ಎಂಬಿಎ ಓದಬೇಕೆ? ನೀವು ಸೇರ ಬಯಸುವ ಕಾಲೇಜಿನ ಅಧಿಕಾರಿಗಳಿಗೆ ಈ ಕೆಳಕಂಡ ಪ್ರಶ್ನೆಗಳನ್ನು ಕೇಳಿ. ತೃಪ್ತಿಕರ ಉತ್ತರ ಬಂದರೆ ಮುಂದುವರಿಯಿರಿ. ಕಾಲೇಜಿನಲ್ಲಿ ಎಷ್ಟು ಜನ ಕಾಯಂ ಅಧ್ಯಾಪಕರಿದ್ದಾರೆ? ಬಹುತೇಕ ಕಾಲೇಜುಗಳಲ್ಲಿ ಮೈಲುದ್ದದ ಅಧ್ಯಾಪಕರ ಪಟ್ಟಿಯನ್ನು ತೂಗು ಹಾಕಿರುತ್ತಾರೆ. ಅವರ ಡಿಗ್ರಿಗಳು, ಕಾರ್ಪೊರೇಟ್ ಅನುಭವಗಳು, ಕಂಪೆನಿಗಳು ಕಣ್ಣು ಕೋರೈಸುವಂತೆ ಇರುತ್ತವೆ. ಆದರೆ ಅವರಲ್ಲಿ ಬಹಳ ಜನ ಸಂದರ್ಶಕ ಪ್ರಾಧ್ಯಾಪಕರು ಮಾತ್ರ. ವಿಭಿನ್ನ ಹಿನ್ನೆಲೆಯ ಈ ವಿಸಿಟಿಂಗ್ ಪ್ರೊಫೆಸರ್‌ಗಳು ತಮ್ಮ ಸಂಪೂರ್ಣ ಗಮನವನ್ನು ಕಲಿಸುವ ಕಡೆಗೆ ಕೊಡಲಾಗುವುದಿಲ್ಲ. ಅವರು ನಿಮ್ಮ ಮನೆಗೆ ಆಗಾಗ ಬಂದು ಆತಿಥ್ಯ ಸ್ವೀಕರಿಸಿ ಬೆನ್ನು ತಟ್ಟಿ `ಹೇಗಿದ್ದಿ ಮರಿ~ ಎಂದು ಕೇಳಿ ಎರಡು ಒಳ್ಳೆಯ ಮಾತನಾಡಿ ಹೋಗುವ ಅತಿಥಿ ಇದ್ದಂತೆ. ಆದರೆ ಕಾಯಂ ಅಧ್ಯಾಪಕರು ನಿಮ್ಮ ಮನೆಯ ಸದಸ್ಯರಿದ್ದಂತೆ. ಕಷ್ಟದಲ್ಲಿ ಕಣ್ಣೀರು ಒರೆಸಿ, ಸುಖವನ್ನು ಹಂಚಿಕೊಂಡು ಉತ್ಸಾಹದ ಕೊರತೆಯಾದಾಗ ಉಲ್ಲಾಸ ತುಂಬಿ, ತಪ್ಪು ಮಾಡಿದಾಗ ತಿಳಿ ಹೇಳಿ `ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು~ ಎಂಬಂತೆ. ಎಂಬಿಎ ಕೋರ್ಸ್‌ನ ವಿವಿಧ ವಿಷಯಗಳಲ್ಲಿ ವಿವರಣೆ ಬೇಕಿದ್ದರೆ, ತಿಳಿಯದಿದ್ದರೆ ಸದಾ ನಿಮ್ಮ ಕೈಗೆಟುಕುವ ಮೆಂಟರ್‌ಗಳು ಈ ಪರ್ಮನೆಂಟ್ ಫ್ಯಾಕಲ್ಟಿ ಎಂದರೆ ತಪ್ಪಲ್ಲ. ನಿಮ್ಮ ಕಾಲೇಜು ತಾನು ನಡೆಸುವ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶ ಕೊಡುತ್ತದೆಯೇ? ಬಿ- ಸ್ಕೂಲ್‌ಗಳು `ಮ್ಯೋನೇಜ್‌ಮೆಂಟ್ ಎಂಬ ಕಲೆ ಮತ್ತು ವಿಜ್ಞಾನವನ್ನು~ ಕಲಿಸುವುದರಿಂದ, ವಿದ್ಯಾರ್ಥಿಗಳು ಸ್ವಯಂ ಅನುಭವಿಸಿ ವಿಷಯಗಳನ್ನು ಜೀರ್ಣಿಸಿಕೊಳ್ಳಬೇಕು. ಹಲವಾರು ಪ್ರಮುಖ ಈವೆಂಟ್‌ಗಳು ಅಧ್ಯಾಪಕರ ನಿಯಂತ್ರಣದಲ್ಲೇ ನಡೆಯುತ್ತವೆ. ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳಲ್ಲಿ ಮುಕ್ತವಾಗಿ ಭಾಗವಹಿಸಬೇಕು. ಅದನ್ನು ಬಿಟ್ಟು ಕೇವಲ ಪ್ರೇಕ್ಷಕರ ಗ್ಯಾಲರಿಯಲ್ಲಿ ಕೂತು ಎದ್ದು ಬರಬಾರದು. ಈವೆಂಟ್ ಪೂರ್ತಿಯಾಗುವವರೆಗೆ ಬರುವ ಅನಿರೀಕ್ಷಿತ ತಿರುವುಗಳನ್ನು, ಸಮಸ್ಯೆಗಳನ್ನು ತಾಳ್ಮೆಯಿಂದ ನಿವಾರಿಸುವ ಕಲೆಯನ್ನು ಸ್ವತಃ ಮಾಡಿ ತಿಳಿಯಬೇಕು. ಯೋಜನೆ ತಯಾರಿಸುವ ಹಂತದಿಂದ ಆರಂಭಿಸಿ, ಕೊನೆಯವರೆಗೂ ವಿದ್ಯಾರ್ಥಿಗಳನ್ನೇ ಪ್ರೋತ್ಸಾಹಿಸುವ ಕಾಲೇಜುಗಳು ನಿಮಗೆ ಸೂಕ್ತ. ವಿಷಯಕ್ಕೆ ಸಂಬಂಧಿಸಿದ ಕ್ಲಬ್‌ಗಳು ಇವೆಯೇ? ವಿಷಯಕ್ಕೆ ಸಂಬಂಧಿಸಿದ ಕ್ಲಬ್‌ಗಳು ವಿದ್ಯಾರ್ಥಿಗಳ ಪಠ್ಯ ಹಾಗೂ ಪೂರಕ ಪಠ್ಯ ಚಟುವಟಿಕೆಗಳ ವೇದಿಕೆಯಂತೆ. ಈ ಗುಂಪುಗಳಿಂದ ಪಠ್ಯ ಪುಸ್ತಕಗಳಿಗಿಂತಲೂ ಹೆಚ್ಚಿನ, ತೀವ್ರವಾದ ಜ್ಞಾನವನ್ನು ಹೊಂದಬಹುದು. ಎಚ್‌ಆರ್, ಫೈನಾನ್ಸ್ ಕ್ಲಬ್‌ಗಳು, ಮಾರ್ಕೆಟಿಂಗ್ ಫೋರಂನಂಥ ವೇದಿಕೆಗಳಲ್ಲಿ ಜ್ಞಾನ, ವ್ಯಕ್ತಿತ್ವ ವಿಕಸನದ ಜೊತೆಗೆ ಭಾಷಣ ಕಲೆ ಸಹ ಕರಗತವಾಗುತ್ತದೆ. ನಿಮ್ಮ ಕಾಲೇಜು ಕಲಿಕೆಗೆ ಪೂರಕವಾದ ಕ್ಯಾಂಪಸ್ ಹೊಂದಿದೆಯೆ? ಹಲವಾರು ಕಾಲೇಜುಗಳು ಇಕ್ಕಟ್ಟಾದ ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತವೆ. ನೀವು ಕಲಿಯುವ ವಾತಾವರಣ ನಗರದ ಗೊಂದಲಮಯ ಟ್ರಾಫಿಕ್ ಕಿರಿಕಿರಿಗಳಿಂದ ಮುಕ್ತವಾಗಿದೆಯೇ ಎಂದು ಪರೀಕ್ಷಿಸಿ. ನಿಮ್ಮ ಅಧ್ಯಾಪಕರು ವಿದ್ಯಾರ್ಥಿಗಳ ಬಗ್ಗೆ ವೈಯಕ್ತಿಕ ಗಮನ ಕೊಡುತ್ತಾರಾ? ವಿದ್ಯಾರ್ಥಿಗಳ ಶೈಕ್ಷಣಿಕ ಅವಶ್ಯಕತೆಗಳನ್ನು ಅರಿಯದ ಸೂಕ್ತವಾಗಿ, ಮುಕ್ತವಾಗಿ ಬೆರೆಯದ ಅಧ್ಯಾಪಕರಿದ್ದರೆ ಕಲಿಕೆ ಅಪೂರ್ಣ. ವಿದ್ಯಾರ್ಥಿ- ಗುರುಗಳ ಅಂತರ ದೊಡ್ಡದಾದಲ್ಲಿ ಕಲಿಕೆಗೆ ತೊಂದರೆ. ಗುರು-ಶಿಷ್ಯರ ಮಧ್ಯೆ ಮುಕ್ತ ಸಂವಹನ ಇರಬೇಕು. ಮೆಂಟರಿಂಗ್ ವೈಯಕ್ತಿಕ ನೆಲೆಯಲ್ಲಿ ಆದಷ್ಟೂ ಉತ್ತಮ. ಹಿರಿಯ ವಿದ್ಯಾರ್ಥಿಗಳಿಂದ ಇದರ ಮಾಹಿತಿ ಪಡೆಯಬಹುದು. ಕಾಲೇಜು ಅಗತ್ಯ ಸಂಖ್ಯೆಯ ಇಂಟರ್‌ವ್ಯೆಗಳನ್ನು, ಕ್ಯಾಂಪಸ್ ಪ್ಲೇಸ್‌ಮೆಂಟ್‌ಗಳನ್ನು ಒದಗಿಸುತ್ತದೆಯೇ? ಹಲವಾರು ವಿದ್ಯಾರ್ಥಿಗಳ ಪ್ರಕಾರ ಎಂಬಿಎ ಪದವಿಯ ಪರಮ ಗುರಿ ಒಳ್ಳೆಯ ಸಂಬಳದ ಕೆಲಸ. ಹೀಗಾಗಿ ಪ್ರತಿಷ್ಠಿತ ಕಂಪನಿಗಳು ಕಾಲೇಜಿಗೇ ಬಂದು ನೇಮಕ ಮಾಡಿಕೊಂಡರೆ ಅತ್ಯುತ್ತಮ. ಇದೀಗ ಅನೇಕ ಕಾಲೇಜುಗಳು ಶೇ 100 ಪ್ಲೇಸ್‌ಮೆಂಟ್ ಎಂದು ಜಾಹೀರಾತು ಕೊಡುತ್ತವೆ. ಆದರೆ ಅದರ ನಿಜ ಬಣ್ಣ ಹಳೆಯ ವಿದ್ಯಾರ್ಥಿಗಳನ್ನು ವಿಚಾರಿಸಿದಾಗ ಹೊರಗೆ ಬರುತ್ತದೆ. ಕಾಲೇಜುಗಳು ಉದ್ಯೋಗ ಮೇಳ ಆಯೋಜಿಸುವುದುಂಟು. ಆದ್ದರಿಂದ ಯಾವುದೇ ಕಾಲೇಜು ಸೇರುವ ಮೊದಲೇ ಅಲ್ಲಿಗೆ ಭೇಟಿ ಕೊಡುವ ಕಂಪೆನಿಗಳು, ಸಂಬಳ ಪ್ಯಾಕೇಜ್‌ಗಳು, ತಲಾ ಒಬ್ಬ ವಿದ್ಯಾರ್ಥಿಗೆ ಎಷ್ಟು ಕೆಲಸಗಳ ಆಫರ್‌ಗಳು ಬಂದಿವೆ ಎಂಬುದರ ಮೇಲೆ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ. ಹೀಗಾಗಿ ಮುನ್ನೆಚ್ಚರಿಕೆ ಅಗತ್ಯ. ಕ್ಯಾಂಪಸ್ ಸಂದರ್ಶನದಲ್ಲಿ ಕಂಪೆನಿಗಳು ಆಯಾ ಕಾಲೇಜಿನ ವಿದ್ಯಾರ್ಥಿಗಳಿಗೆ ಕೊಟ್ಟ ಸಂಬಳ ಎಷ್ಟು? ಈ ಕಂಪೆನಿಗಳು ಹೊಸದೇ ಅಥವಾ ಹಳೆಯವೇ? ಸರಾಸರಿ ಸಂಬಳ ಎಷ್ಟು? ಕೊಟ್ಟ ಆಫರ್ ನಿಗದಿತ ಸಮಯದ್ದೇ? ಕಾಯಂ ಅಥವಾ ತಾತ್ಕಾಲಿಕವೇ? ಒಂದು ಪ್ರಾಜೆಕ್ಟ್‌ಗೆ ಮಾತ್ರ ಸಂಬಂಧಿಸಿದ್ದೇ? ಇಂತಹ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಿ. ಕಾಲೇಜಿಗೆ ಭೇಟಿ ನೀಡುವ ವಿವಿಧ ಕೈಗಾರಿಕೆಗಳ, ಕಾರ್ಪೊರೇಟ್‌ಗಳ ಪ್ರತಿನಿಧಿಗಳ ಮಟ್ಟದ ಮೇಲೆ ಕಾಲೇಜಿನ ಗುಣಮಟ್ಟ ಅಳೆಯಬಹುದು. ಇಂತಹ ಪರಿಣಿತರೊಂದಿಗೆ ಮುಖಾಮುಖಿ ಆಗುವುದರಿಂದ ವ್ಯಾಪಾರ ಜಗತ್ತಿನ ನಾಡಿ ಮಿಡಿತ ತಿಳಿಯಬಹುದು. ಕೆಲವು ಬಿ-ಸ್ಕೂಲ್‌ಗಳಲ್ಲಿ 3-4 ವಿದ್ಯಾರ್ಥಿಗಳನ್ನು ಒಬ್ಬ ಕಾರ್ಪೊರೇಟ್ ಪರಿಣಿತ ನಿರಂತರವಾಗಿ ಮೆಂಟರಿಂಗ್ ಮಾಡಿ, ಅವರ ಭವಿಷ್ಯ ರೂಪಿಸುವ ವ್ಯವಸ್ಥೆ ಇದೆ. ಇದಕ್ಕೆ ಕಾರ್ಪೊರೇಟ್ ಮೆಂಟರಿಂಗ್ ಎನ್ನುತ್ತಾರೆ. ಉದ್ಯಮ- ಕಾಲೇಜು ಮುಖಾಮುಖಿಯಿಂದ ಅಧ್ಯಾಪಕರ ಸ್ನೇಹ ಜಾಲ ಬೆಳೆದು ಕಾರ್ಪೊರೇಟ್ ಅಂಗಳದಲ್ಲಿ ಪರಿಚಿತರಾಗಬಹುದು. ಉದ್ಯಮದೊಂದಿಗೆ ಕಾಲೇಜಿನ ಉತ್ತಮ ಸಂಬಂಧ ಸುಲಭವಾಗಿ ಉತ್ತಮ ಅವಕಾಶಗಳನ್ನು ತೆರೆಯುತ್ತದೆ. * ಕಾಲೇಜುಗಳ ಆಯ್ಕೆ ಹೇಗೆ? ನೀವು ಸೇರಬಯಸುವ ಎಲ್ಲಾ ಕಾಲೇಜುಗಳ ಪಟ್ಟಿ ಮಾಡಿ. ಕಾಲೇಜುಗಳಿಗೆ ಭೇಟಿ ನೀಡಿ, ಅಧ್ಯಾಪಕ, ಕಾಲೇಜು ಮುಖ್ಯಸ್ಥ ಮತ್ತು ಕಚೇರಿ ಸಿಬ್ಬಂದಿಯೊಂದಿಗೆ ಚರ್ಚಿಸಿ. ಬಿ-ಸ್ಕೂಲ್‌ಗಳ ವ್ಯವಸ್ಥೆ, ಸವಲತ್ತುಗಳು, ಮೂಲ ಸೌಕರ್ಯಗಳನ್ನು ಅರಿತ ಮೇಲೆ ನಿಮ್ಮ ನಿರ್ಧಾರ ಸುಲಭ. ಬರೀ ರಸ್ತೆ ಬದಿಯ ಆಯಕಟ್ಟಾದ ಜಾಗೆಗಳಲ್ಲಿ ವರ್ಣರಂಜಿತವಾಗಿ ಝಗಮಗಿಸುವ ಫ್ಲೆಕ್ಸ್‌ಗಳ ಆಧಾರದ ಮೇಲೆ ಕಾಲೇಜು ಆಯ್ಕೆ ಮಾಡಬೇಡಿ. ಕಾಲೇಜು ನಿಮ್ಮ ವ್ಯಕ್ತಿತ್ವ ವಿಕಸನ, ಕೌಶಲಗಳು, ಜ್ಞಾನ ಬೆಳೆಯುವ ಜ್ಞಾನ ಸರೋವರ. ಬಿ-ಸ್ಕೂಲ್‌ಗಳು ಒದಗಿಸುವ ಸೌಲಭ್ಯಗಳು, ಅವಕಾಶಗಳನ್ನು ವಿದ್ಯಾರ್ಥಿಗಳು ಬಳಸಿಕೊಂಡು ಕಾರ್ಪೊರೇಟ್ ಕರಿಯರ್‌ಗೆ ತಯಾರಾಗಬೇಕು. ಬಿ-ಸ್ಕೂಲ್‌ಗಳು ವ್ಯಾಯಾಮ ಶಾಲೆಗಳಿದ್ದಂತೆ. ಆದರೆ ಅದರಲ್ಲಿರುವ ವಿವಿಧ ಕಸರತ್ತಿನ ಸಲಕರಣೆಗಳು ನಿಮ್ಮನ್ನು ಬಾಡಿ ಬಿಲ್ಡರ್ ಆಗಿಸಲಾರವು. ಆಸಕ್ತಿ ಇರುವವರು ಮಾತ್ರ ಕಷ್ಟ ಪಟ್ಟು, ಬೆವರು ಹರಿಸಿ, ಸಿಲ್ವೆಸ್ಟರ್ ಸ್ಟೆಲೋನ್ ತರ ಬಾಡಿ ಬಿಲ್ಡರ್ ಆಗಬಲ್ಲರು. ಜಿಮ್‌ನ ಪ್ರವೇಶ ಪಡೆದು, ಫೀಸು ಕಟ್ಟುವುದರಿಂದ ನಿಮ್ಮ ದೇಹ ಹೇಗೆ ಬೆಳೆಯುವುದಿಲ್ಲವೋ ಹಾಗೆಯೇ ಅತ್ಯುತ್ತಮ ಬಿ-ಸ್ಕೂಲ್‌ಗೆ ಪ್ರವೇಶ ಪಡೆಯುವುದರಿಂದ ನೀವು ಅತ್ಯುತ್ತಮ ಮ್ಯೋನೇಜರ್ ಆಗುವುದಿಲ್ಲ. ನೀವು ಸ್ವತಃ ಕಷ್ಟಪಟ್ಟು ಓದಿ, ವಿಷಯಗಳನ್ನರಿತು, ಸಂದೇಹಗಳಿದ್ದಲ್ಲಿ ಪರಿಹರಿಸಿಕೊಂಡು, ಪ್ರತಿ ಚಟುವಟಿಕೆಯಲ್ಲಿ ಮುನ್ನುಗ್ಗಿ ತೊಡಗಿಸಿಕೊಳ್ಳಬೇಕು. ನಿಮ್ಮ ಬಿ-ಸ್ಕೂಲ್ ಶೋಧಕ್ಕೆ ಇದೋ ನಮ್ಮ ಶುಭ ಹಾರೈಕೆಗಳು. ಅಖಾಡ ನಿಮಗಾಗಿ ಸಿದ್ಧವಾಗಿದೆ. ಮುನ್ನುಗ್ಗಿ. ಮಾಹಿತಿಗೆ ಸಿ.ಎಂ. ಹಿರೇಮಠ (98443 59844). (ಲೇಖಕರು ದಾವಣಗೆರೆ ಬಾಪೂಜಿ ಬಿ-ಸ್ಕೂಲ್ಸ್ ನಿರ್ದೇಶಕರು) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.