ಕಲಿಯಿರಿ ಕೃಷಿ ವಿಜ್ಞಾನ ಕೃಷಿ ಎಂದರೆ ಬರೀ ಉಳುಮೆ, ಬಿತ್ತನೆ ಹಾಗೂ ಕಟಾವಿನ ಕ್ರಮವಲ್ಲ. ಅದೊಂದು ವಿಜ್ಞಾನ. ದೇಶದಲ್ಲಿ ಜನಪ್ರಿಯವಾಗುತ್ತಿರುವ ವಿಷಯಗಳ ಪೈಕಿ ಕೃಷಿ ವಿಜ್ಞಾನ ಮುನ್ನಡೆಯಲ್ಲಿದೆ. ಸಾಕಷ್ಟು ಮಂದಿ ಈ ವಿಷಯದ ಅಧ್ಯಯನದ ಕಡೆ ಒಲವು ತೋರುತ್ತಿದ್ದಾರೆ. ಇದರ ಓದಿಗೆ ಸಾಕಷ್ಟು ಪ್ರೋತ್ಸಾಹವೂ ದೊರೆಯುತ್ತಿದ್ದು, ಉದ್ಯೋಗದ ಅವಕಾಶಗಳು ಹೆಚ್ಚುತ್ತಿವೆ. ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳು ಹಾಗೂ ಅವುಗಳ ಅಧೀನದಲ್ಲಿರುವ ಕೃಷಿ ವಿಜ್ಞಾನ ಕಾಲೇಜುಗಳಲ್ಲಿ ಇದೀಗ ಪದವಿ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಆರಂಭವಾಗಿದೆ. ವಿಜ್ಞಾನದಲ್ಲಿ ಆಸಕ್ತಿ ಹೊಂದಿದ, ಡಾಕ್ಟರ್-ಎಂಜಿನಿಯರ್ ಆಗಬಯಸದೇ ಹೊಸ ವೃತ್ತಿಯನ್ನು ಕಂಡುಕೊಳ್ಳುವವರಿಗೆ ಇಲ್ಲಿ ಜ್ಞಾನಾರ್ಜನೆಯ ಬಾಗಿಲು ತೆರೆದಿದೆ. ವಿಜ್ಞಾನ ವಿಷಯದಲ್ಲಿ ಪದವಿ ಪೂರ್ವ ಶಿಕ್ಷಣ ಪೂರೈಸಿದವರು ಅರ್ಜಿ ಸಲ್ಲಿಸಬಹುದಾಗಿದೆ. ಕೃಷಿ ವಿಜ್ಞಾನವು ಮೂಲ ವಿಜ್ಞಾನದ ಅಧ್ಯಯನಕ್ಕಿಂತ ಭಿನ್ನವಾದ ಕೋರ್ಸ್. ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ನಂತರ ಜನಪ್ರಿಯಗೊಳ್ಳುತ್ತಿರುವ ಕೋರ್ಸ್‌ಗಳಲ್ಲಿ ಇದು ಸಹ ಒಂದು ಎಂದು ಶಿಕ್ಷಣ ತಜ್ಞರು ಗುರುತಿಸಿದ್ದಾರೆ. ಇಲ್ಲಿ ಬಿಎಸ್ಸಿ, ಎಂಎಸ್ಸಿ, ಡಿಪ್ಲೊಮಾ ಹಾಗೂ ಸರ್ಟಿಫಿಕೇಟ್ ಕೋರ್ಸುಗಳ ಕಲಿಕೆಗೆ ಅವಕಾಶವಿದೆ. ಬಿಎಸ್ಸಿ ಪದವಿಯು ಒಟ್ಟು ನಾಲ್ಕು ವರ್ಷಗಳದ್ದಾಗಿದ್ದು, ಎಂಟು ಸೆಮಿಸ್ಟರ್‌ಗಳ ಕಲಿಕೆಯನ್ನು ಒಳಗೊಂಡಿದೆ. ಮೊದಲ ಸೆಮಿಸ್ಟರ್‌ಗಳಲ್ಲಿ ಸಾಮಾನ್ಯ ವಿಷಯಗಳ ಕಲಿಕೆಗೆ ಅವಕಾಶವಿದ್ದರೆ, ಮುಂದುವರಿದಂತೆ ವಿಷಯಾಧಾರಿತ ಕಲಿಕೆಗೆ ಹೆಚ್ಚು ಒತ್ತು.ಮೊದಲೇ ಹೇಳಿದಂತೆ ಕೃಷಿ ವಿಜ್ಞಾನ ಎಂದರೆ ಕೇವಲ ಬೇಸಾಯದ ಅಧ್ಯಯನವಲ್ಲ. ಅರಣ್ಯ, ಪಶು ಸಂಗೋಪನೆ, ಮೀನುಗಾರಿಕೆ, ತೋಟಗಾರಿಕೆ, ಆಹಾರ ಸಂರಕ್ಷಣೆ, ಸಂಸ್ಕರಣೆ, ಸಸ್ಯಶಾಸ್ತ್ರ, ಮಣ್ಣಿನ ಅಧ್ಯಯನ, ಕೃಷಿ ಅರ್ಥಶಾಸ್ತ್ರ, ಕೃಷಿ ಎಂಜಿನಿಯರಿಂಗ್, ಗೃಹ ವಿಜ್ಞಾನ ಹೀಗೆ ವೈವಿಧ್ಯಮಯ ವಿಷಯಗಳು ಇದರ ವ್ಯಾಪ್ತಿಗೆ ಬರುತ್ತವೆ. ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಜಿಕೆವಿಕೆ ಕ್ಯಾಂಪಸ್, ಬೆಂಗಳೂರು-560065 ದೂರವಾಣಿ: 080-23330984 ವೆಬ್‌ಸೈಟ್: ... ಕೃಷಿ ವಿಜ್ಞಾನ ವಿಶ್ವವಿದ್ಯಾಲಯ, ಕೃಷಿ ನಗರ, ಪಿ.ಬಿ. ರಸ್ತೆ, ಧಾರವಾಡ-580005 ದೂರವಾಣಿ: 036 2747958, 2448512 ವೆಬ್: ... ಕೃಷಿ ವಿಶ್ವವಿದ್ಯಾಲಯ, ಲಿಂಗಸಗೂರು ರಸ್ತೆ, ರಾಯಚೂರು-584102 ದೂ: 08532 220444, 220889 ವೆಬ್: ... ಕರ್ನಾಟಕ ಪಶುಸಂಗೋಪನೆ, ಪ್ರಾಣಿ ಹಾಗೂ ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ ನಂದಿನಗರ, ಬೀದರ್-585401 ದೂ: 08482 245313, 245241 ವೆಬ್: ... ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ನವನಗರ, ಬಾಗಲಕೋಟೆ-587102 ದೂ: 08354 201234, 201342, 201354 ವೆಬ್: ... ಹೆಚ್ಚಿನ ವಿದ್ಯಾರ್ಥಿಗಳು ಕೃಷಿ ವಿಷಯದಲ್ಲಿ ಪದವಿ ಅಧ್ಯಯನಕ್ಕೆ ಒಲವು ತೋರುತ್ತಾರೆ. ಇದಲ್ಲದೆ ಅರಣ್ಯಶಾಸ್ತ್ರ (ಫಾರೆಸ್ಟ್ರಿ), ಕೃಷಿ ಅರ್ಥಶಾಸ್ತ್ರ, ಪಶು ಸಂಗೋಪನೆಯನ್ನೂ ಒಳಗೊಂಡು ಸುಮಾರು 20ಕ್ಕೂ ಹೆಚ್ಚು ವಿಷಯಗಳಲ್ಲಿ ಬಿಎಸ್ಸಿ ಅಧ್ಯಯನಕ್ಕೆ ಅವಕಾಶವಿದೆ. ಲಭ್ಯ ಅಂಕಿ-ಅಂಶಗಳ ಪ್ರಕಾರ ದೇಶದಲ್ಲಿ ಪ್ರಸ್ತುತ ಸುಮಾರು 42 ಕೃಷಿ ವಿಶ್ವವಿದ್ಯಾಲಯಗಳು, ಒಂದು ಕೇಂದ್ರೀಯ ವಿಶ್ವವಿದ್ಯಾಲಯ ಹಾಗೂ ನಾಲ್ಕು ಸಾಮಾನ್ಯ ವಿಶ್ವವಿದ್ಯಾಲಯಗಳು ಕೃಷಿ ವಿಜ್ಞಾನದ ಪಾಠ ಹೇಳುತ್ತಿವೆ. ಇಲ್ಲಿ ಪ್ರತಿ ವರ್ಷ ಪದವಿ ಮಟ್ಟದಲ್ಲಿ 15 ಸಾವಿರ ವಿದ್ಯಾರ್ಥಿಗಳು, ಸ್ನಾತಕೋತ್ತರ ಪದವಿ ಮಟ್ಟದಲ್ಲಿ 7 ಸಾವಿರ ಹಾಗೂ 1700 ಮಂದಿ ಪಿಎಚ್‌ಡಿಗೆ ದಾಖಲಾಗುತ್ತಿದ್ದಾರೆ. ದೇಶದ ಕೃಷಿ ವಿವಿಗಳಲ್ಲಿ ಒಟ್ಟು 75 ಸಾವಿರ ವಿದ್ಯಾರ್ಥಿಗಳು ಓದುತ್ತಿದ್ದಾರೆ. ರಾಜ್ಯದಲ್ಲಿ ಒಟ್ಟು ಐದು ವಿಶ್ವವಿದ್ಯಾಲಯಗಳು ಕೃಷಿ ವಿಜ್ಞಾನ ಸಂಬಂಧಿ ಶಿಕ್ಷಣ ನೀಡುತ್ತಿವೆ. ಮೊದಲನೆಯದಾಗಿ ರಾಜಧಾನಿ ಬೆಂಗಳೂರಿನಲ್ಲಿರುವ ಕೃಷಿ ವಿಜ್ಞಾನ ವಿಶ್ವವಿದ್ಯಾಲಯವು ಹಳೇ ಮೈಸೂರು ಭಾಗದ ಆರು ಜಿಲ್ಲೆಗಳಲ್ಲಿ ತನ್ನ ಕಾರ್ಯವ್ಯಾಪ್ತಿ ಹೊಂದಿದೆ. ಏಳು ವಿಷಯದಲ್ಲಿ ಬಿಎಸ್ಸಿ ಪದವಿ ಅಧ್ಯಯನಕ್ಕೆ ಅವಕಾಶವಿದೆ. ಇದಲ್ಲದೆ ಕೃಷಿ ಎಂಬಿಎ, ಡಿಪ್ಲೊಮಾ ಕೋರ್ಸ್‌ಗಳು ಲಭ್ಯ. ಧಾರವಾಡದಲ್ಲಿ ಪ್ರಧಾನ ಕ್ಯಾಂಪಸ್ ಹೊಂದಿರುವ ಧಾರವಾಡ ಕೃಷಿ ವಿಶ್ವವಿದ್ಯಾಲಯವು ಉತ್ತರ ಕರ್ನಾಟಕ ಭಾಗದ ಏಳು ಜಿಲ್ಲೆಗಳಲ್ಲಿ ಕೃಷಿ ಶಿಕ್ಷಣ ನೀಡುತ್ತಿದೆ. ಒಟ್ಟು ನಾಲ್ಕು ಕ್ಯಾಂಪಸ್‌ಗಳನ್ನು ಹೊಂದಿರುವ ವಿವಿಯಲ್ಲಿ ಬಿಎಸ್ಸಿ ಕಲಿಕೆಗೆ ಸಾಕಷ್ಟು ಅವಕಾಶಗಳಿವೆ. ಹೈದರಾಬಾದ್ ಕರ್ನಾಟಕದಲ್ಲಿ ರಾಯಚೂರು ಕೃಷಿ ವಿಶ್ವವಿದ್ಯಾಲಯವಿದೆ. ಇದು ಮೂರು ಕ್ಯಾಂಪಸ್‌ಗಳನ್ನೂ ಒಳಗೊಂಡಿದ್ದು, ಬಿಎಸ್ಸಿಯಲ್ಲಿ ಸಾಮಾನ್ಯ ವಿಷಯಗಳ ಜೊತೆಗೆ ಕೃಷಿ ವಿಷಯದಲ್ಲಿ ಬಿಟೆಕ್, ಎಂಬಿಎ ಪದವಿಗಳನ್ನೂ ನೀಡುತ್ತಿದೆ. ಇದಲ್ಲದೆ ಬೀದರ್‌ನಲ್ಲಿ ಕರ್ನಾಟಕ ಪಶುಸಂಗೋಪನೆ, ಪ್ರಾಣಿ ಹಾಗೂ ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ ಹಾಗೂ ಬಾಗಲಕೋಟೆಯಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವಿದೆ. ಈ ಎರಡೂ ವಿವಿಗಳು ರಾಜ್ಯದಾದ್ಯಂತ ತಮ್ಮ ಕ್ಯಾಂಪಸ್‌ಗಳನ್ನು ಹೊಂದಿವೆ. ಬೀದರ್ ವಿವಿಯು ಬೆಂಗಳೂರು, ಹಾಸನ, ಶಿವಮೊಗ್ಗ ಹಾಗೂ ಮಂಗಳೂರುಗಳಲ್ಲಿ ಕ್ಯಾಂಪಸ್ ತೆರೆದಿದೆ. ಬಾಗಲಕೋಟೆ ವಿವಿಯು ಬೆಳಗಾವಿ, ಚಿಕ್ಕಮಗಳೂರು, ಬೀದರ್, ಕೊಪ್ಪಳ, ಉತ್ತರ ಕನ್ನಡ, ಚಿತ್ರದುರ್ಗ, ಮೈಸೂರು, ಬೆಂಗಳೂರು ಜಿಲ್ಲೆಗಳಲ್ಲಿ 10 ಕಾಲೇಜುಗಳನ್ನು ಹೊಂದಿದೆ. ಉದ್ಯೋಗಾವಕಾಶ ಕೃಷಿ ವಿಜ್ಞಾನವೂ ತಾಂತ್ರಿಕ ಕೋರ್ಸ್‌ಗೆ ಸಮ. ಹೀಗಾಗಿ ಉದ್ಯೋಗ ಅವಕಾಶಗಳು ಸಾಕಷ್ಟಿವೆ. ರಾಜ್ಯ ಸರ್ಕಾರದ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಲ್ಲಿ ಕೃಷಿ ಅಧಿಕಾರಿಗಳಾಗಲು ಈ ಪದವಿಯ ಅವಶ್ಯಕತೆ ಇದೆ . ಈಚೆಗೆ ಈ ಹುದ್ದೆಗಳಿಗೆ ನೇರ ನೇಮಕಾತಿ ಸಹ ನಡೆಯುತ್ತಿದೆ. ಫಾರೆಸ್ಟ್ರಿ ವಿಷಯದಲ್ಲಿ ಅಭ್ಯಸಿಸಿದವರು ಅರಣ್ಯ ಇಲಾಖೆಯಲ್ಲಿ ಉದ್ಯೋಗ ಗಿಟ್ಟಿಸಬಹುದು. ಇದಲ್ಲದೆ ಪಶು ಸಂಗೋಪನೆ. ಮೀನುಗಾರಿಕೆ ಇಲಾಖೆಯಲ್ಲೂ ಸಾಕಷ್ಟು ಅವಕಾಶಗಳಿವೆ. ಸ್ವ-ಉದ್ಯೋಗ ಮಾಡಬಯಸುವವರು, ಕೃಷಿ ಕ್ಷೇತ್ರದ ಮಾರುಕಟ್ಟೆ ಅಧ್ಯಯನ ಆಸಕ್ತರು, ಸ್ವತಃ ಕೃಷಿಕರಿಗೂ ಈ ಕೋರ್ಸ್ ಉಪಯುಕ್ತ. ಉನ್ನತ ಶಿಕ್ಷಣ ಹಾಗೂ ಸಂಶೋಧನೆಗೆ ಇಲ್ಲಿ ವಿಪುಲ ಅವಕಾಶಗಳಿವೆ. ಎಂಎಸ್ಸಿಯಲ್ಲಿ 20ಕ್ಕೂ ಹೆಚ್ಚು ವಿಷಯಗಳ ಆಯ್ಕೆ ಇದೆ. ಗೃಹ ವಿಜ್ಞಾನ, ಮಣ್ಣು ಮತ್ತು ಬೀಜ ಸಂಶೋಧನೆ, ಬ್ರೀಡಿಂಗ್, ಪೆಥಾಲಜಿ ಮೊದಲಾದ ಸಂಶೋಧನಾತ್ಮಕ ಹುದ್ದೆಗಳಲ್ಲೂ ತೊಡಸಿಕೊಳ್ಳಬಹುದು. ಡಿಪ್ಲೊಮಾ ಕಲಿಕೆ ಕೃಷಿ ವಿಜ್ಞಾನ ಅಧ್ಯಯನಕ್ಕೆ ಈಗ ಪದವಿಪೂರ್ವ ಶಿಕ್ಷಣವೇ ಆಗಬೇಕು ಎಂದಿಲ್ಲ. ಎಸ್‌ಎಸ್‌ಎಲ್‌ಸಿ ನಂತರ ನೇರ ಕೃಷಿ ಡಿಪ್ಲೊಮಾ ಕಲಿಯಬಹುದು. ಸರ್ಕಾರ ಸಹ ಈ ನಿಟ್ಟಿನಲ್ಲಿ ಸಹಕಾರ ನೀಡುತ್ತಿದ್ದು, ಪ್ರತಿ ತಾಲ್ಲೂಕುಗಳಲ್ಲಿ ಕೃಷಿ ಕಾಲೇಜು ಸ್ಥಾಪನೆಗೆ ಅವಕಾಶ ನೀಡುತ್ತಿದೆ. ಕೃಷಿ ಡಿಪ್ಲೊಮಾ ಕಲಿಯುವ ಎಲ್ಲ ವಿದ್ಯಾರ್ಥಿಗಳಿಗೆ ಮಾಸಿಕ ಗೌರವಧನದ ಮೂಲಕ ಪ್ರೋತ್ಸಾಹಿಸುತ್ತಿದೆ. ಸಾಕಷ್ಟು ವಿಷಯಗಳಲ್ಲಿ ಡಿಪ್ಲೊಮಾ ಕಲಿಕೆಗೆ ಅವಕಾಶವಿದ್ದು, ರಾಜ್ಯದ ಎಲ್ಲ ಕೃಷಿ ವಿಶ್ವವಿದ್ಯಾಲಯಗಳೂ ಎರಡು ವರ್ಷಗಳ ಕೋರ್ಸ್ ಕಲಿಸುತ್ತಿವೆ. ಇದಲ್ಲದೆ ವಿವಿಧ ವಿಷಯಗಳಲ್ಲಿ ಸರ್ಟಿಫಿಕೇಟ್ ಕೋರ್ಸ್‌ಗಳು ಸಹ ಲಭ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.