ಕ್ಯಾಟ್: ಇನ್ನು ಸಿದ್ಧರಾಗಿ ಸಿಎಟಿ ಅಥವಾ ಸಾಮಾನ್ಯ ಪ್ರವೇಶ ಪರೀಕ್ಷೆ ದೇಶದಲ್ಲಿ ನಡೆಯುವ ಅತ್ಯಂತ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದು. ಪ್ರತಿಷ್ಠಿತ ಐಐಎಂಗಳು ಮತ್ತು ಎಫ್‌ಎಂಎಸ್, ಎಂಡಿಐ, ಎಸ್‌ಪಿ ಜೈನ್, ಐಐಟಿಗಳು ಸೇರಿದಂತೆ ದೇಶದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾವಹಾರಿಕ (ಬಿಸಿನೆಸ್) ಪದವಿಗೆ ಪ್ರವೇಶ ಪಡೆಯಲು ಸಿಎಟಿ ಅರ್ಹತೆ ಕಡ್ಡಾಯ. ಎಂಬಿಎ ಕಲಿಕೆಗೆ ಇದು ಪ್ರವೇಶ ಪರೀಕ್ಷೆ ಆಗಿರುವುದರಿಂದ ಗುಣಾತ್ಮಕ ಸಾಮರ್ಥ್ಯ, ವಿಶ್ಲೇಷಣೆ ಮತ್ತು ತಾರ್ಕಿಕ ಮನೋಭಾವ, ಮಾಹಿತಿ ವಿಶ್ಲೇಷಣೆ ಮತ್ತು ಮೌಖಿಕ ಸಂವಹನ ಕ್ಷೇತ್ರದಲ್ಲಿ ಅಭ್ಯರ್ಥಿ ದಕ್ಷನಾಗಿರಬೇಕಾಗುತ್ತದೆ. ಮುಂದೆ ಮ್ಯೋನೇಜರ್ ಆಗಲು ಇವೆಲ್ಲ ಮೂಲಭೂತವಾಗಿ ಅಗತ್ಯವಿರುವ ಅಂಶಗಳು. ಇದಲ್ಲದೇ ಒತ್ತಡದ ಸಂದರ್ಭಗಳಲ್ಲಿ ಸಮಯಪ್ರಜ್ಞೆ ಮತ್ತು ಜ್ಞಾನವನ್ನು ಬಳಸಿಕೊಂಡು ಪರಿಸ್ಥಿತಿಯನ್ನು ವಿದ್ಯಾರ್ಥಿಗಳು ಹೇಗೆ ನಿಭಾಯಿಸುತ್ತಾರೆ ಎಂಬುದನ್ನೂ ಸಿಎಟಿ ನಿರೂಪಿಸುತ್ತದೆ. ಇದರಲ್ಲಿ ಎರಡು ವಿಭಾಗ. ಮೊದಲ ವಿಭಾಗದಲ್ಲಿ ಗುಣಾತ್ಮಕ ಸಾಮರ್ಥ್ಯ ಮತ್ತು ಮಾಹಿತಿ ವಿಶ್ಲೇಷಣೆ, ಇನ್ನೊಂದರಲ್ಲಿ ಮೌಖಿಕ ಸಾಮರ್ಥ್ಯ ಮತ್ತು ವಿಶ್ಲೇಷಣಾ ಸಾಮರ್ಥ್ಯದ ಪರೀಕ್ಷೆ ನಡೆಯುತ್ತದೆ. ಪ್ರತಿಯೊಂದು ವಿಭಾಗದಲ್ಲಿಯೂ 30 ಪ್ರಶ್ನೆಗಳಿದ್ದು, ಇದಕ್ಕೆ ಉತ್ತರಿಸಲು 70 ನಿಮಿಷ ನೀಡಲಾಗುತ್ತದೆ. ನಿಗದಿತ ಸಮಯದಲ್ಲಿ ವಿದ್ಯಾರ್ಥಿಗಳು ಒಂದು ವಿಭಾಗವನ್ನಷ್ಟೇ ಆಯ್ಕೆ ಮಾಡಬಹುದು. ಎರಡೂ ವಿಭಾಗದಲ್ಲಿ ಉತ್ತರಿಸಲು ಸಾಧ್ಯವಿಲ್ಲ. ಕಾಲಮಿತಿ ಮತ್ತು ಒತ್ತಡ ಇಲ್ಲದಿದ್ದರೆ ಸರಾಸರಿಗಿಂತ ಹೆಚ್ಚಿರುವ ಯಾವುದೇ ವಿದ್ಯಾರ್ಥಿ ಶೇಕಡ 99ರಷ್ಟು ಅಂಕಗಳನ್ನು ಪಡೆಯಬಹುದು. ಆದರೆ ಈ ಪರೀಕ್ಷೆಗೆ ಕಾಲಮಿತಿ ಇದೆ. ಇತಿಮಿತಿಗಳಿಲ್ಲದ ಒತ್ತಡಗಳಿವೆ (ವಿಶ್ವಕಪ್ ಫೈನಲ್‌ನಂತೆ). ಹಾಗಾಗಿ ಅತ್ಯುತ್ತಮರಾದವರು ಮಾತ್ರ ಅಪೇಕ್ಷಿತ ಅಂಕ ಪಡೆಯುತ್ತಾರೆ. ಪರೀಕ್ಷೆಗಳು ಸುಲಭ ಎಂದಿಟ್ಟುಕೊಂಡರೂ, ಸುಮಾರು 4000 ಪ್ರತಿಷ್ಠಿತ ಸೀಟುಗಳಿಗಾಗಿ ಎರಡು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಪೈಪೋಟಿ ನಡೆಸುತ್ತಾರೆ. ಹೀಗಾಗಿಯೇ ಇದನ್ನು ಅತ್ಯಂತ ಕಠಿಣ ಪರೀಕ್ಷೆ ಎಂದದ್ದು. ಆದಕಾರಣ ಪರೀಕ್ಷೆಯಲ್ಲಿ ನೀವು ಯಶಸ್ವಿಯಾಗಲು ಸೂಕ್ತ ಸಿದ್ಧತೆ ನಡೆಸಬೇಕು. ಅಣಕು ಪರೀಕ್ಷೆ ಯಾವುದೇ ಪರೀಕ್ಷೆಗೆ ಸಿದ್ಧತೆ ಆರಂಭಿಸಲು ಸೂಕ್ತವಾದ ಮಾರ್ಗವೆಂದರೆ ಪ್ರಾಯೋಗಿಕ ಅಥವಾ ಅಣಕು ಪರೀಕ್ಷೆ ನಡೆಸುವುದು. ಹಿಂದಿನ ಸಿಎಟಿಯಂತೆ ಇದು ಇರುತ್ತದೆ. ಆದರೆ ಇದರ ಸಿದ್ಧತೆಯಲ್ಲಿ ಅನೇಕ ವಿದ್ಯಾರ್ಥಿಗಳು ಎಡವುತ್ತಾರೆ. ಏಕೆಂದರೆ ಸಿಎಟಿ ಬಗ್ಗೆ ಅವರಿಗೆ ಸಮಗ್ರವಾಗಿ ಏನೂ ತಿಳಿದಿರುವುದಿಲ್ಲ. ಹಾಗಾಗಿ ಅನಗತ್ಯ ಕೆಲಸಗಳಿಗೆ ಪ್ರಯತ್ನಿಸುತ್ತ ಅಮೂಲ್ಯವಾದ ಸಮಯ ಹಾಳು ಮಾಡುತ್ತಾರೆ. ಆದ್ದರಿಂದಲೇ ತರಗತಿಗಳನ್ನು ಆರಂಭಿಸುವ ಮುನ್ನ ಎಲ್ಲ ಪ್ರಮುಖ ಕೋಚಿಂಗ್ ಸಂಸ್ಥೆಗಳು ಪ್ರಾಯೋಗಿಕ ಪರೀಕ್ಷೆ ನಡೆಸುತ್ತವೆ. ಆನ್‌ಲೈನ್ ಪರೀಕ್ಷೆಯ ಸೌಲಭ್ಯ ಒದಗಿಸುತ್ತವೆ. ಇದನ್ನು ಬರೆದಾದ ಮೇಲೆ ನಿಮಗೆ ದೊರೆಯುವ ಅಂಕಗಳು, ನೀವು ಸಿಎಟಿಯಲ್ಲಿ ಹೇಗೆ ಬರೆಯುತ್ತೀರಿ? ಯಾವ ಅಂಕಗಳನ್ನು ಪಡೆಯುತ್ತೀರಿ ಎನ್ನುವುದರ ಸೂಚನೆ ನೀಡುತ್ತವೆ. ಆದ್ದರಿಂದ ಪ್ರತಿಯೊಂದು ವಿಷಯದಲ್ಲಿಯೂ ಸಮಗ್ರವಾಗಿ ಅಧ್ಯಯನ ನಡೆಸಬೇಕು. ಅದರಲ್ಲಿ ನಿಮಗಿರುವ ಜ್ಞಾನದ ಮಟ್ಟ, ಅಂತರವನ್ನು ಗುರುತಿಸಬೇಕು. ಅಲ್ಲದೆ ಇದು ನಿಜವಾದ ಪರೀಕ್ಷೆ ಬರೆಯುವ ಮುನ್ನ ಮುಂದಿನ ಕೆಲವು ವಾರ/ ತಿಂಗಳು ಸಮಯವನ್ನು ಹೇಗೆ ಸದುಪಯೋಗ ಮಾಡಿಕೊಳ್ಳಬೇಕು ಎಂಬ ಸ್ಪಷ್ಟ ನೋಟ ನೀಡುತ್ತದೆ. ಆದ್ದರಿಂದ ಮುಂದಿನ ಮೂರು ತಿಂಗಳಿಗೆ ಅನ್ವಯವಾಗುವಂತೆ ವಿಶಾಲವಾದ ವೇಳಾಪಟ್ಟಿ ರೂಪಿಸಿ. ಜತೆಗೆ ಒಂದು ವಾರದ ಓದಿಗೆ ಬೇರೆ ಯೋಜನೆ ಸಿದ್ಧಪಡಿಸಿಕೊಳ್ಳಿ. ವಾರದ ಯೋಜನೆಯಲ್ಲಿ ಎರಡು ವಿಷಯಗಳ ಅಧ್ಯಯನ ಮುಗಿಸಿ. ಆದರೆ ಅನೇಕ ವಿಷಯ ಸೇರಿಸಿ ಕಲಸು ಮೇಲೋಗರ ಮಾಡಬೇಡಿ. ಗುರಿ ಮುಟ್ಟುವುದು ಸಾಧ್ಯವಾಗುವುದಿಲ್ಲ. ಪರೀಕ್ಷೆಗೆ ಸಿದ್ಧತೆ ಸಿಎಟಿ ಪರೀಕ್ಷೆಯನ್ನು ಯಶಸ್ವಿಯಾಗಿ ನಿರ್ವಹಿಸಲು ಜ್ಞಾನ, ಪರೀಕ್ಷೆ ಕಾರ್ಯತಂತ್ರ ಮತ್ತು ಆತ್ಮವಿಶ್ವಾಸ ಎಂಬ ಮೂರು ಹಂತಗಳ ಸಿದ್ಧತೆ ಇದೆ. ಜ್ಞಾನದಲ್ಲಿ ಗುಣಾತ್ಮಕ ಸಾಮರ್ಥ್ಯ, ತಾರ್ಕಿಕ ಸಾಮರ್ಥ್ಯ ಮತ್ತು ಮಾಹಿತಿ ವಿಶ್ಲೇಷಣೆ, ಮೌಖಿಕ ಸಾಮರ್ಥ್ಯ ಮತ್ತು ಗ್ರಹಣ ಶಕ್ತಿಗಳನ್ನು ಒರೆಗೆ ಹಚ್ಚಲಾಗುತ್ತದೆ. ಪರೀಕ್ಷಾರ್ಥಿಗಳು ಎಲ್ಲ ಹಿನ್ನೆಲೆಯಿಂದಲೂ (ಬಿಬಿಎ, ಬಿಕಾಂ, ಬಿಎಸ್‌ಸಿ, ಬಿಇ, ಬಿಟೆಕ್, ಎಂಬಿಬಿಎಸ್ ಇತ್ಯಾದಿ) ಬಂದಿರುವುದರಿಂದ, ಕನಿಷ್ಠ 10ನೇ ತರಗತಿ ಮಟ್ಟದ ಸಾಮರ್ಥ್ಯ ಹೊಂದಿರಬೇಕು. ಆದರೆ ಜ್ಞಾನದ ಮಟ್ಟ ಮತ್ತು ಸಮಸ್ಯೆ ಬಗೆಹರಿಸುವ ಅಭ್ಯಾಸದಲ್ಲಿ ವಿಭಿನ್ನತೆ ಇರುತ್ತದೆ. ಆದ್ದರಿಂದ ಕೋಚಿಂಗ್ ಸೇರುವುದು ಒಳ್ಳೆಯದು. ಪರೀಕ್ಷೆ ಕಾರ್ಯತಂತ್ರ: ನಿಜವಾದ ಸಿಎಟಿ ಬರೆಯುವ ಮುನ್ನ ಕೆಲವೊಂದು ಅಣುಕು ಪರೀಕ್ಷೆಗಳನ್ನು ಬರೆಯವುದು ಉಪಯೋಗಕ್ಕೆ ಬರುತ್ತದೆ. ಅಣುಕು ಸಿಎಟಿ ನೈಜ ಅನುಭವ ಕೊಡುವುದರಿಂದ ಪರೀಕ್ಷೆಯನ್ನು ಹೇಗೆ ನಿಭಾಯಿಸಬಹುದು ಎಂಬುದರ ಕಾರ್ಯತಂತ್ರ ರೂಪಿಸಲು ನೆರವಾಗುತ್ತದೆ. ಅಣುಕು ಪರೀಕ್ಷೆಯನ್ನು ಆಗಾಗ್ಗೆ ಬರೆಯುವುದರಿಂದ ಪರೀಕ್ಷೆಯನ್ನು ಎದುರಿಸುವ ಕೌಶಲ ವೃದ್ಧಿಸುತ್ತದೆ, ನಿಮ್ಮ ದೌರ್ಬಲ್ಯಗಳನ್ನು ತಿಳಿದುಕೊಂಡು ಆ ವಿಷಯದ ಬಗ್ಗೆ ಹೆಚ್ಚು ಗಮನ ಹರಿಸಬಹುದು. ಆತ್ಮವಿಶ್ವಾಸ: ಸುಮಾರು 2 ಲಕ್ಷ ವಿದ್ಯಾರ್ಥಿಗಳು ಸಿಎಟಿಗೆ ಹಾಜರಾಗುತ್ತಾರೆ. ಅನೇಕರು ಪರೀಕ್ಷೆಯನ್ನು ಯಶಸ್ವಿಯಾಗಿ ನಿಭಾಯಿಸುತ್ತಾರೆ, ಪ್ರವೇಶವನ್ನೂ ಪಡೆಯುತ್ತಾರೆ. ಜ್ಞಾನ ಮತ್ತು ಪರೀಕ್ಷೆ ಬರೆಯುವ ಕೌಶಲಗಳನ್ನು ಸತತ ಅಭ್ಯಾಸದಿಂದ ಬೆಳೆಸಿಕೊಳ್ಳಬಹುದು. ಆದರೆ ಅದಕ್ಕಿಂತ ಮುಖ್ಯವಾಗಿ ಬೇಕಾದದ್ದು ಆತ್ಮವಿಶ್ವಾಸ. ಸಿಎಟಿ ಜ್ಞಾನ ಮತ್ತು ಕೌಶಲದ ಆಟವಾಗಿರುವಂತೆ, ಮಾನಸಿಕ ಆಟವೂ ಹೌದು. ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಐಐಎಂಗಳಿಗೆ ಪ್ರವೇಶ ಪಡೆಯಲು ವಿಫಲರಾಗಿದ್ದನ್ನು ನಾವು ನೋಡುತ್ತೇವೆ. ಆದರೆ ಕಾಲೇಜುಗಳಲ್ಲಿ ಹೆಚ್ಚು ಅಂಕ ಪಡೆಯದವರೂ, ಶ್ರದ್ಧೆ ಮತ್ತು ಆತ್ಮವಿಶ್ವಾಸದ ಬಲದಿಂದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುತ್ತಾರೆ. ಇದು ಸದಾ ನಿಮ್ಮ ಗಮನದಲ್ಲಿ ಇರಲಿ. (ಲೇಖಕರು ವಿಸ್ಟಾಮೈಂಡ್ ಎಜುಕೇಷನ್‌ನ ಸಿಒಒ) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.