ವಿಜ್ಞಾನಿಯಾಗಲು ಕೆವಿಪಿವೈ ಶಿಷ್ಯವೇತನ ಅಂತರ‌್ರಾಷ್ಟ್ರೀಯ ಮಟ್ಟದಲ್ಲಿ ಭಾರತವು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮನ್ನಣೆ ಪಡೆಯುತ್ತಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಭಾರತದ ಸುಶಿಕ್ಷಿತ ಯುವಶಕ್ತಿ. ಆದ್ದರಿಂದಲೇ ಭಾರತೀಯ ಯುವಜನರಿಗೆ ವಿದೇಶಗಳಲ್ಲಿ ಬೇಡಿಕೆ ಹೆಚ್ಚುತ್ತಿದೆ. ಉನ್ನತ ಸ್ಥಾನಮಾನ ಹಾಗೂ ಹೆಚ್ಚಿನ ಸಂಬಳಕ್ಕಾಗಿ ಯುವ ಸಮೂಹ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕಾರ್ಯ ನಿರ್ವಹಿಸಲು ಹಾತೊರೆಯುತ್ತಿದೆ. ಆದರೆ ದೇಶದ ಪ್ರಗತಿಯನ್ನು ನಿರ್ಧರಿಸುವುದು ವೈಜ್ಞಾನಿಕ ಕ್ಷೇತ್ರದಲ್ಲಿನ ಸಂಶೋಧನೆಗಳು. ಇದರಲ್ಲಿ ತೊಡಗಿಕೊಂಡು ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸಬೇಕಾದ ಯುವ ಪ್ರತಿಭೆಗಳು ಮೂಲ ವಿಜ್ಞಾನ ಕ್ಷೇತ್ರಗಳಿಂದ ದೂರ ಸರಿಯುತ್ತಾ ದೇಶದ ಕುರಿತಾದ ತಮ್ಮ ಕರ್ತವ್ಯಗಳಿಂದ ವಿಮುಖರಾಗುತ್ತಿದ್ದಾರೆ. ಆದ್ದರಿಂದ ಮೂಲ ವಿಜ್ಞಾನದೆಡೆಗೆ ಪ್ರತಿಭಾನ್ವಿತರನ್ನು ಆಕರ್ಷಿಸಿ ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳಲು ಅವರನ್ನು ಪ್ರೇರೇಪಿಸಬೇಕು. ಈಗಾಗಲೇ ಈ ಕುರಿತು ಹಲವು ಪ್ರಯತ್ನಗಳು ಆರಂಭವಾಗಿವೆ. ಆದರೂ ಅವುಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಕಾರ್ಯ ನಡೆಯಬೇಕಿದೆ. ಅದಕ್ಕಾಗಿ ಶಾಲಾ- ಕಾಲೇಜು ಮಟ್ಟದಿಂದಲೇ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಮೂಲವಿಜ್ಞಾನದ ಸಂಶೋಧನಾ ಕ್ಷೇತ್ರದೆಡೆಗೆ ಸೆಳೆಯಲು ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ 1999ರಿಂದ ರಾಷ್ಟ್ರಮಟ್ಟದಲ್ಲಿ `ಕಿಶೋರ ವೈಜ್ಞಾನಿಕ ಪ್ರೋತ್ಸಾಹನ ಯೋಜನೆ~ (ಕೆವಿಪಿವೈ) ಎಂಬ ಫೆಲೋಶಿಪ್ ನೀಡುತ್ತಿದೆ. ಇಲ್ಲಿ ಪ್ರತಿಭಾನ್ವಿತರನ್ನು ಗುರುತಿಸಿ ಪ್ರೋತ್ಸಾಹಿಸುವುದಲ್ಲದೇ, ದೇಶದ ಅತ್ಯುನ್ನತ ವಿಜ್ಞಾನ ಸಂಸ್ಥೆಗಳಲ್ಲಿ ಬೇಸಿಗೆ ಶಿಬಿರಗಳನ್ನು ಆಯೋಜಿಸಿ ಆ ಮೂಲಕ ಅವರ ಸಾಮರ್ಥ್ಯಗಳನ್ನು ಅರಿಯಲು ಸಹಾಯ ಮಾಡಲಾಗುತ್ತದೆ. ಈ ಯೋಜನೆಯಲ್ಲಿ ವಿದ್ಯಾರ್ಥಿಗಳಿಗೆ ಪಿಎಚ್‌ಡಿ ಹಂತದವರೆಗೆ ಹಣಕಾಸಿನ ಅನುದಾನವನ್ನು ನೀಡಲಾಗುತ್ತದೆ. ಮೂಲವಿಜ್ಞಾನದಲ್ಲಿ ಸಾಧನೆ ಮಾಡುವ ಉತ್ಕಟ ಇಚ್ಛೆಯುಳ್ಳ ವಿದ್ಯಾರ್ಥಿಗಳಿಗೆ ಕೆವಿಪಿವೈ ಉತ್ತಮ ವೇದಿಕೆ. ಬೇಸಿಗೆ ಶಿಬಿರಗಳಲ್ಲಿ ದೇಶದ ಅತ್ಯುನ್ನತ ವಿಜ್ಞಾನ ಸಂಸ್ಥೆಗಳಲ್ಲಿ ಉತ್ಕೃಷ್ಟ ತರಬೇತುದಾರರಿಂದ ತರಬೇತಿ ಪಡೆಯುವ ಅವಕಾಶ ಇರುತ್ತದೆ. ಸಂಶೋಧನಾರ್ಥಿಗಳಿಗೆ ದೇಶದ ಪ್ರಖ್ಯಾತ ವಿಜ್ಞಾನಿಗಳಿಂದ ಮಾರ್ಗದರ್ಶನವೂ ಲಭಿಸುತ್ತದೆ. ಭಾರತೀಯ ವಿಜ್ಞಾನ ಸಂಸ್ಥೆಗಳಲ್ಲಿ (ಐಐಎಸ್‌ಸಿ) ಪದವಿ ಹಾಗೂ ಇಂಟೆಗ್ರೇಟೆಡ್ ಎಂಎಸ್ಸಿ ಕೋರ್ಸ್‌ಗಳಿಗೆ ಕೆವಿಪಿವೈನಲ್ಲಿ ಪಡೆದ ಅಂಕಗಳನ್ನೇ ಆಯ್ಕೆಯ ಮಾನದಂಡವಾಗಿ ಪರಿಗಣಿಸಲಾಗುತ್ತದೆ. ಕೆವಿಪಿವೈ ಪರೀಕ್ಷೆಗಳು ದೇಶದಾದ್ಯಂತ ಅತ್ಯಂತ ಹೆಸರುವಾಸಿ. ಅರ್ಜಿ ಸಲ್ಲಿಸುವುದು ಹೇಗೆ ಪ್ರತಿ ಸ್ಟ್ರೀಮ್‌ಗೂ ಪ್ರತ್ಯೇಕ ಅರ್ಜಿ ಇರುತ್ತದೆ. ಆಸಕ್ತ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅಥವಾ ಕೆವಿಪಿವೈ ಸಂಚಾಲಕರಿಗೆ ಸ್ವವಿಳಾಸ ಹೊಂದಿದ ಲಕೋಟೆಯೊಂದಿಗೆ ಮನವಿ ಸಲ್ಲಿಸುವ ಮೂಲಕ ಅರ್ಜಿ ನಮೂನೆಯನ್ನು ತರಿಸಿಕೊಂಡು ಸೂಕ್ತವಾದ ಸ್ಟ್ರೀಮ್‌ಗೆ ಅರ್ಜಿ ಸಲ್ಲಿಸಬಹುದಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ... ಗೆ ಲಾಗಿನ್ ಮಾಡಬೇಕು. ಅರ್ಜಿ ಸಲ್ಲಿಸುವಾಗ ಸಂಸ್ಕರಣಾ ಶುಲ್ಕವಾಗಿ ರೂ. 200ನ್ನು (ಪರಿಶಿಷ್ಟರಿಗೆ ರೂ. 100) ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ಪೇ ಇನ್ ಸ್ಲಿಪ್ (ಇದನ್ನು ವೆಬ್‌ಸೈಟ್‌ನಿಂದಲೂ ಡೌನ್‌ಲೋಡ್ ಮಾಡಿಕೊಳ್ಳಬಹುದು) ಮೂಲಕ ಕಿಶೋರ ವೈಜ್ಞಾನಿಕ ಪ್ರೋತ್ಸಾಹನ ಯೋಜನೆಯ ಖಾತೆಗೆ (ಖಾತೆ ನಂ. 10270577392) ಪಾವತಿಸಬೇಕು. ವಿದ್ಯಾರ್ಥಿನಿಯರಿಗೆ ಹಾಗೂ ವಿಕಲಾಂಗರಿಗೆ ಶುಲ್ಕ ವಿನಾಯ್ತಿ ಇರುತ್ತದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ತಮ್ಮ ಭಾವಚಿತ್ರ ಹಾಗೂ ಸಹಿಗಳನ್ನು ಪ್ರತ್ಯೇಕವಾಗಿ ಸ್ಕ್ಯಾನ್ ಮಾಡಿಸಿ ಆನ್‌ಲೈನ್ ಅರ್ಜಿಯಲ್ಲಿ ಅಪ್‌ಲೋಡ್ ಮಾಡಬೇಕು. ನಂತರ ಭರ್ತಿ ಮಾಡಿದ ಆನ್‌ಲೈನ್ ಅರ್ಜಿಯ ಪುಟವನ್ನು ಮುದ್ರಿಸಿಟ್ಟುಕೊಳ್ಳಬೇಕು. ಅರ್ಜಿ ಪ್ರತಿಗಾಗಿ ಸಂಚಾಲಕರಿಗೆ ಮನವಿ ಸಲ್ಲಿಸುವಾಗ ಲಕೋಟೆಯ ಮೇಲೆ ಸ್ಟ್ರೀಮ್ ಹೆಸರನ್ನು ಸ್ಪಷ್ಟವಾಗಿ ನಮೂದಿಸಬೇಕು. ಅರ್ಜಿ ಸಲ್ಲಿಕೆ ಅವಧಿ ಅಂಚೆ ಮೂಲಕ ಸೆಪ್ಟೆಂಬರ್ 3 ಹಾಗೂ ಖುದ್ದಾಗಿ ಸೆಪ್ಟೆಂಬರ್ 7ರ ಒಳಗೆ ಅರ್ಜಿಗೆ ಮನವಿ ಸಲ್ಲಿಸಬಹುದು. ಆನ್‌ಲೈನ್ ಮೂಲಕ ಸಲ್ಲಿಸಲು ಸೆಪ್ಟೆಂಬರ್ 7 ಕೊನೆಯ ದಿನ. ಆನ್‌ಲೈನ್ ಅರ್ಜಿಯ ಮುದ್ರಿತ ಪ್ರತಿ ಅಥವಾ ಮನವಿ ಮೂಲಕ ಪಡೆದು ಭರ್ತಿ ಮಾಡಿದ ಅರ್ಜಿ ನಮೂನೆಗಳನ್ನು ಸೂಕ್ತ ದಾಖಲೆಗಳೊಂದಿಗೆ (ಅರ್ಹತಾ ಪರೀಕ್ಷೆಯ ಅಂಕಪಟ್ಟಿಯ ಪ್ರತಿ, ಜಾತಿ ಪ್ರಮಾಣ ಪತ್ರದ ಪ್ರತಿ, ಶುಲ್ಕ ತುಂಬಿದ ಪೆ ಇನ್ ಸ್ಲಿಪ್) ಸೆಪ್ಟೆಂಬರ್ 12 ರ ಒಳಗೆ ತಲುಪುವಂತೆ `ಸಂಚಾಲಕರು, ಕೆವಿಪಿವೈ, ಭಾರತೀಯ ವಿಜ್ಞಾನ ಸಂಸ್ಥೆ ಆವರಣ, ಯಶವಂತಪುರ, ಬೆಂಗಳೂರು 560012~ ಈ ವಿಳಾಸಕ್ಕೆ ಕಳಿಸಬೇಕು. ಅರ್ಹತೆ, ಅರ್ಜಿ ವಿಧಾನ ಪಿಯುಸಿ ಹಂತದಲ್ಲಿ ಕಲಿಯುತ್ತಿರುವ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಪಾಸಾಗಿ ವಿವಿಧ ಪದವಿಗಳಿಗೆ ನೋಂದಾಯಿಸಿದ (ಬಿಎಸ್ಸಿ, ಬಿಎಸ್, ಇಂಟೆಗ್ರೇಟೆಡ್ ಎಂಎಸ್ಸಿ, ಎಂಎಸ್) ವಿದ್ಯಾರ್ಥಿಗಳು ಆಯಾ ಸ್ಟ್ರೀಮ್‌ನಡಿ ಅರ್ಜಿ ಸಲ್ಲಿಸಬಹುದು. ಸ್ಟ್ರೀಮ್ ಎಸ್‌ಎ: ಹತ್ತನೇ ತರಗತಿ ಗಣಿತ ಹಾಗೂ ವಿಜ್ಞಾನ ವಿಷಯದಲ್ಲಿ ಸರಾಸರಿ ಶೇ 80 (ಪರಿಶಿಷ್ಟರಿಗೆ ಶೇ 70) ಅಂಕ ಪಡೆದು ಪ್ರಥಮ ಪಿಯುಸಿ ವಿಜ್ಞಾನ ಓದುತ್ತಿರುವವರು. ಎಸ್‌ಎಕ್ಸ್: ಹತ್ತನೇ ತರಗತಿ ಗಣಿತ ಹಾಗೂ ವಿಜ್ಞಾನ ವಿಷಯದಲ್ಲಿ ಸರಾಸರಿ ಶೇ 80 (ಪರಿಶಿಷ್ಟರಿಗೆ ಶೇ 70) ಅಂಕ ಪಡೆದು ದ್ವಿತೀಯ ಪಿಯು ಓದುತ್ತಿರುವ ಮತ್ತು ಮುಂದೆ ಮೂಲವಿಜ್ಞಾನದ ಪದವಿಯಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು. ಎಸ್‌ಬಿ: ಬಿಎಸ್ಸಿ, ಬಿಎಸ್, ಇಂಟೆಗ್ರೇಟೆಡ್ ಎಂಎಸ್ಸಿ ಪದವಿ ಓದುತ್ತಿರುವ ವಿದ್ಯಾರ್ಥಿಗಳು. ಆದರೆ ಇವರು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ 60 (ಪರಿಶಿಷ್ಟರಿಗೆ ಶೇ 50) ಅಂಕ ಪಡೆದಿರಬೇಕು. ಆಯ್ಕೆ ಪ್ರಕ್ರಿಯೆ ಮೂರೂ ಸ್ಟ್ರೀಮ್‌ಗಳಿಗೆ ಲಿಖಿತ ಅರ್ಹತಾ ಪರೀಕ್ಷೆಗಳನ್ನು ಬೆಂಗಳೂರು, ಹುಬ್ಬಳ್ಳಿ ಹಾಗೂ ಮಂಗಳೂರಿನಲ್ಲಿ ನವೆಂಬರ್ 4ರಂದು ನಡೆಸಲಾಗುತ್ತದೆ. ಅಭ್ಯರ್ಥಿಗಳ ಪರೀಕ್ಷಾ ಕೇಂದ್ರಗಳ ಹಾಗೂ ಸೀಟ್ ನಂಬರ್‌ನ ವಿವರಗಳನ್ನು ಅಕ್ಟೋಬರ್ ಎರಡನೇ ವಾರದಲ್ಲಿ ಕೆವಿಪಿವೈ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಅಭ್ಯರ್ಥಿಗಳು ಅಲ್ಲಿಂದಲೇ ಪ್ರವೇಶಪತ್ರ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವಾಗ ಹಿಂದಿನ ಬೋರ್ಡ್ ಪರೀಕ್ಷೆಯಲ್ಲಿ ಪಡೆದ ಅಂಕ ಹಾಗೂ ಲಿಖಿತ ಅರ್ಹತಾ ಪರೀಕ್ಷೆಯ ಅಂಕಗಳನ್ನು ಪರಿಗಣಿಸಲಾಗುತ್ತದೆ. ಅರ್ಹತಾ ಪರೀಕ್ಷೆಯು ಸಿಬಿಎಸ್‌ಸಿ 10+2 ಮಟ್ಟದ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವವಿಜ್ಞಾನದ ಪಠ್ಯಕ್ರಮದ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಪ್ರಶ್ನೆಪತ್ರಿಕೆಯಲ್ಲಿ ಪ್ರತಿಯೊಂದು ವಿಷಯಕ್ಕೂ ಸಮಾನವಾದ ಆದ್ಯತೆ ನೀಡಲಾಗಿರುತ್ತದೆ. ಎಸ್‌ಎ ಸ್ಟ್ರೀಮ್‌ನ ಪ್ರಶ್ನೆಪತ್ರಿಕೆಯಲ್ಲಿ ಬಹು ಆಯ್ಕೆ ವಿಧ ಮತ್ತು ವಿವರಣಾತ್ಮಕ ಉತ್ತರದ ಪ್ರಶ್ನೆಗಳು ಎಂಬ ಎರಡು ವಿಧ. ಎಸ್‌ಎಕ್ಸ್ ಮತ್ತು ಎಸ್‌ಬಿ ಸ್ಟ್ರೀಮ್‌ಗಳಿಗೆ ಬಹು ಆಯ್ಕೆಯ ಒಂದೇ ಪ್ರಶ್ನೆಪತ್ರಿಕೆ ಬರೆದರೆ ಸಾಕು. ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳು ಕೆವಿಪಿವೈ ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು, ಆಸಕ್ತರು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಉತ್ತಮ ಪ್ರದರ್ಶನ ತೋರಿದ ವಿದ್ಯಾರ್ಥಿಗಳಿಗೆ ಕೊನೆಯ ಹಂತದಲ್ಲಿ ಸಂದರ್ಶನ ನಡೆಸಲಾಗುತ್ತದೆ. ಅಲ್ಲಿ ಆಯ್ಕೆಯಾದವರಿಗೆ ಸಂಶೋಧನಾ ಹಂತದವರೆಗೂ ತಿಂಗಳಿಗೆ 4000 ದಿಂದ 7000 ರೂಪಾಯಿ ವರೆಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಪ್ರತಿ ವರ್ಷ ವಿದ್ಯಾರ್ಥಿ ವೇತನವನ್ನು ಮುಂದುವರಿಸಲು ವಿದ್ಯಾರ್ಥಿಗಳ ಕಳೆದ ಸಾಲಿನ ಶೈಕ್ಷಣಿಕ ಸಾಧನೆಗಳನ್ನು ಹಾಗೂ ಬೇಸಿಗೆ ಶಿಬಿರಗಳಲ್ಲಿನ ಕಾರ್ಯನಿರ್ವಹಣೆಯನ್ನು ಪರಿಗಣಿಸಲಾಗುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.