ಬ್ಯಾಂಕ್ ಪರೀಕ್ಷೆಗೆ ತಯಾರಿ ಭಾರತೀಯ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಪದವೀಧರರಿಗೆ ಉಜ್ವಲ ಭವಿಷ್ಯ ಕಾದಿದೆ. ಮುಂದಿನ ಐದು ವರ್ಷಗಳಲ್ಲಿ ಈ ಬ್ಯಾಂಕ್‌ಗಳಲ್ಲಿ 7.5 ಲಕ್ಷಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ ನಡೆಯಲಿದೆ. ಆದರೆ ಆ ಹುದ್ದೆ ನಿಮಗೇ ಸಿಗಬೇಕು ಎನ್ನುವುದಾದರೆ ಬ್ಯಾಂಕಿಂಗ್ ಪರೀಕ್ಷೆ ಪಾಸಾಗಬೇಕು. ಅದಕ್ಕೆ ಸೂಕ್ತ ಸಿದ್ಧತೆ ಬಹಳ ಮುಖ್ಯ. ಇದರಲ್ಲಿ ಯಶಸ್ಸಿನ ದರ ಶೇ 1.5 ಮಾತ್ರ. ಅಂದರೆ 200 ಆಕಾಂಕ್ಷಿಗಳಲ್ಲಿ 3 ಮಂದಿ ಮಾತ್ರ ತೇರ್ಗಡೆಯಾಗುತ್ತಾರೆ. ಬ್ಯಾಂಕ್‌ಗಳು ಹೊಸಬರನ್ನು ಅವರ ಕೌಶಲ ಪರೀಕ್ಷೆ ಮತ್ತು ಬ್ಯಾಂಕಿಂಗ್ ತರಬೇತಿಯ ನಂತರ ನೇಮಕ ಮಾಡಿಕೊಳ್ಳುತ್ತವೆ.ಆದ್ದರಿಂದ ಈ ಪರೀಕ್ಷೆ ಹೇಗಿರುತ್ತದೆ? ಇಲ್ಲಿದೆ ಪ್ರಶ್ನೋತ್ತರ ರೂಪದ ಮಾಹಿತಿ. *ಪರೀಕ್ಷೆಯಲ್ಲಿ ಎಷ್ಟು ಪ್ರಶ್ನೆ ಪತ್ರಿಕೆಗಳು ಇರುತ್ತವೆ? ಪರೀಕ್ಷೆಯು 2 ವಿಧದ ಪ್ರಶ್ನೆಪತ್ರಿಕೆಗಳನ್ನು ಹೊಂದಿದೆ. ಇದರಲ್ಲಿ ಆಬ್ಜೆಕ್ಟಿವ್ ಟೆಸ್ಟ್ (120 ನಿಮಿಷ ಅವಧಿ) ಮತ್ತು ವಿವರಣಾತ್ಮಕ ಪರೀಕ್ಷೆ (60 ನಿಮಿಷ). * ಯಾವ ರೀತಿ ಪ್ರಶ್ನೆಗಳನ್ನು ಪರೀಕ್ಷೆಯಲ್ಲಿ ನಿರೀಕ್ಷಿಸಬಹುದು? ಆಬ್ಜೆಕ್ಟಿವ್ ಪರೀಕ್ಷೆಯು 200 ಅಂಕಗಳ 200 ಪ್ರಶ್ನೆಗಳನ್ನು ಒಳಗೊಂಡಿದೆ. ಇವು ತಲಾ 50 ಪ್ರಶ್ನೆಗಳ ನಾಲ್ಕು ವಿಭಾಗಗಳಲ್ಲಿ ಇರುತ್ತವೆ. ಅಂದರೆ ಮಾಹಿತಿ ವಿಶ್ಲೇಷಣೆ ಮತ್ತು ಪರಿಮಾಣಾತ್ಮಕ ಯೋಗ್ಯತಾ ವಿಭಾಗ, ತರ್ಕ, ಸಾಮಾನ್ಯ ಇಂಗ್ಲಿಷ್ ಮತ್ತು ಸಾಮಾನ್ಯ ಜ್ಞಾನ, ಮಾರ್ಕೆಟಿಂಗ್, ಕಂಪ್ಯೂಟರ್. 50 ಅಂಕಗಳ ವಿವರಣಾತ್ಮಕ ಪರೀಕ್ಷೆಗೆ ಪ್ರಬಂಧ, ಪತ್ರ ಮತ್ತು ಸಂಕ್ಷಿಪ್ತ ರೂಪದಲ್ಲಿ ಉತ್ತರಗಳನ್ನು ಬರೆಯಬೇಕು. * ಪರೀಕ್ಷೆಯ ಬಗ್ಗೆ ಹೆಚ್ಚಿನ ಮಾಹಿತಿ ಎಲ್ಲಿ ಲಭ್ಯ? ಕಳೆದ 2 ವರ್ಷಗಳ ಎಸ್‌ಬಿಐ ಪಿಒ ಪರೀಕ್ಷೆಯ ಹಳೆ ಪ್ರಶ್ನೆಪತ್ರಿಕೆಗಳ ಅಧ್ಯಯನ ಸೂಕ್ತ. ಬ್ಯಾಂಕಿಂಗ್ ಸರ್ವೀಸ್ ಕ್ರಾನಿಕಲ್ ಪುಸ್ತಕವು ಎಸ್‌ಬಿಐ ಪಿಒದ ಹಿಂದಿನ ಪ್ರಶ್ನೆಪತ್ರಿಕೆಗಳು, ಪರೀಕ್ಷೆಯ ಬಗ್ಗೆ ಕೆಲವು ಒಳನೋಟಗಳನ್ನು ನೀಡುತ್ತದೆ. *ಈ ಪರೀಕ್ಷೆಗೆ ತರಬೇತಿ ಇದೆಯೆ? ಹೌದು. ಅನೇಕ ಶೈಕ್ಷಣಿಕ ಸಂಸ್ಥೆಗಳು ಅಧಿಕಾರಿ ಮತ್ತು ಗುಮಾಸ್ತ ಹುದ್ದೆಗೆ ತರಬೇತಿ ನೀಡುತ್ತವೆ. ನಿಮ್ಮ ಊರಿನಲ್ಲಿ ಇರುವ ಇಂಥ ಸಂಸ್ಥೆಗಳಿಗೆ ನೀವು ಸೇರಬಹುದು. ಬ್ಯಾಂಕಿಂಗ್ ಕೌಶಲ ಪರೀಕ್ಷೆಯಲ್ಲಿ ಗೆಲ್ಲಲು ಐದು ಸೂತ್ರಗಳಿವೆ. * ನೀವು ಯಾವ ಹಂತದಲ್ಲಿದ್ದೀರಿ ಎಂಬುದನ್ನು ಅರಿತುಕೊಳ್ಳಿ. ಅಲ್ಲಿಂದಲೇ ಸಾಧನೆ ಆರಂಭಿಸಿ. *ಪರೀಕ್ಷೆಯ ವಿವಿಧ ಹಂತಗಳು, ಅಧ್ಯಯನದ ಪ್ರಕ್ರಿಯೆಗಳನ್ನು ಕಲಿಯಿರಿ. * ಅಗತ್ಯ ಬಿದ್ದರೆ ವೃತ್ತಿಪರ ತರಬೇತಿ ಪಡೆಯಲು ಹಿಂಜರಿಕೆ ಬೇಡ. * ಸತತ ಅಭ್ಯಾಸ ಅತಿ ಮುಖ್ಯ. * ಕಲಿಕೆಯ ವೇಳಾಪಟ್ಟಿ ರೂಪಿಸಿಕೊಳ್ಳಿ. ಅದನ್ನು ಕಟ್ಟುನಿಟ್ಟಾಗಿ ಪಾಲಿಸಿ. ಅಂದುಕೊಂಡದ್ದನ್ನು ಪಟ್ಟು ಹಿಡಿದು ಸಾಧಿಸಿ. ನೀವೆಲ್ಲಿದ್ದೀರಿ: ನೀವೆಲ್ಲಿದ್ದೀರಿ ಅಲ್ಲಿಂದಲೇ ಪಯಣ ಆರಂಭಿಸಿರಿ. ಬ್ಯಾಂಕ್ ಪರೀಕ್ಷೆಗಳು ಕೌಶಲ ಆಧಾರಿತ. ಆದ್ದರಿಂದ `ನನಗೆ ಎಲ್ಲ ತಿಳಿದಿದೆ~ ಎಂಬ ಉಡಾಫೆ ಬೇಡ. ಇದರಿಂದ ಸಮಸ್ಯೆಯಾಗುತ್ತದೆ. ಉತ್ತಮ ಮಾರ್ಗವೆಂದರೆ ನೀವೇ ಅಣಕು ಪರೀಕ್ಷೆ ತೆಗೆದುಕೊಳ್ಳುವುದು. ಆಗ ನಿಮ್ಮ ಜ್ಞಾನ ಎಷ್ಟಿದೆ, ನೀವೆಲ್ಲಿದ್ದೀರಿ ಎಂಬುದು ಗೊತ್ತಾಗುತ್ತದೆ. ಗಳಿಸಿದ ಅಂಕ ನೀವೆಲ್ಲಿದ್ದೀರಿ ಎಂಬುದನ್ನು ತೋರಿಸುತ್ತದೆ. ಆ ಅಂಕಗಳನ್ನು ಇತರ ಆಕಾಂಕ್ಷಿಗಳ ಅಂಕಗಳಿಗೆ ಹೋಲಿಸಿಕೊಳ್ಳಿರಿ. ಕಾರ್ಯತಂತ್ರ ಕಲಿಯಿರಿ: ಪರೀಕ್ಷೆಯ ರೀತಿ, ನೀತಿಗಳ ಬಗ್ಗೆ ಚೆನ್ನಾಗಿ ಕಲಿಯಿರಿ. ಕೌಶಲ ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನ ಮುಖ್ಯ ಪಾತ್ರ ವಹಿಸುತ್ತದೆ. ಪರೀಕ್ಷೆಯ ಎಲ್ಲ ಕಾರ್ಯತಂತ್ರಗಳನ್ನು ಕರಗತ ಮಾಡಿಕೊಳ್ಳಿರಿ. ಉದಾಹರಣೆಗೆ ಸಾಮಾನ್ಯ ಲಿಖಿತ ಪರೀಕ್ಷೆ (ಸಿಡಬ್ಲ್ಯುಇ ) ಇರುತ್ತದೆ. ಐಬಿಪಿಎಸ್ ಇದನ್ನು ನಡೆಸುತ್ತದೆ. ಇದಕ್ಕಾಗಿ ಇಂಗ್ಲಿಷ್ ಭಾಷೆಯ ಜ್ಞಾನವನ್ನು ಹೆಚ್ಚಿಸಿಕೊಳ್ಳಿರಿ. ಇದರಿಂದ ಸಾಕಷ್ಟು ಉಪಯೋಗವಾಗುತ್ತದೆ. ಹೆಚ್ಚು ಅಂಕ ಗಳಿಸಲು ನೆರವಾಗುತ್ತದೆ. ಹೀಗಿದ್ದರೂ ಎಲ್ಲ ವಿಭಾಗಗಳ್ಲ್ಲಲೂ ಅಂಕಗಳಿಸಬೇಕಾಗುತ್ತದೆ. ಇಂಗ್ಲಿಷ್‌ನಲ್ಲಿ ಉತ್ತಮ ಅಂಕ ಬಂದರೂ ಸಾಮಾನ್ಯ ಜ್ಞಾನ ವಿಭಾಗದಲ್ಲಿ ಹಿಂದೆ ಬಿದ್ದರೆ ಪಾಸಾಗುವುದು ಕಷ್ಟ. ವೃತ್ತಿಪರ ತರಬೇತಿ: ಅಗತ್ಯ ಬಿದ್ದರೆ ವೃತ್ತಿಪರ ತರಬೇತಿ ಪಡೆಯಿರಿ. ಇದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ಪರೀಕ್ಷೆಯ ವಿಧಾನವನ್ನು ಅರಿತುಕೊಳ್ಳಲು ನೆರವಾಗುತ್ತದೆ. ಆದರೆ ಆತ್ಮವಿಶ್ವಾಸ ಮಾತ್ರ ಸಾಕಾಗುವುದಿಲ್ಲ. ಅದಕ್ಕಾಗಿ ತರಬೇತಿ ಪಡೆಯುವುದು ಒಳ್ಳೆಯದು. ಇದರಿಂದ 10-20 ಅಂಕ ಹೆಚ್ಚು ದೊರೆಯುವ ಸಾಧ್ಯತೆ ಅಧಿಕ. ಆಕಾಂಕ್ಷಿ ನಿರಂತರ ಅಭ್ಯಾಸಿಯಾಗಿರಬೇಕು. ಅಭ್ಯಾಸಕ್ಕೆ ಹೆಚ್ಚು ಸಮಯ ವಿನಿಯೋಗಿಸುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು. ಪರೀಕ್ಷೆಯನ್ನು ಎದುರಿಸಲು ಅಂಜಿಕೆ ಬೇಡ. ನಿರಾತಂಕವಾಗಿ ಅನುಭವಿಸುತ್ತ ಖುಷಿಯಿಂದ ಎದುರಿಸಿ. ಬ್ಯಾಂಕ್ ಸಿದ್ಧತಾ ಪರೀಕ್ಷೆ ಕಠಿಣ ನಿಜ. ಆದರೆ ಅದು ನಿಮ್ಮ ಭವಿಷ್ಯವನ್ನು ರೂಪಿಸುತ್ತದೆ. ಕಠಿಣ ಪರಿಶ್ರಮವೇ ಅದಕ್ಕೆ ಸರಿ ದಾರಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.