ವಿದ್ಯಾರ್ಥಿಗಳಿಗೆ ಐಡಿಯಾ ಪ್ರಶಸ್ತಿ ಪ್ರಮುಖ ಮೊಬೈಲ್ ಸೇವಾ ಕಂಪೆನಿ ಐಡಿಯಾ ಸೆಲ್ಯುಲಾರ್ ಕರ್ನಾಟಕದ ವಿದ್ಯಾರ್ಥಿಗಳಿಗಾಗಿ `ಐಡಿಯಾ ಸ್ಟೂಡಂಟ್ಸ್ ಅವಾರ್ಡ್~ ಆರಂಭಿಸಿದೆ. ಈ ಮೂಲಕ ಉದ್ಯಮಶೀಲತೆ, ಸಂಶೋಧನೆ, ಕ್ರೀಡೆ ಮತ್ತು ಸಾಹಸ, ಪ್ರದರ್ಶನ ಕಲೆ, ಸೃಜನಶೀಲ ಕಲೆ, ಸಮಾಜ ಸೇವೆ, ವಿಶಿಷ್ಟ ಪ್ರತಿಭೆ ಮತ್ತು ಅಂತರರಾಷ್ಟ್ರೀಯ ವಿದ್ಯಾರ್ಥಿ ಎಂಬ ಎಂಟು ವಿಭಾಗಗಳಲ್ಲಿ ವಿದ್ಯಾರ್ಥಿ ಪ್ರತಿಭೆಗಳನ್ನು ಗುರುತಿಸಿ ಗೌರವಿಸಲಿದೆ. ಇದಕ್ಕಾಗಿ ರಾಜ್ಯದ ವಿವಿಧೆಡೆಯ 3 ಸಾವಿರ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಾಧಕರ ಶೋಧನೆ ನಡೆಯುತ್ತದೆ. ಇವರಲ್ಲಿ ಅರ್ಹರನ್ನು ಆಯ್ಕೆ ಮಾಡಲು ಟೆಸ್ಕೊ ಸಿಇಒ ಸಂದೀಪ್ ಧರ್, ಮನಶ್ಶಾಸ್ತ್ರಜ್ಞೆ ಡಾ. ರಾಜಿ, ಫ್ಯಾಷನ್ ಉಡುಪು ವಿನ್ಯಾಸಕಿ ಜಿ. ನಮ್ರತಾ, ಅಂಕಣಕಾರ ಎಸ್.ಆರ್. ರಾಮಕೃಷ್ಣ, ನಟ ಶ್ರೀನಾಥ್, ಗಿವ್ ಜಿ ಪ್ರತಿಷ್ಠಾನದ ಕುಮಾರ್ ಅನೀಶ್ ಅವರುಳ್ಳ ತೀರ್ಪುಗಾರರ ಮಂಡಳಿ ರಚಿಸಲಾಗಿದೆ. ಅನೇಕ ಕಾಲೇಜುಗಳು ತಮ್ಮ ಪಠ್ಯೇತರ ಚಟುವಟಿಕೆಯಲ್ಲೇ ಪ್ರತಿಭಾನ್ವೇಷಣೆ ಕಾರ್ಯಕ್ರಮ ಅಳವಡಿಸಿರುತ್ತವೆ. ಆದರೆ ಅದು ಆಯಾ ಕಾಲೇಜು ಮಟ್ಟಕ್ಕೆ ಸೀಮಿತವಾಗಿರುತ್ತದೆ. ಇಂಥ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿಶಾಲ ವೇದಿಕೆ ಕಲ್ಪಿಸಿ ಪ್ರೋತ್ಸಾಹಿಸುವುದು ಕೂಡ ಪ್ರಶಸ್ತಿಯ ಉದ್ದೇಶ ಎನ್ನುತ್ತಾರೆ ಐಡಿಯಾ ಸೆಲ್ಯುಲರ್‌ನ ಕರ್ನಾಟಕ ಸಿಇಒ ಶಿವ ಗಣಪತಿ. 16 ರಿಂದ 26 ವರ್ಷದೊಳಗಿನ ಮತ್ತು ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಇದಕ್ಕಾಗಿ ಅರ್ಜಿ ಸಲ್ಲಿಸಬಹುದು ಅಥವಾ ಅವರ ಹೆಸರನ್ನು ಯಾರಾದರೂ ಸೂಚಿಸಬಹುದು. ಅ. 5 ಕೊನೆಯ ದಿನ ಪ್ರವೇಶ ಪತ್ರ ಸ್ವೀಕರಿಸಲು ಅಕ್ಟೋಬರ್ 5 ಕೊನೆಯ ದಿನ. ಅರ್ಜಿಗಳನ್ನು ತೀರ್ಪುಗಾರರು ವಿಮರ್ಶಿಸಿ ಕಿರುಪಟ್ಟಿ ಆಯ್ಕೆ ಮಾಡುತ್ತಾರೆ. ಈ ವಿದ್ಯಾರ್ಥಿಗಳು ವ್ಯಕ್ತಿಗತ ಸಂದರ್ಶನ, ಸಾಧನೆಯ ಪ್ರಾತ್ಯಕ್ಷಿಕೆಗೆ ಹಾಜರಾಗಬೇಕಾಗುತ್ತದೆ. ಅಲ್ಲಿ ಆಯ್ಕೆಯಾದವರ ಹೆಸರನ್ನು ಅ. 19ರಂದು ಘೋಷಿಸಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಮಾಹಿತಿಗೆ: .. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.