ಕಟ್ಟಿಕೊಂಡ ಕನಸಿಗೆ ಶಕ್ತಿ ಕೊಟ್ಟ ಗ್ರಂಥಾಲಯ ಇವರೆಲ್ಲ ಕೋಲಾರ ಜಿಲ್ಲೆಯ ವಿವಿಧ ಗ್ರಾಮೀಣ ಪ್ರದೇಶದ ಕೃಷಿ ಕುಟುಂಬಗಳ ಯುವಕ ಯುವತಿಯರು. ಉದ್ಯೋಗದ ಸಲುವಾಗಿ ಹಲವು ಪರೀಕ್ಷೆಗಳನ್ನು ಎದುರಿಸಿ ಈಗ ಸಫಲರಾಗಿರುವವರು. ಹಾಗಂತ ಪರೀಕ್ಷೆಗೆ ಸಿದ್ಧರಾಗಲು ಬೇಕಾದ ಸಾವಿರಾರು ರೂಪಾಯಿ ಮೌಲ್ಯದ ಪುಸ್ತಕಗಳನ್ನು ಸ್ವಂತಕ್ಕೆ ಕೊಳ್ಳುವಷ್ಟು ಶ್ರೀಮಂತರೇನಲ್ಲ. ಆದರೂ ಯಶಸ್ಸಿನ ಹಾದಿಯಲ್ಲಿ ನಡೆದವರು. ಗ್ರಂಥಾಲಯವನ್ನು ಸದ್ಬಳಕೆ ಮಾಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ಇವರು ಯಾರಿಂದಲೂ ಪಾಠ ಹೇಳಿಸಿಕೊಳ್ಳಲಿಲ್ಲ. ಆದರೆ ಅತ್ಯುತ್ತಮ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡರು! ಇದೆಲ್ಲ ಹೇಗೆ ಸಾಧ್ಯವಾಯಿತು ಎಂಬುದಕ್ಕೆ ದೊಡ್ಡ ಕಾರಣಗಳೇನಿಲ್ಲ. ಅವರ ಸತತ ಪರಿಶ್ರಮದ ಜೊತೆಗೆ ಬೆಂಬಲವಾಗಿ ನಿಂತ ಕೋಲಾರದ ಜಿಲ್ಲಾ ಕೇಂದ್ರ ಗ್ರಂಥಾಲಯದ ಕಡೆಗೆ ಗಮನ ಹರಿಸಲೇಬೇಕು. ಸಾಂಖ್ಯಿಕ ನಿರೀಕ್ಷಕರಾಗಿ ಆಯ್ಕೆಯಾಗಿರುವ ಬಂಗಾರಪೇಟೆ ತಾಲ್ಲೂಕಿನ ಬೇತಮಂಗಲ ಹೋಬಳಿಯ ವೆಂಕಟಾಪುರದ ಶ್ರೀನಿವಾಸ ರೆಡ್ಡಿ, ಮೊರಾರ್ಜಿ ದೇಸಾಯಿ ಶಾಲೆಯ ಪ್ರಾಂಶುಪಾಲರಾಗಿ ಆಯ್ಕೆಯಾಗಿರುವ ಮುಳಬಾಗಲು ತಾಲ್ಲೂಕಿನ ಮಲ್ಲಪನಹಳ್ಳಿಯ ಭಾರತಿ, ಗಾಂಧೀನಗರದ ಎನ್. ಮಹರ್ ಶಶಿಕಲಾ, ಬಿಸಿಎಂ ಹಾಸ್ಟೆಲ್ ಅಧೀಕ್ಷಕಿಯಾಗಿರುವ ಕೋಲಾರ ತಾಲ್ಲೂಕಿನ ಯಾನಾದಹಳ್ಳಿಯ ಆರತಿ, ಬಿಸಿಎಂ ಹಾಸ್ಟೆಲ್ ಅಧೀಕ್ಷಕಿಯಾಗಿರುವ ಹೋಳೂರಿನ ನಂದಿನಿ, ಸಾಂಖ್ಯಿಕ ನಿರೀಕ್ಷಕರಾದ ಬ್ಯಾಲಹಳ್ಳಿಯ ಬಿ.ಎಸ್.ವಿಜಯಲಕ್ಷ್ಮಿ ಮತ್ತು ಶ್ರೀನಿವಾಸಪುರ ತಾಲ್ಲೂಕಿನ ವಳಗೇರಿನಹಳ್ಳಿ (ರೋಜರ್‌ಪಲ್ಲಿ )ಎನ್.ರಮೇಶ್, ಹೊಗರಿ ಗ್ರಾಮದ ರಾಮಾಂಜನೇಯ... ಸಾಧನೆಯ ಹಾದಿಯಲ್ಲಿರುವವರ ಈ ಪಟ್ಟಿ ಹೀಗೇ ಮುಂದವರಿಯುತ್ತದೆ. ಬಿಎಸ್‌ಸಿ, ಬಿಎ, ಎಂಎ ಜೊತೆಗೆ ಬಿಇಡಿ, ಎಂಇಡಿ ಪದವೀಧರರಾದ ಇವರೆಲ್ಲ ಮೊದಲಿಗೆ ಅಪರಿಚಿತರಾಗಿದ್ದವರು. ಶಿಕ್ಷಕರಾಗಬೇಕೆಂದು ಕನಸು ಕಂಡವರು. ಅಲೆದಾಡಿದರೂ ಸಿಗದೆ ಆದ ನಿರಾಶೆಯನ್ನು ಮೆಟ್ಟಿ ನಿಂತು ಬೇರೆ ಪರೀಕ್ಷೆಗಳನ್ನು ಬರೆದವರು. ಪ್ರತ್ಯೇಕವಾಗಿ ತಮ್ಮ ಪಾಡಿಗೆ ಓದಿಕೊಂಡವರು. ಕೋಲಾರದ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಕ್ರಮೇಣ ಪರಿಚಿತರಾಗಿ, ನಂತರ ಸ್ನೇಹಿತರಾದರು. ಗ್ರಂಥಾಲಯ ಇವರಿಗೆ ಕೆಲಸವನ್ನಷ್ಟೇ ದೊರಕಿಸಲಿಲ್ಲ. ಉತ್ತಮ ಸ್ನೇಹಿತರನ್ನು ಒದಗಿಸಿತು! ಈಗಿನ ಕಾಲಕ್ಕೆ ಅಪರೂಪವಾದ, ಮಿತ್ರತ್ವ ಭಾವನೆಯನ್ನು ಮೀರಿದ ಸಹೋದರ ಭಾವದ ಜೊತೆ ಇವರೆಲ್ಲ ಪಯಣಿಸುತ್ತಿದ್ದಾರೆ. ಎಲ್ಲರದ್ದೂ ಒಂದೇ ಉದ್ದೇಶ. ಸರ್ಕಾರಿ ಕೆಲಸ ಗಿಟ್ಟಿಸುವುದು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು, ಪಟ್ಟಣಿಗರ ನಡುವಿನ ಪೈಪೋಟಿಗಳನ್ನು ಎದುರಿಸಿ ಕೆಲಸ ಪಡೆಯುವುದು ಸುಲಭವಲ್ಲ. ಸತತ ಅಭ್ಯಾಸ, ಸಂಪನ್ಮೂಲ ಪುಸ್ತಕಗಳ ಅಧ್ಯಯನ, ಮಾರ್ಗದರ್ಶಿಗಳು ಅತ್ಯಗತ್ಯ. ಕೊರತೆಗಳ ನಡುವೆಯೇ ಹಲವು ಪರೀಕ್ಷೆಗಳನ್ನು ಇವರು ಎದುರಿಸುತ್ತಲೇ ಇದ್ದಾರೆ. ಸರ್ಕಾರಿ ಕೆಲಸ ಸಿಕ್ಕ ಬಳಿಕವೂ ಪ್ರಯತ್ನ ನಿಂತಿಲ್ಲ. ಹೀಗಾಗಿ ಇವರೆಲ್ಲ ಇದೇ ಗ್ರಂಥಾಲಯದ ಆವರಣದಲ್ಲಿ ಕುಳಿತೇ ಕೆಎಎಸ್ ಮುಖ್ಯ ಪರೀಕ್ಷೆಗೆ ಸಿದ್ಧವಾಗುತ್ತಿದ್ದಾರೆ. ರಾಮಾಂಜನೇಯ ಐಎಎಸ್ ಪ್ರಿಲಿಮಿನರಿ ಪರೀಕ್ಷೆ ಬರೆದಿದ್ದಾರೆ. ಪುಸ್ತಕ -ಮಾರ್ಗದರ್ಶನ ದುಬಾರಿ. ಕೋಲಾರದಲ್ಲಂತೂ ಮಾರ್ಗದರ್ಶನ ಅತಿ ಕಡಿಮೆ. ಹೀಗಾಗಿ ಇವರೆಲ್ಲರೂ ಗ್ರಂಥಾಲಯವನ್ನೇ ನೆಚ್ಚಿಕೊಂಡರು. ಪ್ರತಿಯೊಂದು ಸ್ಪರ್ಧಾತ್ಮಕ ಪರೀಕ್ಷೆ ಕೈಪಿಡಿಗಳನ್ನು ಅಭ್ಯಾಸ ಮಾಡಿದರು. ವಿಶೇಷ ಎಂದರೆ ಅಲ್ಲಿನ ಸಿಬ್ಬಂದಿ ಇವರು ಕೋರಿದ ಪುಸ್ತಕಗಳನ್ನು ಅತಿ ಕಡಿಮೆ ಅವಧಿಯಲ್ಲಿ ಪೂರೈಸಿದ್ದು; ಮುಖ್ಯಗ್ರಂಥಪಾಲಕ ಎಚ್.ಆರ್.ಚೆನ್ನಕೇಶವ ಬೆಂಬಲವಾಗಿ ನಿಂತಿದ್ದು. ವಿಶೇಷವೆಂದರೆ ಈ ಅಧಿಕಾರಿಯೂ ಕೆಎಎಸ್ ಮುಖ್ಯಪರೀಕ್ಷೆಗೆ ಸಿದ್ಧರಾಗುತ್ತಿದ್ದಾರೆ! ಅಂದ ಹಾಗೆ ಇವರೆಲ್ಲ ಗ್ರಂಥಾಲಯಕ್ಕೆ ಬೆಳಿಗ್ಗೆ 10 ಗಂಟೆಗೆ ಬಂದು ಸಂಜೆ 6 ಗಂಟೆವರೆಗೂ ಇರುತ್ತಿದ್ದರು. ಮಧ್ಯಾಹ್ನದ ಊಟಕ್ಕೆ ಮನೆಯಿಂದ ತಂದ ಬುತ್ತಿ ಇರುತ್ತಿತ್ತು. ಊಟದ ವೇಳೆಯಲ್ಲಿ ಗ್ರಂಥಾಲಯದ ಮಹಡಿ ಮೇಲಿನ ಮರದ ನೆರಳಿನಲ್ಲಿ ಚರ್ಚೆ ಮಾಡುತ್ತಿದ್ದರು. ಮೊದಲು 2-3 ಗಂಟೆ ಕಾಲ ಕುಳಿತು ಓದಿದರೆ ಕಣ್ಣು, ತಲೆ, ಬೆನ್ನು, ಕಾಲು ನೋಯುತ್ತಿದ್ದವು. ಇಂಥ ಸಂಕಟಗಳನ್ನು ಸಹಿಸಿಕೊಂಡರು. ಸ್ಥಳಾಂತರ ಮತ್ತು ವಿಷಯಾಂತರವೇ ಅವರಿಗೆ ವಿಶ್ರಾಂತಿಯಾಗಿತ್ತು. ಇವರಲ್ಲಿ ಕೆಲವರು ಸೋಮವಾರ, ಎರಡನೇ ಶನಿವಾರ ಗ್ರಂಥಾಲಯ ರಜೆ ಇದ್ದಾಗ ಕೋಲಾರಮ್ಮ ಗುಡಿ ಬಳಿ ಗಂಗಮ್ಮ ಗುಡಿಗೆ ಹೋಗಿ ಓದಿಕೊಳ್ಳುತ್ತಿದ್ದರು! ವಯಸ್ಸು ಮೀರುತ್ತಿದ್ದರೂ ಕೆಲಸ ಸಿಗದೆ ದಿನವೂ ಗ್ರಂಥಾಲಯಕ್ಕೆ ಹೋಗುತ್ತಿದ್ದರೆಂಬ ಒಂದೇ ಕಾರಣಕ್ಕೆ ಇವರೆಲ್ಲರೂ ಸಂಬಂಧಿಕರ, ಹಳ್ಳಿಯವರ, ನೆರೆ-ಹೊರೆಯವರಿಂದ ನಿಂದನೆ, ಅಪಹಾಸ್ಯ, ಮೂದಲಿಕೆಗೆ ಒಳಗಾಗಿದ್ದರು. ಯುವತಿಯರಿಗೆ ಮದುವೆಯಾಗಬೇಕೆಂಬ ಒತ್ತಡ, ಯುವಕರಿಗೆ ಮನೆಯ ಜವಾಬ್ದಾರಿ ಹೊರಬೇಕೆಂಬ ಆಗ್ರಹ. ಮದುವೆ ಬೇಡವೆಂದರು. ಕೆಲಸ ಸಿಗಲಿ ಎಂದರು. ಈಗ ಇವರೆಲ್ಲರ ಕಡೆಗೆ ಜನರ ಮೆಚ್ಚುಗೆಯ ನುಡಿ-ನೋಟ ನಿಚ್ಚಳ. ಗ್ರಂಥಾಲಯ ಎಂದರೇನೆಂದು ಮೊದಲಿಗೆ ಗೊತ್ತಿರಲಿಲ್ಲ. ಆದರೆ ಇಲ್ಲಿಗೆ ಬಂದ ಮೇಲಷ್ಟೆ ಗೊತ್ತಾಯಿತು. ಗೆಳೆಯರು ಸಿಕ್ಕರು. ಹೀಗಾಗಿ ಸಿದ್ಧತೆ ನಡೆಸುವುದು ಸಲೀಸಾಯಿತು ಎನ್ನುತ್ತಾರೆ ರಮೇಶ್, ಭಾರತಿ, ಶಶಿಕಲಾ. ದಿನದಿನವೂ ಅಲ್ಲಿನ ಎಲ್ಲ ಪುಸ್ತಕಗಳನ್ನು ಓದುತ್ತಿದ್ದೆವು. ಓದಿದ್ದನ್ನು ಗುಂಪುಚರ್ಚೆ ಮಾಡುತ್ತಿದ್ದೆವು. ಅದರಿಂದ ಹೆಚ್ಚು ಪ್ರಯೋಜನವಾಯಿತು ಎಂಬುದು ಜಿಲ್ಲಾ ಸಶಸ್ತ್ರಮೀಸಲು ಪಡೆಯ ಕಾನ್‌ಸ್ಟೆಬಲ್ ಶ್ರೀನಿವಾಸರೆಡ್ಡಿಯವರ ಸಂತಸದ ನುಡಿ. ನಮ್ಮ ತಂಡದಲ್ಲಿದ್ದ ಏಳು ಮಂದಿ ಪೈಕಿ ಐವರಿಗೆ ಒಂದೇ ಬಾರಿಗೆ ಕೆಲಸ ಸಿಕ್ಕಿದ್ದು ಸಂತೋಷ ತಂದಿದೆ. ನಾವೆಲ್ಲರೂ ಕೆಎಎಸ್ ಮುಖ್ಯಪರೀಕ್ಷೆಗೆ ಸಿದ್ಧರಾಗುತ್ತಿದ್ದೇವೆ. ಇದೆಲ್ಲವೂ ಆಗಿದ್ದು ನಮ್ಮ ಈ ಗ್ರಂಥಾಲಯದಿಂದ ಎಂಬುದು ಇವರೆಲ್ಲರ ಒಕ್ಕೊರಲ ನುಡಿ. `ನಮಗೆ ಉದ್ಯೋಗ ದೊರಕುವಂತೆ ಮಾಡಿದ ಗ್ರಂಥಾಲಯಕ್ಕೆ ನಮ್ಮ ಕೃತಜ್ಞತೆ ಎಂದಿಗೂ ಕಡಿಮೆಯಾಗುವುದಿಲ್ಲ. ನಮ್ಮಆಸೆ ಒಂದೇ: ಗ್ರಂಥಾಲಯ ಎಲ್ಲಿಯೇ ಇರಲಿ, ಅದನ್ನು ಗ್ರಾಮೀಣ ಪ್ರದೇಶದ ಯುವಕ-ಯುವತಿಯರು ಸದ್ಬಳಕೆ ಮಾಡಿಕೊಳ್ಳಬೇಕು~ ಎನ್ನುತ್ತ ಮತ್ತೆ ಪುಟಗಳನ್ನು ತಿರುವುತ್ತಾರೆ... ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.