ಯುಪಿಎಸ್‌ಸಿ ಕನ್ನಡದಲ್ಲಿ ತಯಾರಿ ಹೀಗೆ! ಆಗಸ್ಟ್ 30ರ ಪ್ರಜಾವಾಣಿಯ `ಕಾಮನಬಿಲ್ಲು~ ಪುರವಣಿಯಲ್ಲಿ ನನ್ನ ಓದು ಮತ್ತು ಇದುವರೆಗಿನ ಹಾದಿಯ ಕುರಿತು ಪ್ರಕಟವಾದ ಕಿರು ಲೇಖನವನ್ನು ಓದಿ ರಾಜ್ಯದ ಮೂಲೆ ಮೂಲೆಯಿಂದ ವಿದ್ಯಾರ್ಥಿಗಳು, ನಾಗರಿಕ ಸೇವಾ (ಐಎಎಸ್, ಐಪಿಎಸ್, ಐಎಫ್‌ಎಸ್, ಐಆರ್‌ಎಸ್ ಇತ್ಯಾದಿ) ಆಕಾಂಕ್ಷಿಗಳು ಕರೆ ಮಾಡಿ `ಕನ್ನಡದಲ್ಲಿ ನಾಗರಿಕ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವುದರ ಕುರಿತು~ ಹಲವು ಅನುಮಾನ, ಗೊಂದಲ, ಭಯ ಮತ್ತು ಆತಂಕಗಳನ್ನು ವ್ಯಕ್ತಪಡಿಸಿದ್ದಾರೆ. ಕನ್ನಡದಲ್ಲಿ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ನಾಗರಿಕ ಸೇವೆಗಳ ಪರೀಕ್ಷೆ ಬರೆಯ ಬಯಸಿರುವ ವಿದ್ಯಾರ್ಥಿಗಳು ಪದೇ ಪದೇ ಕೇಳಿದ ಕೆಲವು ಪ್ರಶ್ನೆಗಳಿಗೆ ನನಗೆ ಅನಿಸಿದ ಮಟ್ಟಿಗೆ ಉತ್ತರಿಸಲು ಈ ಕೆಳಗೆ ಪ್ರಯತ್ನಿಸಿದ್ದೇನೆ. ಕನ್ನಡದಲ್ಲಿಯೇ ಈ ಪರೀಕ್ಷೆಯನ್ನು ಬರೆಯಬಹುದೇ? -ಕೇಂದ್ರ ಲೋಕಸೇವಾ ಆಯೋಗದ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಮೂರು ಹಂತಗಳಿವೆ. 1. ಪೂರ್ವಭಾವಿ ಪರೀಕ್ಷೆ: ತಲಾ 200 ಅಂಕಗಳ ಎರಡು ಸಾಮಾನ್ಯ ಅಧ್ಯಯನ ಪ್ರಶ್ನೆ ಪತ್ರಿಕೆಗಳು ಇರುತ್ತವೆ. ಇವು ಬಹು ಆಯ್ಕೆ ವಸ್ತುನಿಷ್ಠತೆಯ (ಆಬ್ಜೆಕ್ಟಿವ್ ಮಲ್ಟಿಪಲ್ ಚಾಯಿಸ್) ಪ್ರಶ್ನೆಗಳು. ಸರಿಯಾದ ಉತ್ತರವನ್ನು ಪ್ರತ್ಯೇಕ ಹಾಳೆಯೊಂದರಲ್ಲಿ ಕೇವಲ ಗುರುತಿಸಬೇಕಾಗುತ್ತದೆ. ಈ ಎರಡೂ ಪ್ರಶ್ನೆ ಪತ್ರಿಕೆಗಳು ಕೇವಲ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಇರುತ್ತವೆ. ಇದು ಕೇವಲ ಅರ್ಹತೆ ಗಳಿಸುವ ಪರೀಕ್ಷೆ. ಇಲ್ಲಿಂದ ಮುಖ್ಯ ಪರೀಕ್ಷೆಗೆ ಅರ್ಹತೆ ಗಳಿಸಿದರೆ ಸಾಕು. ಇಲ್ಲಿಯ ಅಂಕಗಳನ್ನು ನಮ್ಮ ಅಂತಿಮ ರ‌್ಯಾಂಕ್ ನಿರ್ಧರಿಸಲು ಪರಿಗಣಿಸಲಾಗುವುದಿಲ್ಲ. 2. ಮುಖ್ಯ ಪರೀಕ್ಷೆ: ಕಡ್ಡಾಯ ಇಂಗ್ಲಿಷ್ 300 ಅಂಕ. ಕಡ್ಡಾಯ ಭಾರತೀಯ ಭಾಷೆ 300, ಅರ್ಹತೆಗಾಗಿ ಪ್ರಬಂಧ 200, ಐಚ್ಛಿಕ ವಿಷಯ 1- 600, ಐಚ್ಛಿಕ ವಿಷಯ 2- 600 ಮತ್ತು ಸಾಮಾನ್ಯ ಅಧ್ಯಯನ 600 ಅಂಕಗಳು. ಇಲ್ಲಿಯೂ ಪ್ರಶ್ನೆ ಪತ್ರಿಕೆಗಳು ಕೇವಲ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಇರುತ್ತವೆ. ಆದರೆ ಉತ್ತರಗಳನ್ನು ಕನ್ನಡದಲ್ಲಿ ಬರೆಯಬಹುದು. 3. ಸಂದರ್ಶನ/ ವ್ಯಕ್ತಿತ್ವ ಪರೀಕ್ಷೆ: 300 ಅಂಕ. ಇಲ್ಲಿಯೂ ಕನ್ನಡದಲ್ಲಿ ಸಂಪೂರ್ಣವಾಗಿ ಮಾತನಾಡಲು ಅವಕಾಶವಿದೆ. ಸಂದರ್ಶನದ ಸಮಿತಿ ಹಾಗೂ ಅಭ್ಯರ್ಥಿಯ ನಡುವೆ ಪರಸ್ಪರ ಸಂಪರ್ಕ/ ಸಂವಹನಕ್ಕಾಗಿ ದುಭಾಷಿ ಅಥವಾ ಭಾಷಾಂತರಕಾರರು ಇರುತ್ತಾರೆ. ಯುಪಿಎಸ್‌ಸಿಯು ಭಾರತೀಯ ಭಾಷೆಗಳ ಅಭ್ಯರ್ಥಿಗಳಿಗೂ ವ್ಯಕ್ತಿತ್ವ ಪರೀಕ್ಷೆಯಲ್ಲಿ ಮುಕ್ತ ಅವಕಾಶ ನೀಡಲು ಪ್ರಯತ್ನಿಸುತ್ತದೆ. ಕನ್ನಡದ ಅಭ್ಯರ್ಥಿಗಳು ಧೈರ್ಯವಾಗಿ ಕನ್ನಡದಲ್ಲಿಯೇ ಮಾತನಾಡಬಹುದು. ಈ ಪರೀಕ್ಷೆಗೆ ಇಂಗ್ಲಿಷ್ ಜ್ಞಾನ ಇರಲೇಬೇಕೇ? ಎಷ್ಟರ ಮಟ್ಟಿಗೆ ಇಂಗ್ಲಿಷ್ ಬೇಕು? ಅಷ್ಟು ಇಂಗ್ಲಿಷನ್ನು ಕನ್ನಡ ಮಾಧ್ಯಮದಲ್ಲಿಯೇ ಕಲಿತ ವಿದ್ಯಾರ್ಥಿಗಳು ರೂಢಿಸಿಕೊಳ್ಳುವುದು ಹೇಗೆ? ನಾಗರಿಕ ಸೇವಾ ಪರೀಕ್ಷೆಗೆ ಸುಲಲಿತ, ಸುಂದರ, ವೈಭವೋಪೇತ ಇಂಗ್ಲಿಷಿನ ಅವಶ್ಯಕತೆ ಇಲ್ಲ. ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಇಂಗ್ಲಿಷಿನಲ್ಲಿರುವುದರಿಂದ ಸರಳವಾದ ಇಂಗ್ಲಿಷ್ ಗೊತ್ತಿದ್ದರೆ ಸಾಕು. ಪದವಿ ಹಂತದವರೆಗೆ ಶಿಕ್ಷಣ ಪಡೆದಿರುವ, ಓದಿನ ಅಭಿರುಚಿ ಇರುವ ಯಾವುದೇ ಕನ್ನಡ ಮಾಧ್ಯಮ ವಿದ್ಯಾರ್ಥಿಗೂ ಅಷ್ಟರ ಮಟ್ಟಿಗೆ ಇಂಗ್ಲಿಷ್ ಜ್ಞಾನ ಇದ್ದೇ ಇರುತ್ತದೆ. ಇಂಗ್ಲಿಷಿನ ವ್ಯಾಕರಣ ಕಲಿಯುತ್ತಾ ಕೂರುವ ಅವಶ್ಯಕತೆ ಇಲ್ಲ. ಈ ಪರೀಕ್ಷೆಯ ತಯಾರಿಗೆ ಕೋಚಿಂಗ್ ಅನಿವಾರ್ಯವೇ? ನನ್ನ ಅನುಭವದ ಪ್ರಕಾರ ಯಾವುದೇ ಕೋಚಿಂಗ್ ಪಡೆಯುವ ಅನಿವಾರ್ಯತೆ ಇಲ್ಲ. ನಾನೂ ಕೂಡ ಮೊದಲು ಕೋಚಿಂಗ್ ಎಂದು ಓಡಾಡಿ ಭ್ರಮನಿರಸನಗೊಂಡೆ. ಅಲ್ಲಿ ಕಲಿಯುವುದಕ್ಕಿಂತ ಕಳೆದುಕೊಳ್ಳುವ ಅಪಾಯ ಹೆಚ್ಚು. ಇತ್ತೀಚೆಗೆ ನಾಗರಿಕ ಸೇವಾ ಪರೀಕ್ಷಾ ಕೋಚಿಂಗ್ ಕೇಂದ್ರಗಳು ನಾಯಿಕೊಡೆಯಂತೆ ಎದ್ದು ನಿಂತಿವೆ. ಹೆಚ್ಚಾಗಿ ಇಂಥ ಕೇಂದ್ರಗಳು ಹಣ ಮಾಡುವ ದಂಧೆಯಾಗಿವೆ. ವಿದ್ಯಾರ್ಥಿಗಳು ಬಹಳ ಎಚ್ಚರಿಕೆಯಿಂದ ಆಲೋಚನೆ ಮಾಡಿ ತಮಗೆ `ಕೋಚಿಂಗಿನ ಅವಶ್ಯಕತೆ ಇದೆಯೇ?~ ಎಂಬುದನ್ನು ತಾವೇ ಪರೀಕ್ಷೆಯ ಸ್ವರೂಪ ಗಮನಿಸುವುದರ ಮೂಲಕ ತೀರ್ಮಾನಿಸಿಕೊಳ್ಳಬೇಕು. ಕೋಚಿಂಗ್ ಪಡೆದರೇ ಈ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂಬಂತಹ ಗಾಳಿ ಸುದ್ದಿ, ಸುಳ್ಳಿನ ಮಾತುಗಳನ್ನು ನಂಬಬಾರದು. ಅಷ್ಟಕ್ಕೂ ಕೋಚಿಂಗ್ ಸೇರುವ ಬಯಕೆಯಿದ್ದರೆ ಆ ತರಬೇತಿ ಕೇಂದ್ರದ ಪೂರ್ವಾಪರ, ಪಾಠ - ಪ್ರವಚನಗಳ, ಪ್ರಬುದ್ಧತೆ, ಬದ್ಧತೆಗಳನ್ನು ಗಮನಿಸಿಕೊಳ್ಳಿ. ಕೆಲವು ಒಳ್ಳೆಯ ಒಡನಾಡಿಗಳ ಪರಿಚಯ, ನಿಯಮಿತ ಓದು, ಸ್ಪರ್ಧೆಯ ಅರಿವು, ಕೆಲವು ಉತ್ತಮ ಗುರುಗಳ ಸಂಪರ್ಕ. ಕೋಚಿಂಗ್ ಸೇರಿದರೆ ಆಗುವ ಲಾಭಗಳು ಇವಷ್ಟೇ. ಪರೀಕ್ಷೆಯಲ್ಲಿ ಯಶಸ್ಸು ಸಂಪೂರ್ಣವಾಗಿ ನಮ್ಮ ಆಸಕ್ತಿ, ಶ್ರದ್ಧೆ, ಕುತೂಹಲ, ಚಾಕಚಕ್ಯತೆಗಳನ್ನು ಅವಲಂಬಿಸಿರುತ್ತದೆ. ಈ ಪರೀಕ್ಷೆಗೆ ಪದವಿ ಅಧ್ಯಯನದ ಅವಧಿಯಲ್ಲೇ ತಯಾರಿ ನಡೆಸಬೇಕೇ? ಇಲ್ಲ. ಬಿಎ, ಬಿಎಸ್ಸಿ, ಬಿಇ, ಬಿಕಾಂ, ಎಂಬಿಬಿಎಸ್ ಮುಂತಾದ ಪದವಿ ಓದುತ್ತಿರುವ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಅಧ್ಯಯನದಲ್ಲಿ ತಲ್ಲೆನರಾಗುವುದು ಒಳಿತು. ಆದರೆ ಆ ಅವಧಿಯಲ್ಲಿ ಜಗತ್ತಿನಲ್ಲಿ, ನಮ್ಮ ಸುತ್ತ ನಡೆಯುತ್ತಿರುವ ವಿದ್ಯಮಾನಗಳ ಕಡೆ ಕುತೂಹಲ ಮತ್ತು ಆಸಕ್ತಿಯಿಂದ ಗಮನಹರಿಸಿದರೆ ಸಾಕು. ಪದವಿ ಅಧ್ಯಯನದ ಸಮಯದಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗೆ ಗಂಭೀರವಾಗಿ ಕುಳಿತು ಓದುವುದು, ಐಚ್ಛಿಕ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದು ತರವಲ್ಲ. ಪದವಿಯಲ್ಲಿ ಇರುವ ಇತಿಹಾಸ, ಭೂಗೋಳ, ರಾಜಕೀಯ ವಿಷಯಗಳನ್ನು ನೆಟ್ಟಗೆ ಓದದೆ ಆಮೇಲೆ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಅವುಗಳ ಮೂಲಭೂತ ಅಂಶಗಳನ್ನು ಓದತೊಡಗುವುದು ನಾಚಿಕೆಗೇಡು. ಪ್ರತಿದಿನ ಎಷ್ಟು ಗಂಟೆ ಓದಬೇಕು? ದಿನದ ಯಾವ ಹೊತ್ತಿನಲ್ಲಿ ಓದಬೇಕು? ಯಾವಾಗ ಓದುವ, ತಿಳಿದುಕೊಳ್ಳುವ ಆಸಕ್ತಿ ಮನದಾಳದಲ್ಲಿ ಮೂಡುತ್ತದೋ ಆಗ ಓದಿದರೆ ಸಾಕು. ಓದುವ ಅವಧಿಯ ಪ್ರಮಾಣ ಮುಖ್ಯವಲ್ಲ. ಓದಿದ್ದು ಎಷ್ಟರಮಟ್ಟಿಗೆ ತಿಳಿಯಿತು ಎಂಬುದಷ್ಟೇ ಮುಖ್ಯ. ಎಷ್ಟು ಹೊತ್ತು, ಯಾವ ವೇಳೆ ಎಂಬುದನ್ನು ವಿದ್ಯಾರ್ಥಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ನಿರ್ಧರಿಸಿಕೊಳ್ಳಬೇಕು. ದಿನಪತ್ರಿಕೆ ಓದುವುದರ ಮಹತ್ವ ಏನು? ಯಾವ ದಿನಪತ್ರಿಕೆ ಓದಬೇಕು? ದಿನಪತ್ರಿಕೆಯಲ್ಲಿ ಏನು ಓದಬೇಕು? ಯುಪಿಎಸ್‌ಸಿ ಇತ್ತೀಚಿನ ವರ್ಷಗಳಲ್ಲಿ ನಾಗರಿಕ ಸೇವೆಗಳ ಪರೀಕ್ಷೆಗೆ ಅಂಟಿಕೊಂಡಿದ್ದ `ಎಲೈಟಿಸ್ಟ್~ ಹಣೆಪಟ್ಟಿಯನ್ನು ಹಾಗೂ ಕೋಚಿಂಗ್ ಕೇಂದ್ರಗಳ ಹಿಡಿತವನ್ನು ಉದ್ದೇಶಪೂರ್ವಕವಾಗಿ ತೆಗೆದುಹಾಕಲು ಪ್ರಯತ್ನಿಸುತ್ತಿದೆ. ಹೀಗಾಗಿ ಕಳೆದ ಎರಡು-ಮೂರು ವರ್ಷಗಳಿಂದ ದಿನಪತ್ರಿಕೆಯ ಓದು ಹಿಂದೆಂದಿಗಿಂತಲೂ ಹೆಚ್ಚು ಮಹತ್ವ ಪಡೆದಿದೆ. ಪರೀಕ್ಷೆಯ ಶೇ 30-40 ಭಾಗ ದಿನಪತ್ರಿಕೆಯ ಓದಿನಿಂದಷ್ಟೇ ಬರೆಯಬಹುದಾದ ಪರಿಸ್ಥಿತಿ ಇದೆ. ನಮಗೆ ಇಷ್ಟವಿರುವ ವಿಷಯದ, ವರದಿಯ ವಸ್ತುನಿಷ್ಠತೆ ಕಾಪಾಡುವ, ಗಂಭೀರ ಪತ್ರಿಕೋದ್ಯಮಕ್ಕೆ ಹೆಸರಾದ ದಿನಪತ್ರಿಕೆ ಓದುವುದು ಒಳ್ಳೆಯದು. ಕನ್ನಡದಲ್ಲಿ ಪ್ರಜಾವಾಣಿ, ಇಂಗ್ಲಿಷಿನ ದಿ ಹಿಂದೂ, ದಿ ಎಕನಾಮಿಕ್ ಟೈಮ್ಸಗಳನ್ನು ದಿನವೂ ತಪ್ಪದೆ ಓದಲೇಬೇಕು ಎಂಬುದು ನನ್ನ ಅನುಭವ. ಸರ್ಕಾರದ ಕಾರ್ಯನೀತಿ, ಯೋಜನೆಗಳು, ಸಂಪಾದಕೀಯ, ಕ್ರೀಡೆ, ವಾಣಿಜ್ಯ, ಆರ್ಥಿಕತೆ, ಸಾಮಾಜಿಕ-ಆರ್ಥಿಕ ವಿಷಯಗಳು, ಅಂತರರಾಷ್ಟ್ರೀಯ ವಿದ್ಯಮಾನ, ವಿದೇಶಾಂಗ ನೀತಿ, ವಿಜ್ಞಾನ- ತಂತ್ರಜ್ಞಾನ ಮುಂತಾದ ವಿಷಯಗಳ ಕಡೆ ಗಮನ ನೀಡಬೇಕು. ದಿನಪತ್ರಿಕೆ, ನಿಯತಕಾಲಿಕೆಗಳಲ್ಲಿ ಓದುವ ವಿಚಾರಗಳನ್ನು ಟಿಪ್ಪಣಿ ಮಾಡಿಕೊಳ್ಳಬೇಕೇ? ಟಿಪ್ಪಣಿ ಮಾಡಿಕೊಳ್ಳುವುದು ಬಹಳ ಒಳ್ಳೆಯದು. ಒಂದು ಪ್ರತ್ಯೇಕ ಟಿಪ್ಪಣಿ ಪುಸ್ತಕ ಇಟ್ಟುಕೊಂಡು ಓದಿದ್ದನ್ನು ಬರೆದುಕೊಳ್ಳುವುದು ಅಥವಾ ಕತ್ತರಿಸಿ ಅಂಟಿಸಿಕೊಳ್ಳುವುದು ಸಹಕಾರಿಯಾಗುತ್ತದೆ. ಪ್ರಬಂಧ, ಸಾಮಾನ್ಯ ಅಧ್ಯಯನ ಪ್ರಶ್ನೆಪತ್ರಿಕೆಗೆ ಉತ್ತರ ಬರೆಯಲು ನಿಯಮಿತ ಅಂಕಣಗಳು ನೇರವಾಗಿ ಸಹಾಯವಾಗುತ್ತವೆ. ಕಳೆದ ಬಾರಿಯ ಪರೀಕ್ಷೆಯ ಪ್ರಬಂಧ ಬರೆಯುವಲ್ಲಿ (ಸಿನಿಮಾ ಮತ್ತು ಜನಪ್ರಿಯ ಸಂಸ್ಕೃತಿ) ನಾನು ಪ್ರಜಾವಾಣಿಯಲ್ಲಿ ಓದಿದ್ದ ಎಚ್.ಎಸ್.ಶಿವಪ್ರಕಾಶರ ಲೇಖನವೊಂದು ಅದ್ಭುತವಾಗಿ ಸಹಾಯ ನೀಡಿತ್ತು. ಯಾವ ಯಾವ ನಿಯತಕಾಲಿಕೆಗಳನ್ನು (ಮ್ಯಾಗಜಿನ್) ಓದಬೇಕು? ಇತ್ತೀಚಿನ ದಿನಗಳಲ್ಲಿ ಯುಪಿಎಸ್‌ಸಿ ಉದ್ದೇಶಪೂರ್ವಕವಾಗಿ ಪರೀಕ್ಷೆಯಲ್ಲಿ `ಚಲನಶೀಲತೆ~ ತಂದಿರುವುದರಿಂದ ಕೇವಲ ಪರೀಕ್ಷೆಗಾಗಿ ಇರುವ ನಿಯತಕಾಲಿಕಗಳನ್ನು ಓದುವುದರಿಂದ ಏನೇನೂ ಉಪಯೋಗವಿಲ್ಲ. ಆದ್ದರಿಂದ ಉತ್ತಮ ವಿಚಾರದ ಬಗೆಗೆ ಆಳವಾದ ಲೇಖನ ಪ್ರಕಟಿಸುವ ನಿಯತಕಾಲಿಕಗಳನ್ನು ಓದುವುದು ಒಳ್ಳೆಯದು. ಕನ್ನಡದ ಸುಧಾ, ಸಂವಾದ, ಹೊಸತು, ಯೋಜನಾ, ದಿಕ್ಸೂಚಿ, ಇಂಗ್ಲಿಷ್‌ನ ಕುರುಕ್ಷೇತ್ರ, ಫ್ರಂಟ್‌ಲೈನ್, ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ, ಮೇನ್‌ಸ್ಟ್ರೀಮ್, ಕರೆಂಟ್ ಸೈನ್ಸ್, ಸೈನ್ಸ್ ರಿಪೋರ್ಟರ್ ಇವುಗಳ ಓದುವಿಕೆಯಿಂದ ನನಗೆ ಅನುಕೂಲವಾಯಿತು. ಈ ಪರೀಕ್ಷೆ ಬುದ್ಧಿವಂತರಿಗೆ, ರ‌್ಯಾಂಕ್ ವಿಜೇತರಿಗೆ, ಚಿನ್ನದ ಪದಕ ಪಡೆದವರಿಗೆ ಭಾರೀ ಸುಲಭವೇ? ಹಾಗೇನೂ ಇಲ್ಲ. ರ‌್ಯಾಂಕು, ಗೋಲ್ಡ್ ಮೆಡಲುಗಳಿಗೆ ಇಲ್ಲಿ ಕವಡೆ ಕಾಸಿನ ಕಿಮ್ಮತ್ತೂ ಇಲ್ಲ. ಇಲ್ಲಿ ಬೇಕಿರುವುದು ಕೇವಲ ತಿಳಿವಳಿಕೆ. ಏಕೆಂದರೆ ನಾಗರಿಕ ಸೇವೆಗೆ ಆಯ್ಕೆ ಮಾಡುವುದು `ಬುದ್ಧಿವಂತರನ್ನಲ್ಲ; ಪ್ರಜ್ಞಾವಂತರನ್ನು. ಸಮಾಜದ ಬಗೆಗೆ ತೀವ್ರವಾದ ಕಾಳಜಿ ಇದ್ದು, ಕೆಲಸ ಮಾಡುವ ಹಂಬಲ ಉಳ್ಳವರನ್ನು~. ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆಯ ಸಂಪೂರ್ಣ ಮಾಹಿತಿ ಹಾಗೂ ಹಳೇ ಪ್ರಶ್ನೆ ಪತ್ರಿಕೆಗಳಿಗಾಗಿ ಅಧಿಕೃತ ಅಂತರ್ಜಾಲ ತಾಣ: ... ಕೆಲವು ಖಾಸಗಿ ಜಾಲ ತಾಣಗಳು: .., .. ಇತ್ಯಾದಿ.ಯುಪಿಎಸ್‌ಸಿಯ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ವಾರ್ಷಿಕ ವೇಳಾಪಟ್ಟಿ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ. (ಮುಂದುವರಿಯುತ್ತದೆ) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.