ಕ್ಯಾಂಪಸ್ ಟಾಪ್ಮಿಗೆ ಮಾನ್ಯತೆ ಮಣಿಪಾಲದ ಟಿ ಎ ಪೈ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ (ಟಾಪ್ಮಿ) ಸ್ನಾತಕೋತ್ತರ ಶಿಕ್ಷಣ ಕಾರ್ಯಕ್ರಮಕ್ಕೆ ಪ್ರತಿಷ್ಠಿತ ಎಎಸಿಎಸ್‌ಬಿ ಅಂತರ‌್ರಾಷ್ಟ್ರೀಯ ಮಾನ್ಯತೆ ದೊರೆತಿದೆ. ಇದು ಭಾರತದಲ್ಲಿ ಈ ಮಾನ್ಯತೆ ಪಡೆದ ಎರಡನೇ ಮ್ಯಾನೇಜ್‌ಮೆಂಟ್ ಶಿಕ್ಷಣ ಸಂಸ್ಥೆ. ವಿಶ್ವದಲ್ಲಿ ಶೇ 5ಕ್ಕೂ ಕಡಿಮೆ ಕಾಲೇಜುಗಳಷ್ಟೇ ಈ ಮಾನ್ಯತೆ ಪಡೆಯಲು ಶಕ್ತವಾಗಿವೆ. ಅಸೋಸಿಯೇಷನ್ ಆಫ್ ಅಡ್ವಾನ್ಸ್ ಕಾಲೇಜಿಯೇಟ್ ಸ್ಕೂಲ್ ಆಫ್ ಬಿಜಿನೆಸ್ (ಎಎಸಿಎಸ್‌ಬಿ) ವಿಶ್ವದ ಅತ್ಯಂತ ಹಳೆಯ ಮ್ಯಾನೇಜ್‌ಮೆಂಟ್ ಶಿಕ್ಷಣ ಗುಣಮಟ್ಟ ಮಾನ್ಯತಾ ಸಂಘಟನೆ (1916). ಇದರ ಮುಖ್ಯ ಕಚೇರಿ ಅಮೆರಿಕದ ಫ್ಲಾರಿಡಾದ ಟಾಂಪಾದಲ್ಲಿದೆ. ಟ್ಯಾಲೆಂಟ್ ಸ್ಪ್ರಿಂಟ್‌ನ ಬ್ಯಾಂಕಿಂಗ್ ತರಬೇತಿ ಮಾಹಿತಿ ತಂತ್ರಜ್ಞಾನ ಮತ್ತು ಬ್ಯಾಂಕಿಂಗ್, ವಿಮಾ, ಹಣಕಾಸು ಕ್ಷೇತ್ರಕ್ಕೆ ಬೇಕಾದ ವೃತ್ತಿಪರರನ್ನು ತರಬೇತುಗೊಳಿಸುವ `ಟ್ಯಾಲೆಂಟ್ ಸ್ಪ್ರಿಂಟ್~, ಬೆಂಗಳೂರಿನ ಕಲ್ಯಾಣ ನಗರದ ಇಂಡೋ ಏಷ್ಯನ್ ಕಾಲೇಜಿನಲ್ಲಿ ಆರ್ಥಿಕ ಕ್ಷೇತ್ರದ ಪರಿಣತಿ ಕೇಂದ್ರ ತೆರೆದಿದೆ. ಇಲ್ಲಿ ಬ್ಯಾಂಕ್ ಪರೀಕ್ಷೆ ಬರೆಯುವವರಿಗೆ ಅಗತ್ಯ ತರಬೇತಿ ನೀಡಲಾಗುತ್ತದೆ. ಬ್ಯಾಂಕಿಂಗ್, ಹಣಕಾಸು ಸೇವೆ ಮತ್ತು ವಿಮಾ ಕ್ಷೇತ್ರದಲ್ಲಿ (ಬಿಎಫ್‌ಎಸ್‌ಐ) ಸರ್ಟಿಫಿಕೇಟ್ ಕೋರ್ಸ್ ನಡೆಸಲಾಗುತ್ತದೆ. ಬ್ಯಾಂಕ್ ಪರೀಕ್ಷೆ ಬರೆಯುವವರಿಗೆ ಮತ್ತು ಹಣಕಾಸು ಕ್ಷೇತ್ರದಲ್ಲಿ ವೃತ್ತಿ ಕಂಡುಕೊಳ್ಳಲು ಬಯಸುವವರಿಗೆ ಇದು ಸಹಕಾರಿ. ಪದವೀಧರರು ಮತ್ತು ಪದವಿ ಓದುತ್ತಿರುವವರು ಮೂರು ತಿಂಗಳ ಈ ಕೋರ್ಸ್‌ಗಳಿಗೆ ಸೇರಬಹುದು. ಮಾಹಿತಿಗೆ 99802 43854. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.