ಜ್ಞಾನ ದೇಗುಲ: ಭವಿಷ್ಯಕ್ಕೆ ಬಲ `ಜ್ಞಾನ ದೇಗುಲ-2012~ ವಿವಿಧೆಡೆಯ 49 ವಿವಿಧ ವಿದ್ಯಾ ಸಂಸ್ಥೆಗಳು, ಬ್ಯಾಂಕುಗಳು ಮತ್ತಿತರ ಸಂಘಟನೆಗಳ ಸಹಯೋಗದಲ್ಲಿ ನಡೆಯಲಿರುವ ಶೈಕ್ಷಣಿಕ ಮೇಳ ಇದು. ಎಲ್ಲಾ ಕ್ಷೇತ್ರದ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಪಾಲಕರಿಗೆ, ಸಂಶೋಧಕರಿಗೆ, ವಿದ್ವಾಂಸರಿಗೆ ವಿಭಿನ್ನ ಅನುಭವ ನೀಡುವ ಜೊತೆಗೆ ಹಲವು ಅವಕಾಶಗಳನ್ನು ಮತ್ತು ಸಾಧ್ಯತೆಗಳನ್ನು ಈ ಮೇಳ ತೆರೆದಿಡಲಿದೆ. ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿನ ವೃತ್ತಿಪರ ತರಬೇತಿಗಳ ಬಗ್ಗೆ ತಿಳಿದುಕೊಳ್ಳಲು ಇದೊಂದು ವೇದಿಕೆ. ಶಿಕ್ಷಣ ಕ್ಷೇತ್ರದ ಎಲ್ಲರನ್ನೂ ಆಕರ್ಷಿಸುವ ಮೇಳ ಇದಾಗಲಿದೆ. ಈ ಕ್ಷೇತ್ರದ ಪರಿಣಿತರೊಂದಿಗೆ ಚರ್ಚಿಸುವ ಮತ್ತು ವೃತ್ತಿ ಭವಿಷ್ಯದ ಬಗ್ಗೆ ಸಂವಾದ ನಡೆಸುವ ಅವಕಾಶ ಇಲ್ಲಿದೆ. ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಹಲವು ಕೋರ್ಸ್‌ಗಳನ್ನು ಆರಂಭಿಸಿರುವ ಪ್ರಮುಖ ವಿದ್ಯಾಸಂಸ್ಥೆಗಳು ಈ ಎರಡು ದಿನ ಮೇಳದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಿವೆ. ಈ ಸಲ ಮುಖ್ಯವಾಗಿ ಎಂಬಿಎ, ಎಂಜಿನಿಯರಿಂಗ್, ಹೋಟೆಲ್ ಮ್ಯಾನೇಜ್‌ಮೆಂಟ್, ಹಣಕಾಸು, ಸಂವಹನ, ವೈದ್ಯಕೀಯ ವಿಷಯಗಳನ್ನು ಕೇಂದ್ರವಾಗಿಟ್ಟುಕೊಳ್ಳಲಾಗಿದೆ. ಆಯಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿದ್ವಾಂಸರನ್ನು, ತಜ್ಞರನ್ನು, ಉಪನ್ಯಾಸಕರನ್ನು ಆಹ್ವಾನಿಸಲಾಗಿದ್ದು, ಅವರು ವಿದ್ಯಾರ್ಥಿ ಸಮುದಾಯವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಓದು, ಅದಕ್ಕೆ ಇರುವ ಅವಕಾಶ, ಬೇಡಿಕೆಗಳ ಬಗ್ಗೆ ಇಲ್ಲಿ ಪರಿಣಿತರಿಂದ ತಿಳಿದುಕೊಳ್ಳಬಹುದು.ಮೇ 26ರಂದು ಹೆಸರಾಂತ ವಿಜ್ಞಾನಿ ಪ್ರೊ. ಸಿ.ಎನ್.ಆರ್ ರಾವ್ `ವಿಜ್ಞಾನದ ಸಂಭ್ರಮ~ ಕುರಿತು ಪ್ರಧಾನ ಭಾಷಣ ಮಾಡಲಿದ್ದಾರೆ. ನಂತರ 11.30ಕ್ಕೆ ಎಂಜಿನಿಯರಿಂಗ್ ಸಮಾವೇಶ. ಇಂಟೆಲೆಕ್ಚುವಲ್ ವೆಂಚರ್ಸ್ ಇಂಡಿಯಾ ಅಧ್ಯಕ್ಷ ಡಾ.ಅಶೋಕ್ ಮಿಶ್ರಾ (ವಿಷಯ: ಉನ್ನತ ತಾಂತ್ರಿಕ ಶಿಕ್ಷಣದಲ್ಲಿ ಸಂಶೋಧನೆ, ಅನ್ವೇಷಣೆಯನ್ನು ಉತ್ತೇಜಿಸುವುದು), ಮೈಸೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಪ್ರಾಚಾರ್ಯ ಪ್ರೊ.ಡಾ.ಜಿ.ಎಲ್.ಶೇಖರ್ (ಎಂಜಿನಿಯರ್‌ಗಳಿಗೆ ವೃತ್ತಿ ಸವಾಲೊಡ್ಡುವ ಭವಿಷ್ಯದ ತಂತ್ರಜ್ಞಾನ), ಎಂ.ಎಸ್. ರಾಮಯ್ಯ ವೈದ್ಯಕೀಯ ಕಾಲೇಜಿನ ಡಾ. ನಂದಕಿಶೋರ್ ಆಳ್ವಾ (ಕಾಮೆಡ್ ಕೆ ಕುರಿತ ಪೂರ್ವ ಸಲಹೆ) ಉಪನ್ಯಾಸ ನೀಡಲಿದ್ದಾರೆ. 27ರಂದು ಬೆಳಿಗ್ಗೆ 10.30ರಿಂದ ನಡೆಯಲಿರುವ ಸಮಾವೇಶದಲ್ಲಿ ಶೇಷಾದ್ರಿಪುರಂ ಶಿಕ್ಷಣ ಸಮೂಹದ ಗೌರವ ಪ್ರಧಾನ ಕಾರ್ಯದರ್ಶಿ ಡಾ. ವೂಡೆ. ಪಿ.ಕೃಷ್ಣ (ಮ್ಯಾನೇಜ್‌ಮೆಂಟ್ ಶಿಕ್ಷಣದಲ್ಲಿ ಅವಕಾಶಗಳು), ವೈದ್ಯಕೀಯ ಲೇಖಕ ಡಾ. ಬಿ.ಎಂ. ಹೆಗ್ಡೆ (ವೃತ್ತಿ ಮಾರ್ಗದರ್ಶನ), ಪಿಯು ನಿರ್ದೇಶಕಿ ರಶ್ಮಿ (ಸಿಇಟಿ ನೀತಿ ನಿಯಮಗಳು), ಮೈಸೂರು ವಿವಿ ಮಾಹಿತಿ ವಿಜ್ಞಾನದ ಅಂತರ‌್ರಾಷ್ಟ್ರೀಯ ಶಾಲೆ ನಿರ್ದೇಶಕಿ ಪ್ರೊ. ಶಾಲಿನಿ ಅರಸ್ (ವ್ಯಾವಹಾರಿಕ ಕ್ಷೇತ್ರದಲ್ಲಿ ಹೊಸ ಅವಕಾಶ), ಬೆಂಗಳೂರು ಅನಿಮೇಷನ್ ಉದ್ಯಮ ಸಂಘಗಳ ಉಪಾಧ್ಯಕ್ಷ ಎಂ.ಆರ್. ಬಾಲಕೃಷ್ಣ (ಅನಿಮೇಶನ್, ಗೇಮಿಂಗ್ ಕ್ಷೇತ್ರದಲ್ಲಿ ಅವಕಾಶಗಳು) ಮಾತನಾಡಲಿದ್ದಾರೆ. ಪರಿಣಿತ ಉಪನ್ಯಾಸಕರು ರಾಷ್ಟ್ರೀಯ ಸಂಶೋಧನಾ ಅಧ್ಯಾಪಕರೂ, ಜವಾಹರ್‌ಲಾಲ್ ನೆಹರು ಸಂಶೋಧನಾ ಕೇಂದ್ರದ ಗೌರವ ಅಧ್ಯಕ್ಷರೂ ಆಗಿರುವ ಚಿಂತಾಮಣಿ ನಾಗೇಶ ರಾಮಚಂದ್ರರಾವ್ (68), ಇಂಟೆಲೆಕ್ಚುವಲ್ ವೆಂಚರ್ಸ್ ಇಂಡಿಯಾ ಅಧ್ಯಕ್ಷರಾದ (ಪಾಲಿಮರ್ ವಿಜ್ಞಾನಕ್ಕೆ ಸಲ್ಲಿಸಿದ ಸೇವೆ ಮತ್ತು ಸಂಶೋಧನೆಗಾಗಿ `ಎಂ. ಸಾಂತಪ್ಪ ಸ್ಮಾರಕ ಸಿಲ್ವರ್ ಜುಬಿಲಿ ಪ್ರಶಸ್ತಿ~ (1991) ದೊರೆತಿದೆ.) ಡಾ. ಅಶೋಕ್ ಮಿಶ್ರಾ, ಎಂಜಿನಿಯರಿಂಗ್ ಮತ್ತು ಕಾನೂನು ಪದವಿ ಪಡೆದ (ಅವರು ಅನೇಕ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಶೇಷಾದ್ರಿಪುರಂ ಶಿಕ್ಷಣ ಪ್ರತಿಷ್ಠಾನದ ಗೌರವ ಕಾರ್ಯದರ್ಶಿಗಳೂ ಆಗಿದ್ದಾರೆ) ವೂಡೆ ಪಿ ಕೃಷ್ಣ (49) ಮತ್ತಿತರರು ಮೇಳದಲ್ಲಿ ವಿವಿಧ ವಿಷಯಗಳ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.