ಆಗಬೇಕೇ ನೀವು ಕಂಪೆನಿ ಕಾರ್ಯದರ್ಶಿ... ಕಂಪೆನಿ ಕಾರ್ಯದರ್ಶಿ. ಇದು ಇತ್ತೀಚಿನ ವರ್ಷಗಳಲ್ಲಿ ಕಂಪೆನಿಯೊಂದರ ಪ್ರಮುಖ ಹುದ್ದೆಗಳಲ್ಲೊಂದು ಎಂಬ ಮಹತ್ವ ಗಳಿಸಿಕೊಂಡಿದೆ. ಈ ಹುದ್ದೆಗೆ ಏರುವ ವ್ಯಕ್ತಿಗೆ ಸೂಕ್ತ ಶೈಕ್ಷಣಿಕ ಅರ್ಹತೆ ಇರಬೇಕು. ಅದೇ `ಸಿಎಸ್~. ದಿ ಇನ್‌ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೇಟರೀಸ್ ಆಫ್ ಇಂಡಿಯಾ (ಐಸಿಎಸ್‌ಐ) ರಾಷ್ಟ್ರಮಟ್ಟದ ಒಂದು ಪ್ರಮುಖ ವೃತ್ತಿಪರ ಸಂಸ್ಥೆ. ಅದು ದೂರಶಿಕ್ಷಣದ ಮೂಲಕ ಕಂಪೆನಿ ಸೆಕ್ರೇಟರಿ ಶಿಕ್ಷಣವನ್ನು ನೀಡುತ್ತದೆ. ಕಂಪೆನಿ ಕಾರ್ಯದರ್ಶಿಗಳ ವೃತ್ತಿಯನ್ನು ಬೆಳೆಸಲು ಹಾಗು ನಿಯಂತ್ರಿಸಲು ಸಂಸತ್ತು ಅಂಗೀಕರಿಸಿದ 1980ರ ಕಂಪೆನಿ ಕಾರ್ಯದರ್ಶಿ ಕಾಯ್ದೆಗೆ ಅನುಗುಣವಾಗಿ ಸ್ಥಾಪಿತವಾದ ಒಂದು ಸಂಸ್ಥೆಯಾಗಿದೆ. ಕಂಪೆನಿ ಕಾರ್ಯದರ್ಶಿಗಳಾಗುವ ಅರ್ಹತೆ ಹೊಂದಲು ಬಯಸುವವರಿಗೆ ಅಂಚೆ ತೆರಪಿನ ಮೂಲಕ ಹಾಗು ಮೌಖಿಕವಾಗಿ ಬೋಧನೆ ಹಾಗು ತರಬೇತಿಗಳನ್ನು ನೀಡುತ್ತದೆ. ಐಸಿಎಸ್‌ಐಯಲ್ಲಿ ಈಗಾಗಲೇ ಉದ್ಯೋಗಸ್ಥರಾಗಿರುವ ಹಾಗು ವೃತ್ತಿನಿರತರಾಗಿ ಅಭ್ಯಾಸ ಮಾಡುತ್ತಿರುವ 30,000ಕ್ಕೂ ಅಧಿಕ ಸದಸ್ಯರುಗಳಿದ್ದಾರೆ. ಅಲ್ಲದೆ ಸದ್ಯಕ್ಕೆ ಕಂಪೆನಿ ಕಾರ್ಯದರ್ಶಿ ಕೋರ್ಸಿಗೆ ಮೂರು ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಐಸಿಎಸ್‌ಐನ ಪ್ರಧಾನ ಕಚೇರಿ ನವದೆಹಲಿಯಲ್ಲಿದ್ದು ಚೆನ್ನೈ, ಕೋಲ್ಕತ್ತ, ಮುಂಬೈ ಹಾಗೂ ನವದೆಹಲಿಗಳಲ್ಲಿ 4 ಪ್ರಾದೇಶಿಕ ಕಚೇರಿ, ಭಾರತದಾದ್ಯಂತ 68 ಘಟಕಗಳನ್ನು ಹೊಂದಿದೆ. ನವಿ ಮುಂಬೈಯಲ್ಲಿ ಐಸಿಎಸ್‌ಐ ಕಾರ್ಪೊರೇಟ್ ಆಡಳಿತ ಸಂಶೋಧನೆ ಹಾಗು ತರಬೇತಿ ಸಂಸ್ಥೆ (ಐಸಿಎಸ್‌ಐ- ಸಿಸಿಜಿಆರ್‌ಟಿ) ಸ್ಥಾಪನೆಯಾಗಿದೆ. ಕಂಪೆನಿ ಕಾರ್ಯದರ್ಶಿಗಳ ಪರೀಕ್ಷೆ ವರ್ಷದಲ್ಲಿ ಎರಡು ಬಾರಿ ಅಂದರೆ ಜೂನ್ ಹಾಗೂ ಡಿಸೆಂಬರ್‌ನಲ್ಲಿ ದೇಶದ ವಿವಿಧೆಡೆಯ 117 ಪರೀಕ್ಷಾ ಕೇಂದ್ರಗಳಲ್ಲಿ ನಡೆಯುತ್ತದೆ. ಅಲ್ಲದೆ ಒಂದು ಪರೀಕ್ಷಾ ಕೇಂದ್ರ ವಿದೇಶದಲ್ಲಿಯೂ ಅಂದರೆ ದುಬೈನಲ್ಲಿಯೂ ಇದೆ. ಐಸಿಎಸ್‌ಐ ಮುಕ್ತ (ತೆರಪಿನ) ಕಲಿಕಾ ವಿಧಾನದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಇಲ್ಲಿ ವಿದ್ಯಾರ್ಥಿ ಯಾವುದೇ ನಿಯಮಿತ ತರಗತಿಗಳಿಗೆ ಹಾಜರಾಗಬೇಕಾದ ಅವಶ್ಯಕತೆ ಇರುವುದಿಲ್ಲ. ಅಲ್ಲದೆ ಇಲ್ಲಿ ಸಂಸ್ಥೆಯ ಪಾತ್ರ ಅರ್ಹ ವಿದ್ಯಾರ್ಥಿ ಒಂದು ಪ್ರಮಾಣ ಪತ್ರ ಪಡೆಯುವವರೆಗೆ ಮಾತ್ರ ಸೀಮಿತವೇ ಹೊರತು ನೌರಿ ಕೊಡಿಸುವುದಲ್ಲ. ಈ ಕೋರ್ಸ್ ಮುಗಿಸಿದ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ತಾವೇ ಕಂಡುಕೊಳ್ಳಬೇಕು. ಆದರೂ ಐಸಿಎಸ್‌ಐ ಕಳೆದ ವರ್ಷ ಒಂದು ಉದ್ಯೋಗ ಸಹಾಯ ಸಮಿತಿ (ಪ್ಲೇಸ್‌ಮೆಂಟ್ ಕಮಿಟಿ) ಸ್ಥಾಪಿಸಿದೆ. ಇದು 8 ಕ್ಯಾಂಪಸ್ ಸಂದರ್ಶನಗಳನ್ನು ನಡೆಸಿದೆ. ಇಲ್ಲಿ ಎಸ್‌ಇಬಿಐ, ಷೇರು ವಿನಿಮಯ ಕೇಂದ್ರ, ಆರ್‌ಬಿಐ, ಬ್ಯಾಂಕುಗಳು, ವ್ಯಾಪಾರೀ ಬ್ಯಾಂಕರುಗಳು, ವಿಷಯಗಳ ರಿಜಿಸ್ಟ್ರಾರ್‌ಗಳು ಮೊದಲಾದ ಉದ್ಯೋಗದಾತರು ತಮಗೆ ಅವಶ್ಯವಿರುವ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ವರ್ಷ ಪ್ರಾದೇಶಿಕ ಹಾಗು ಘಟಕ (ಚಾಪ್ಟರ್) ಹಂತಗಳಲ್ಲೂ ಉದ್ಯೋಗ ಸಹಾಯ ಸ್ಥಾಪಿಸಬೇಕೆಂಬ ನಿರ್ಣಯವನ್ನು ಕೈಗೊಳ್ಳಲಾಗಿದೆ. ಹಾಗಾಗಿ ಪ್ರಾದೇಶಿಕ ಹಂತದಲ್ಲಿ ಹೆಚ್ಚು ಹೆಚ್ಚು ಉದ್ಯೋಗ ನಿಯೋಜನಾ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗುವುದು ಮತ್ತು ಇದಕ್ಕಾಗಿ ವಿದ್ಯಾರ್ಥಿಗಳು ಪದೇ ಪದೇ ಕೇಂದ್ರ ಕಚೇರಿ ತನಕ ಬರಬೇಕಾದ ಅಗತ್ಯವಿರುವುದಿಲ್ಲ ಎನ್ನುತ್ತಾರೆ ಸಂಸ್ಥೆ ಅಧ್ಯಕ್ಷ ಸಿ.ಎಸ್. ನಿಸಾರ್ ಅಹ್ಮದ್. ವಿದ್ಯಾರ್ಹತೆ: ಸಿಎಸ್ ಪ್ರಾಥಮಿಕ ಕೋರ್ಸ್‌ಗೆ ಹಾಜರಾಗಲು 10 + 2 ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಕಲೆ, ವಿಜ್ಞಾನ ಹಾಗು ವಾಣಿಜ್ಯ ಅಧ್ಯಯನ ವಿಷಯಗಳಲ್ಲಿ ಓದುತ್ತಿರುವ (ಕುಶಲ ಕಲೆಯ ವಿದ್ಯಾರ್ಥಿಗಳನ್ನು ಹೊರತುಪಡಿಸಿ) ಯಾವುದೇ ವಿದ್ಯಾರ್ಥಿಗಳು ಈ ಕೋರ್ಸ್‌ಗೆ ಸೇರಬಹುದು. ಇವು ಅಂಚೆ ತೆರಪಿನ ಶಿಕ್ಷಣ ವಿಧಾನವಾಗಿದ್ದು, ಇಚ್ಛಿಸಿದಲ್ಲಿ ಮೌಖಿಕ ತರಗತಿಗಳಿಗೆ ಹಾಜರಾಗುವ ಅವಕಾಶವೂ ಇರುತ್ತದೆ. ಐಸಿಎಸ್‌ಐನ ಪ್ರಧಾನ ಕಚೇರಿ/ ಪ್ರಾದೇಶಿಕ ಕೌನ್ಸಿಲ್‌ಗಳು/ ಚಾಪ್ಟರ್ ಗಳಲ್ಲಿ 200 ರೂಪಾಯಿಯನ್ನು ನಗದಾಗಿ ಪಾವತಿಸಿ ಸಿಎಸ್ ಪ್ರಾಥಮಿಕ ಕೋರ್ಸಿನ ಪ್ರಾಸ್ಪೆಕ್ಟಸ್ ಹಾಗು ಅರ್ಜಿ ಫಾರಂಗಳನ್ನು ಪಡೆದುಕೊಳ್ಳಬಹುದು. ಸಿಎಸ್ ಪ್ರಾಥಮಿಕ ಕೋರ್ಸಿಗೆ ನೋಂದಣಿಯಾಗಲು 30ನೇ ಸೆಪ್ಟೆಂಬರ್ ಕೊನೆಯ ದಿನ.. ಅಭ್ಯರ್ಥಿಗಳು ಕಂಪೆನಿ ಕಾರ್ಯದರ್ಶಿ ಕೋರ್ಸಿನ ಪ್ರವೇಶಾತಿ, ನೋಂದಣಿಗೆ ಸಂಬಂಧಿಸಿದ ಮಾಹಿತಿಗಳನ್ನು ಪಡೆಯಲು 011 4150 4444 ಸಂಪರ್ಕಿಸಬಹುದು ಅಥವಾ ://.. ಮೂಲಕವೂ ನೊಂದಾಯಿಸಿಕೊಳ್ಳಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.