ಪ್ರಶ್ನೆ - ಉತ್ತರ ಸಂತೋಷ್, ರಾಮನಗರ ನಾನು 2009ರಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಶೇ 74 ಮತ್ತು ನಂತರ ಐಟಿಐನಲ್ಲಿ ಶೇ 72 ಅಂಕಗಳಿಸಿ ಗುತ್ತಿಗೆ ನೌಕರಿಯಲ್ಲಿದ್ದೇನೆ. ನನಗೆ ಎಫ್‌ಡಿಎ ಆಗಬೇಕೆಂಬ ಆಸೆ. ಈಗಿನ ವಿದ್ಯಾರ್ಹತೆ ಮೇಲೆ ನಾನು ಡಿಗ್ರಿ ಮಾಡಬಹುದೇ, ಪಿಯುಸಿ ಕಡ್ಡಾಯವೇ, ವಯಸ್ಸಿನ ಆಧಾರದ ಮೇಲೆ ಡಿಗ್ರಿ ಮಾಡಿದರೆ ಎಫ್‌ಡಿಎಗೆ ಅರ್ಹತೆ ಇದೆಯೇ? ಡಿಗ್ರಿ ಮಾಡಲು ದೂರ ಶಿಕ್ಷಣದಲ್ಲಿ ಪಿಯುಸಿ ಕಡ್ಡಾಯವಿಲ್ಲ. ವಯಸ್ಸಿನ ಆಧಾರದ ಮೇಲೆ ನೇರವಾಗಿ ಪರೀಕ್ಷೆ ಬರೆಯಬಹುದು. ಈ ರೀತಿ ಡಿಗ್ರಿ ಪಡೆದವರು, ಇತರೆ ಎಲ್ಲಾ ಪದವೀಧರರಂತೆ ಸರ್ಕಾರಿ ನೌಕರಿಗೆ ಅರ್ಹತೆ ಹೊಂದಿರುತ್ತಾರೆ. ಇತರ ಅರ್ಹತೆಗಳು ನಿಮಗಿದ್ದರೆ ಸಾಕು. ಕೆ. ಮಲ್ಲನಗೌಡ, ರಾಯಚೂರು ಕಲಾ ವಿಭಾಗದಲ್ಲಿ ದ್ವಿತೀಯ ಪಿಯುಸಿ ಮಾಡಿದವರಿಗೆ ಇರುವ ಅವಕಾಶಗಳ ಬಗ್ಗೆ ಮಾರ್ಗದರ್ಶನಕ್ಕಾಗಿ ಈ ಪತ್ರ. ಬಿಎ ಮಾಡಿದರೆ ಪ್ರಯೋಜನವಾಗುತ್ತದೆಯೇ, ಇನ್ನಿತರ ಉತ್ತಮ ಕೋರ್ಸುಗಳಿವೆಯೇ? 5 ವರ್ಷದ ಕಾನೂನು ಪದವಿಯ ಬಗ್ಗೆ ವಿವರ ನೀಡಿ. ಕಲಾ ವಿಭಾಗದಲ್ಲಿ ಪಿಯುಸಿ ಮುಗಿಸಿದವರು ಡಿಗ್ರಿಗಾಗಿ ಬಿಎಗೆ ಸೇರುವುದು ರೂಢಿ. ಒಂದು ಪದವಿಯಿಂದ ದೊರೆಯಬಹುದಾದ ಎಲ್ಲಾ ಅರ್ಹತೆಗಳೂ ಇದರಿಂದ ಲಭಿಸುತ್ತವೆ. ಉದಾಹರಣೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಅವಕಾಶ ಇತ್ಯಾದಿ. ಆದರೆ ಇತ್ತೀಚೆಗೆ ಬಿಎ ಮಾಡಿದವರ ಸಂಖ್ಯೆ ಹೆಚ್ಚಾಗಿದ್ದು, ಕೇವಲ ಹೆಚ್ಚಿನ ಮೆರಿಟ್ ಇರುವವರಿಗೆ ಮಾತ್ರ ಆಯ್ಕೆಗೆ ಅವಕಾಶಗಳು ಸಿಗುತ್ತಿವೆ. ಆದ್ದರಿಂದ ನೀವು ಬಿಬಿಎಂ, ಜರ್ನಲಿಸಂ, ಹೋಟೆಲ್ ಮ್ಯೋನೇಜ್‌ಮೆಂಟ್ ಮುಂತಾದ ಕೋರ್ಸುಗಳಿಗೆ ಸೇರಿದಲ್ಲಿ ನೌಕರಿ ಗಳಿಸುವುದು ಸುಲಭವಾಗುತ್ತದೆ. ಇನ್ನು, ಐದು ವರ್ಷದ ಕಾನೂನು ಕಾಲೇಜುಗಳು ಬಹುತೇಕ ಕಡೆ ಇದ್ದು, ಈಗಾಗಲೇ ಅರ್ಜಿ ನೀಡುತ್ತಿದ್ದಾರೆ. ಇದು ಸ್ನಾತಕ ಪದವಿಯಾಗಿರುತ್ತದೆ. ಬಾಬು ನಾಯ್ಕ, ದಾವಣಗೆರೆ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ನನಗೆ ಮುಂದಿನ ಉದ್ಯೋಗಕ್ಕಾಗಿ ಬಿಕಾಂ ಅಥವಾ ಬಿಎ ಇವೆರಡರಲ್ಲಿ ಯಾವುದಕ್ಕೆ ಹೆಚ್ಚು ಅವಕಾಶಗಳಿವೆ. ತಿಳಿಸಿ. ನೀವು ಹೇಗಿದ್ದರೂ ವಾಣಿಜ್ಯ ವಿಭಾಗದಲ್ಲಿದ್ದೀರಿ. ಆದ್ದರಿಂದ ಬಿಕಾಂ ನಿಮ್ಮ ಪ್ರಥಮ ಆಯ್ಕೆ ಆಗುವುದೇ ಸರಿ ಎನ್ನುವುದು ನನ್ನ ಅನಿಸಿಕೆ. ಇತ್ತೀಚೆಗೆ ಬಿಕಾಂ ಹೆಚ್ಚಿನ ಬೇಡಿಕೆಯಲ್ಲಿದೆ. ಅನೇಕ ಪ್ರತಿಭಾವಂತರು ಈ ಕ್ಷೇತ್ರಕ್ಕೆ ಕಾಲಿಡುತ್ತಿದ್ದಾರೆ. ಸುಮಾ ಆರ್. ಪಾಟೀಲ್, ತಿಮ್ಮೇನಹಳ್ಳಿ, ರಾಣಿಬೆನ್ನೂರು ನನ್ನದು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗ. ಹೆಚ್ಚಿನ ಅಂಕಗಳನ್ನು ಗಳಿಸಲು ಹೇಗೆ ಓದಬೇಕು ತಿಳಿಯುತ್ತಿಲ್ಲ. ನನಗೆ ಜೀವಶಾಸ್ತ್ರ ಎಷ್ಟು ಓದಿದರೂ ಅರ್ಥವಾಗುತ್ತಿಲ್ಲ. ಮಾಹಿತಿ ನೀಡಿ. ಇದಲ್ಲದೆ ಸಿಇಟಿ ಹೇಗೆ ಬರೆಯಬೇಕು? ದ್ವಿತೀಯ ಪಿಯುಸಿ ವಿದ್ಯಾರ್ಥಿಯ ಬದುಕಿನಲ್ಲಿ ಪ್ರಮುಖವಾದ ಘಟ್ಟ. ಇಂದಿನ ಸ್ಪರ್ಧಾ ಜಗತ್ತಿನಲ್ಲಿ ಪಿಯುಸಿ ಹಂತದಲ್ಲಿ ಅದರಲ್ಲೂ ವಿಜ್ಞಾನ ವಿಭಾಗದಲ್ಲಿ ಒಂದೊಂದು ಅಂಕವೂ ಅಮೂಲ್ಯವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳನ್ನು ತರಬೇತಿಗೊಳಿಸುವ ಕಾಲೇಜುಗಳು ಅಥವಾ ಖಾಸಗಿ ಸಂಸ್ಥೆಗಳು ಕಠಿಣ ಅಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡುತ್ತಿವೆ. ಇಲ್ಲಿ ಓದಿದ್ದನ್ನೇ ಓದಿಸುವುದು, ಬರೆದದ್ದನ್ನು ಬರೆಯುವುದೇ ಮೂಲ ಮಂತ್ರವಾಗಿದೆ. ಇದು ಸರಿಯೇ ತಪ್ಪೇ ಎಂಬ ಬಗ್ಗೆ ಸಹಾ ಚಿಂತಿಸಲು ಬಹಳಷ್ಟು ಮಂದಿಗೆ ಸಮಯವಿಲ್ಲ. ಆದ್ದರಿಂದ ನೀವೂ ಸಹಾ ಪ್ರಾರಂಭದಿಂದಲೇ, ಕ್ರಮವಾಗಿ ಪಠ್ಯವಸ್ತುವಿನ ಒಂದಂಶವನ್ನು ಬಿಡದೆ ಅಭ್ಯಾಸ ಮಾಡುತ್ತಾ ಹೋಗಿ ಅರ್ಥವಾಗದೆ ಇರುವ ಭಾಗವನ್ನು ತಿಳಿದವರಿಂದ ಹೇಳಿಸಿಕೊಂಡು, ಸಂಶಯಕ್ಕೆ ಆಸ್ಪದವಿಲ್ಲದಂತೆ ಮನದಟ್ಟು ಮಾಡಿಕೊಳ್ಳಿ. ಪ್ರಶ್ನೆ ಪತ್ರಿಕೆಯ ಸ್ವರೂಪವನ್ನು ಚೆನ್ನಾಗಿ ತಿಳಿದುಕೊಂಡು ಯಾವ ಪ್ರಶ್ನೆಗೆ ಯಾವ ಯಾವ ರೀತಿಯ ಉತ್ತರ ಬರೆಯಬೇಕು ಎಂದು ದೃಢಪಡಿಸಿಕೊಳ್ಳಿ. ನೀವು ಮಾಡುವ ತಪ್ಪುಗಳನ್ನು ಗಮನಿಸಿ, ತಿದ್ದಿಕೊಳ್ಳುತ್ತಾ ಬನ್ನಿ. ನಿಜವಾದ ಪರೀಕ್ಷೆಯ ಹಾಗೆಯೇ, ಸಾಕಷ್ಟು ಪ್ರಶ್ನೆಪತ್ರಿಕೆಗಳಿಗೆ ಉತ್ತರಿಸಿ. ನೀವು ಪಡೆದುಕೊಳ್ಳುವ ಅಂಕಗಳಿಗಿಂತ, ಕಳೆದುಕೊಳ್ಳುವ ಅಂಕಗಳ ಬಗ್ಗೆ ಚಿಂತಿಸಿ, ತಪ್ಪುಗಳನ್ನು ಸರಿ ಪಡಿಸಿಕೊಳ್ಳಿ. ಇನ್ನು ಸಿಇಟಿ ಪರೀಕ್ಷೆಯ ಕ್ರಮವೇ ಬೇರೆ ರೀತಿ ಇರುತ್ತದೆ. ಇಲ್ಲಿ ನಿಗದಿತ ಕಾಲದೊಳಗೆ, ಸರಿಯುತ್ತರ ಆರಿಸಿಕೊಂಡು ಬರೆಯುವುದು ಮುಖ್ಯ. ಮಾರುಕಟ್ಟೆಯಲ್ಲಿ ಈ ನಿಟ್ಟಿನಲ್ಲಿ ಸಾಕಷ್ಟು ಪುಸ್ತಕಗಳು ಲಭ್ಯ. ಕೆಲವು ಕಡೆ ಅಲ್ಪಾವಧಿ ತರಬೇತಿ ಸಹಾ ಸಿಗುತ್ತದೆ. ಅನು ಜಿ. ಟಿ. ಕೋಟಿಹಾಳ್, ರಾಣಿಬೆನ್ನೂರು ನಾನು ಪ್ರಥಮ ಪಿಯುಸಿ ಮುಗಿಸಿದ್ದೇನೆ. ನನಗೆ ಜಿಲ್ಲಾಧಿಕಾರಿ ಆಗಬೇಕೆಂಬ ಆಸೆಯಿದೆ. ನಾನು ಬಿಎಸ್ಸಿ ಅಥವಾ ಡಿಪ್ಲೊಮಾ ಈ ಎರಡರಲ್ಲಿ ಯಾವುದನ್ನು ಆರಿಸಿಕೊಳ್ಳಲಿ. ಡಿಸಿ ಆಗಬೇಕಾದರೆ ಐಎಎಸ್ ಅಥವಾ ಕೆಎಎಸ್ ಪರೀಕ್ಷೆ ಪಾಸು ಮಾಡಬೇಕು. ಇದಕ್ಕೆ ಕಡೆಯ ಪಕ್ಷ ಒಂದು ಪದವಿ ಇರಬೇಕು. ಸ್ನಾತಕೋತ್ತರ ಕಡ್ಡಾಯವಲ್ಲ. ಹೀಗಾಗಿ ಬಿಎಸ್ಸಿ ಸೂಕ್ತ. ಡಿಪ್ಲೊಮಾ ಮಾಡಿದರೆ ತಾಂತ್ರಿಕ ಕ್ಷೇತ್ರದಲ್ಲಿ ಅವಕಾಶಗಳು ಒದಗುತ್ತದೆ. ಇದರಲ್ಲಿ ಬಿಇ ಮಾಡಿಕೊಂಡಲ್ಲಿ ಮಾತ್ರ ನೀವು ಡಿಸಿ ಆಗಲು ಪ್ರಯತ್ನಿಸಬಹುದು. ಪ್ರಕಾಶ ಮರನೂರ, ಆಲಬಾಳ, ಜಮಖಂಡಿ ನಾನು ಕಲಾ ವಿಭಾಗದಲ್ಲಿ ದ್ವಿತೀಯ ಪಿಯುಸಿ ಮುಗಿಸಿದ್ದೇನೆ. ನನಗೆ ಹೆಚ್ಚು ಓದುವ ಆಸೆ. ಹಿಂದೆ ನಾನು ಸೈನ್ಸ್ ಆರಿಸಿಕೊಂಡು ಮೂರು ವಿಷಯಗಳಲ್ಲಿ ಅನುತ್ತೀರ್ಣನಾದೆ. ಕಲಾ ವಿಭಾಗದಲ್ಲೂ ಸೈನ್ಸ್ ವಿಭಾಗದಂತೆ ಉದ್ಯೋಗಕ್ಕೆ ಅವಕಾಶವಿರುವ ಕೋರ್ಸುಗಳಿವೆಯೇ ತಿಳಿಸಿ. ಕಲೆ ಹಾಗೂ ವಿಜ್ಞಾನ ವಿಭಾಗಗಳು ಮೂಲತಃ ಬೇರೆ ಬೇರೆ ಗುರಿ ಹಾಗೂ ಅವಕಾಶಗಳನ್ನು ಒದಗಿಸುವ ಕೋರ್ಸುಗಳು. ಓದು ಉದ್ಯೋಗಕ್ಕೆ ದಾರಿ. ಆದರೆ ಕಲಾ ವಿಭಾಗದಲ್ಲಿ ಕಲಿತವರಿಗೆ ಅದರಲ್ಲೂ ಕೆಲವು ವಿಷಯಗಳನ್ನು ಆರಿಸಿಕೊಂಡವರಿಗೆ ಇತ್ತೀಚೆಗೆ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿವೆ ಎಂದು ಹೇಳಲು ವ್ಯಸನವಾಗುತ್ತದೆ. ಆದರೆ ನೀವು ನಿರಾಶರಾಗಬೇಕಿಲ್ಲ. ಬಿಎ ಒಂದೇ ಅಲ್ಲದೇ, ಉದ್ಯೋಗಕ್ಕೆ ಹೆಚ್ಚು ಅವಕಾಶವಿರುವ ನೂರಾರು ಕೋರ್ಸುಗಳಿವೆ. ಇವುಗಳಲ್ಲಿ ಪದವಿ, ಡಿಪ್ಲೊಮಾ, ಅಲ್ಪಕಾಲಿಕ ಕೋರ್ಸು, ಉದ್ಯೋಗ ತರಬೇತಿ ಹೀಗೆ ಅನೇಕ ವೈವಿಧ್ಯಗಳಿವೆ. ಇವುಗಳ ಪಟ್ಟಿ ದೊಡ್ಡದಿದೆ. ನೀವು ವೆಬ್‌ಸೈಟ್ ಮೂಲಕ, ನಿಮ್ಮ ವ್ಯಾಪ್ತಿಯ ವಿವಿ ಮೂಲಕ ಹಾಗೂ ಇತರ ಮೂಲಗಳಿಂದ ಮಾಹಿತಿ ಪಡೆದುಕೊಂಡು, ನಿಮಗೆ ಸರಿ ಹೊಂದುವ ವಿಷಯವನ್ನು ಆರಿಸಿಕೊಳ್ಳಿ. ನಾಗರಾಜ ಎಸ್. ಮಾಣಿಕನಗರ, ರಾಯಚೂರು ನಾನು ಪಾರ್ಟ್ ಟೈಂ ಕೆಲಸ ಮಾಡುತ್ತಾ ಬಿಕಾಂ ಎರಡನೇ ಸೆಮಿಸ್ಟರ್ ಕಲಿಯುತ್ತಿದ್ದೇನೆ. ನಾನು ಸಿಎ ಆಗಲು ಬಯಸಿದ್ದೇನೆ. ಇದಕ್ಕೆ ಬೇಕಾದ ಅರ್ಹತೆಗಳೇನು, ಉದ್ಯೋಗಾವಕಾಶಗಳು ಹೇಗೆ, ಕರ್ನಾಟಕದಲ್ಲಿ ಸಿಎ ಕಾಲೇಜುಗಳು ಎಲ್ಲಿವೆ, ಇದು ಎಷ್ಟು ವರ್ಷದ ಕೋರ್ಸು, ಇದನ್ನು ಬಿಕಾಂ ಜೊತೆಗೆ ಮಾಡಬಹುದೇ, ತಗಲುವ ವೆಚ್ಚವೆಷ್ಟು, ಇದನ್ನು ಪೂರೈಸುವುದರಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅವಕಾಶವಿದೆಯೇ ? ಸಿಎ ಮಾಡಲು ಎಸ್‌ಎಸ್‌ಎಲ್‌ಸಿ ನಂತರವೂ ಇನ್‌ಸ್ಟಿಟ್ಯೂಷನ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಸಂಸ್ಥೆಯಲ್ಲಿ ನೋಂದಾಯಿಸಿ ಕೊಳ್ಳಬಹುದು. ಆದರೆ ಪಿಯುಸಿ ಮುಗಿಸಿದ ನಂತರವೇ ಇಂಟಿಗ್ರೇಟೆಡ್ ಪ್ರೋಫೀಶಿಯನ್ಸೀ ಕಾಂಪಿಟೆನ್ಸೀ ಕೋರ್ಸ್ ಬರೆಯಲು ಸಾಧ್ಯ. ಇದರಲ್ಲಿರುವ ಎರಡು ವಿಭಾಗಗಳಲ್ಲಿ ಒಂದನ್ನು ಪೂರೈಸಿ ಕೊಂಡರೂ ಹಿರಿಯ ಸಿಎ ಬಳಿ ಅಪ್ರೆಂಟಿಶಿಪ್‌ಗೆ ಸೇರಿಕೊಳ್ಳುವ ಅರ್ಹತೆ ಸಿಗುತ್ತದೆ. ಇದು ಮೂರು ವರ್ಷದ್ದಾಗಿದ್ದು ಎರಡೂವರೆ ವರ್ಷ ಪೂರೈಸಿದ ನಂತರ ಅಂತಿಮ ಸಿಎ ಬರೆಯಬಹುದು. ಹೀಗೆ ಒಂದೇ ಬಾರಿ ಪಾಸು ಮಾಡಲು ಕನಿಷ್ಠ 4- 5 ವರ್ಷ ಬೇಕು. ಇದಕ್ಕೆ ಬಿಕಾಂ ಮಾಡಲೇಬೇಕಾದ ಅಗತ್ಯವಿಲ್ಲ. ಈ ಪರೀಕ್ಷೆಗಳಿಗೆ ಕೋಚಿಂಗ್ ಕೊಡುವ ಅನೇಕ ಖಾಸಗಿ ಸಂಸ್ಥೆಗಳು ಇವೆ. ಸಿಎ ಮಾಡಿದವರಿಗೆ ಬ್ಯಾಂಕಿಂಗ್, ಕಂಪೆನಿಗಳು, ಸ್ವತಂತ್ರ ಉದ್ಯೋಗ ಹೀಗೆ ಅನೇಕ ಅವಕಾಶಗಳಿವೆ. ನಿಮ್ಮ ಪತ್ರದಲ್ಲಿ ಉತ್ತಮ ಅಕೌಂಟೆಂಟ್ ಆಗುವ ಬಯಕೆ ವ್ಯಕ್ತಪಡಿಸಿದ್ದೀರಿ. ಸಿಎ ಆದಲ್ಲಿ ಉತ್ತಮ. ಅದು ಇಲ್ಲದೆಯೂ ನಿಮ್ಮ ಬಿಕಾಂ ಕಲಿಕೆಯ ಮೂಲಕ ಉತ್ತಮ ಅಕೌಂಟೆಂಟ್ ಆಗಬಹುದು. ರಷ್ಮಿ ಎ. ವಿವೇಕಾನಂದನಗರ, ಚನ್ನರಾಯಪಟ್ಟಣ ನಾನು ಮಂಗಳೂರು ವಿವಿಯಿಂದ ಇಂಗ್ಲಿಷ್, ಪತ್ರಿಕೋದ್ಯಮ, ಡಾಟಾ ಪ್ರೋಸೆಸಿಂಗ್ ಆರಿಸಿಕೊಂಡು ಬಿಎ ಡಿಗ್ರಿ ಪಡೆದಿರುತ್ತೇನೆ. ನನಗೆ ಬಿಎಡ್ ಮಾಡಲು ಇಷ್ಟ. ಕೆಲವರು ಸಾಧ್ಯವಿಲ್ಲ ಎನ್ನುತ್ತಾರೆ. ದಯಮಾಡಿ ಮಾಹಿತಿ ನೀಡಿ. ಇದಲ್ಲದೆ ನಾನು ಇಂಗ್ಲಿಷ್ ಎಂಎ ಸಹಾ ಮಾಡಿರುತ್ತೇನೆ. ಇದರಲ್ಲಿ ಹೆಚ್ಚಿನ ಪರಿಣಿತಿಯ ಬಗ್ಗೆ ತಿಳಿಸಿ. ಬೆಂಗಳೂರಿನ ಒಬ್ಬ ಹಿರಿಯ ಪ್ರಾಧ್ಯಾಪಕರ ಪ್ರಕಾರ ನೀವು ಇಂಗ್ಲಿಷ್ ಹಾಗೂ ಚರಿತ್ರೆ ವಿಷಯಗಳನ್ನು ಆರಿಸಿಕೊಂಡು ಬಿಎಡ್ ಮಾಡಲು ಸಾಧ್ಯವಿದೆ. ನಿಮಗೆ ಕಾಲೇಜು ಅಧ್ಯಾಪಕರಾಗುವ ಆಸೆ ಇದ್ದಲ್ಲಿ ನೆಟ್ ಅಥವಾ ಸೆಟ್ ಪರೀಕ್ಷೆಗೆ ಹಾಜರಾಗಬಹುದು. ಇಂಗ್ಲಿಷ್ ಎಂಎ ಮಾಡಿದವರಿಗೆ ಎಂಫಿಲ್, ಪಿಎಚ್‌ಡಿ ಮಾತ್ರವಲ್ಲದೆ, ಬೆಂಗಳೂರಿನ ಪ್ರಾದೇಶಿಕ ಇಂಗ್ಲಿಷ್ ಸಂಸ್ಥೆ ಮುಂತಾದ ಕಡೆ ತರಬೇತಿಗೆ ಅವಕಾಶವಿದೆ. ಇಗ್ನೊದಲ್ಲಿ ದೂರಶಿಕ್ಷಣದ ಮೂಲಕ ಉತ್ತಮ ಕೋರ್ಸುಗಳು ಲಭ್ಯ. ಅಕ್ಷಿತ ಎಸ್. ಶೇಖರ್, ತಲಗಟ್ಟಪುರ, ಬೆಂಗಳೂರು ನಾನು ಹತ್ತನೆಯ ತರಗತಿಯಲ್ಲಿ ಓದುತ್ತಿದ್ದೇನೆ. ನನಗೆ ಐಎಎಸ್ ಮಾಡಬೇಕೆಂಬ ಹಂಬಲವಿದೆ. ಇದಕ್ಕಾಗಿ ಪಿಯುಸಿಯಲ್ಲಿ ಯಾವ ವಿಷಯವನ್ನು ತೆಗೆದುಕೊಳ್ಳಬೇಕು. ಡಿಗ್ರಿ ಯಾವ ವಿಷಯದಲ್ಲಿ ಮಾಡಬೇಕು? ಐಎಎಸ್ ಮಾಡಲು ಇರಬೇಕಾದ ಅರ್ಹತೆ ಯಾವುದಾದರೂ ಒಂದು ಅಂಗೀಕೃತ ವಿವಿಯ ಪದವಿ. ಬಿಇ, ಎಂಬಿಬಿಎಸ್, ಬಿಎಸ್ಸಿ, ಬಿಎ, ಬಿಕಾಂ ಹೀಗೆ ಯಾವುದೇ ವಿಷಯದಲ್ಲಿ ಡಿಗ್ರಿ ಇದ್ದರೂ ನಡೆಯುತ್ತದೆ. ವಿಜಯ ಕುಮಾರ್ ನಾಯಕ, ಯಾದಗಿರಿ ನಾನು ಹತ್ತನೆಯ ತರಗತಿಯಲ್ಲಿ ಶೇ 66 ಅಂಕ ಗಳಿಸ್ದ್ದಿದೇನೆ. ನಂತರದ ಸಾಲಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಲಾಗಲಿಲ್ಲ. ಶಾಲೆಯಿಂದ ನಾನು ಪಡೆದಿದ್ದ ಮೊದಲನೆಯ ಟಿಸಿ ಕಳೆದುಹೋಗಿದೆ. ಈಗ ಎರಡನೆಯ ಟಿಸಿ ಆಧಾರದ ಮೇಲೆ ಕೃಷಿ ಡಿಪ್ಲೊಮಾ ಮಾಡಬಯಸಿದ್ದೇನೆ. ಇದನ್ನು ಮಾನ್ಯ ಮಾಡುತ್ತಾರೆಯೇ? ತಿಳಿಸಿ. ನೀವು ಎರಡನೆಯ ಟಿಸಿ ಮೂಲಕ ಖಂಡಿತಾ ನಿಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಬಹುದು. ಒಂದು ವೇಳೆ ಅವರು ಮೊದಲ ಟಿಸಿ ಬಗ್ಗೆ ಸಮಜಾಯಿಷಿ ಕೇಳಿದಲ್ಲಿ ಪತ್ರ ಅಥವಾ ಅಫಿಡವಿಟ್ ಮೂಲಕ ವಿವರಣೆ ನೀಡಬಹುದು. ಇದೊಂದು ಸಮಸ್ಯೆ ಅಲ್ಲ. ಅವಿನಾಶ್ ಕೆ.ಪಿ. ನಾನು ಬಿಸಿಎ ಡಿಗ್ರಿ ಮುಗಿಸಿದ್ದೇನೆ. ಪ್ರೌಢಶಾಲಾ ಶಿಕ್ಷಕರಾಗಿದ್ದ ನನ್ನ ತಂದೆಯವರು ಅನಾರೋಗ್ಯ ಪೀಡಿತರಾಗಿದ್ದು ಕೆಲಸ ಮಾಡುತ್ತಿಲ್ಲ. ನನಗೆ ಅವರ ಕೆಲಸ ದೊರೆಯುತ್ತದೆಯೇ? ಅಥವಾ ಬೇರೆ ಯಾವ ಇಲಾಖೆಯಲ್ಲಿ ಸಿಗಬಹುದು? ನಿಮ್ಮ ತಂದೆಯವರು ಸರ್ಕಾರಿ ಕೆಲಸದಲ್ಲಿ ಇದ್ದರು ಎಂದಾದರೆ ನೀವು ಅವರು ಕೆಲಸ ಮಾಡುತ್ತಿದ್ದ ಇಲಾಖೆಯ ಮೇಲಾಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಳ್ಳಿ. ಅನುಕಂಪದ ಆಧಾರದ ಮೇಲೆ ಕೆಲಸ ನೀಡುವ ನೀತಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ನೀವು ಅರ್ಜಿ ಸಲ್ಲಿಸುವ ಮೂಲಕ ಪ್ರಯತ್ನಿಸಬಹುದು. ಪ್ರಶಾಂತ್ ಕೆ.ಸಿ., ತುಮಕೂರು ನಾನು ಐದು ವರ್ಷದ ಕಾನೂನು ಪದವಿಗಾಗಿ ಕಲಿಯುತ್ತಿದ್ದೇನೆ. ಇದಕ್ಕೆ ಮುಂದೆ ಭವಿಷ್ಯವಿದೆಯೇ? ಎಂಎ ದೂರ ಶಿಕ್ಷಣಕ್ಕೆ ಹೇಗೆ ದಾಖಲಾತಿ ಮಾಡಿಕೊಳ್ಳಬೇಕು, ಮುಂದೆ ಐಪಿಎಸ್ ಮಾಡಬಹುದೇ? ಕಾನೂನು ಪದವಿಯಲ್ಲಿ ಉತ್ತಮ ಭವಿಷ್ಯವಿದೆ. ಆದರೆ ಅದು ನಿಮ್ಮ ಪ್ರಯತ್ನ ಹಾಗೂ ವೃತ್ತಿಪರತೆಯನ್ನು ಅವಲಂಬಿಸಿದೆ. ಈಗಿನ ನಿಯಮಗಳ ಪ್ರಕಾರ ಎಂಎ ಮಾಡಲು ಪದವಿ ಅಗತ್ಯ. ಕಾನೂನು ಸೇರಿದಂತೆ ಯಾವುದೇ ಪದವಿ ಇದ್ದಲ್ಲಿ ಐಪಿಎಸ್‌ಗೆ ಪ್ರಯತ್ನಿಸಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.