ವಿದೇಶಿ ವಿವಿ ಜತೆ ಡಿಎಸ್‌ಐ ಒಪ್ಪಂದ ಅಮೆರಿಕ, ಕೆನಡಾ ಹಾಗು ಆಸ್ಟ್ರೇಲಿಯದ ಒಟ್ಟು ಐದು ವಿಶ್ವವಿದ್ಯಾಲಯಗಳು ಬೆಂಗಳೂರಿನ ದಯಾನಂದ ಸಾಗರ್ ಇನ್‌ಸ್ಟಿಟ್ಯೂಷನ್ಸ್ (ಡಿಎಸ್‌ಐ) ಜತೆಗೆ ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಒಡಂಬಡಿಕೆಗಳಿಗೆ ಸಹಿ ಹಾಕಿವೆ. ಇವುಗಳೆಂದರೆ ಅಮೆರಿಕದ ಹೊನಲುಲುನಲ್ಲಿರುವ ಹವಾಯ್ ವಿವಿ, ನ್ಯೂಯಾರ್ಕ್‌ನ ಹೋಪ್‌ಸ್ಟ್ರಾ ವಿವಿ, ಅರ್ಕನ್ಸಸ್ ಟೆಕ್ ವಿವಿ, ಆಸ್ಟ್ರೇಲಿಯದ ಸಿಕ್ಯೂ ವಿವಿ ಹಾಗೂ ಕೆನಡಾದ ಮೌಂಟ್ ಸೆಂಟ್ ವಿನ್ಸೆಂಟ್ ವಿವಿ. `ಇದರೊಂದಿಗೆ ಡಿಎಸ್‌ಐ ದೇಶದಲ್ಲೇ ಅತಿ ಹೆಚ್ಚು ಒಪ್ಪಂದಗಳನ್ನು ಮಾಡಿಕೊಂಡ ಹಾಗೂ ಅತಿ ಹೆಚ್ಚು ವಿದೇಶಿ ವಿದ್ಯಾರ್ಥಿ ಸಮೂಹ ಹೊಂದಿರುವ ಶಿಕ್ಷಣ ಸಂಸ್ಥೆಯಾಗಿದೆ~ ಎನ್ನುತ್ತಾರೆ ಡಿಎಸ್‌ಐನ ಹಿರಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಆರ್. ಜನಾರ್ದನ. ಅವರ ಪ್ರಕಾರ `ವಿದೇಶಿ ವಿವಿಗಳ ಜತೆಗೆ ಒಪ್ಪಂದ ಮಾಡಿಕೊಂಡಿರುವುದರಿಂದ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕ್ಯಾಂಪಸ್‌ಗೆ ಪರಿಣಿತ ಉಪನ್ಯಾಸಕರ ಭೇಟಿ ಹೆಚ್ಚಲಿದೆ. ಅವರೆಲ್ಲರೂ ಹೊಸ ಅಧ್ಯಯನದ ಪ್ರಕಾರಗಳನ್ನು ತರಲಿದ್ದಾರೆ. ಈ ಮೂಲಕ ಕಾಲೇಜಿನ ತರಗತಿ ಹಾಗೂ ಪ್ರಯೋಗಾಲಯಗಳಲ್ಲಿ ಹೊಸ ಬಗೆಯ ಬೋಧನಾ ಪದ್ಧತಿಯ ಲಾಭವನ್ನು ವಿದ್ಯಾರ್ಥಿಗಳು ಹಾಗೂ ಬೋಧಕ ವೃಂದದವರು ಪಡೆಯಲಿದ್ದಾರೆ. ಈ ಒಡಂಬಡಿಕೆಯಿಂದ ಗುಣಮಟ್ಟದ ಸಂಶೋಧನೆಗಳು ಹಾಗೂ ಬೋಧನಾ ಅಭಿವೃದ್ಧಿಗೆ ಸಹಕಾರಿಯಾಗಲಿದೆ~. ಶಿಕ್ಷಕರಿಗೊಂದು ವೆಬ್ ತಾಣ ಅಜೀಂ ಪ್ರೇಂಜಿ ಪ್ರತಿಷ್ಠಾನ ಶಿಕ್ಷಕರಿಗೆ ಇಂಟರ್‌ನೆಟ್‌ನಲ್ಲಿ ಹೊಸ ತಾಣವೊಂದನ್ನು ಸೃಷ್ಟಿಸಿದೆ. ಶಿಕ್ಷಕರು .. ಜಗೆ ಲಾಗಿನ್ ಆಗಿ ಇದನ್ನು ಮುಕ್ತವಾಗಿ ಬಳಸಿಕೊಳ್ಳಬಹುದು. ಇದು ಪರಸ್ಪರ ಸಂವಹನ, ಚರ್ಚೆ, ಸಂವಾದ, ಮಾಹಿತಿ ವಿನಿಮಯಕ್ಕೆ ವೇದಿಕೆ ಕಲ್ಪಿಸುವುದರ ಜತೆಗೆ ಶಿಕ್ಷಕರ ನೈಪುಣ್ಯ ಹೆಚ್ಚಿಸಿಕೊಳ್ಳಲು ಗುಣಮಟ್ಟದ ಕಲಿಕಾ ಸಾಮಗ್ರಿಗಳು ಮತ್ತು ಡಿಜಿಟಲ್ ಸಂಪನ್ಮೂಲಗಳನ್ನು ಉಚಿತವಾಗಿ ಒದಗಿಸುತ್ತದೆ. ದೇಶದ ಸರ್ಕಾರಿ ಶಾಲೆಗಳ 55 ಲಕ್ಷ ಶಿಕ್ಷಕರ ಕಲಿಕೆ, ಕಲಿಸುವ ಸಾಮರ್ಥ್ಯ ಹೆಚ್ಚಿಸುವುದು ಇದರ ಮುಖ್ಯ ಉದ್ದೇಶ. ಪ್ರಸ್ತುತ ಹಿಂದಿ, ಕನ್ನಡ, ತೆಲಗು, ತಮಿಳು ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ವಿಷಯಗಳು ಲಭ್ಯ. ಬೆಂಗಳೂರಿನಲ್ಲಿ ಜಿಐಐಎಸ್ ಶಾಲೆ ಏಳು ದೇಶಗಳಲ್ಲಿ 20 ಕ್ಯಾಂಪಸ್‌ಗಳನ್ನು ಹೊಂದಿರುವ ಗ್ಲೋಬಲ್ ಇಂಡಿಯನ್ ಇಂಟರ್‌ನ್ಯಾಷನಲ್ ಸ್ಕೂಲ್ (ಜಿಐಐಎಸ್) ಇದೀಗ ಬೆಂಗಳೂರಿನಲ್ಲಿ ತನ್ನ ಮೊದಲ ಕ್ಯಾಂಪಸ್ ತೆರೆದಿದೆ. ಇದು ವೈಟ್‌ಫೀಲ್ಡ್‌ನಲ್ಲಿ ಸುಮಾರು 6.75 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದ್ದು ಅತ್ಯಾಧುನಿಕ ಸೌಕರ್ಯಗಳನ್ನು ಒಳಗೊಂಡಿವೆ. ಜಿಐಐಎಸ್ ಈಗಾಗಲೇ ಸಿಂಗಪುರ, ಟೋಕಿಯೊ, ಕ್ವಾಲಾಲಂಪುರ, ಬ್ಯಾಂಕಾಕ್, ದುಬೈ, ನವದೆಹಲಿ ಮತ್ತು ನೋಯ್ಡಾದಲ್ಲಿ ಕ್ಯಾಂಪಸ್ ಹೊಂದಿವೆ. ಇದೀಗ ಉದ್ಯಾನಗರಿಯ ಮಕ್ಕಳಿಗೆ `ಅಂತರರಾಷ್ಟ್ರೀಯ ಎಕ್ಸ್‌ಪೋಷರ್~ ನೀಡುವ ಕನಸಿನೊಂದಿಗೆ ಇಲ್ಲಿ ತನ್ನ ಶಾಲೆಯನ್ನು ಆರಂಭಿಸಿದೆ. 2013-14ರ ಶೈಕ್ಷಣಿಕ ವರ್ಷದಿಂದ ಪ್ರವೇಶ ಆರಂಭವಾಗಲಿದೆ. ಮೊದಲ ವರ್ಷದಲ್ಲಿ ನರ್ಸರಿಯಿಂದ ಐದನೇ ತರಗತಿ ವರೆಗಿನ ಮಕ್ಕಳಿಗೆ ಅವಕಾಶ ಇದೆ. ಸಿಬಿಎಸ್‌ಇ ಪಠ್ಯಕ್ರಮವನ್ನು ಅಳವಡಿಸಲಾಗಿದೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಚಂದು ಬೋರ್ಡೆ ಜಿಐಐಎಸ್ ಉಪಾಧ್ಯಕ್ಷರಲ್ಲಿ ಒಬ್ಬರಾಗಿದ್ದಾರೆ. ಈ ಶಾಲೆಯಲ್ಲಿ ಅವರ ಹೆಸರಿನಲ್ಲಿ ಕ್ರಿಕೆಟ್ ಅಕಾಡೆಮಿಯೂ ಆರಂಭವಾಗಲಿದೆ. ಅಂತರರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಮೈದಾನವನ್ನು ಶಾಲೆ ಹೊಂದಲಿದೆ. ಇದರ ಜೊತೆಗೆ `ಮೈಂಡ್ ಚಾಂಪಿಯನ್ಸ್ ಚೆಸ್ ಅಕಾಡೆಮಿ~ ಕೂಡಾ ತೆರೆಯಲಾಗುವುದು. `ಜಿಐಐಎಸ್ ಮಕ್ಕಳಿಗೆ ಅತ್ಯುನ್ನತ ಮಟ್ಟದ ಶಿಕ್ಷಣ ನೀಡುವಲ್ಲಿ ಹೆಸರು ಪಡೆದಿದೆ. ಇಂದಿನ ಮಕ್ಕಳ ಬೇಡಿಕೆಗೆ ತಕ್ಕಂತೆ ಶಿಕ್ಷಣ ನೀಡುವುದು ನಮ್ಮ ಮೊದಲ ಆದ್ಯತೆ~ ಎಂಬುದು ಗ್ಲೋಬಲ್ ಸ್ಕೂಲ್ಸ್ ಫೌಂಡೇಷನ್‌ನ ಮುಖ್ಯಸ್ಥ ಅತುಲ್ ತೆಮುರ್‌ನಿಕರ್ ಅವರ ಹೇಳಿಕೆ. ಮಾಹಿತಿಗೆ: ಮೋನಾ ವರ್ಮಾ (77604 88800) ಅವರನ್ನು ಸಂಪರ್ಕಿಸಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.