ನೆಮ್ಮದಿಯ ನೌಕರಿಗೆ ನೆರವು ವೃತ್ತಿ ಜೀವನದಲ್ಲಿ ನಾಲ್ಕು ವರ್ಷ ಕಳೆದ ಹಲವರಿಗೆ `ನಾನು ಎಲ್ಲೋ ಇರಬೇಕಿತ್ತು. ನನ್ನ ಗ್ರಹಚಾರ ಇಲ್ಲಿಗೆ ಬಂದಿದ್ದೇನೆ. ನನಗೆ ಆಸಕ್ತಿ ಇರುವ ಕೆಲಸವೇ ಬೇರೆ, ಮಾಡುತ್ತಿರುವುದೇ ಬೇರೆ~ ಹೀಗೆ ನಾನಾ ಯೋಚನೆಗಳು ಸ್ಮೃತಿಪಟಲದಲ್ಲಿ ಹಾದು ಹೋಗುತ್ತಿರುತ್ತವೆ. ವರ್ಷಗಳು ಉರುಳುತ್ತಿದ್ದಂತೆ ವೃತ್ತಿ ಜೀವನದ ಜಾತಕ `ರೆಸ್ಯೂಮೆ~ಯ ಗಾತ್ರವೂ ಹೆಚ್ಚುತ್ತದೆ. ಹೊಸ ಅನುಭವಗಳೂ ಸೇರುತ್ತಾ ಹೋಗುತ್ತವೆ. ಆದರೆ ಅಂದುಕೊಂಡಿದ್ದು ಹಾಗೆಯೇ ಉಳಿದುಬಿಡುತ್ತದೆ. ಇನ್ನೊಂದೆಡೆ ಕಂಪೆನಿಗಳೂ ಸಹ ಲಭ್ಯವಿರುವ ಕೆಲವೊಂದು ಕೆಲಸ ಕೊಡಿಸುವ ತಾಣಗಳಿಂದ ಸಾವಿರ ರೆಸ್ಯೂಮೆಗಳನ್ನು ಪಡೆದು ಅವುಗಳಿಂದ 50 ಅಭ್ಯರ್ಥಿಗಳನ್ನು ಹೆಕ್ಕಿ ಸಂದರ್ಶನಕ್ಕೆ ಆಹ್ವಾನಿಸಿ ಅವರಲ್ಲಿ ಐವರನ್ನು ಕೆಲಸಕ್ಕೆ ನೇಮಿಸಿಕೊಳ್ಳುತ್ತಾರೆ. ಅವರಲ್ಲಿ ಮೊದಲ ಆರು ತಿಂಗಳಲ್ಲಿ ಒಬ್ಬ ಅಭ್ಯರ್ಥಿ ಕೆಲಸ ಬಿಟ್ಟರೆ, ಮುಂದಿನ ಆರು ತಿಂಗಳಲ್ಲಿ ಮತ್ತೊಬ್ಬ ಕೆಲಸ ಬಿಡುತ್ತಾನೆ. ಹೀಗೆ ಕಂಪೆನಿಗಳೂ ಸಹ ತಮ್ಮಲ್ಲಿರುವ ವೃತ್ತಿಯನ್ನು ಇಷ್ಟಪಟ್ಟು ಕೆಲಸ ಮಾಡುವ ಅಭ್ಯರ್ಥಿ ಸಿಗದೆ ಪರದಾಡುತ್ತಿವೆ. ಈ ಹಂತದಲ್ಲಿ ಲುಕ್‌ಬಿಯಾಂಡ್‌ರೆಸ್ಯೂಮ್ಸ (://../) ಅಭ್ಯರ್ಥಿ ಹಾಗೂ ನೌಕರಿ ನೀಡುವ ಕಂಪೆನಿ ಎರಡಕ್ಕೂ ನೆರವಾಗಲಿದೆ. ಭಾರತ ಸದ್ಯದ ಪರಿಸ್ಥಿತಿಯಲ್ಲಿ ಶೇ 30ರಿಂದ 50ರಷ್ಟು ಆ್ಯಟ್ರಿಷನ್ (ನೌಕರ ಸಂಖ್ಯೆ ಇಳಿಮುಖ) ಸಮಸ್ಯೆ ಎದುರಿಸುತ್ತಿದೆ. ಈ ಹಂತದಲ್ಲಿ ಬಹುಶಃ ಎರಡು ಪ್ರಮುಖ ವ್ಯತ್ಯಾಸಗಳು ಕಂಡುಬರುತ್ತಿವೆ. ಅದೇನೆಂದರೆ ನಮ್ಮ ಮುಂದೆ ಸ್ಪಷ್ಟ ಚಿತ್ರಣವಿದೆ. ಆದರೆ ಅದಕ್ಕೆ ಸೂಕ್ತ ಅಭ್ಯರ್ಥಿಗಳು ಸಿಗುತ್ತಿಲ್ಲ ಅಥವಾ ನಮ್ಮ ಚಿತ್ರಣವೇ ಅಸ್ಪಷ್ಟ ಹಾಗೂ ಸೂಕ್ತ ಅಭ್ಯರ್ಥಿಗಳು ಸರಿಯಾಗಿ ಸಿಗುತ್ತಿಲ್ಲ ಎಂಬುದು. ಈ ಸಮಸ್ಯೆ ನಿವಾರಿಸಲು `ಲುಕ್‌ಬಿಯಾಂಡ್‌ರೆಸ್ಯುಮೆ~ಯು ಕ್ಷೇತ್ರದಲ್ಲಿರುವ ಪ್ರಸಿದ್ಧ ವಿಶ್ಲೇಷಕರ ತಂಡವೊಂದನ್ನು ಕಟ್ಟಿಕೊಂಡು ತನ್ನದೇ ಆದ ಗಣನ ವಿಧಾನ ಪದ್ಧತಿಯನ್ನು ಅನುಸರಿಸಿಕೊಂಡು ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿದೆ. ವೃತ್ತಿ ಜೀವನದಲ್ಲಿ ಗೊಂದಲಕ್ಕೆ ಒಳಗಾದವರಿಗೆ ಇದರ ಮೂಲಕ ಸರಿಯಾದ ಮಾರ್ಗದರ್ಶನ ನೀಡಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಮಾಡುವುದೇ ಸಂಸ್ಥೆಯ ಮೂಲ ಉದ್ದೇಶ. ವೈಯಕ್ತಿಕವಾಗಿ ಹಾಗೂ ಕಾರ್ಪೊರೇಟ್ ಕಂಪನಿಗಳಿಗೆ ವಿಶ್ಲೇಷಣೆಯ ಮಹತ್ವ ಹಾಗೂ ಅದರ ಮೂಲಕ ತೆಗೆದುಕೊಳ್ಳಬಹುದಾದ ಸರಿಯಾದ ನಿರ್ಧಾರದ ಕುರಿತು ಸೂಕ್ತ ಮಾರ್ಗದರ್ಶನ ನೀಡುವುದೇ ಇವರ ಕಾಯಕ. ಹೀಗಾಗಿ ಲುಕ್‌ಬಿಯಾಂಡ್‌ರೆಸ್ಯೂಮ್ಸನ ಈ ಅನ್ವೇಷಣೆಗಾಗಿ ಅವರ ಜಾಲತಾಣಕ್ಕೆ ಲಾಗಾನ್ ಆದರೆ ಸಾಕು. ಅಲ್ಲಿ ಕೆಲವು ಸರಳ ವಿವರಗಳನ್ನು ನೀಡಿದರೆ ನಿಮ್ಮದೊಂದು ಖಾತೆ ತೆರೆಯುತ್ತದೆ. ನಂತರ ಮೊದಲೇ ಪ್ರೋಗ್ರಾಂ ಮಾಡಿರುವ ಸೈಕೋಮೆಟ್ರಿಕ್ ಕಿರುಪರೀಕ್ಷೆಯಲ್ಲಿ ಕೆಲವು ಸರಳ ಪ್ರಶ್ನೆಗಳಿಗೆ ಉತ್ತರಿಸಿದರೆ ನಮಗೇ ಗೊತ್ತಿಲ್ಲದ ಕೆಲವೊಂದು ಮಾಹಿತಿಗಳನ್ನು ಅದು ನೀಡಲಿದೆ. ಅಂದರೆ ಎಂಟು ನಿಮಿಷಗಳಲ್ಲಿ ಹನ್ನೆರಡು ಸರಳವಾದ, ನಮ್ಮನ್ನು ನಾವೇ ಪ್ರಶ್ನೆ ಮಾಡಿಕೊಳ್ಳುವಂತೆ ಪ್ರಶ್ನೆಗಳು ಅಲ್ಲಿವೆ. ಅವುಗಳಿಗೆ ನಾಲ್ಕು ಉತ್ತರಗಳಿರುತ್ತವೆ. ಅವುಗಳಲ್ಲಿ ನಮಗೆ ಹಾಗೂ ನಮ್ಮ ಮನಸ್ಥಿತಿಗೆ ಸರಿ ಹೊಂದುವ ಉತ್ತರವೊಂದನ್ನು ಆಯ್ಕೆ ಮಾಡಬೇಕು. ಹೀಗೆ ನೀಡಿದ ಉತ್ತರವನ್ನು ಆಧರಿಸಿ ಒಂದು ಕಂಪೆನಿಗೆ ನಾವು ಹೇಗೆ ಸೂಕ್ತ ಅಭ್ಯರ್ಥಿ ಎಂಬುದನ್ನು ಅದು ತೋರಿಸಲಿದೆ. ಇದೇ ಸಂದರ್ಭದಲ್ಲಿ ಯಾವ ಕಂಪೆನಿ ನಮ್ಮ ಮನಃಸ್ಥಿತಿಗೆ ಸರಿ ಹೊಂದುತ್ತದೆ ಎಂಬ ಮಾಹಿತಿಯನ್ನೂ ನೀಡಲಿದೆ. ಅಭ್ಯರ್ಥಿಯ ರೆಸ್ಯೂಮೆಗಿಂತ ಅಭ್ಯರ್ಥಿ ನೀಡುವ ಕೆಲವೊಂದು ಉಪಯುಕ್ತ ಮಾಹಿತಿಯನ್ನೇ ಆಧರಿಸಿ ಕಂಪೆನಿಯೊಂದಿಗೆ ಬೆಸೆಯುವ ಮೂಲಕ ಗುರಿ ಸಾಧನೆಗೆ ಉತ್ತಮ ತಂಡ ಕಟ್ಟಿಕೊಳ್ಳಲು ಕಂಪೆನಿಗಳಿಗೂ ನೆರವಾಗಿದೆ. `ರೆಡ್‌ವುಡ್ ಎಂಬ ವಿಶ್ಲೇಷಣಾ ಸಂಸ್ಥೆಯ ಸಹ ಸಂಸ್ಥೆಯಾಗಿರುವ ಲುಕ್‌ಬಿಯಾಂಡ್‌ರೆಸ್ಯೂಮ್ಸ ಬೆಂಗಳೂರಿನ ತನ್ನ ಕೇಂದ್ರದಲ್ಲಿ ವೃತ್ತಿ ಕುರಿತು ಗೊಂದಲಕ್ಕೀಡಾದವರಿಗೆ ಮಾರ್ಗದರ್ಶನ ನೀಡುವ ಹಾಗೂ ಅವರ ಮಾಹಿತಿ ಮೇಲೆ ವಿಶ್ಲೇಷಣೆ ನಡೆಸುವ ಕಾರ್ಯವನ್ನು ನಡೆಸುತ್ತಿದೆ. ಈಗಾಗಲೇ ನೌಕರಿಯಲ್ಲಿರುವ ಉದ್ಯೋಗಿಗಳಿಗಾಗಿ 12 ವಾರಗಳ ತರಗತಿ ಹಾಗೂ ವೃತ್ತಿಯಲ್ಲಿ ಇಲ್ಲದವರಿಗಾಗಿ 140 ಗಂಟೆಗಳ ತರಗತಿಯನ್ನು ನಡೆಸುತ್ತಿದೆ. ಇದುವರೆಗೆ ಹತ್ತು ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಉದ್ಯೋಗ ಕೊಡಿಸಿದೆ. 120 ಕಾರ್ಪೊರೇಟ್ ಕಂಪೆನಿಗಳಿಗೆ ಸೂಕ್ತ ಅಭ್ಯರ್ಥಿಗಳನ್ನು ನೀಡಿದೆ. ಪ್ರಸ್ತುತ ಐಟಿ ಹಾಗೂ ಐಟಿಇಎಸ್ ಕ್ಷೇತ್ರದತ್ತ ಮಾತ್ರ ಗಮನ ಹರಿಸಿದೆ. ಮುಂದೆ ಕಾರ್ಪೊರೇಟ್ ವಲಯದ ಎಲ್ಲಾ ಕ್ಷೇತ್ರವನ್ನೂ ತಲುಪುವುದು ನಮ್ಮ ಗುರಿ~ ಎಂದು ಸಂಸ್ಥೆಯ ಸಿಒಒ ಪವನ್ ಹೇಳುತ್ತಾರೆ. ಜಾಗತಿಕ ಆರ್ಥಿಕ ಸಂಕಷ್ಟ, ಡಾಲರ್ ಎದುರು ರೂಪಾಯಿ ಅಪಮೌಲ್ಯ ಇತ್ಯಾದಿ ಸಂಗತಿಗಳಿಂದ ಕಂಗೆಟ್ಟಿರುವ ಕಂಪೆನಿಗಳೂ ಸಹ ತಮ್ಮಂದಿಗೆ ದೀರ್ಘಕಾಲದವರೆಗೆ ಕೆಲಸ ಮಾಡುವಂಥ ಹಾಗೂ ಇಲ್ಲಿರುವ ಕೆಲಸವನ್ನು ಇಷ್ಟ ಪಡುವಂಥ ಅಭ್ಯರ್ಥಿಯನ್ನೇ ಅಪೇಕ್ಷಿಸುತ್ತವೆ. ಮಾರುಕಟ್ಟೆಯಲ್ಲಿ ಉತ್ತಮ ಅಭ್ಯರ್ಥಿಗಳಿಗೇನೂ ಕೊರತೆ ಇಲ್ಲ. ಆದರೆ ಕಂಪೆನಿಯ ಗುರಿ ಹಾಗೂ ಧ್ಯೇಯದಲ್ಲಿ ತನ್ನ ಪಾಲೂ ಇದೆ ಎನ್ನುವ ಅಭ್ಯರ್ಥಿ ಬೇಕೆನ್ನುವುದು ಕಂಪೆನಿಗಳ ಬಯಕೆ. ಈ ಹಂತದಲ್ಲಿ ಇಬ್ಬರನ್ನೂ ಒಂದುಗೂಡಿಸುವ ಕಾರ್ಯವನ್ನು ಲುಕ್‌ಬಿಯಾಂಡ್‌ರೆಸ್ಯೂಮ್ಸ ಮಾಡಲಿದೆ. ತಾನು ಅಭಿವೃದ್ಧಿಪಡಿಸಿರುವ ಸಾಫ್ಟ್‌ವೇರ್ ಮೂಲಕ ಅಭ್ಯರ್ಥಿಯು ತನ್ನ ಜೀವನದಲ್ಲಿ ನೆಮ್ಮದಿಯ ವೃತ್ತಿ ಕಂಡುಕೊಳ್ಳಲು ಸಹಕಾರಿಯಾದರೆ, ಕಂಪನಿಗಳೂ ಸಹ ವೃತ್ತಿಯನ್ನು ಇಷ್ಟಪಡುವ ಅಭ್ಯರ್ಥಿಗಳನ್ನು ಪಡೆದು ಧನ್ಯವಾಗುತ್ತವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.