ಬೋಧನೆ ಸುಧಾರಣೆಗೆ ಮಿಷನ್ 10 ಎಕ್ಸ್ ವೃತ್ತಿಪರ ಶಿಕ್ಷಣ ಕೋರ್ಸುಗಳಲ್ಲಿ ಎಂಜಿನಿಯರಿಂಗ್ ಅಧ್ಯಯನ ಈಗಲೂ ಬಹಳಷ್ಟು ಪ್ರಾಮುಖ್ಯತೆ ಹೊಂದಿದೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಲಿಯ (ಎಐಸಿಟಿಇ) ಪ್ರಕಾರ ದೇಶದಲ್ಲಿ 3000ಕ್ಕೂ ಹೆಚ್ಚಿನ ಎಂಜಿನಿಯರಿಂಗ್ ಕಾಲೇಜುಗಳಿವೆ. ಇವುಗಳಿಂದ ಪ್ರತಿ ವರ್ಷ ಹೊರ ಬರುವ ಪದವೀಧರರ ಸಂಖ್ಯೆ 5 ಲಕ್ಷಕ್ಕೂ ಅಧಿಕ. ವಿಪ್ರೊ ಅಧ್ಯಕ್ಷ ಅಜೀಂ ಪ್ರೇಂಜಿ ಹೇಳುವಂತೆ, `ಭಾರತದಲ್ಲಿ ಎಂಜಿನಿಯರಿಂಗ್ ಪದವೀಧರರು ಬಹಳಷ್ಟು ಮಂದಿ ಇದ್ದಾರೆ. ಆದರೆ ಪ್ರಶ್ನೆ ಅದಲ್ಲ. ಉದ್ಯಮಕ್ಕೆ ಬೇಕಾಗುವ ಕುಶಲ ಪದವೀಧರರು ಬಹಳ ವಿರಳ~. ವಿಪ್ರೊ 2006 ಇಸ್ವಿಯಲ್ಲಿಯೇ ಎಂಜಿನಿಯರಿಂಗ್ ಕಾಲೇಜುಗಳ ಪ್ರಾಚಾರ್ಯರು ಮತ್ತು ಉದ್ಯೋಗ ಸಲಹಾ ಅಧಿಕಾರಿಗಳು ನೀಡಿದ ಮಾಹಿತಿ ಆಧರಿಸಿ ಸಮೀಕ್ಷಾ ವರದಿಯೊಂದನ್ನು ಸಿದ್ಧಪಡಿಸಿತ್ತು. ಇದರ ಪ್ರಕಾರ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಉದ್ಯಮ ಕ್ಷೇತ್ರ ಅಪೇಕ್ಷಿಸುವ ಕೆಲ ಕೌಶಲಗಳನ್ನು ಬೆಳೆಸಿಕೊಂಡಲ್ಲಿ ಉದ್ಯೋಗಾವಕಾಶಗಳು ಹೆಚ್ಚುತ್ತವೆ. ಇದರರ್ಥ ಬೋಧನಾ ಪದ್ಧತಿಯಲ್ಲಿ ಕೊಂಚ ಮಾರ್ಪಾಡಾಗಬೇಕು ಎಂದು. ಇದನ್ನೇ ಆಧಾರವಾಗಿ ಇಟ್ಟುಕೊಂಡು ವಿಪ್ರೊದ ಅಂಗವಾದ `ಮಿಷನ್10 ಎಕ್ಸ್~ ಎಂಜಿನಿಯರಿಂಗ್ ಕಾಲೇಜುಗಳ ಅಧ್ಯಾಪಕರಿಗೆ `ಬೋಧನೆಯಲ್ಲಿ ನಾವಿನ್ಯತೆ~ ಎಂಬ ವಿಷಯದ ಬಗ್ಗೆ ಕಾರ್ಯಾಗಾರಗಳನ್ನು ನಡೆಸುತ್ತ ಬಂದಿದೆ. ಇಲ್ಲಿ ತಂತ್ರಜ್ಞಾನ ಆಧಾರಿತ ಉದ್ಯಮಕ್ಕೆ ಬೇಕಾಗಿರುವ ನೈಪುಣ್ಯತೆಗಳನ್ನು ವಿದ್ಯಾರ್ಥಿಗಳಲ್ಲಿ ತರುವ ಮಾರ್ಗಗಳ ಬಗ್ಗೆ ಅಧ್ಯಾಪಕರಿಗೆ ತಿಳಿಸಿಕೊಡಲಾಗುತ್ತದೆ. ಕರ್ನಾಟಕದಲ್ಲಿ ನೂರಕ್ಕೂ ಹೆಚ್ಚು ಎಂಜಿನಿಯರಿಂಗ್ ಕಾಲೇಜುಗಳ ಸುಮಾರು 2800 ಅಧ್ಯಾಪಕರು ಈ ಕಾರ್ಯಾಗಾರಗಳಲ್ಲಿ ಭಾಗವಹಿಸಿದ್ದಾರೆ. ಇದರ ಹೊರತಾಗಿ ಎಂಜಿನಿಯರಿಂಗ್ ಕಾಲೇಜುಗಳ ಪ್ರಾಚಾರ್ಯರಿಗೆ ಏರ್ಪಡಿಸಲಾದ ನಾಯಕತ್ವ ಕಾರ್ಯಾಗಾರಗಳಲ್ಲಿ 30 ಪ್ರಾಚಾರ್ಯರು ಭಾಗವಹಿಸಿ ಮುಂದಾಳುತನ, ವಿದ್ಯಾಭಿವೃದ್ಧಿ ಮತ್ತು ಆಡಳಿತ ನಿರ್ವಹಣೆ ಮುಂತಾದ ವಿಷಯಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಂಡಿದ್ದಾರೆ. ಇದು ದೇಶದಲ್ಲಿಯೇ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಮೊದಲ ಪ್ರಯೋಗ. ಈ ಕಾರ್ಯಾಗಾರಗಳು ಫಲಪ್ರದವೇ ಎಂದು ತಿಳಿಯಲು ಈಚೆಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿ ಅಧ್ಯಯನ ನಡೆಸಲಾಯಿತು. ಸುಮಾರು 220 ಅಧ್ಯಾಪಕರು ತಮ್ಮ ಬೋಧನಾ ಕ್ರಮದಲ್ಲಿ ವಿದ್ಯಾರ್ಥಿಗಳಿಗೆ ನೆರವಾಗುವ ಮಾರ್ಪಾಡು ಮಾಡಿಕೊಂಡಿರುವುದು ಇದರಿಂದ ಕಂಡುಬಂದ ಅಂಶ. ಇದು ನಮ್ಮ ಭಾವಿ ಎಂಜಿನಿಯರಿಂಗ್ ಪದವೀಧರರ ಕೌಶಲ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂಬುದು ನೆಮ್ಮದಿಯ ಸಂಗತಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.