ಮೇಷ್ಟ್ರಿಗೆ ಪಾಠ ವಿಜ್ಞಾನ ಮತ್ತು ಗಣಿತ ಶಿಕ್ಷಕರ ಬುದ್ಧಿಶಕ್ತಿಗೆ ಒಂದಿಷ್ಟು ಸಾಣೆ ಹಿಡಿದು, ಶಕ್ತಿ ತುಂಬಿ ಚುರುಕುಗೊಳಿಸುವ ಮೂಲಕ ಗುಣಾತ್ಮಕ ಬೋಧನೆಗೆ ಒತ್ತು ನೀಡುವ ಪ್ರಯತ್ನವನ್ನು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಯಶಸ್ವಿಯಾಗಿ ಕೈಗೊಳ್ಳುತ್ತಿದೆ. ಪ್ರಯೋಗಾಧಾರಿತ ವಿಜ್ಞಾನ ಮತ್ತು ಗಣಿತ ವಿಷಯಗಳನ್ನು ಸರಳವಾಗಿ ಮತ್ತು ಮನಮುಟ್ಟುವಂತೆ ಬೋಧಿಸಲು ಶಿಕ್ಷಕರನ್ನು ತರಬೇತು ಮಾಡುವುದಕ್ಕಾಗಿ ಭಾರತೀಯ ವಿಜ್ಞಾನ ಸಂಸ್ಥೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಕುದಾಪುರದಲ್ಲಿ ಸ್ಥಾಪಿಸಿದ ಪ್ರತಿಭಾ ಅಭಿವೃದ್ಧಿ ಕೇಂದ್ರ (ಟ್ಯಾಲೆಂಟ್ ಡೆವಲಪ್‌ಮೆಂಟ್ ಸೆಂಟರ್) ರಾಜ್ಯ ಮತ್ತು ರಾಷ್ಟ್ರದ ಗಮನ ಸೆಳೆಯುತ್ತಿದೆ.ಇದು ದೇಶದಲ್ಲೇ ಪ್ರಥಮ ಪ್ರಯತ್ನವಾಗಿದೆ. ಪ್ರೌಢಶಾಲೆ, ಪದವಿಪೂರ್ವ ಕಾಲೇಜಿನ ವಿಜ್ಞಾನ ಮತ್ತು ಗಣಿತ ಶಿಕ್ಷಕರಿಗೆ ತರಬೇತಿ ನೀಡುತ್ತಿರುವ ಐಐಎಸ್ಸಿ ಕೇಂದ್ರ, ಈಗ ವಿಶ್ವವಿದ್ಯಾಲಯದ ವಿಜ್ಞಾನ ಪ್ರಾಧ್ಯಾಪಕರಿಗೆ ತರಬೇತಿ ನೀಡಲು ಸಜ್ಜಾಗುತ್ತಿದೆ. ಬಯಲುಸೀಮೆಯ ಕುರುಚಲು ಕಾಡಿನ ಪ್ರಶಾಂತ ವಾತಾವರಣದಲ್ಲಿರುವ ಈ ಕೇಂದ್ರದಲ್ಲಿ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆ ಹಾಗೂ ಪಿಯು ಕಾಲೇಜಿನ ವಿಜ್ಞಾನ ಮತ್ತು ಗಣಿತ ಶಿಕ್ಷಕರಿಗೆ ತಂಡ, ತಂಡವಾಗಿ 10 ದಿನಗಳ ಕಾಲ ಉಚಿತ ಊಟ ವಸತಿಯೊಂದಿಗೆ ತರಬೇತಿ ನೀಡಲಾಗುತ್ತಿದೆ. ಪ್ರತಿ ತಂಡದಲ್ಲಿ 100 ಶಿಕ್ಷಕರಿರುತ್ತಾರೆ. ಈಗಾಗಲೇ ರಾಜ್ಯದ ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಬೀದರ್, ಶಿವಮೊಗ್ಗ, ಉಡುಪಿ, ಉತ್ತರ ಕನ್ನಡ, ಗದಗ ಸೇರಿದಂತೆ 1,500 ಪ್ರೌಢಶಾಲೆಯ 1500 ಶಿಕ್ಷಕರು ಮತ್ತು ಪಿಯು ಕಾಲೇಜಿನ 300 ಉಪನ್ಯಾಸಕರು ತರಬೇತಿ ಪಡೆದಿದ್ದಾರೆ. ರಾಜ್ಯದಲ್ಲಿರುವ ಸುಮಾರು 12 ಸಾವಿರ ಪ್ರೌಢಶಾಲಾ ಶಿಕ್ಷಕರಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ. ಬೆಳಿಗ್ಗೆ 8ರಿಂದ 11ರವರೆಗೆ ಉಪನ್ಯಾಸ, ಉಳಿದ ಸುಮಾರು 7 ತಾಸು ಅವಧಿಯನ್ನು ಶಿಕ್ಷಕರು ಪ್ರಯೋಗಾಲಯದಲ್ಲಿ ಕಳೆಯಬೇಕು. ಪ್ರತಿ ದಿನ 10-12 ಗಂಟೆಗಳ ಅವಿರತ ಶ್ರಮದಿಂದ ಶಿಕ್ಷಕರು ಕಲಿಯುತ್ತಾರೆ. ಜತೆ ಜತೆಯಲ್ಲಿ ಪರಿಸರ, ಅಣುಶಕ್ತಿ, ಲೇಸರ್ ಮುಂತಾದ ಆಸಕ್ತಿಕಾರಿ ವಿಷಯಗಳ ಬಗ್ಗೆ ನಿರಂತರ ಚರ್ಚೆ, ಉಪನ್ಯಾಸ ನಡೆಯುತ್ತದೆ. 10 ದಿನಗಳ ಅವಧಿ ಶಿಕ್ಷಕರಿಗೆ ಹೊಸ ಚೈತನ್ಯ, ಸ್ಫೂರ್ತಿ ತುಂಬುತ್ತದೆ. ತರಬೇತಿಗೆ ಬಂದ ತಕ್ಷಣ ಶಿಕ್ಷಕರ ಜ್ಞಾನಮಟ್ಟ ಅಳೆಯಲು ಪರೀಕ್ಷೆ ನಡೆಸಲಾಗುತ್ತಿದೆ. ಅತಿ ಕಡಿಮೆ ಅಂಕಗಳಿಸುವ ಶಿಕ್ಷಕರು ತರಬೇತಿ ಮುಗಿಸಿ ಹೊರಡುವಾಗ ನಡೆಯುವ ಮತ್ತೊಂದು ಪರೀಕ್ಷೆಯಲ್ಲಿ ಅಗಾಧ ಪ್ರಮಾಣದಲ್ಲಿ ಬದಲಾಗಿರುತ್ತಾರೆ. ಶೇ 5 ಅಂಕ ಗಳಿಸಿರುವವರು ಶೇ 60-70ರಷ್ಟು ಅಂಕ ಗಳಿಸಿರುವ ಉದಾಹರಣೆಗಳು ಇಲ್ಲಿವೆ. ಕೇಂದ್ರವನ್ನು ಮುನ್ನಡೆಸುತ್ತಿರುವ ಪ್ರೊ.ಎಂ.ಎಸ್. ಹೆಗಡೆ ಕ್ರಿಯಾಶೀಲ ಮತ್ತು ಪಾದರಸ ವ್ಯಕ್ತಿತ್ವದವರು. ಶಿಸ್ತುಬದ್ಧವಾಗಿ ಶಿಕ್ಷಕರಿಗೆ ಮಾರ್ಗದರ್ಶನ ನೀಡುವ ಕೈಂಕರ್ಯದಲ್ಲಿ ತೊಡಗಿದ್ದಾರೆ. `ಪ್ರೌಢಶಾಲೆಗಳಲ್ಲಿ ವಿಜ್ಞಾನ ಮತ್ತು ಗಣಿತ ವಿಷಯಗಳ ಬೋಧನಾ ಗುಣಮಟ್ಟ ಗಂಭೀರ ಸಮಸ್ಯೆಯಾಗಿತ್ತು. ಅದನ್ನು ಅರಿತುಕೊಂಡು ಇಲ್ಲಿ ತರಬೇತಿ ನೀಡಲಾಗುತ್ತಿದೆ. ಮುಖ್ಯವಾಗಿ ಜ್ಞಾನವಂತರನ್ನಾಗಿ, ಶಿಸ್ತಿನ ಸಿಪಾಯಿಯನ್ನಾಗಿ ಮತ್ತು ಪ್ರಾಮಾಣಿಕ ವ್ಯಕ್ತಿಯನ್ನಾಗಿ ಶಿಕ್ಷಕರನ್ನು ರೂಪಿಸುವ ಪ್ರಯತ್ನವನ್ನು ಇಲ್ಲಿ ಮಾಡುತ್ತಿದ್ದೇವೆ~ ಎಂದು ಹೆಗಡೆ ಹೇಳುತ್ತಾರೆ. `ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ವಿಜ್ಞಾನ ಅಧ್ಯಯನಕ್ಕೆ ತೆರೆದುಕೊಳ್ಳುತ್ತಾರೆ. ಮೂಲವಿಜ್ಞಾನದ ಅಧ್ಯಯನ ನಡೆಸುವಂತೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ತುಂಬುವಲ್ಲಿ ಶಿಕ್ಷಕರದು ಪ್ರಮುಖ ಪಾತ್ರ. ಜತೆಗೆ, ವಿಜ್ಞಾನ ಬೋಧಿಸುವ ಶಿಕ್ಷಕರಿಗೂ ಉತ್ತೇಜನ, ಹೊಸ ಬೆಳವಣಿಗೆಗಳ ಬಗ್ಗೆ ಮಾಹಿತಿ ಅಗತ್ಯ. ಆ ದೃಷ್ಟಿಕೋನದಿಂದ ತರಬೇತಿ ನೀಡುತ್ತಿದ್ದೇವೆ. ಬಹುತೇಕ ಶಾಲೆಗಳಲ್ಲಿ ಪ್ರಯೋಗಾಲಯಗಳೇ ಇಲ್ಲ. ಅನೇಕ ಕಡೆ ಪ್ರಯೋಗಾಲಯ ಲಭ್ಯವಿದ್ದರೂ ಸದ್ಭಳಕೆಯಾಗುತ್ತಿಲ್ಲ. ಕುದಾಪುರದಲ್ಲಿ ತರಬೇತಿ ಪಡೆದ ವಿಜ್ಞಾನ ಶಿಕ್ಷಕರು ಈಗ ಪ್ರಯೋಗಾಲಯ ಆಧಾರಿತ ಬೋಧನೆ ಆರಂಭಿಸಿದ್ದಾರೆ. ಹಲವಾರು ಶಾಲೆಗಳಲ್ಲಿ ಈಗ ಹೊಸದಾಗಿ ಪ್ರಯೋಗಾಲಯಗಳನ್ನು ವಿಜ್ಞಾನ ಶಿಕ್ಷಕರು ಆರಂಭಿಸಿದ್ದಾರೆ~ ಎನ್ನುತ್ತಾರೆ ಹೆಗಡೆ. ಮುಂದಿನ ಬೇಸಿಗೆಯಲ್ಲಿ ವಿವಿ ಪ್ರಾಧ್ಯಾಪಕರಿಗೂ ತರಬೇತಿ ಆರಂಭವಾಗಲಿದೆ. ಏಕೆಂದರೆ ಇವರು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೋಧಿಸುತ್ತಾರೆ. ಎಂಎಸ್ಸಿ ಪದವೀಧರರು ಬಿಎಸ್ಸಿ ವಿದ್ಯಾರ್ಥಿಗಳಿಗೆ ಬೋಧಿಸುತ್ತಾರೆ. ಬಿಎಸ್ಸಿ ಬಿಇಡಿ ಪದವೀಧರರು ಪ್ರೌಢಶಾಲೆಯಲ್ಲಿ ಪಾಠ ಮಾಡುತ್ತಾರೆ. ಈ ಸರಪಳಿ ಪ್ರಕ್ರಿಯೆ ನಿರಂತರವಾಗಿ ನಡೆಯಬೇಕು ಎನ್ನುವುದು ವಿವಿ ಪ್ರಧ್ಯಾಪಕರಿಗೆ ತರಬೇತಿ ನೀಡುವ ಉದ್ದೇಶ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.