‌ಮೆಂಟ್ (ಬಿಬಿಎಂ), ಬ್ಯಾಚುಲರ್ ಆಫ್ ಟೂರಿಸಂ ಅಡ್ಮಿನಿಸ್ಟ್ರೇಷನ್ (ಬಿಟಿಎ), ಬ್ಯಾಚುಲರ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್ (ಬಿಎಚ್‌ಎಂ), ಬ್ಯಾಚುಲರ್ ಆಫ್ ಬ್ಯಾಂಕಿಂಗ್ ಅಂಡ್ ಫೈನಾನ್ಸ್ (ಬಿಬಿಎಫ್) ಇತ್ಯಾದಿ ವೈವಿಧ್ಯಮಯ ಪದವಿ ಕೋರ್ಸ್‌ಗಳಿಗೆ ಸೇರ್ಪಡೆಯಾಗಲು ಅವಕಾಶಗಳಿವೆ. ಕಲಾ ವಿಭಾಗದವರು ಸಹ ಮೇಲಿನ ಕೆಲವೊಂದು ಕೋರ್ಸ್‌ಗಳಿಗೆ ಪ್ರವೇಶ ಪಡೆಯಬಹುದು. ಮೂರು ವರ್ಷದ ಪದವಿ ನಂತರ ಎಂಕಾಂ, ಎಂಬಿಎ, ಎಂಸಿಎ ಇತ್ಯಾದಿ ಕೋರ್ಸ್‌ಗಳಿಗೆ ಸೇರಬಹುದು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮಾಸ್ಟರ್ ಆಫ್ ಬಿಸಿನೆಸ್ ಸ್ಟಡೀಸ್ (ಎಂಬಿಎಸ್), ಸಮಾಜ ವಿಜ್ಞಾನ (ಎಂಎ)ದಲ್ಲಿ ಐದು ವರ್ಷದ ಇಂಟಿಗ್ರೇಟೆಡ್ ಕೋರ್ಸ್ ಇದೆ. ಪಿಯುಸಿ ನಂತರ ಈ ಕೋರ್ಸ್‌ಗೆ ಸೇರ್ಪಡೆಯಾಗಬಹುದು. ಪಿಯುಸಿ ಪಾಸಾದವರಿಗೆ ಐದು ವರ್ಷದ ಕಾನೂನು ಪದವಿ ವ್ಯಾಸಂಗ ಮಾಡಲು, ಬ್ಯಾಚುಲರ್ ಪದವಿ ಆದವರಿಗೆ ಮೂರು ವರ್ಷದ ಕಾನೂನು ಪದವಿ ಅಧ್ಯಯನ ನಡೆಸಲು ಅವಕಾಶವಿದೆ. ಇದಲ್ಲದೆ ನರ್ಸಿಂಗ್, ಮೆಡಿಕಲ್ ಲ್ಯಾಬ್ ಟೆಕ್ನಾಲಜಿ, ಎಕ್ಸ್‌ರೇ ತಂತ್ರಜ್ಞಾನ, ಡಯಾಲಿಸಿಸ್ ಟೆಕ್ನಾಲಜಿ, ಮೆಡಿಕಲ್ ರೆಕಾರ್ಡ್, ಆಪರೇಷನ್ ಥಿಯೇಟರ್, ಹೆಲ್ತ್, ಇನ್‌ಸ್ಪೆಕ್ಟರ್, ಆಫ್ತಮಾಲಜಿ ಇತ್ಯಾದಿ ಡಿಪ್ಲೊಮಾ ಕೋರ್ಸ್‌ಗಳಿವೆ. ಎಸ್ಸೆಸ್ಸೆಲ್ಸಿ ಆದವರು ಮೂರು ವರ್ಷದ ಮತ್ತು ಪಿಯುಸಿ ಆದವರು ಎರಡು ವರ್ಷದ ಡಿಪ್ಲೊಮಾ ಕೋರ್ಸ್‌ಗೆ ಸೇರಬಹುದು. ಫ್ಯಾಷನ್ ಟೆಕ್ನಾಲಜಿ, ಜವಳಿ ಕ್ಷೇತ್ರದಲ್ಲೂ ಡಿಪ್ಲೊಮಾ, ಡಿಗ್ರಿ ಕೋರ್ಸ್‌ಗಳಿವೆ. ಈ ಕ್ಷೇತ್ರದಲ್ಲಿ ವ್ಯಾಸಂಗ ಮಾಡಿದವರಿಗೆ ಉದ್ಯೋಗ ಗ್ಯಾರಂಟಿ. ಡ್ರೆಸ್ ಮೆಕಿಂಗ್, ಡೈಯಿಂಗ್, ಸೂಪರ್ ವೈಸರ್, ಫ್ಯಾಷನ್ ಡಿಸೈನರ್ ಆಗಿ ಸೇವೆ ಸಲ್ಲಿಸಬಹುದು. ಟೂಲ್ ಮೇಕಿಂಗ್, ಸಿರಾಮಿಕ್ ಡಿಪ್ಲೊಮಾ, ಚರ್ಮ ತಂತ್ರಜ್ಞಾನ, ಒಳಾಂಗಣ ವಿನ್ಯಾಸ, ಸಿ ಟಿ ಸ್ಕ್ಯಾನರ್, ಡಿಪ್ಲೊಮಾ ಇನ್ ಮೈನಿಂಗ್ ಇತ್ಯಾದಿ ಕೋರ್ಸ್‌ಗಳಿವೆ. ಅಲ್ಲದೆ ಖಾಸಗಿಯಾಗಿ ಕ್ಯಾಡ್, ಕ್ಯಾಮ್, ಅನಿಮೇಷನ್ ತರಬೇತಿ ಪಡೆಯಬಹುದು. ಎಲೆಕ್ಟ್ರಾನಿಕ್ ಮತ್ತು ಮುದ್ರಣ ಮಾಧ್ಯಮ ಬೆಳೆದಂತೆಲ್ಲ ಈ ಕ್ಷೇತ್ರದಲ್ಲೂ ಅವಕಾಶಗಳಿವೆ. ಪಿಯುಸಿ ನಂತರ ಪದವಿ ಇಲ್ಲವೆ ಡಿಪ್ಲೊಮಾ ಕೋರ್ಸ್‌ಗೆ ಸೇರಬಹುದು. ಪದವಿ ನಂತರ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಅವಕಾಶವಿದೆ. ಆಹಾರ ತಂತ್ರಜ್ಞಾನ ಕ್ಷೇತ್ರದಲ್ಲೂ ಹಲವು ಕೋರ್ಸ್‌ಗಳಿವೆ. ಫುಡ್ ಟೆಕ್ನಾಲಜಿಯಲ್ಲಿ ಡಿಪ್ಲೊಮಾ, ಬಿಎಸ್ಸಿ, ಬಿಟೆಕ್, ಎಂಎಸ್ಸಿ ಮಾಡಿದರೆ ಆಹಾರ ತಯಾರಿಕಾ ಘಟಕ, ತಾರಾ ಹೋಟೆಲ್, ಕೃಷಿ ಉತ್ಪನ್ನ ತಯಾರಿಕಾ ಘಟಕ, ಆಹಾರ ಗುಣಮಟ್ಟ ಪರಿಶೀಲನೆ, ಆಹಾರ ಪ್ರಯೋಗಾಲಯಗಳಲ್ಲಿ ಉದ್ಯೋಗ ಕೈಬೀಸಿ ಕರೆಯುತ್ತವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.