ಅಭಿವೃದ್ಧಿ ಕೌಶಲಕ್ಕೊಂದು ಪದವಿ ಎಂಡಿಎಂ ಅಭಿವೃದ್ಧಿ ಕ್ಷೇತ್ರದಲ್ಲಿ ಬಹಳಷ್ಟು ಬೆಳವಣಿಗೆ ಆಗುತ್ತಿದ್ದರೂ, ಅಭಿವೃದ್ಧಿ ಕಾರ್ಯವನ್ನು ಸಮರ್ಥವಾಗಿ ನಿರ್ವಹಿಸುವ ವೃತ್ತಿಪರರು ಹಾಗೂ ಸಮುದಾಯದ ಅಭ್ಯುದಯಕ್ಕೆ ಕಂಕಣಬದ್ಧರಾಗಿ ನಿಲ್ಲುವ ನಾಯಕರ ಕೊರತೆ ಎದ್ದು ಕಾಣುತ್ತಿದೆ. ಈ ಕ್ಷೇತ್ರಕ್ಕೆ ಸಂಬಂಧಿಸಿದ ಜ್ಞಾನ, ತರಬೇತಿ ನೀಡುವ ಶೈಕ್ಷಣಿಕ ಸಂಸ್ಥೆಗಳು ವಿರಳವಾಗಿವೆ. ಈ ಕೊರತೆ ತುಂಬುವ ಮಹತ್ವಾಕಾಂಕ್ಷೆಯಿಂದ ಮೈಸೂರಿನ ವಿ-ಲೀಡ್ ಸಂಸ್ಥೆ 2002ರಿಂದ ಕಾರ್ಯೋನ್ಮುಖವಾಗಿದೆ. ವಿ-ಲೀಡ್ ಸಂಸ್ಥೆಯು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಅಂಗಸಂಸ್ಥೆ. 2005ರಲ್ಲಿ ದೇಶದಲ್ಲೇ ಪ್ರಥಮ ಹಾಗೂ ವಿಶೇಷ ಎನ್ನಬಹುದಾದ ಅಭಿವೃದ್ಧಿ ವಲಯದ ಅಧ್ಯಯನಕ್ಕೆ ಸಂಬಂಧಪಟ್ಟ ಮಾಸ್ಟರ್ ಇನ್ ಡೆವಲಪ್‌ಮೆಂಟ್ ಮ್ಯಾನೇಜ್‌ಮೆಂಟ್ (ಎಂಡಿಎಂ) ಕೋರ್ಸ್‌ನ್ನು ವಿ-ಲೀಡ್ ಆರಂಭಿಸಿತು. ಇದು ಮೈಸೂರು ವಿವಿಯ ಮಾನ್ಯತೆ ಪಡೆದಿದೆ. ವಿಶೇಷವಾಗಿ ಅಭಿವೃದ್ಧಿ ಕ್ಷೇತ್ರವನ್ನು ಗಮನದಲ್ಲಿ ಇಟ್ಟುಕೊಂಡು ಈ ಕೋರ್ಸ್ ರೂಪಿಸಿದ್ದು, ಹೊಸ ಸವಾಲು, ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ವೃತ್ತಿಪರರನ್ನು ಸಜ್ಜುಗೊಳಿಸುತ್ತಿದೆ. ಇಲ್ಲಿ 7 ಬ್ಯಾಚ್‌ಗಳ 55 ವಿದ್ಯಾರ್ಥಿಗಳು ಎಂಡಿಎಂ ಕೋರ್ಸ್ ಮುಗಿಸಿ, ದೇಶಪಾಂಡೆ ಫೌಂಡೇಶನ್, ಗ್ರೀನ್ ಫೌಂಡೇಶನ್, ಬೆಂಗಳೂರಿನ ಸಿಎಚ್‌ಎಫ್ ಇಂಟರ್‌ನ್ಯಾಷನಲ್, ರಿವರ್ ವ್ಯಾಲಿ ಫಾರ್ ರೂರಲ್ ಡೆವಲಪ್‌ಮೆಂಟ್, ಕರ್ನಾಟಕ ಕೊಳಚೆ ನಿಯಂತ್ರಣ ಮಂಡಳಿ ಮುಂತಾದ ಕಡೆ ಉದ್ಯೋಗ್ನ ಪಡೆದಿದ್ದಾರೆ. ಈ ಕೋರ್ಸ್ ಮುಗಿಸಿದವರಿಗೆ ಉದ್ಯೋಗಕ್ಕೆ ವಿಪುಲ ಅವಕಾಶಗಳಿವೆ. ಹಾಗಾಗಿಯೇ 55 ವಿದ್ಯಾರ್ಥಿಗಳೂ ಸುಲಭವಾಗಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ. 2 ವರ್ಷದ ಕೋರ್ಸ್ ಇದಾಗಿದ್ದು, 4 ಸೆಮಿಸ್ಟರ್‌ಗಳನ್ನು ಒಳಗೊಂಡಿದೆ. 40 ವಿದ್ಯಾರ್ಥಿಗಳಿಗೆ ಇಲ್ಲಿ ಕಲಿಯುವ ಅವಕಾಶವಿದ್ದು, ಶೇ 45 ಅಂಕ ಪಡೆದ ಯಾವುದೇ ಪದವೀಧರರು ಪ್ರವೇಶ ಪಡೆಯಲು ಅರ್ಹರು. ಎಂಎಸ್‌ಡಬ್ಲ್ಯು, ಎಂಬಿಎ ಪದವಿ ಪೂರೈಸಿದ ವಿದ್ಯಾರ್ಥಿಗಳಿಗೆ ನೇರವಾಗಿ 3ನೇ ಸೆಮಿಸ್ಟರ್‌ಗೆ ಪ್ರವೇಶ ನೀಡಲಾಗುತ್ತದೆ. ನಿಯೋಜಿತ ಕಾರ್ಯ, ಘಟಕ ಅಧ್ಯಯನ, ವೃತ್ತಿಪರ ಕೌಶಲ, ಸೆಮಿನಾರ್, ಅತಿಥಿ ಉಪನ್ಯಾಸ, ಅಪ್ರೆಂಟಿಷಿಪ್, ಪ್ರಾಜೆಕ್ಟ್, ಇಂಟರ್ನ್‌ಷಿಪ್ ಸೇರಿದಂತೆ ಉತ್ತಮ ಶೈಕ್ಷಣಿಕ ಕಲಿಕೆ ಒಳಗೊಂಡಿದೆ. ಸ್ವತಂತ್ರವಾಗಿ ಹಾಗೂ ಅಭಿವೃದ್ಧಿ ದೃಷ್ಟಿಕೋನದಿಂದ ಯೋಚಿಸುವ ಸಾಮರ್ಥ್ಯ, ವ್ಯಕ್ತಿತ್ವವನ್ನು ಬೆಳೆಸುವುದು ವಿ-ಲೀಡ್ ಗುರಿ. ಇ ಪ್ಲಸ್: ಇ ಪ್ಲಸ್ ತರಗತಿ ವಿ-ಲೀಡ್‌ನ ವಿಶೇಷತೆಗಳಲ್ಲಿ ಒಂದು. ಬಹುತೇಕ ಗ್ರಾಮೀಣ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಬ್ಬಿಣದ ಕಡಲೆಯಾಗಿರುತ್ತದೆ. ಆದ್ದರಿಂದ ಎಂಡಿಎಂ ಕೋರ್ಸ್‌ನ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಸಂವಹನ ಕೌಶಲವನ್ನು ಇಲ್ಲಿ ಹೇಳಿಕೊಡಲಾಗುತ್ತದೆ. ಇದರೊಂದಿಗೆ ವ್ಯಕ್ತಿತ್ವ ಬೆಳವಣಿಗೆ, ವೃತ್ತಿಪರತೆಯ ಬಗ್ಗೆ ಮಾರ್ಗದರ್ಶನ, ವಿದ್ಯಾರ್ಥಿ ಕೇಂದ್ರಿತ ಕಲಿಕೆ, ಸಮೂಹ ಕಲಿಕೆ, ಅಣಕು ಸಂದರ್ಶನ ಏರ್ಪಡಿಸಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮತ್ತು ಆಸಕ್ತಿಯನ್ನು ಮೂಡಿಸಲಾಗುತ್ತದೆ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಬೋಧಿಸಲಾಗುವ ಜತೆಗೆ ಪರೀಕ್ಷೆಯನ್ನು ಎರಡು ಭಾಷೆಯಲ್ಲೂ ಬರೆಯುವ ಅವಕಾಶ ಕಲ್ಪಿಸಲಾಗಿದೆ. ಕಲಿಕೆಯ ಜತೆಯಲ್ಲಿ ಗಳಿಕೆಯನ್ನೂ ಮಾಡುತ್ತಾ, ತನ್ನ ಖರ್ಚನ್ನು ವಿದ್ಯಾರ್ಥಿಯೇ ಭರಿಸುವ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಪರಿಶಿಷ್ಟ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿ-ಲೀಡ್ ಸಂಸ್ಥೆ ವತಿಯಿಂದ ಶಿಷ್ಯವೇತನ ನೀಡಲಾಗುತ್ತದೆ. ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಾಲ ಒದಗಿಸಲಾಗುತ್ತದೆ. ಉತ್ತಮ ಕ್ಯಾಂಪಸ್, ಸುಸಜ್ಜಿತ ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್, ಬೋಧನಾ ಸಾಮಗ್ರಿ ಹಾಗೂ ಯುವಕರು ಮತ್ತು ಯುವತಿಯರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಇದೆ. ಸಮುದಾಯ ಆಧಾರಿತ ನಾಟಕಗಳು, ಸ್ವಾಭಿಮಾನ, ಸಂದರ್ಶನ ಕಲೆ, ವ್ಯಕ್ತಿತ್ವ ವಿಕಸನ, ಕೌಶಲ ಕುರಿತಾದ ತರಗತಿಯನ್ನು ಇಲ್ಲಿ ನಡೆಸಲಾಗುತ್ತದೆ. ವಿವೇಕಾನಂದರ ಆದರ್ಶ, ತತ್ವಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿ, ಸೇವಾ ಮನೋಭಾವ ಮೂಡಿಸುವ ಜತೆಗೆ ಸಮುದಾಯಕ್ಕೆ ಉತ್ತಮ ಕೊಡುಗೆಯನ್ನು ನೀಡುವಂತೆ ಪ್ರೇರೇಪಿಸಲಾಗುತ್ತದೆ. 2012-13ನೇ ಸಾಲಿನ ದಾಖಲಾತಿ ಆರಂಭವಾಗಿದ್ದು, ಅರ್ಜಿಯನ್ನು ವಿ-ಲೀಡ್ ಸಂಸ್ಥೆಯಲ್ಲಿ ಅಥವಾ ವೆಬ್‌ಸೈಟ್: ... ಮೂಲಕ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಡಾ.ಜಿ.ಭಾಗ್ಯಲಕ್ಷ್ಮಿ, ಮುಖ್ಯಸ್ಥರು, ವಿವೇಕಾನಂದ ಇನ್‌ಸ್ಟಿಟ್ಯೂಟ್ ಫಾರ್ ಲೀಡರ್‌ಷಿಪ್ ಡೆವಲಪ್‌ಮೆಂಟ್, ಸಿಎ-2, ಕೆಐಎಡಿಬಿ ಇಂಡಸ್ಟ್ರಿಯಲ್ ಹೌಸಿಂಗ್ ಏರಿಯಾ, ಹೆಬ್ಬಾಳ ರಿಂಗ್ ರೋಡ್, ಮೈಸೂರು-16, ದೂ: 0821-2415412, 98869 75820 ಸಂಪರ್ಕಿಸಬಹುದು. ಮುಖ್ಯಾಂಶಗಳು: ಕೋರ್ಸ್: ಮಾಸ್ಟರ್ಸ್‌ ಇನ್ ಡೆವಲಪ್‌ಮೆಂಟ್ ಮ್ಯಾನೇಜ್‌ಮೆಂಟ್ ಅವಧಿ: 2 ವರ್ಷ (4 ಸೆಮಿಸ್ಟರ್) ಅರ್ಹತೆ: ಶೇ 45 ಫಲಿತಾಂಶ ಪಡೆದ ಯಾವುದೇ ಪದವೀಧರರು ಆಯ್ಕೆ ವಿಧಾನ: ಪ್ರವೇಶ ಪರೀಕ್ಷೆ ಉದ್ಯೋಗಾವಕಾಶ: ಸರ್ಕಾರಿ, ಸ್ವಯಂ ಸೇವಾ ಸಂಸ್ಥೆ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಅಭಿವೃದ್ಧಿ ಏಜೆನ್ಸಿ, ಸಹಕಾರಿ ಕ್ಷೇತ್ರ, ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಘಟಕ (ಸಿಎಸ್‌ಆರ್), ಕಾರ್ಪೊರೇಟ್ ಫೌಂಡೇಶನ್ ಇತ್ಯಾದಿ ಕ್ಷೇತ್ರ... ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.