ಪಿಯುಸಿ ಶಿಕ್ಷಕರ ನೇಮಕಾತಿ ಪರೀಕ್ಷೆಯ ಯಶಸ್ಸಿನ ಸೂತ್ರಗಳು ಬಹು ನಿರೀಕ್ಷಿತ ಪಿಯುಸಿ ಉಪನ್ಯಾಸಕ ಹುದ್ದೆಯ ನೇಮಕಾತಿಗೆ ಚಾಲನೆ ದೊರೆತಿದೆ. ಇದರಲ್ಲಿ 1700 ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶ ದೊರೆಯಲಿದೆ. ಇಲ್ಲಿ ಲಂಚಗುಳಿತನಕ್ಕೆ ಅವಕಾಶ ಇರದೇ ಸ್ಪರ್ಧಾತ್ಮಕ ಪರೀಕ್ಷೆಯಡಿ ನೇಮಕಾತಿ ನಡೆಯಲಿದೆ. ಈ ಪ್ರಕ್ರಿಯೆಯಿಂದ ಅಭ್ಯರ್ಥಿಗಳಿಗೆ ಖುಷಿಯಾಗಿದೆ. ಆದರೆ ಈ ಹುದ್ದೆಗೆ ಆಯ್ಕೆಗೊಳ್ಳಲು ಸಾಕಷ್ಟು ಶ್ರಮ ಪಡಬೇಕು ಎಂಬುದನ್ನು ಮರೆಯುವಂತಿಲ್ಲ. ಅದಕ್ಕೆ ಕಾರಣವೂ ಇದೆ. ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿ ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆಯ ಸಂರಚನೆ 4 ಹಂತಗಳನ್ನು ಒಳಗೊಂಡಿರುತ್ತದೆ. ಅಂದರೆ ಅಲ್ಲಿನ ಒಂದು ಪತ್ರಿಕೆಯಲ್ಲಿ 100 ಪ್ರಶ್ನೆಗಳು (ನಾಲ್ಕು ಹಂತದಲ್ಲಿ ತಲಾ 25 ಪ್ರಶ್ನೆ) ಇರುತ್ತವೆ. ಅಲ್ಲಿ ಮೊದಲೆರಡು ಹಂತದ ಪ್ರಶ್ನೆಗಳಿಗೆ ಉತ್ತರಿಸಲು ದೀರ್ಘಾಧ್ಯಯನದ ಅವಶ್ಯಕತೆ ಉದ್ಭವಿಸುವುದಿಲ್ಲ. ಸಾಮಾನ್ಯ ತಿಳಿವಳಿಕೆಯ ಆ ಪ್ರಶ್ನೆಗಳಿಗೆ ಭಾಗಶಃ ಉತ್ತರಿಸುವಿಕೆಗೆ ಸಹಕಾರಿಯಾಗುತ್ತದೆ. ಮೂರು ಮತ್ತು ನಾಲ್ಕನೇ ಹಂತದಲ್ಲಿ ಇರುವುದು ಕೆಳಸ್ತರದ ಮತ್ತು ಮೂಲಭೂತ ವಿಷಯಾಧಾರಿತ ಪ್ರಶ್ನೆಗಳು. ಆ ಎರಡು ಸೀಮಿತ ವರ್ಗದ ಪ್ರಶ್ನೆಗಳಿಗೆ ಪ್ರಾತಿನಿಧ್ಯ ಆಧಾರದ ಅಧ್ಯಯನದ ಮೂಲಕ ಉತ್ತರ ಕಂಡುಕೊಳ್ಳಬಹುದು. ಆದ್ದರಿಂದ ಅಲ್ಲಿ ಒಬ್ಬ ಸೂಕ್ಷ್ಮಗ್ರಾಹಿ ಪರೀಕ್ಷಾರ್ಥಿಗೆ ಸಮಯ ಮತ್ತು ಶ್ರಮ ಎರಡು ಉಳಿಯುತ್ತದೆ. ಆದರೆ ಪಿಯುಸಿ ನೇಮಕಾತಿ ಇದಕ್ಕೆ ಭಿನ್ನ. ನಾನಿಲ್ಲಿ ಯಾವುದೇ ಒಂದು ವಿಷಯದ ಬಗೆಗೆ ಚರ್ಚಿಸುತ್ತಿಲ್ಲ. ಬದಲಿಗೆ ಈ ನೇಮಕಾತಿ ಪ್ರಕ್ರಿಯೆಯಡಿ ಬರುವ ಎಲ್ಲ ವಿಷಯ ವಸ್ತುಗಳಿಗೂ ಇದು ಅನ್ವಯವಾಗುತ್ತದೆ. ಅದು ಇತಿಹಾಸ ಇರಬಹುದು ಅಥವಾ ಭೌತಶಾಸ್ತ್ರವಾಗಬಹುದು. ಹುದ್ದೆಗಳ ಲಭ್ಯತೆ ಪರೀಕ್ಷಾರ್ಥಿಗಳೇ! ಈಗಾಗಲೇ ನೀವು ಈ ಹುದ್ದೆಗೆ ಅರ್ಜಿ ಸಲ್ಲಿಸಿದ್ದೀರಿ. `ಅಧಿಸೂಚನೆಯಲ್ಲಿ ನನ್ನ ವಿಷಯದ 100 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದಾರೆ, ಅದರಲ್ಲಿ ನನಗೆ ಒಂದು ಹುದ್ದೆ ಸಿಗುವುದು ಅಸಾಧ್ಯ~ ಎಂಬ ಆತಂಕದಲ್ಲಿ ನೀವಿದ್ದೀರಿ. ಎಲ್ಲರೂ ಅಲ್ಲದಿದ್ದರೂ ಬಹುತೇಕರು ಈ ಗುಂಪಿಗೆ ಸೇರಿದವರೇ. ಆದರೆ ನಿರಾಶೆ ಬೇಡ. ಉದಾ: ರಾಜ್ಯಶಾಸ್ತ್ರ ವಿಷಯವನ್ನೇ ನೋಡೋಣ. ಈ ವಿಷಯದಲ್ಲಿ 65 ಹುದ್ದೆಗಳಿವೆ. ಇದರಲ್ಲಿ ಶೇ 30 ಹುದ್ದೆಗಳು ನಿಮಗೆ ಲಭ್ಯವಿರುವುದಿಲ್ಲ. ಹಾಗಂತ ನಾನು ಮೀಸಲಾತಿ ಬಗ್ಗೆ ಮಾತನಾಡುತ್ತಿಲ್ಲ. ಈ ಪಿಯುಸಿ ಉಪನ್ಯಾಸಕ ಹುದ್ದೆಗೆ ಚಾಲನೆ ದೊರಕುವ ಭರವಸೆ ಕಳೆದ ಒಂದೂವರೆ ವರ್ಷದ ಹಿಂದೆಯೇ ಇತ್ತು. ಒಂದು ನಿಷ್ಠಾವಂತ ವರ್ಗ ಅಂದಿನಿಂದಲೇ ತಮ್ಮ ವಿಷಯ ಕುರಿತು ಅಧ್ಯಯನದಲ್ಲಿ ತೊಡಗಿದೆ. ಮತ್ತೊಂದು ವರ್ಗವಿದೆ. ಅದು ಕಳೆದ ಸಲದ ನೇಮಕಾತಿಯಲ್ಲಿ 0.5, 0.3, 0.6 ಅಂಕಗಳಿಂದ ವಂಚಿತವಾದ ಗುಂಪು. ಈ ವರ್ಗವು ಕೂಡ ಅಂದಿನಿಂದಲೇ ಸೂಕ್ಷ್ಮಾಧ್ಯಯನ ನಡೆಸಿದೆ. ಇದು ಗಾಳಿಯ ಮಾತಲ್ಲ. ನಾನೊಬ್ಬ ರಾಜ್ಯ ಮಟ್ಟದ ಸ್ಪರ್ಧಾ ತರಬೇತಿದಾರನಾದ ಕಾರಣ ಅನುಭವದಿಂದ ಹೇಳುತ್ತಿದ್ದೇನೆ. ಈ ಎರಡೂ ವರ್ಗ ಕನಿಷ್ಠ ಶೇ 30 ಹುದ್ದೆಗಳನ್ನು ಪಡೆದೇ ತೀರುತ್ತವೆ. ಅದರಲ್ಲಿ ಯಾವ ಅನುಮಾನವೂ ಇಲ್ಲ. ಪ್ರಶ್ನೆ ಪತ್ರಿಕೆ ಎಷ್ಟೇ ಕಠಿಣವಾಗಿದ್ದರೂ ಇವರಿಗೆ ಹುದ್ದೆ ಕೈತಪ್ಪುವ ಮಾತೇ ಇಲ್ಲ. ಕಾರಣ ಇವರು ಕಠಿಣ ಪ್ರಶ್ನೆ ಪತ್ರಿಕೆಯಲ್ಲಿ ಶೇ 40 ಅಂಕ ಗಳಿಸಿದವರು. ನಿಮಗಿಂತ ಅಂಕ ಪಟ್ಟಿಯಲ್ಲಿ ಮೇಲಿನ ಸ್ಥಾನದಲ್ಲಿ ಇರುತ್ತಾರೆ. ಆದ್ದರಿಂದ ನಿಮಗೆ ಲಭ್ಯವಿರುವ ಹುದ್ದೆ ಶೇ 70 ಎಂಬುದನ್ನು ಅರ್ಥಮಾಡಿಕೊಳ್ಳುವುದು ಅನಿವಾರ್ಯ. ಇದು ರಾಜ್ಯಶಾಸ್ತ್ರವಲ್ಲ; ಎಲ್ಲ ವಿಷಯಕ್ಕೂ ಅನ್ವಯಿಸುತ್ತದೆ. ಪ್ರಶ್ನೆ ಪತ್ರಿಕೆ ಸಂರಚನೆ ಕಳೆದ ಬಾರಿಯದು ಮೊದಲು ನೇಮಕಾತಿಯಾಗಿತ್ತು. ಪ್ರಶ್ನೆ ಪತ್ರಿಕೆಯ ತೀವ್ರತೆಯು ಅರಗಿಸಿಕೊಳ್ಳಲು ಯೋಗ್ಯವಾಗಿತ್ತು. ಆದರೆ ಇದು ಎರಡನೆಯ ಮತ್ತು ಪೂರ್ವ ತಯಾರಿಯುಳ್ಳ ಪರೀಕ್ಷೆ. ಇಲ್ಲಿ ಕಳೆದ ಅವಧಿಗಿಂತಲೂ ಅಭ್ಯರ್ಥಿಗಳ ಸ್ಪರ್ಧೆ ಹೆಚ್ಚಿರುತ್ತದೆ. ಈ ಹಿನ್ನೆಲೆಯಲ್ಲಿ ಪ್ರಶ್ನೆ ಪತ್ರಿಕೆ ಸಂರಚನೆ ವ್ಯಾಪ್ತಿ ವಿಶಾಲವಾಗಿರುವುದು ಖಚಿತ. ಈ ಪರೀಕ್ಷೆಯಲ್ಲಿ ಒಟ್ಟು 3 ವಿಭಾಗವಿರುತ್ತದೆ. ಒಂದು ಸಾಮಾನ್ಯ ಕನ್ನಡ. ಇದು 100 ಪ್ರಶ್ನೆಗಳುಳ್ಳ 150 ಅಂಕದ ಪತ್ರಿಕೆ. ಪ್ರತಿ ಪ್ರಶ್ನೆಗೆ 1.50 ಅಂಕಗಳು. ಇದರಲ್ಲಿ ಕಡ್ಡಾಯವಾಗಿ 50 ಅಂಕಗಳನ್ನು ಪ್ರತಿ ಅಭ್ಯರ್ಥಿ ಗಳಿಸಲೇಬೇಕು. ಇಲ್ಲವಾದಲ್ಲಿ ಆತನ ಎರಡು ಮತ್ತು ಮೂರನೇ ಪತ್ರಿಕೆಗಳು ಮೌಲ್ಯಮಾಪನಕ್ಕೆ ಒಳಪಡುವುದಿಲ್ಲ. ಆದರೆ ಈ ಪತ್ರಿಕೆಯು ರ‌್ಯಾಂಕ್‌ಗೆ ಒಳಪಟ್ಟಿಲ್ಲ. ಬದಲಿಗೆ ಅರ್ಹತೆಗೆ ಮಾತ್ರ. ಈ ಪತ್ರಿಕೆಯನ್ನು ಕಲಾ ಪದವೀಧರರು ನಿರ್ಲಕ್ಷಿಸುವುದು ಸಾಮಾನ್ಯ. ಆದರೆ ಆ ಪ್ರವೃತ್ತಿ ಈ ಬಾರಿ ನಿಮ್ಮನ್ನು ಸಂಕಷ್ಟಕ್ಕೆ ದೂಡಬಹುದು. ಆದ್ದರಿಂದ ಎಚ್ಚರವಿರಲಿ. ಉಳಿದ ಹಂತದಲ್ಲಿ ನಿಮ್ಮದೇ ವಿಷಯದ ಎರಡು ಪತ್ರಿಕೆಗಳಿರುತ್ತವೆ. ಅವು ಕೂಡ 100 ಪ್ರಶ್ನೆಗಳುಳ್ಳ 150 ಅಂಕದ ಪತ್ರಿಕೆಗಳು. ಒಟ್ಟು 450 ಅಂಕದ ಪರೀಕ್ಷೆಯಲ್ಲಿ ನಿಮ್ಮ ಜೇಷ್ಠತೆ ನಿರ್ಧಾರವಾಗುವುದು 300 ಅಂಕಗಳಿಗೆ ಮಾತ್ರ. ಈ ಪರೀಕ್ಷೆಯಲ್ಲಿ ನೆಗೆಟಿವ್ ಮೌಲ್ಯಮಾಪನ ಇದೆ. ಪ್ರತಿಯೊಂದು ತಪ್ಪು ಉತ್ತರಕ್ಕೆ 1/4 ಅಂಕಗಳನ್ನು ಕಳೆಯಲಾಗುತ್ತದೆ. ಇಲ್ಲಿ ನಿಮ್ಮ 300 ಅಂಕಗಳ 200 ಪ್ರಶ್ನೆಗಳು 4ನೇ ಹಂತದ ಪ್ರಶ್ನೆಗಳೇ ಆಗಿರುವುದು ವಿಶೇಷ. ಅಂದರೆ ಪ್ರತೀ ಪ್ರಶ್ನೆ ತಳಮಟ್ಟದ ಹಾಗೂ ಆಳವಾದ ಜ್ಞಾನವನ್ನೇ ನಿರೀಕ್ಷಿಸುತ್ತದೆ. ಇಲ್ಲಿ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಜವಾಬ್ದಾರಿ ಒಬ್ಬನೇ ವ್ಯಕ್ತಿಯದ್ದಲ್ಲ. ಒಂದು ಪತ್ರಿಕೆಯ 100 ಪ್ರಶ್ನೆಗಳು ವಿವಿಧ ತಂಡದಿಂದ ರಚಿತವಾಗಿರುತ್ತವೆ. ತಂಡದ ಸದಸ್ಯರು ತಮ್ಮ ಪಾಲಿಗೆ ಬರುವ 2 ಅಥವಾ 3 ಪ್ರಶ್ನೆಗಳನ್ನು ಸಾಧಾರಣ ಮಟ್ಟದಲ್ಲಿ ನಿರೂಪಿಸುವುದಿಲ್ಲ ಎಂಬುದು ವಾಸ್ತವ ಸಂಗತಿ. ಅಂತಿಮವಾಗಿ ಆ ಎಲ್ಲಾ ತಂಡಗಳ ಕನ್ಸಾಲಿಡೇಟೆಡ್ ಪತ್ರಿಕೆ ಕಬ್ಬಿಣದ ಕಡಲೇಯೇ ಸರಿ. ಉದಾ: ಭಾರತದ ಈಗಿನ ರಾಷ್ಟ್ರಪತಿ ಯಾರು ಎಂಬ ಪ್ರಶ್ನೆ ನಿರೀಕ್ಷಿಸುವುದು ಅಂಧತ್ವದ ಲಕ್ಷಣವಾಗಿ ಬಿಡುತ್ತದೆ. ಪ್ರಶ್ನೆ ಈ ಕೆಳಕಂಡ ರೀತಿ ರಚನೆಯಾಗುತ್ತವೆ. ಅವಧಿ ಮತ್ತು ಅಧ್ಯಯನ ಈ ಪರೀಕ್ಷೆ ಜೂನ್ ತಿಂಗಳಲ್ಲಿ ನಡೆಯುತ್ತದೆ. ಹೀಗಾಗಿ ನಮಗೆ ಹೆಚ್ಚು ಸಮಯ ಲಭ್ಯವಿಲ್ಲ. ಸಾಮಾನ್ಯ ಕನ್ನಡಕ್ಕೆ ಕನಿಷ್ಠ 10 ದಿವಸ ಮೀಸಲಿಡ ಬೇಕಾಗುತ್ತದೆ. ಉಳಿದ ಅವಧಿಯಲ್ಲಿ ಪ್ರತೀ ಪತ್ರಿಕೆಗೆ ಸಿಗುವ ಸಮಯ ಬಹಳ ಕಡಿಮೆ. ನಮ್ಮದು ಒಂದು ವಿಷಯ ಮಾತ್ರ ತಾನೆ. ಇರುವಷ್ಟು ದಿನದೊಳಗೇ ಓದಿ ಮುಗಿಸಬಹುದಲ್ಲ ಎಂಬ ಧೋರಣೆ ಸರಿಯಲ್ಲ. ಏಕೆಂದರೆ 2 ಪ್ರಶ್ನೆಪತ್ರಿಕೆಗೆ ಕನಿಷ್ಠ 35 ರಿಂದ 40 ವಿಭಾಗಗಳನ್ನು ಅಧ್ಯಯನ ಮಾಡಬೇಕಾದ ಅನಿವಾರ್ಯತೆ ಇದೆ. ಬಹುಶಃ ಒಂದು ಉಪ ವಿಷಯಕ್ಕೆ ಒಂದು ದಿನ ಮಾತ್ರ ಲಭಿಸಬಹುದು. ಅಷ್ಟರಲ್ಲಿ ಓದಿ ಮುಗಿಸುತ್ತೇನೆ ಎನ್ನುವುದು ಸುಲಭದ ಮಾತಲ್ಲ. ಆದ್ದರಿಂದ ಇಲ್ಲಿ 40 ವಿಷಯಗಳಿಗೆ ಸಂಬಂಧಪಟ್ಟಂತೆ ಪ್ರಾತಿನಿಧ್ಯತಾ ಆಧಾರ ವಿಧಾನ ಅನುಸರಿಸಬೇಕಾಗುತ್ತದೆ. ಥಿಯರಿ ಸಾಕಷ್ಟು ಪರೀಕ್ಷಾರ್ಥಿಗಳು ಪ್ರಶ್ನೆಪತ್ರಿಕೆಯ ಸಂರಚನೆಯ ಬಗ್ಗೆ ಸ್ಪಷ್ಟ ಮಾಹಿತಿ ಇರದ ಕಾರಣ, ಆಬ್ಜೆಕ್ಟೀವ್ ಮಾದರಿಯ ಅಧ್ಯಯನದಲ್ಲಿ ತೊಡಗುತ್ತಾರೆ. ಆದರೆ ತಮ್ಮನ್ನು ಹುದ್ದೆಯಿಂದ ಹಿಂದೆ ನೂಕುವುದು ಈ ಪ್ರಮಾದವೇ ಎಂಬ ಅರಿವು ಅವರಿಗೆ ಇರುವುದಿಲ್ಲ. ಪ್ರತೀ ಪ್ರಶ್ನೆ ವಿವರಣಾತ್ಮಕವಾದ ಉತ್ತರವನ್ನು ನಿರೀಕ್ಷಿಸುತ್ತದೆ. ಉತ್ತರಿಸುವಾಗ ಕೇವಲ ನಾಲ್ಕೇ ಉತ್ತರಗಳಲ್ಲಿ ಒಂದನ್ನು ಗುರುತು ಮಾಡುತ್ತೇವೆ ಎಂಬ ಭಾವನೆ ನಿಮಗೆ ಇರಬಹುದು. ಇದು ತಪ್ಪು ಕಲ್ಪನೆ. ಆ ನಾಲ್ಕರಲ್ಲಿ ಒಂದು ಸರಿ ಉತ್ತರ ಗುರುತು ಮಾಡುವುದರ ಹಿಂದೆ ಥಿಯರಿ ಮಾದರಿಯ ಅಧ್ಯಯನದ ಅವಶ್ಯಕತೆ ಅಡಕವಾಗಿರುತ್ತದೆ. ಆದ್ದರಿಂದ ಪ್ರತೀ ಅಭ್ಯರ್ಥಿಯು ವಿಷಯಕ್ಕೆ ಸಂಬಂಧಿಸಿದ ವಿವರಣಾತ್ಮಕ ಅಧ್ಯಯನ ಕೈಗೊಳ್ಳುವುದು ಒಳಿತು. ಅಧ್ಯಯನ ಸಾಮಗ್ರಿ ಸಾಕಷ್ಟು ಅಭ್ಯರ್ಥಿಗಳಲ್ಲಿ ಇರುವ ಗೊಂದಲ ಎಂದರೆ `ಪಾಸಾಗಲು ಯಾವ ಪುಸ್ತಕ ಓದಬೇಕು~ ಎಂಬುದು. ಯಾವುದೇ ವ್ಯಕ್ತಿ ಅಥವಾ ಒಂದು ಸಂಸ್ಥೆ ತಯಾರಿಸಿದ ಒಂದು ಪುಸ್ತಕದಿಂದ ನಮ್ಮ ಪರೀಕ್ಷಾ ಯಶಸ್ಸು ಅಸಾಧ್ಯ. ನೆಗೆಟಿವ್ ಮೌಲ್ಯಮಾಪನ ಪರೀಕ್ಷಾರ್ಥಿಗಳು ಅತ್ಯಂತ ಜಾಗ್ರತೆ ವಹಿಸಬೇಕಾಗಿರುವು ನೆಗೆಟಿವ್ ಮೌಲ್ಯಮಾಪನದ ಬಗ್ಗೆ. ಇದರ ಬಗ್ಗೆ ಅಸಡ್ಡೆ ಒಳಿತಲ್ಲ. ಬಹುಪಾಲು ವಿದ್ಯಾರ್ಥಿಗಳು `ಅಯ್ಯೋ ಒಂದು ಪ್ರಶ್ನೆ ಬಿಟ್ಟರೆ 1.5 ಅಂಕ ಕಳೆದು ಹೋಗುತ್ತದೆ. ಆದರೆ ಒಂದು ಪ್ರಶ್ನೆಗೆ ತಪ್ಪು ಉತ್ತರಿಸಿದರೆ ಕೇವಲ 1/4 ಅಂಕ ಕಳೆಯಲಾಗುತ್ತದೆ. ಆದ್ದರಿಂದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿ ಬಿಡೋಣ~ ಎಂಬ ಭಾವನೆ ತಳೆಯುತ್ತಾರೆ. ಇದು ಅತ್ಯಂತ ಅಪಾಯಕಾರಿ. ಏಕೆಂದರೆ ಇಂಥ ಕಠಿಣ ಪರೀಕ್ಷೆಗಳಲ್ಲಿ ನಿಮಗೆ ಗೊತ್ತಿರದ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವೇ ಇಲ್ಲ. ಅದಕ್ಕೆ ಪ್ರಶ್ನೆ ಪತ್ರಿಕೆ ಸಂರಚಕ ಅವಕಾಶ ನೀಡಿರುವುದಿಲ್ಲ. ಆದ್ದರಿಂದ ನೀವು ಕಡ್ಡಾಯವಾಗಿ ನಿಮಗೆ ಗೊತ್ತಿಲ್ಲದ ಪ್ರಶ್ನೆಗಳಿಗೆ ಉತ್ತರಿಸಲು ಹೊರಡುವುದು ಸೂಕ್ತವಲ್ಲ. ಆದ್ದರಿಂದ ನೀವು ಪರೀಕ್ಷಾ ಅವಧಿಯನ್ನು ಈ ಕೆಳಗಿನಂತೆ ವಿಂಗಡಿಸಿಕೊಂಡರೆ ನೆಗೆಟಿವ್ ಮೌಲ್ಯಮಾಪನದ ಪ್ರಯೋಜನ ಪಡೆದುಕೊಳ್ಳಬಹುದು. ಮೊದಲನೆಯದಾಗಿ ಒಂದು ನೂರು ಪ್ರಶ್ನೆಗಳಿಗೆ 3 ಹಂತಗಳನ್ನು ನಿಗದಿ ಮಾಡಿಕೊಳ್ಳಬೇಕು. ಒಟ್ಟು ಪರೀಕ್ಷಾ ಅವಧಿಯನ್ನು 3 ಭಾಗವಾಗಿ ವಿಂಗಡಿಸಿ. ಮೊದಲನೇ ಭಾಗದಲ್ಲಿ ನಿಮಗೆ ಅತ್ಯಂತ ನಿಖರವಾಗಿ ಗೊತ್ತಿರುವ 33 ಪ್ರಶ್ನೆಗಳಿಗೆ ಉತ್ತರಿಸಬೇಕು. ಆ 33 ಕ್ರಮವಾಗಿ ಇರಲೇಬೇಕೆಂದೆನಿಲ್ಲ. ಉದಾ : ನಿಮಗೆ 1 ರಿಂದ 5 ಪ್ರಶ್ನೆಗಳಿಗೆ ಉತ್ತರ ಗೊತ್ತಿದ್ದು ಮತ್ತೆ 16 ನೇ ಪ್ರಶ್ನೆಯಿಂದ ಸರಿ ಉತ್ತರ ಗೊತ್ತಿದ್ದರೇ, ನೀವು ಆ ಪ್ರಶ್ನೆಗೆ ಉತ್ತರಿಸಬೇಕು. ಮುಂದೆ 21ನೇ ಪ್ರಶ್ನೆಗೆ ಉತ್ತರ ಸಕ್ರಮವಾಗಿದ್ದರೆ ಅಲ್ಲಿ ದೃಷ್ಟಿ ಹಾಯಿಸಬೇಕು. ಹಾಗೆಯೇ ಎರಡನೇ ಭಾಗದಲ್ಲಿ ಮತ್ತೆ ಉಳಿದ 67 ಪ್ರಶ್ನೆಗಳಲ್ಲಿ ನಿಮಗೆ ಭಾಗಶಃ ವಿಶ್ವಾಸ ಇರುವ 33 ಪ್ರಶ್ನೆಗಳಿಗೆ ಉತ್ತರಿಸಬೇಕು. ಇನ್ನು 3ನೇ ಭಾಗದಲ್ಲಿ ಇನ್ನುಳಿದ 34 ಪ್ರಶ್ನೆಗಳು ನಿಮ್ಮ ಮುಂದಿರುತ್ತವೆ. ಕೊನೆಯ ಅವಧಿ ಬಾಕಿ ಉಳಿದಿರುತ್ತದೆ. ಈ ಅವಧಿಯಲ್ಲಿ ಉಳಿದ 34ರಲ್ಲಿ ಕೇವಲ 14 ಪ್ರಶ್ನೆಗೆ ಎಲ್ಲ ಸಮಯವನ್ನು ಮೀಸಲಿರಿಸಿ, ಪರಿಶೀಲಿಸಿ ಉತ್ತರಿಸಿದರೂ ನೀವು ಶೇ 80ರಷ್ಟು ಪ್ರಶ್ನೆಗಳಿಗೆ ಉತ್ತರಿಸಿರುತ್ತೀರಿ. ಈ ವಿಧಾನದಿಂದ ಎರಡು ಅನುಕೂಲವಿದೆ. ಒಂದು ಸಮಯದ ಉಳಿತಾಯ, ಎರಡನೆಯದು ಅನಗತ್ಯ ಉತ್ತರ ನೀಡುವಿಕೆ ತಪ್ಪುತ್ತದೆ. ನಿಮಗೆ ಗೊತ್ತಿಲ್ಲದ ಆ 20 ಪ್ರಶ್ನೆಗಳನ್ನು ಮುಟ್ಟದಿರುವುದರಿಂದ ನಿಮಗೆ ಲಾಭವೇ ಹೊರತು ನಷ್ಟವಿಲ್ಲ. ಒಟ್ಟಿನಲ್ಲಿ ಕಡಿಮೆ ಅವಧಿ ಇದೆ ಎಂದು ಚಿಂತಿಸದೇ ಅದನ್ನು ಸರಿಯಾಗಿ ಬಳಸಿಕೊಳ್ಳುವ ಕಡೆ ಗಮನ ಹರಿಸಿ. ನಮ್ಮ ಅಧ್ಯಯನ ಶೇ 100 ತಲುಪದಿದ್ದರೂ ಉಳಿದ ಸಮಯದ ಸರಿಯಾದ ಬಳಕೆ ನಮ್ಮನ್ನು ದಡ ಸೇರಿಸುತ್ತದೆ. ಏಕೆಂದರೆ 0.5 ಅಂಕ ಕೂಡ ಹುದ್ದೆ ಪಡೆಯಲು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಕ್ರಮ ಸರಿಯಾದ ಮಾರ್ಗದಲ್ಲಿ ಇರಬೇಕು. ಯಾವ ಯಾವ ವಿಷಯಗಳನ್ನು ಅಧ್ಯಯನ ಮಾಡಬೇಕು ಎಂಬುದಕ್ಕಿಂತ ಯಾವುದನ್ನು ಅಧ್ಯಯನ ಮಾಡಬಾರದು ಎಂಬುದರ ಬಗ್ಗೆ ಎಚ್ಚರಿಕೆ ವಹಿಸಬೇಕು. ಅನಗತ್ಯ ಅಧ್ಯಯನ ನಿಮ್ಮ ಬುದ್ಧಿ ಬಂಡವಾಳವನ್ನೇ ಕಡಿಮೆ ಮಾಡುತ್ತದೆ. ಪ್ರಶ್ನೆಪತ್ರಿಕೆ ಎಷ್ಟೇ ಕಠಿಣವಾಗಿದ್ದರೂ ಅದು ಆಕಾಶದಿಂದ ಉದುರಿ ಬರಲು ಸಾಧ್ಯವಿಲ್ಲ; ಪ್ರಶ್ನೆಪತ್ರಿಕೆ ಸಿದ್ಧಪಡಿಸುವವರು ಕೂಡ ಮನುಷ್ಯರೇ ಮತ್ತು ಅವರು ಕೂಡ ಒಂದು ಆಧಾರ ಗ್ರಂಥವನ್ನು ಅಭ್ಯಾಸ ಮಾಡಿಕೊಂಡೇ ಪ್ರಶ್ನೆಪತ್ರಿಕೆ ರಚಿಸುತ್ತಾರೆ. ಆದ್ದರಿಂದ ಇನ್ನುಳಿದಿರುವ ಅವಧಿಯಲ್ಲಿ ಸಾಧ್ಯವಾದಷ್ಟು ವ್ಯವಸ್ಥಿತವಾಗಿ ಅಧ್ಯಯನ ಮಾಡುವುದು ಅತ್ಯಂತ ಮಹತ್ವದ್ದು. (ಲೇಖಕರು ವೃತ್ತಿ ತರಬೇತುದಾರರು. ಮೊಬೈಲ್ 97424 08046) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.