ಗುರುವಿಗೆ ಮೊರೆ... ನನ್ನ ಮಗ ನಿಮ್ಮ ಶಾಲೆಯಲ್ಲಿ ಕಲಿಯಬೇಕಿದೆ. ನನಗೆ ತಿಳಿದಿದೆ, ಈ ಲೋಕದಲ್ಲಿ ಎಲ್ಲರೂ ನ್ಯಾಯಪರರಲ್ಲ ಮತ್ತು ಎಲ್ಲರೂ ಪ್ರಾಮಾಣಿಕರಲ್ಲ ಎಂದು. ಹಾಗಿದ್ದರೂ ಪ್ರತಿಯೊಬ್ಬ ಸ್ವಾರ್ಥಿಗೆ ಒಬ್ಬ ಸಮರ್ಪಣಾ ಭಾವದವನೂ ಮತ್ತು ಪ್ರತಿಯೊಬ್ಬ ಖದೀಮನಿಗೆ ಒಬ್ಬ ನಿಸ್ಪೃಹನೂ ಇರುವರೆಂದು ಇವನಿಗೆ ತಿಳಿಸಿಕೊಡಿ. ಇದಕ್ಕೆ ಬಹಳಷ್ಟು ಸಮಯ ಬೇಕು ಎಂದು ನನಗೆ ಗೊತ್ತು. ಶ್ರಮದಿಂದ ಒಂದು ಡಾಲರ್ ಸಂಪಾದಿಸುವುದು ಅನಾಯಾಸ ಸಿಕ್ಕಿದ ಐದು ಡಾಲರ್‌ಗಳಿಗಿಂತಲೂ ಬಹುಮೌಲ್ಯಯುತವಾದದ್ದೆಂದು ಸಾಧ್ಯವಾದರೆ ಇವನಿಗೆ ತಿಳಿಹೇಳಿ. ಸೋಲುವುದನ್ನು ಕಲಿತು, ಜಯ ಬಂದಾಗ ಸಂತೋಷ ಪಡುವುದನ್ನು ತಿಳಿಸಿಕೊಡಿ. ಅಸೂಯೆಯನ್ನು ದೂರ ಮಾಡುವ ಹಾಗೂ ನಿರ್ಮಲ ನಗೆಯ ರಹಸ್ಯವನ್ನು ನಿಮಗಾದಲ್ಲಿ ಇವನಿಗೆ ತಿಳಿಸಿ. ಅತ್ಯಂತ ಸುಲಭಸಾಧ್ಯವಾದ ಬಾಯಿಬಡುಕರ ಮತ್ತು ಪುಂಡರ ಸಹವಾಸವು ಯಾವಾಗಲೂ ವರ್ಜ್ಯವೆಂದು ಇವನಿಗೆ ಮೊದಲಿಗೇ ಬೋಧಿಸಿ. ಪುಸ್ತಕಗಳನ್ನು ಓದಿ ಅರಿಯುವ ಸ್ವಾರಸ್ಯವನ್ನೂ, ಆಗಸದಲ್ಲಿನ ಪಕ್ಷಿಗಳ ಮತ್ತು ದುಂಬಿಗಳ ಹಾರಾಟವನ್ನೂ, ಬೆಟ್ಟದ ಹಸಿರು ತಪ್ಪಲಿನ ಮತ್ತು ಪುಷ್ಪಗಳ ಚಿರಂತನ ಪ್ರಕೃತಿ ವಿಸ್ಮಯವನ್ನು ಚಿಂತಿಸಿ ಆನಂದಿಸಲು ಇವನಿಗೆ ಸಾಕಷ್ಟು ಸಮಯ ನೀಡಿ. ಮೋಸ ಮಾಡಿ ಪರೀಕ್ಷೆ ಪಾಸಾಗುವುದಕ್ಕಿಂತ ಫೇಲಾಗುವುದೇ ಹೆಚ್ಚು ಗೌರವಯುತ ಎಂದು ಇವನಿಗೆ ಅರ್ಥಮಾಡಿಸಿಕೊಡಿ. ಎಲ್ಲರೂ ತಪ್ಪೆಂದು ಹೇಳಿದರೂ, ತನ್ನ ದೃಷ್ಟಿಕೋನ ಮತ್ತು ಪರಿಶ್ರಮದಲ್ಲಿ ದೃಢ ನಂಬುಗೆಯಿಂದ ಇರುವಂತೆ ಹೇಳಿ ಕೊಡಿ. ಸಜ್ಜನರ ಜತೆ ಸಭ್ಯವಾಗಿ, ದುರ್ಜನರ ಜತೆ ಕಠಿಣವಾಗಿ ವ್ಯವಹರಿಸುವ ನಡಾವಳಿಗಳನ್ನು ಕಲಿಸಿಕೊಡಿ. ಹೊಗಳುಭಟ್ಟರ ನಡುವೆ ಇವನಿಗೆ ಅದನ್ನು ಮೆಟ್ಟಿ ನಿಲ್ಲುವ ಶಕ್ತಿಯನ್ನು ಕೊಡಲು ಪ್ರಯತ್ನಿಸಿ. ಪ್ರತಿಯೊಬ್ಬರ ಅನಿಸಿಕೆಗಳನ್ನು ಸಹನೆಯಿಂದ ಆಲಿಸಿ, ಶೋಧಿಸಿ, ಸತ್ಯವನ್ನು ಒರೆಹಚ್ಚುವ ವಿದ್ಯೆಯನ್ನು ಹೇಳಿ ಕೊಡಿ. ದುಃಖವನ್ನೂ ಎದುರಿಸಿ ಹೇಗೆ ನಗುನಗುತ್ತ ಇರಬಹುದೆಂಬ ಕಲೆಯನ್ನು ಅವನಿಗೆ ತಿಳಿಸಿಕೊಡಿ. ಕಣ್ಣೀರಿಡುವುದರಲ್ಲಿ ಯಾವುದೇ ಅವಮಾನವೂ ಇಲ್ಲ ಎಂಬುದನ್ನು, ಸಿನಿಕತೆ ಬಗ್ಗೆ ಉದಾಸೀನ ಮತ್ತು ನಯವಂಚಕರ ಬಗ್ಗೆ ಜಾಗೃತೆಯಿಂದ ಇರುವುದನ್ನು ಅವನಿಗೆ ತಿಳಿಸಿಕೊಡಿ. ತನ್ನ ಬುದ್ಧಿ ಮತ್ತು ಶಕ್ತಿಯನ್ನು ಅಗತ್ಯ ಉಳ್ಳವರಿಗಾಗಿ ವಿನಿಯೋಗಿಸುವಂತೆಯೂ, ಆದರೆ ತನ್ನ ಹೃದಯವಂತಿಕೆಗೆ ಯಾವುದೇ ಬೆಲೆಯನ್ನು ಕಟ್ಟಬಾರದೆಂದು ಅವನಿಗೆ ಬೋಧಿಸಿ. ಗುಂಪಿನ ಅರಚಾಟಕ್ಕೆ ಬೆಲೆಕೊಡದಂತೆ, ಸರಿಯೆಂದೆನಿಸಿದಾಗ ದೃಢವಾಗಿ ನಿಂತು ಹೋರಾಡುವುದಕ್ಕೂ ಅವನಿಗೆ ಕಲಿಸಿಕೊಡಿ. ಇವನಿಗೆ ಯಾವುದೇ ತರಹ ಮುದ್ದು ಮಾಡದೇ, ಸಂದರ್ಭಕ್ಕೆ ತಕ್ಕ ಸೌಮ್ಯತೆಯಿಂದ ಬೋಧಿಸಿ. ಏಕೆಂದರೆ ಸುಡು ಬೆಂಕಿಯಿಂದ ಮಾತ್ರ ಉತ್ತಮ ಗುಣಮಟ್ಟದ ಉಕ್ಕನ್ನು ತಯಾರಿಸಬಹುದಲ್ಲವೇ. ಅಸಹನೆಗೆ ಧೈರ್ಯದ ಉತ್ತರ ಇರಲಿ, ಶೌರ್ಯ ಪ್ರದರ್ಶನಕ್ಕೆ ತಾಳ್ಮೆಯಿರಲಿ. ತನ್ನಲ್ಲಿ ಮತ್ತು ತನ್ನ ನಂಬುಗೆಗಳಲ್ಲಿ ಯಾವಾಗಲೂ ಪೂಜ್ಯ ಭಾವನೆ ಇರಲಿ. ಆಗ ಮಾತ್ರ ಅವನಿಗೆ ಮಾನವ ಕುಲದ ಬಗ್ಗೆಯೂ ಸದಾ ಗೌರವ ಇರುತ್ತದೆ. ಇದು ಕಠಿಣ ಹಾದಿ. ಆದರೂ ಸಾಧ್ಯವಾದಷ್ಟು ಪ್ರಯತ್ನಿಸಿ. (ಭಾವಾನುವಾದ: ಆರ್. ಶ್ರೀಧರ್) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.