ಪಶುವೈದ್ಯಕೀಯ: ನೌಕರಿ ಖಚಿತ ಸದ್ಯ ರಾಜ್ಯದಲ್ಲಿ ಪಶುವೈದ್ಯರ ಕೊರತೆ ಇದ್ದು ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಸಾಮಾನ್ಯವಾಗಿ ಪ್ರತಿ ವರ್ಷ 120 ಪಶುವೈದ್ಯರು ಪದವಿ ಪಡೆದು ಬರುತ್ತಾರೆ ಮತ್ತು 60-80 ಪಶುವೈದ್ಯರು ಸೇವೆಯಿಂದ ನಿವೃತ್ತರಾಗುತ್ತಾರೆ. ಈ ಕಾರಣದಿಂದ ಸದ್ಯಕ್ಕಂತೂ ನಿರುದ್ಯೋಗದ ಸಮಸ್ಯೆ ಪಶುವೈದ್ಯರನ್ನು ಕಾಡಲಾರದು. ಇದಲ್ಲದೇ ಇನ್ನೂ ಸುಮಾರು 1500 ಹುದ್ದೆಗಳು ಖಾಲಿ ಇದ್ದು ಮುಂದಿನ 8-10 ವರ್ಷ ಪಶುವೈದ್ಯಕೀಯ ಪದವಿ ಪಡೆದವರಿಗೆ ಉದ್ಯೋಗಕ್ಕೇನೂ ತೊಂದರೆಯಿಲ್ಲ. ಸೇವೆಗೆ ಸೇರಿದ ಪ್ರಾರಂಭದಲ್ಲೇ 30 ಸಾವಿರ ರೂಪಾಯಿ ವೇತನ ಸಿಗುತ್ತದೆ. ಇದಲ್ಲದೇ ಸರ್ಕಾರದ ಅನುಮತಿ ಪಡೆದು ಖಾಸಗಿ ಸೇವೆಯನ್ನೂ ಸಹ ಒದಗಿಸಬಹುದು. ಪಶುವೈದ್ಯಕೀಯ ಒಂದು ಪವಿತ್ರ ವೃತ್ತಿ. ಒಂದು ಕಾಲದಲ್ಲಿ ಪಶುವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆಯುವುದು ಕಷ್ಟಕರವಾಗಿತ್ತು. ವೈದ್ಯಕೀಯ ಶಿಕ್ಷಣಕ್ಕಿಂತಲೂ ಉತ್ತಮ ಮತ್ತು ಕಡಿಮೆ ಖರ್ಚಿನ ಈ ವೃತ್ತಿ ಶಿಕ್ಷಣ ಕಲಿಯಲು ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಪಿಯುಸಿಯಲ್ಲಿ ಸರಾಸರಿ ಶೇ 95 ರಷ್ಟು ಅಂಕ ಗಳಿಸುವುದು ಅವಶ್ಯವಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಕಂಪ್ಯೂಟರ್ ಕ್ಷೇತ್ರದಲ್ಲಿನ ಭಾರೀ ವೇತನದ ಆಸೆಯಿಂದ ಬಹಳಷ್ಟು ಪಾಲಕರು ಮತ್ತು ವಿದ್ಯಾರ್ಥಿಗಳು ಪಶುವೈದ್ಯಕೀಯ ಶಿಕ್ಷಣದಿಂದ ತಾತ್ಕಾಲಿಕವಾಗಿ ದೂರವಾಗಿದ್ದಾರೆ. ಇದರ ನಡುವೆಯೂ ಈ ಶಿಕ್ಷಣದತ್ತ ಮುಖ ಮಾಡುವ ಸಂದರ್ಭ ಮತ್ತೆ ಬಂದಿದೆ. ಏಕೆಂದರೆ ಬೇರೆ ಪದವಿಗಳಿಗೆ ಹೋಲಿಸಿದರೆ ಈ ಪದವಿಯನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ಮುಗಿಸಬಹುದು, ಶಿಕ್ಷಣದ ಗುಣಮಟ್ಟವೂ ಉತ್ತಮವಾಗಿದೆ. ಪಶುವೈದ್ಯನಾದರೆ ಸಮಾಜದ ಉನ್ನತಿಯಲ್ಲಿ ನೇರವಾಗಿ ಭಾಗಿಯಾಗಬಹುದು. ಉತ್ತಮ ಗುಣಮಟ್ಟದ ಜಾನುವಾರು ಚಿಕಿತ್ಸೆಯನ್ನು ನೀಡುವುದರ ಜೊತೆಗೆ ದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಮಾಂಸ, ಮೊಟ್ಟೆ, ಉಣ್ಣೆ ಮತ್ತು ಹಾಲು ಉತ್ಪಾದನಾ ಚಟುವಟಿಕೆಯಲ್ಲಿ ನೆರವಾಗಬಹುದು. ಪಶುವೈದ್ಯರು ಮನುಷ್ಯರಿಗೆ ಮಾರಕವಾದ ಹಲವಾರು ಕಾಯಿಲೆಗಳನ್ನು (ಹುಚ್ಚು ನಾಯಿ ರೋಗ, ಕ್ಷಯ ಮತ್ತು ಇತ್ತೀಚೆಗೆ ಹಂದಿ ಜ್ವರ ಎಂದು ತಪ್ಪಾಗಿ ಕರೆಯುವ ಹೆಚ್1 ಎನ್1 ಇತ್ಯಾದಿ) ತಡೆಗಟ್ಟಿ ಪರೋಕ್ಷವಾಗಿ ಮಾನವ ಆರೋಗ್ಯ ರಕ್ಷಣೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳಬಲ್ಲರು. ಇಷ್ಟೆಲ್ಲ ಅವಕಾಶ ಸಿಗುವ ಇನ್ನಾವುದೂ ಶಿಕ್ಷಣ ಸದ್ಯ ನಮ್ಮ ದೇಶದಲ್ಲಿ ಇರಲಿಕ್ಕಿಲ್ಲ. ಮಾನವ ವೈದ್ಯರಿಗೆ ಇರುವಷ್ಟು ಮಾನಸಿಕ ಒತ್ತಡ ಮತ್ತು ತಾಪತ್ರಯಗಳು ಈ ಚಿಕಿತ್ಸೆಯಲ್ಲಿ ಇಲ್ಲ. ಉತ್ತಮ ಸೇವೆ ನೀಡಿದಲ್ಲಿ ರೈತರಿಂದ ಬಹಳಷ್ಟು ಪ್ರಶಂಸೆ, ಜನಪ್ರಿಯತೆ ಸಿಗುತ್ತದೆ. ಹಲವು ಪಶುವೈದ್ಯರು ತಮ್ಮ ವೃತ್ತಿಯ ಜೊತೆ ಬರವಣಿಗೆ, ಕತೆ, ಕವನ ಸಂಗೀತ ಇತ್ಯಾದಿಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಶೇ 5-10 ರಷ್ಟು ಪಶುವೈದ್ಯರು ವಿದೇಶಗಳಲ್ಲಿ ಖಾಸಗಿ ವೃತ್ತಿ ಮೂಲಕ ಉತ್ತಮ ಗಳಿಕೆ ಮಾಡುತ್ತಿದ್ದಾರೆ. ಅನೇಕರು ಅಮೆರಿಕ ಮತ್ತು ಪ್ರಪಂಚದ ವಿವಿಧ ವಿವಿಗಳಲ್ಲಿ ಉನ್ನತ ವ್ಯಾಸಂಗ ಮಾಡಿ ಉತ್ತಮ ಹುದ್ದೆಯಲ್ಲಿದ್ದಾರೆ. ಇಂತಹವರ ಉದ್ದ ಪಟ್ಟಿಯನ್ನೇ ನೀಡಬಹುದು. ನಮ್ಮ ರಾಜ್ಯದ ಪಶುವೈದ್ಯರ ಉತ್ತಮ ಸೇವೆ ಮಧ್ಯಪ್ರಾಚ್ಯ ದೇಶಗಳಲ್ಲಿ ಅವರಿಗೆ ಉದ್ಯೋಗಾವಕಾಶ ಕಲ್ಪಿಸಿದೆ. ಪಶುವೈದ್ಯರ ಅವಿರತ ಶ್ರಮ ಮತ್ತು ಸೇವೆಯಿಂದ ನಮ್ಮ ದೇಶ ಹಾಲು ಉತ್ಪಾದನೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ. ಸದ್ಯ ದೇಶದಲ್ಲಿ ಸುಮಾರು 45,000 ಪಶುವೈದ್ಯರು ಮತ್ತು ಕರ್ನಾಟಕದಲ್ಲಿ 4000 ಪಶುವೈದ್ಯರಿದ್ದಾರೆ. ಇಷ್ಟು ಸಣ್ಣ ಸಂಖ್ಯೆಯಲ್ಲಿ ಇರುವ ಪರಿಣಿತರು ಭಾರತವನ್ನು ಹಾಲು ಮತ್ತು ಪ್ರಾಣಿಜನ್ಯ ಉತ್ಪನ್ನಗಳಲ್ಲಿ ಪ್ರಥಮ ಸ್ಥಾನಕ್ಕೆ ತಂದಿವುದು ಪಶುವೈದ್ಯಕೀಯ ಶಿಕ್ಷಣದ ಗುಣಮಟ್ಟವನ್ನು ತೋರಿಸುತ್ತದೆ. ಶಿಕ್ಷಣ ಪಡೆಯುವುದು ಹೇಗೆ? ಇದು ಎಲ್ಲರನ್ನು ಕಾಡುವ ಒಂದು ಪ್ರಶ್ನೆ. ಇದಕ್ಕೆ ಉತ್ತರ ಇಲ್ಲಿದೆ. ಬೀದರ್‌ನಲ್ಲಿ ಇರುವ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯವು ಪಶುವೈದ್ಯಕೀಯ ಶಿಕ್ಷಣವನ್ನು ನೀಡುವ ಅತ್ಯುನ್ನತ ಸ್ವಾಯತ್ತ ಸಂಸ್ಥೆ. ರಾಜ್ಯದಲ್ಲಿ ಖಾಸಗಿ ಪಶುವೈದ್ಯ ಕಾಲೇಜುಗಳಿಲ್ಲ; ಎಲ್ಲವೂ ಸರ್ಕಾರದ ಅಧೀನಕ್ಕೆ ಒಳಪಟ್ಟಿವೆ. ಇವೆಉಗಳಲ್ಲಿ ವಿದ್ಯಾರ್ಥಿಗಳ ವಸತಿನಿಲಯಗಳು, ಸುಸಜ್ಜಿತ ಗ್ರಂಥಾಲಯ, ಅಂತರ್ಜಾಲ ಸೇವೆ, ಉತ್ತಮ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗವಿದೆ. ಶಿಕ್ಷಣದ ಅವಧಿ: 9 ಸೆಮಿಸ್ಟರ್‌ಗಳು ಮತ್ತು 6 ತಿಂಗಳ ಇಂಟರ್ನ್‌ಶಿಪ್ ಸೇರಿ ಸುಮಾರು 5 ವರ್ಷ. ಶಿಕ್ಷಣದ ಮಾಧ್ಯಮ: ಆಂಗ್ಲ ಭಾಷೆ. ಅರ್ಹತೆ: ದ್ವಿತೀಯ ಪಿಯು ಅಥವಾ ತತ್ಸಮಾನ ಪರೀಕ್ಷೆಯ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಆಂಗ್ಲ ಭಾಷೆಗಳಲ್ಲಿ ಶೇ 50 ಅಂಕ ಪಡೆದಿರಲೇಬೇಕು. ಪರಿಶಿಷ್ಟ ಜಾತಿ/ ಪಂಗಡ/ ಪ್ರ.ವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳು ಮೇಲ್ಕಾಣಿಸಿದ ವಿಷಯಗಳಲ್ಲಿ ಶೇ 40 ಅಂಕ ಗಳಿಸಬೇಕು. ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ-2012) ಕಡ್ಡಾಯ. ಸದ್ಯ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿವಿ ಈ ಪದವಿ ಪಡೆಯಲು ಅರ್ಜಿಗಳನ್ನು ಕರೆದಿದೆ. ಕೃಷಿಕರ ಮಕ್ಕಳಿಗಾಗಿ ಶೇ 23.2 ರಷ್ಟು ಮೀಸಲಾತಿಯಿದೆ. ವಿವರಣಾ ಪತ್ರಿಕೆ ಪ್ರವೇಶ ಅರ್ಜಿ ಮತ್ತು ವಿವರಣಾ ಪತ್ರಿಕೆಯನ್ನು ವಿವಿಯ ಇಂಟರ್ನೆಟ್ .... ಇಲ್ಲಿಂದ ಪಡೆದು ಸೂಕ್ತವಾಗಿ ತುಂಬಿ ಸಲ್ಲಿಸಬೇಕು. ಆಗಿಂದಾಗ್ಯೆ ಈ ತಾಣವನ್ನು ಗಮನಿಸುತ್ತಾ ಇರಬೇಕು. ಅರ್ಜಿ ಶುಲ್ಕ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 600 ರೂ, ಪರಿಶಿಷ್ಟ ಮತ್ತು ಪ್ರ. ವರ್ಗ-1 ಅಭ್ಯರ್ಥಿಗಳಿಗೆ 300 ರೂ. ಶುಲ್ಕವನ್ನು `ಹಣಕಾಸು ನಿಯಂತ್ರಣಾಧಿಕಾರಿಗಳು, ಕಪಪಮೀವಿವಿ, ಬೀದರ ( , , ) ಇವರ ಹೆಸರಿನಲ್ಲಿ ಪಡೆದ ಡಿಮಾಂಡ್ ಡ್ರಾಫ್ಟ್‌ನ ಮೂಲಕವೇ ಸಲ್ಲಿಸಬೇಕು. ಭರ್ತಿ ಮಾಡಿದ ಅರ್ಜಿಗಳನ್ನು ಕುಲಸಚಿವರು, ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಅಂಚೆ ಪೆಟ್ಟಿಗೆ ಸಂಖ್ಯೆ 6, ನಂದಿನಗರ, ಬೀದರ 585 401 (ದೂರವಾಣಿ: 08482-245241) ಈ ವಿಳಾಸಕ್ಕೆ ಜೂನ್ 25ರ ಒಳಗೆ ತಲುಪುವಂತೆ ಕಳಿಸಬೇಕು. ಆಯ್ಕೆ ಪ್ರಕ್ರಿಯೆ ನಿಗದಿತ ಅರ್ಜಿಯಲ್ಲಿ ಸಿಇಟಿ-2012ರ ನೋಂದಣಿ ಸಂಖ್ಯೆ ನಮೂದಿಸುವುದು ಕಡ್ಡಾಯ. ಕೃಷಿಕರ ಮಕ್ಕಳಿಗಾಗಿ ಮೀಸಲಾಗಿರುವ ಸ್ಥಾನಗಳಿಗೆ ಪ್ರವೇಶ ಬಯಸುವ ಅಭ್ಯರ್ಥಿಗಳು ಬೀದರ್‌ನಲ್ಲಿ ಮಾತ್ರ ನಡೆಯುವ ಕೃಷಿ ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗಬೇಕು. ಪ್ರವೇಶ ಪ್ರಕ್ರಿಯೆಯನ್ನು ಬೀದರ ಹಾಗೂ ಬೆಂಗಳೂರು ಪಶುವೈದ್ಯ ಕಾಲೇಜುಗಳಲ್ಲಿ ಏಕಕಾಲಕ್ಕೆ ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆಸಲಾಗುತ್ತದೆ. ಉತ್ತಮ ಅಂಕಗಳಿದ್ದಲ್ಲಿ ಪ್ರವೇಶ ಖಚಿತ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.