ಜಿಎಂ ಪಟ್ಟದತ್ತ ಸ್ಟ್ಯಾನಿ ಚಿತ್ತ ಭಾರತದಲ್ಲಿ ಮೊದಲ ಚೆಸ್‌ ಗ್ರ್ಯಾಂಡ್‌ಮಾಸ್ಟರ್‌ ಪದವಿಯನ್ನು ಪಡೆದವರು ಯಾರು ಎಂಬ ಪ್ರಶ್ನೆಗೆ ಉತ್ತರ ಅತೀ ಸುಲಭ. ತಮಿಳುನಾಡಿನ ವಿಶ್ವನಾಥನ್‌ ಆನಂದ್‌ 1988ರಲ್ಲಿ ಆ ಪಟ್ಟ ಪಡೆದರು. ಅಲ್ಲಿಂದ ಇಲ್ಲಿಯವರೆಗೆ ದೇಶದಲ್ಲಿ 41 ಮಂದಿ ಆಟಗಾರರು ‘ಜಿಎಂ’ ಪಟ್ಟ ಪಡೆದಿದ್ದಾರೆ. ಇವರಲ್ಲಿ ಆನಂದ್‌ ಅವರಿಂದ ಮೊದಲ್ಗೊಂಡು ಸಿಂಹಪಾಲು ಆಟಗಾರರರು ತಮಿಳುನಾಡಿನವರೇ. ಆದರೆ ಪಕ್ಕದ ಕರ್ನಾಟಕದಲ್ಲಿ ಇದುವರೆಗೂ ಗ್ರ್ಯಾಂಡ್‌ಮಾಸ್ಟರ್‌ ಆಟಗಾರರು ಮೂಡಿಬಂದಿಲ್ಲ. ವಾಸ್ತವದಲ್ಲಿ ಇಂಟರ್‌ನ್ಯಾಷನಲ್‌ ಮಾಸ್ಟರ್‌ (ಐಎಂ) ಆಟಗಾರರಿರುವುದೇ ಬೆರಳೆಣಿಕೆಯಷ್ಟು. ಐದು ವರ್ಷಗಳ ಹಿಂದೆ ಐಎಂ ಪಟ್ಟ ಪಡೆದಿದ್ದ ಶಿವಮೊಗ್ಗದ ಜಿ.ಎ. ಸ್ಟ್ಯಾನಿ, ಈಗ ಗ್ರ್ಯಾಂಡ್‌ಮಾಸ್ಟರ್‌ ಪಟ್ಟಕ್ಕೆ ಸಮೀಪವಾಗಿದ್ದಾರೆ. ಪ್ರಸಕ್ತ ಫಿಡೆ ಕ್ರಮಾಂಕಪಟ್ಟಿಯಲ್ಲಿ 2,485 ರೇಟಿಂಗ್‌ ಹೊಂದಿರುವ 23 ವರ್ಷದ ಆಟಗಾರ ಒಂದು ‘ಜಿಎಂ ನಾರ್ಮ್‌’ ಪಡೆದಿದ್ದಾರೆ. ಜಿಎಂ ಟೈಟಲ್‌ ಪೂರೈಸಲು ಅವರಿಗೆ ಇನ್ನೆರಡು ನಾರ್ಮ್‌ ಮತ್ತು 15 ರೇಟಿಂಗ್‌ ಪಾಯಿಂಟ್‌ಗಳ ಅಗತ್ಯವಿದೆ. ಸ್ಥಿರ ಪ್ರದರ್ಶನ ಸ್ಟ್ಯಾನಿ ಇತ್ತೀಚಿನ ವರ್ಷಗಳಲ್ಲಿ ವಿದೇಶಿ ಟೂರ್ನಿಗಳಲ್ಲಿ ಉತ್ತಮ ಸಾಧನೆ ಪ್ರದರ್ಶಿಸುತ್ತ ಬಂದಿದ್ದಾರೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಅವರು 100 ರೇಟಿಂಗ್‌ ಪಾಯಿಂಟ್‌ ಹೆಚ್ಚಿಸಿದ್ದಾರೆ ಎಂಬುದು ಗಮನಾರ್ಹ. 2015ರ ಅಕ್ಟೋಬರ್‌ನಲ್ಲಿ 2,385 ಇದ್ದ ರೇಟಿಂಗ್‌ ಕಳೆದ ಅಕ್ಟೋಬರ್‌ ಕೊನೆಯಲ್ಲಿ 2,485ಕ್ಕೆ ಏರಿದೆ. ಈಚೆಗಷ್ಟೇ ಫ್ರಾನ್ಸ್‌ನಲ್ಲಿ ನಡೆದ ಸಾಟ್ರನ್‌ ಓಪನ್‌ ಟೂರ್ನಿಯಲ್ಲಿ ಅವರೇ ಚಾಂಪಿಯನ್‌ ಆಗಿದ್ದರು. ಆ ಟೂರ್ನಿಯಲ್ಲಿ ಇನ್ನೊಬ್ಬರು ಗ್ರ್ಯಾಂಡ್‌ಮಾಸ್ಟರ್‌ ಜೊತೆ ಡ್ರಾ ಮಾಡಿದರೂ ಎರಡನೇ ಜಿಎಂ ನಾರ್ಮ್‌ ಸಂಪಾದಿಸಲು ಅವರಿಗೆ ಅವಕಾಶವಿತ್ತು. ಆದರೆ ಪ್ರಶಸ್ತಿ ಹಾದಿಯಲ್ಲಿ ಎದುರಾಗಿದ್ದು ಇಬ್ಬರು ಜಿಎಂ ಆಟಗಾರರಷ್ಟೇ. ಅಕ್ಟೋಬರ್‌ ಮೊದಲ ವಾರ ಜರ್ಮನಿಯಲ್ಲಿ ನಡೆದ ಮುನ್‌ಸ್ಟರ್‌ಲ್ಯಾಂಡ್‌ ಓಪನ್‌ನಲ್ಲಿ ಅವರಿಗೆ ಜಂಟಿ ಮೂರನೇ (ಒಟ್ಟಾರೆ ಐದನೇ) ಸ್ಥಾನ. ಕಳೆದ ಏಪ್ರಿಲ್‌ನಲ್ಲಿ ಫ್ರಾನ್ಸ್‌ನಲ್ಲಿ ನಡೆದ ಮಲ್ಕೋಫ್‌ ಓಪನ್‌ ಟೂರ್ನಿಯಲ್ಲಿ ಚಾಂಪಿಯನ್‌. ಅದೇ ತಿಂಗಳು ನಡೆದ ಏಳನೇ ಎಲ್‌ಯುಸಿ ಓಪನ್‌ ಟೂರ್ನಿಯಲ್ಲಿ ಎರಡನೇ ಸ್ಥಾನ ಮತ್ತು ಮೊದಲ ಜಿಎಂ ನಾರ್ಮ್‌ ಸಾಧನೆ ಅವರದ್ದು. ಶಿವಮೊಗ್ಗದ ಈ ಆಟಗಾರ ಇಂಟರ್‌ನ್ಯಾಷನಲ್‌ ಮಾಸ್ಟರ್‌ ಪಟ್ಟ ಪಡೆದಿದ್ದು 2011ರಲ್ಲಿ. ಆ ವರ್ಷ ಫಿಲಿಪ್ಪೀನ್ಸ್‌ನಲ್ಲಿ ನಡೆದ ಏಷ್ಯನ್‌ ಯುವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಯ ಪದಕ. ಅದರ ಬೆನ್ನಿಗೆ ಬ್ರೆಜಿಲ್‌ನಲ್ಲಿ ನಡೆದ ವಿಶ್ವ ಯುವ ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕನೇ ಸ್ಥಾನದ ಸಾಧನೆ ಕಡಿಮೆ ಏನೂ ಆಗಿರಲಿಲ್ಲ. ಶ್ರೀಲಂಕಾದಲ್ಲಿ ಕಳೆದ ವರ್ಷ ನಡೆದ ಏಷ್ಯನ್‌ ಸಿಟೀಸ್‌ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ವೈಯಕ್ತಿಕ ಚಿನ್ನದ ಪದಕ. ಫ್ರಾನ್ಸ್‌ನ ಲಿಫ್ರೆಯಲ್ಲಿ (2015) ನಡೆದ ಟೂರ್ನಿಯಲ್ಲಿ ಚಾಂಪಿಯನ್‌ ಪಟ್ಟ. ಮಲ್ಕೋಫ್‌ ಓಪನ್‌ ಟೂರ್ನಿಯಲ್ಲೂ ಚಾಂಪಿಯನ್‌. ರಷ್ಯ, ಬಲ್ಗೇರಿಯಾ, ಆಸ್ಟ್ರೇಲಿಯಾ, ಸ್ವಿಜರ್ಲೆಂಡ್‌, ನೆದರ್‌ಲ್ಯಾಂಡ್‌ ಸೇರಿದಂತೆ 15ಕ್ಕೂ ಹೆಚ್ಚು ದೇಶಗಳಲ್ಲಿ ನಡೆದ ವಿವಿಧ ಪಂದ್ಯಾವಳಿಗಳಲ್ಲಿ ಅವರು ದೇಶವನ್ನು ಪ್ರತಿನಿಧಿಸಿದ್ದಾರೆ. ಚೆಸ್‌ ಆಸಕ್ತಿ ಶಿವಮೊಗ್ಗದ ಗೋಪಾಳದ ಮನೆಯಲ್ಲಿ ಬೇಸಿಗೆ ರಜೆ ವೇಳೆ ಸಮಯ ಕಳೆಯಲು ಸ್ಟ್ಯಾನಿ ಸೋದರ ಟೋನಿಗೆ ಅವರ ದೊಡ್ಡಪ್ಪ ಚೆಸ್‌ ಆಡುವುದನ್ನು ಕಲಿಸುತ್ತಿದ್ದರು. ಅದನ್ನು ಕುತೂಹಲದಿಂದ ಗಮನಿಸುತ್ತಿದ್ದ ಎಂಟು ವರ್ಷ ವಯಸ್ಸಿನ ಸ್ಟ್ಯಾನಿ ಕೂಡ ಆಸಕ್ತಿ ತಳೆದರು. ಮಗನ ಚೆಸ್‌ ಆಸಕ್ತಿ ಕಂಡ ತಾಯಿ ಲಿಝಿ, ತಂದೆ ಅಂಥೋನಿ, ಶಿವಮೊಗ್ಗದ ನಳಂದ ಚೆಸ್‌ ಅಕಾಡೆಮಿಯ ಬೇಸಿಗೆ ಶಿಬಿರಕ್ಕೆ ಸೇರಿಸಿದರು. ಬಯಲುಸೀಮೆ ಮತ್ತು ಮಲೆನಾಡಿನ ನೂರಾರು ರೇಟೆಡ್‌ ಆಟಗಾರರನ್ನು ತಯಾರು ಮಾಡಿದ ಹಿರಿಮೆ ಈ ಅಕಾಡೆಮಿಯದ್ದು. ‘ಈ ಅಕಾಡೆಮಿಯಲ್ಲಿ ಕೋಚ್‌ ಶ್ರೀಕೃಷ್ಣ ಉಡುಪ ಅವರು ಸಿಗದೇ ಹೋಗಿದ್ದಲ್ಲಿ ನಮಗೆ ಸ್ಟ್ಯಾನಿಯಲ್ಲಿರುವ ಪ್ರತಿಭೆ ಗೊತ್ತಾಗುತ್ತಿರಲಿಲ್ಲವೇನೊ’ ಎನ್ನುತ್ತಾರೆ ಲಿಝಿ. ಉಡುಪ ಅವರಿಗೂ ಸ್ಟ್ಯಾನಿ ಸಾಧನೆ ಬಗ್ಗೆ ಹೆಮ್ಮೆ. ಜಿಲ್ಲಾ ಮಟ್ಟ, ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ ದಾಖಲಿಸುತ್ತ ಹೋದ ಸ್ಟ್ಯಾನಿ ಮೂರು ಬಾರಿ ರಾಜ್ಯ ಓಪನ್‌ ಚಾಂಪಿಯನ್‌ ಪಟ್ಟಕ್ಕೇರಿದರು. 2011ರಲ್ಲಿ ಜಮ್ಮುವಿನಲ್ಲಿ ನಡೆದ ರಾಷ್ಟ್ರೀಯ 17 ವರ್ಷದೊಳಗಿನವರ ಪಂದ್ಯಾವಳಿಯಲ್ಲಿ ಚಾಂಪಿಯನ್‌ ಕಿರೀಟ ಅವರದಾಯಿತು. ಆಟದ ಪ್ರೀತಿ ಪ್ರಸ್ತುತ ಚೆನ್ನೈನ ಶ್ರೀರಾಮಸ್ವಾಮಿ ಮೆಮೋರಿಯಲ್‌ ಕಾಲೇಜಿನಲ್ಲಿ (ಎಸ್‌ಆರ್‌ಎಂ) ಎಂಬಿಎ ವ್ಯಾಸಂಗದ ಅಂತಿಮ ಹಂತದಲ್ಲಿರುವ ಸ್ಟ್ಯಾನಿ, ಸುಮಾರು ಒಂದೂವರೆ ವರ್ಷದಿಂದ ಐಎಂ ವಿ.ಶರವಣನ್‌ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ. ‘ಶರವಣ ಅವರು ಆಟದ ಓಪನಿಂಗ್‌ ತಂತ್ರಗಳ ಬಗ್ಗೆ ಒತ್ತು ನೀಡುತ್ತಿದ್ದಾರೆ. ನಾನು ಹೆಚ್ಚು ಪರಿಶ್ರಮ ಪಡುವಂತೆ, ಜೊತೆಗೇ ಆಟದ ಬಗ್ಗೆ ಅಕ್ಕರೆ ಮೂಡುವಂತೆ ತರಬೇತಿ ನೀಡುತ್ತಿದ್ದಾರೆ. ಗ್ಯಾರಿ ಕ್ಯಾಸ್ಪರೋವ್‌, ಅನತೋಲಿ ಕಾರ್ಪೋವ್‌, ಬಾಬಿ ಫಿಷರ್‌ ಹಳೆಯ ಆಟಗಾರರು ಆಡಿದ ಉತ್ತಮ ಪಂದ್ಯಗಳ ಅಧ್ಯಯನ ಕೂಡ ಮಾಡುತ್ತಿದ್ದೇನೆ’ ಎನ್ನುತ್ತಾರೆ ಸ್ಟ್ಯಾನಿ. * ಚೆಸ್‌ನಲ್ಲಿ ನಾನು ಇನ್ನೂ ದೂರ ಸಾಗಬೇಕಾಗಿದೆ. ಮುಂದಿನ ವರ್ಷದ ಆರಂಭದಲ್ಲಿ ಇಟಲಿ, ಸ್ಪೇನ್‌ನಲ್ಲಿ ಆಡುವ ಯೋಚನೆಯಿದೆ. ಡಿಸೆಂಬರ್‌ವರೆಗೆ ಅದಕ್ಕಾಗಿ ಸಿದ್ಧತೆ ನಡೆಸುತ್ತೇನೆ. ಸದ್ಯಕ್ಕೆ ನನ್ನ ಗುರಿಯಿರುವುದು ಗ್ರ್ಯಾಂಡ್‌ಮಾಸ್ಟರ್‌ ಆಗುವುದರತ್ತ. –ಜಿ.ಎ.ಸ್ಟ್ಯಾನಿ. * ರಾಜ್ಯದ ಐಎಂ ಆಟಗಾರರು ಐಒಸಿಯ ದೇವಕಿ ವೆಂಟಕರಮಣ ಪ್ರಸಾದ್‌ ಮತ್ತು ಇಂಡಿಯನ್‌ ಬ್ಯಾಂಕ್‌ನ ರವಿಗೋಪಾಲ ಹೆಗಡೆ ಇಂಟರ್‌ನ್ಯಾಷನಲ್‌ ಪಟ್ಟ ಪಡೆದ ಕರ್ನಾಟಕದ ಮೊದಲ ಇಬ್ಬರು ಆಟಗಾರರು. ನಂತರದ ವರ್ಷಗಳಲ್ಲಿ ಮೈಸೂರಿನ ಎಂ.ಎಸ್‌.ತೇಜ್‌ಕುಮಾರ್‌, ಶಿವಮೊಗ್ಗ ಜಿಲ್ಲೆಯ ಜಿ.ಎ.ಸ್ಟ್ಯಾನಿ, ಬಿ.ಎಸ್‌.ಶಿವಾನಂದ, ಮೈಸೂರಿನ ಗಿರೀಶ್‌ ಕೌಶಿಕ್‌, ಮಂಗಳೂರಿನ ವಿಯಾನಿ ಅಂಟೊನಿಯೊ ಡಿಕುನ್ಹ ಮತ್ತು ಬೆಂಗಳೂರಿನ ರಘುನಂದನ್‌ ಕೆ.ಎಸ್‌. ಅವರು ಐಎಂ ಪಟ್ಟ ಪಡೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.