ಆಕರ ಕೋಶ: ತೆರೆದಿದೆ ಅವಕಾಶ ಜೀವಕೋಶಗಳು, ಅಂಗಾಂಗಗಳು ಮತ್ತು ಅಂಗಾಂಶಗಳನ್ನು ಭವಿಷ್ಯದಲ್ಲಿ -180 ಡಿಗ್ರಿ ಸೆಂಟಿಗ್ರೇಡ್ ವಾತಾವರಣದಲ್ಲಿ ದೀರ್ಘ ಕಾಲ ಸಂರಕ್ಷಿಸಿಡಬಹುದು, ಎಷ್ಟೋ ವರ್ಷಗಳ ಬಳಿಕ ಅವನ್ನು ಹೊರತೆಗೆದು ಮರುಜೀವ ತುಂಬಬಹುದು. ಇದು ಕಟ್ಟುಕಥೆಯಲ್ಲ, ಬದಲಿಗೆ ವೈಜ್ಞಾನಿಕ ಸತ್ಯ. ಆಕರ ಕೋಶಗಳ (ಸ್ಟೆಮ್‌ಸೆಲ್) ಕ್ಷೇತ್ರದಲ್ಲಿ ಈ ದಿಸೆಯಲ್ಲಿ ನಡೆಯುತ್ತಿರುವ ಸಂಶೋಧನೆ, ಪ್ರಯೋಜನ, ಸಾಧ್ಯತೆಗಳು ಯುವಜನರಿಗೆ ಒಂದು ಹೊಸ ವೃತ್ತಿ ಆಯ್ಕೆಯಾಗಿ ಹೊರಹೊಮ್ಮಿವೆ. ಆಕರ ಕೋಶ ಸಂಶೋಧನೆ, ಸುಧಾರಿತ ಜೀವಶಾಸ್ತ್ರೀಯ ಸಂಶೋಧನೆಯಾಗಿದೆ. ಅನೇಕ ಕಾಯಿಲೆಗಳಿಗೆ ಹೊಸ ಔಷಧಿ ಕಂಡುಹಿಡಿಯುವ ನಿಟ್ಟಿನಲ್ಲಿ ದಾಪುಗಾಲು ಇಡಲು ನೆರವಾಗುತ್ತಿದೆ. ಸ್ಟೆಮ್‌ಸೆಲ್ ಸಂಶೋಧನೆಯ ಮುಂದಿನ ಹಂತವೇ ಸ್ಟೆಮ್‌ಸೆಲ್ ಥೆರಪಿ (ಚಿಕಿತ್ಸೆ). ಸ್ಟೆಮ್‌ಸೆಲ್ ಚಿಕಿತ್ಸೆ ಎನ್ನುವುದು ಒಂದು ನಿರ್ದಿಷ್ಟ ಕಾಯಿಲೆಗೆ ಚಿಕಿತ್ಸೆ ಸಂದರ್ಭದಲ್ಲಿ ಹಾನಿಗೊಂಡಿರುವ ಗ್ರಂಥಿಗಳ ಬದಲಾಗಿ ಹೊಸ ಪ್ರೌಢ ಸ್ಟೆಮ್‌ಸೆಲ್ಪರಿಚಯಿಸುವುದಾಗಿದೆ. ಉದಾಹರಣೆಗೆ ಬೆನ್ನುಮೂಳೆಯ ಮಜ್ಜೆ ಮತ್ತು ಹೊಕ್ಕಳು ಬಳ್ಳಿಯ ಆಕರ ಕೋಶಗಳನ್ನು ರಕ್ತ ಕ್ಯಾನ್ಸರ್ ಚಿಕಿತ್ಸೆಗೆ ಬಳಸಬಹುದು. ಟೈಪ್ 1 ಮಧುಮೇಹ, ಪಾರ್ಕಿನ್ಸನ್ ಕಾಯಿಲೆ ಹಾಗೂ ಅನೇಕ ಬಗೆಯ ಕ್ಯಾನ್ಸರ್ ಚಿಕಿತ್ಸೆಗೆ ಇದು ಸಹಕಾರಿ. ಸ್ಟೆಮ್‌ಸೆಲ್ ಸಂಶೋಧನೆ ಮತ್ತು ಚಿಕಿತ್ಸೆ ಹೊಸದೊಂದು ವೃತ್ತಿ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವ ಹುಮ್ಮಸ್ಸಿನಲ್ಲಿ ಇರುವವರಿಗೆ ಸಹಕಾರಿ. ಇದಕ್ಕೆ ವೈದ್ಯಕೀಯ ವೃತ್ತಿಪರರು ಮಾತ್ರ ಅರ್ಹರೇ? ಇದಕ್ಕೆ ಉತ್ತರ `ಇಲ್ಲ~. ವೈದ್ಯಕೀಯ ಶಿಕ್ಷಣ ಹೊಂದಿದವರು ಮಾತ್ರ ಈ ಸ್ಟೆಮ್‌ಸೆಲ್ ಸಂಶೋಧನೆ ಕೈಗೊಳ್ಳಬಹುದು ಎನ್ನುವುದು ತಪ್ಪು ಕಲ್ಪನೆ. ಮೂಲ ಜೀವಶಾಸ್ತ್ರ ವ್ಯಾಸಂಗ ಮಾಡಿದವರೂ ಇದನ್ನು ಕಲಿತು ಈ ಕ್ಷೇತ್ರದಲ್ಲಿ ಉದ್ಯೋಗ ಪಡೆದುಕೊಳ್ಳಬಹುದು. ಬಯಾಲಜಿಕಲ್ ಸೈನ್ಸನ್ನು ಒಂದು ವಿಷಯವಾಗಿ ಓದಿರುವ ಬಿಎಸ್‌ಸಿ ಪದವೀಧರರು, ಎಂಬಿಬಿಎಸ್ ಅಥವಾ ಬಿ ಫಾರ್ಮಾ ಅಥವಾ ಬಿಡಿಎಸ್ ಅಥವಾ ಬಿ.ಬಿಎಸ್‌ಸಿ ಅಥವಾ ಬಿಇ ಬಯೋಟೆಕ್ನಾಲಜಿ ಓದಿದವರು ಸ್ಟೆಮ್‌ಸೆಲ್ ಸಂಶೋಧನೆ ಕೆಲಸ ಹುಡುಕಿಕೊಳ್ಳಬಹುದು. ಪ್ರವರ್ಧಮಾನಕ್ಕೆ ಬರುತ್ತಿರುವ ಈ ಜೈವಿಕ ಔಷಧ ಕ್ಷೇತ್ರಕ್ಕೆ ಗುಣಮಟ್ಟದ ಹಾಗೂ ಉತ್ತಮ ತರಬೇತಿ ಪಡೆದ ಮಾನವ ಸಂಪನ್ಮೂಲದ ಅಗತ್ಯವಿದೆ. ಬಯೊಮೆಡಿಸಿನ್‌ನ ವಿಶ್ವ ಮಾರುಕಟ್ಟೆ 2013ರ ವೇಳೆಗೆ 11 ಸಾವಿರ ಕೋಟಿ ರೂಪಾಯಿ ತಲುಪುವ ನಿರೀಕ್ಷೆ ಇದ್ದು, ವಿಸ್ತರವಾದ ವಿಜ್ಞಾನ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದವರಿಗೆ ಯಥೇಚ್ಛ ವೃತ್ತಿ ಅವಕಾಶಗಳಿವೆ. ಏಷ್ಯಾ ಪೆಸಿಫಿಕ್ ವಲಯದಲ್ಲಿ ಭಾರತ ಅತಿ ದೊಡ್ಡ ಬಯೋಟೆಕ್ ಕ್ಷೇತ್ರವಾಗಿದ್ದರೆ, ಜಪಾನ್, ದಕ್ಷಿಣ ಕೊರಿಯಾ, ಮಲೇಷ್ಯಾ ಸಹ ವೇಗದಲ್ಲಿ ಈ ನಿಟ್ಟಿನಲ್ಲಿ ಪ್ರಗತಿ ಕಾಣುತ್ತಿವೆ. ಕರ್ನಾಟಕ ಅದರಲ್ಲೂ ಬೆಂಗಳೂರು ಸ್ಟೆಮ್‌ಸೆಲ್‌ಗೆ ಸಂಬಂಧಿಸಿದ ಉದ್ಯೋಗಾವಕಾಶಗಳಿಗೆ ಪ್ರಮುಖ ತಾಣವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಟೆಮ್‌ಸೆಲ್ ಚಿಕಿತ್ಸೆಯ ವೃತ್ತಿ ಅವಕಾಶ ವ್ಯಾಪಕವಾಗಿವೆ. ಯುರೋಪ್, ಆಸ್ಟ್ರೇಲಿಯಾ ಮತ್ತು ಅಮೆರಿಕಗಳಲ್ಲಿ ವಿದ್ಯಾರ್ಥಿಗಳು ಅಭಿವೃದ್ಧಿ ಜೀವಶಾಸ್ತ್ರ, ಟಿಶ್ಯೂ ಇಂಜಿನಿಯರಿಂಗ್, ಎಂಬ್ರಿಯಾಲಜಿ, ಮೆಡಿಕಲ್ ಬಯೋಟೆಕ್ನಾಲಜಿ, ಮಾಲಿಕ್ಯುಲರ್ ಬಯಾಲಜಿ, ಸೆಲ್ ಬಯಾಲಜಿ, ನ್ಯಾನೋ ಟೆಕ್ನಾಲಜಿ, ಕ್ಲಿನಿಕಲ್ ರೀಸರ್ಚ್ ಮತ್ತು ಸ್ಟೆಮ್‌ಸೆಲ್ ಬಯಾಲಜಿ ವಿಷಯಗಳಲ್ಲಿ ತಮ್ಮ ಸಂಶೋಧನೆ ಮುಂದುವರಿಸುವ ಆಯ್ಕೆ ಹೊಂದಿದ್ದಾರೆ. ಇದು ಮೂಲ ಜೀವಶಾಸ್ತ್ರದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ವ್ಯಾಪಕ ಆಯ್ಕೆಗಳನ್ನು ಒದಗಿಸುತ್ತದೆ.ಭಾರತದಲ್ಲಿ ವೃತ್ತಿಯಾಗಿ ಸ್ಟೆಮ್‌ಸೆಲ್ ಸಂಶೋಧನೆ ಭಾರತದಲ್ಲಿ ಅತ್ಯಂತ ವೇಗದಲ್ಲಿ ಬೆಳೆಯುತ್ತಿರುವ ವಿಜ್ಞಾನದ ಕ್ಷೇತ್ರಗಳಲ್ಲೊಂದು. ಅನೇಕ ವಿವಿಗಳಲ್ಲಿ ಇದನ್ನು ಆಧರಿಸಿದ ಚಿಕಿತ್ಸೆಯ ಸಂಶೋಧನೆ ನಡೆಯುತ್ತಿದೆ. ಭಾರತದಲ್ಲಿ ಆಕರಕೋಶ ಜೀವಶಾಸ್ತ್ರ (ಸ್ಟೆಮ್‌ಸೆಲ್ ಬಯಾಲಜಿ) ಮೂಲ ವಿಜ್ಞಾನ ಮತ್ತು ವೈದ್ಯಕೀಯ ಚಿಕಿತ್ಸಾ ಬಳಕೆ ಈ ಎರಡೂ ಕ್ಷೇತ್ರದಲ್ಲಿ ಪ್ರಗತಿ ಹೊಂದುತ್ತಿದೆ. ಭಾರತ ಸರ್ಕಾರವೂ ತನ್ನ ಡಿಬಿಟಿ, ಡಿಎಸ್‌ಟಿ, ಐಸಿಎಂಆರ್ ಮೊದಲಾದ ವಿಭಾಗಗಳ ಮೂಲಕ ಸಂಶೋಧನೆ ಕ್ಷೇತ್ರದಲ್ಲಿ ಹಣ ತೊಡಗಿಸುತ್ತಿದೆ. ಇದಲ್ಲದೆ, ಔಷಧ ತಯಾರಿಕೆ, ಜೈವಿಕ ತಂತ್ರಜ್ಞಾನ ಕಂಪೆನಿಗಳು, ಸ್ಟೆಮ್‌ಸೆಲ್ ಸಂಸ್ಥೆಗಳು ದೊಡ್ಡ ಸಂಖ್ಯೆಯಲ್ಲಿ ಆಕರಕೋಶ ಕುರಿತ ಸಂಶೋಧನೆಗಳನ್ನು ಪ್ರಾಯೋಜಿಸುತ್ತಿವೆ. ನಮ್ಮಲ್ಲಿ ಇದೊಂದೇ ಕ್ಷೇತ್ರದಲ್ಲಿ ತೊಡಗಿಸಿದ ಹಣ 1 ಸಾವಿರ ಕೋಟಿ ರೂಪಾಯಿಗೂ ಅಧಿಕ ಎಂಬ ಅಂದಾಜಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಅವಕಾಶ ಅಪಾರವಾಗಿದೆ. ವಿಜ್ಞಾನ ಪದವೀಧರರಿಗೆ ಸ್ಟೆಮ್‌ಸೆಲ್ ಸಂಶೋಧನೆ, ಚಿಕಿತ್ಸೆಯ ವೃತ್ತಿಜೀವನ ಕಂಡುಕೊಳ್ಳುವುದಕ್ಕೆ ಭಾರತದಲ್ಲಿ ಮುಖ್ಯ ವೈಜ್ಞಾನಿಕ ಅಧಿಕಾರಿ ಹುದ್ದೆಯಿಂದ ಹಿಡಿದು ಪ್ರಯೋಗಾಲಯ ಸಹಾಯಕ ಹುದ್ದೆವರೆಗೂ ಅವಕಾಶಗಳು ವಿಫುಲವಾಗಿವೆ. ಆದರೂ ಅಂಥ ಸಂಸ್ಥೆಗಳಲ್ಲಿ ಉದ್ಯೋಗ ಗಳಿಸುವುದಕ್ಕೆ ಕೇವಲ ಸಾಮಾನ್ಯ ವಿಜ್ಞಾನ ಪದವಿ ಸಾಲದು. ಏಕೆಂದರೆ ಇದರ ಕಾರ್ಯವೈಖರಿ ಹಾಗೂ ಅಗತ್ಯಗಳನ್ನು ತಿಳಿದುಕೊಳ್ಳಲು ವಿಶೇಷ ತರಬೇತಿ ಬೇಕಾಗುತ್ತದೆ. ಅಂಥ ತರಬೇತಿ ಕೊಡುವ ಅನೇಕ ಸಂಸ್ಥೆಗಳಿವೆ. ಈ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಒದಗಿಸುತ್ತಿರುವ ಕೆಲವು ಪ್ರವರ್ತಕ ಕಂಪೆನಿಗಳು *ಬೆಂಗಳೂರು ಮೂಲದ ಸ್ಟೆಂಪಾಟಿಕ್ಸ್ ರಿಸರ್ಚ್ ಪ್ರೈ ಲಿ (ಇದು ಭಾರತದ ಮುಂಚೂಣಿಯ ಸ್ಟೆಮ್‌ಸೆಲ್ ಕಂಪೆನಿಗಳಲ್ಲಿ ಒಂದಾಗಿದೆ). *ಮುಂಬೈ ಮೂಲದ ರಿಲಯನ್ಸ್ ಲೈಫ್ ಸೈನ್ಸಸ್ * ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಇರುವ ಕ್ರಯೊ-ಸೇವ್ ಇಂಡಿಯಾ (ಇದು ಕ್ರಿಯೊ-ಸೇವ್ ಸಮೂಹದ ಅಂಗ. ಯುರೋಪ್‌ನಲ್ಲಿ ಅತಿ ದೊಡ್ಡ ಪ್ರೌಢ ಆಕರ ಕೋಶ ಸಂಗ್ರಹ ಬ್ಯಾಂಕ್ ಹೊಂದಿದೆ). * ಸ್ಟೆಮ್‌ಒನ್ ಬಯಲಾಜಿಕಲ್ಸ್ ಪ್ರೈ. ಲಿ. ಪುಣೆ * ರೀ ಲ್ಯಾಬ್ಸ್ ಮುಂಬೈ ಈ ವೃತ್ತಿಯಲ್ಲಿ ಉನ್ನತ ಅವಕಾಶದ ಅಪೇಕ್ಷೆ ಹೊಂದಿರುವವರು ಬಯೊಟೆಕ್ನಾಲಜಿ, ಬಯೊಕೆಮಿಸ್ಟ್ರಿ, ಜೆನೆಟಿಕ್ಸ್, ಪ್ರಾಣಿಶಾಸ್ತ್ರ, ಬಯೊಫಿಸಿಕ್ಸ್, ಮೈಕ್ರೋಬಯಾಲಜಿ ಮತ್ತು ಲೈಫ್ ಸೈನ್ಸ್‌ನಲ್ಲಿ ಎಂಎಸ್‌ಸಿ ಮಾಡಬಹುದು. ರೀಜನರೇಟೀವ್ ಮೆಡಿಸಿನ್‌ನಲ್ಲಿ ಎಂಎಸ್‌ಸಿ ಬೆಂಗಳೂರಿನ ಎಂಐಆರ್‌ಎಂನಲ್ಲಿ ಲಭ್ಯವಿರುವ ವಿಶಿಷ್ಟ ಕೋರ್ಸ್. ಈ ಕ್ಷೇತ್ರದಲ್ಲಿ ವೇತನವೂ ಆಕರ್ಷಕವಾಗಿದೆ. ಸ್ನಾತಕೋತ್ತರ ಪದವಿ ಮುಗಿಸಿ ಆಗಷ್ಟೇ ವೃತ್ತಿ ಜೀವನ ಆರಂಭಿಸುವವರಿಗೆ ತಿಂಗಳಿಗೆ ಸುಮಾರು 30 ಸಾವಿರ ರೂ. ಲಭ್ಯವಾದರೆ, ಪಿಎಚ್‌ಡಿ ಮುಗಿಸಿದವರು ತಿಂಗಳಿಗೆ 50 ಸಾವಿರಕ್ಕೂ ಹೆಚ್ಚಿನ ವೇತನ ಪಡೆಯಬಹುದು. ಪಿಎಚ್‌ಡಿ ಪದವೀಧರರು ವಿದೇಶಗಳಲ್ಲಿ ನೇಮಕಾತಿ ಅವಕಾಶ ಪಡೆದ ಸಂದರ್ಭದಲ್ಲಿ ವರ್ಷಕ್ಕೆ ಸರಾಸರಿ 40 ಸಾವಿರ ಡಾಲರ್ ಅಥವಾ ಸುಮಾರು 30000 ಯುರೋ ಹಣ ಸಂಪಾದಿಸಬಹುದು. ಸ್ಟೆಮ್‌ಸೆಲ್ ತರಬೇತಿ ಕೋರ್ಸ್‌ನ ಕೆಲವು ಸಂಸ್ಥೆಗಳು *ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು *ನ್ಯಾಷನಲ್ ಸೆಂಟರ್ ಫಾರ್ ಬಯಾಲಾಜಿಕಲ್ ಸೈನ್ಸ್ (ಎನ್‌ಸಿಬಿಎಸ್), ಬೆಂಗಳೂರು *ನ್ಯಾಷನಲ್ ಸೆಂಟರ್ ಫಾರ್ ಸೆಲ್ ಸೈನ್ಸ್ (ಎನ್‌ಸಿಸಿಎಸ್), ಪುಣೆ *ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ರೀಸರ್ಚ್ ಇನ್ ರಿಪ್ರೊಡಕ್ಟಿವ್ ಹೆಲ್ತ್, ಮುಂಬೈ *ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ರೀಜನರೇಟೀವ್ ಮೆಡಿಸಿನ್ (ಎಂಐಆರ್‌ಎಂ), ಬೆಂಗಳೂರು *ಸೆಂಟರ್ ಫಾರ್ ಸೆಲ್ಯುಲರ್ ಆಂಡ್ ಮಾಲಿಕ್ಯುಲರ್ ಬಯಾಲಜಿ (ಸಿಸಿಎಂಬಿ) ಹೈದರಾಬಾದ್ *ಎಲ್‌ವಿ ಪ್ರಸಾದ್ ಐ ಇನ್‌ಸ್ಟಿಟ್ಯೂಟ್, ಹೈದರಾಬಾದ್ *ನಿಚಿ-ಇನ್-ಸೆಂಟರ್ ಫಾರ್ ರೀಜನರೇಟೀವ್ ಮೆಡಿಸಿನ್, ಚೆನ್ನೈ *ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ *ಶ್ರೀ ಚಿತ್ರ ತಿರುನಾಳ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಸಿನ್ ಟೆಕ್ನಾಲಜಿ), ತಿರುವನಂತಪುರ *ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ *ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಮ್ಯುನಾಲಜಿ *ಎಂಎಸ್ ಯೂನಿವರ್ಸಿಟಿ ಆಫ್ ಬರೋಡ *ಎಸ್‌ಜಿಪಿಐ ಚಂಡೀಗಡ (ಲೇಖಕರು ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ರೀಜನರೇಟೀವ್ ಮೆಡಿಸಿನ್‌ನಲ್ಲಿ ಡೀನ್. ಮೊಬೈಲ್ 96860 10498) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.