ಇಂಗ್ಲಿಷ್ ಕಲಿಕೆ ಬೇಡ ತಪ್ಪು ಗ್ರಹಿಕೆ ಭಾಷಾ ಕಲಿಕೆ ಮಕ್ಕಳಲ್ಲಿ ಹುಟ್ಟಿನಿಂದಲೇ ಬರುವ ಒಂದು ಸಹಜ ಸಾಮರ್ಥ್ಯ. ಅವರು ಕೆಲವು ವಿಶೇಷ ಸಾಮರ್ಥ್ಯಗಳು ಮತ್ತು ಗುಣಲಕ್ಷಣಗಳನ್ನು ಪಡೆದುಕೊಂಡಿರುತ್ತಾರೆ. ಅವುಗಳ ಸಹಾಯದಿಂದ ಭಾಷೆಯನ್ನು ಕಲಿಯುತ್ತಾರೆ. ಲೀಡ್ಸ್ ವಿಶ್ವವಿದ್ಯಾಲಯದ ಶಿಕ್ಷಣ ತಜ್ಞೆ ಜೇನ್ ಮೂನ್ ಎನ್ನುವವರು ಮಕ್ಕಳಲ್ಲಿರುವ ಆ ಲಕ್ಷಣಗಳನ್ನು ಹೀಗೆ ಪಟ್ಟಿ ಮಾಡುತ್ತಾರೆ. - ಮಕ್ಕಳು ಮಾತನಾಡುವಾಗ ಅಥವಾ ಉಚ್ಚರಿಸುವಾಗ ಅರ್ಥೈಸಿಕೊಳ್ಳುವುದರ ಕಡೆಗೆ ಹೆಚ್ಚು ಗಮನ ಕೊಡುತ್ತಾರೆಯೇ ಹೊರತು ಭಾಷೆಯ ನಿಯಮಗಳ ಬಗೆಗಲ್ಲ. - ಮಕ್ಕಳು ತಮಗಿರುವ ಭಾಷೆಯ ಇತಿಮಿತಿಯೊಳಗೆ ಸಂದರ್ಭಕ್ಕೆ ಅನುಸಾರವಾಗಿ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಸಕ್ತಿಯಿಂದ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. - ಚಟುವಟಿಕೆಗಳೊಂದಿಗೆ ಆಡುತ್ತಾ, ಹಾಡುತ್ತಾ ಪ್ರಾಸ ಪದಗಳನ್ನು ಹೇಳುವ ಮುಖಾಂತರ ಭಾಷೆಯನ್ನು ಕಲಿಯುತ್ತಾರೆ. - ಬೇರೆ ಬೇರೆ ಮೂಲಗಳಿಂದ ಭಾಷೆಯ ಪದಗುಚ್ಛಗಳನ್ನು ಆಯ್ದುಕೊಂಡು ಉಪಯೋಗಿಸುತ್ತಾರೆ. - ಭಾಷೆಯನ್ನು ಕ್ರಿಯಾತ್ಮಕವಾಗಿ ಉಪಯೋಗಿಸುತ್ತಾರೆ. - ಮಕ್ಕಳು ಭಾಷೆಯನ್ನು ಕಲಿಯುವುದಕ್ಕಿಂತಲೂ ಹೆಚ್ಚಾಗಿ ಅದನ್ನು ಗಳಿಸಿಕೊಳ್ಳುವುದರಲ್ಲಿ ಹೆಚ್ಚು ಉತ್ಸುಕರಾಗಿರುತ್ತಾರೆ (ಭಾಷೆಯನ್ನು ಗಳಿಸುವುದು ಎಂದರೆ, ಸ್ವಾಭಾವಿಕವಾದ ಸಂವಹನದ ಸಂದರ್ಭದಲ್ಲಿ ಉಪಯುಕ್ತವಾದ ಅರ್ಥಪೂರ್ಣ ಪದಪುಂಜಗಳನ್ನು ವ್ಯಕ್ತಪಡಿಸುವ ಸಾಮರ್ಥ್ಯ ಬೆಳೆಸಿಕೊಳ್ಳುವುದು ಎಂದರ್ಥ). ಈ ಮೇಲಿನ ಸೂತ್ರಗಳನ್ನು ಗಮನದಲ್ಲಿ ಇರಿಸಿಕೊಂಡು ರಾಜ್ಯ ಸರ್ಕಾರ 2007-08ರ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಒಂದನೇ ತರಗತಿಗೆ ಇಂಗ್ಲಿಷ್‌ನ್ನು ಒಂದು ಭಾಷೆಯನ್ನಾಗಿ ಕಲಿಯುವಂತೆ ಪರಿಚಯಿಸಿತು. ಹಾಗೆ ಮಾಡುವಾಗ ಅದರ ಮುಂದೆ ಒಂದು ಮಹತ್ತರವಾದ ಜವಾಬ್ದಾರಿಯೂ ಇತ್ತು. ಅದೇನೆಂದರೆ ಇಂಗ್ಲಿಷ್ ಒಂದು ಜಾಗತಿಕ ಸಂಪರ್ಕ ಭಾಷೆ ಎನ್ನುವುದು ಒಂದು ಕಡೆಯಾದರೆ, ಮಕ್ಕಳನ್ನು ಸಂವಹನಾತ್ಮಕವಾಗಿ ಮತ್ತು ಶೈಕ್ಷಣಿಕವಾಗಿ ಸಜ್ಜುಗೊಳಿಸುವುದು ಇನ್ನೊಂದು ಕಡೆ. ಈ ಎರಡೂ ಅಂಶಗಳು ಅಗತ್ಯವಾದವುಗಳೇ. ಅಲ್ಲದೆ ಪೋಷಕರಲ್ಲೂ ತಮ್ಮ ಮಕ್ಕಳಿಗೆ ಒಳ್ಳೆಯ ಉದ್ಯೋಗ, ಒಳ್ಳೆಯ ಶೈಕ್ಷಣಿಕ ಹಿನ್ನೆಲೆ ಮತ್ತು ಆರ್ಥಿಕ ಬೆಂಬಲದ ಜೊತೆಗೆ ಸಮಾಜದಲ್ಲಿ ಒಳ್ಳೆಯ ಮನ್ನಣೆ ಸಿಗುತ್ತದೆ ಎಂಬ ಮಹದಾಸೆಯೂ ಇದರಲ್ಲಿ ಇತ್ತು. ಒಂದನೇ ತರಗತಿಯ ಜೊತೆಗೆ 2, 3, 4ನೇ ತರಗತಿಗಳಿಗೆ ಕೂಡ ಇಂಗ್ಲಿಷ್‌ನ್ನು ಪರಿಚಯಿಸಲಾಯಿತು. ಮಕ್ಕಳಿಗೆ ವಿಶಾಲವಾದ ಅವಕಾಶ ಮಾಡಿಕೊಟ್ಟು ಭಾಷಾ ಕಲಿಕೆಯಲ್ಲಿ ಆಸಕ್ತಿ ಮೂಡಿಸುವುದು, ಅಗತ್ಯಕ್ಕೆ ತಕ್ಕಂತೆ ಭಾಷಾ ಜ್ಞಾನ ಬೆಳೆಸಿ ನಿಗದಿತ ಗುರಿ ತಲುಪಿಸುವುದು ಅದರ ಉದ್ದೇಶ. ನಿತ್ಯದ ಪರಿಸರದಲ್ಲಿ ಅಗತ್ಯಕ್ಕೆ ಅನುಸಾರವಾಗಿ ಭಾಷಾ ಸಂವಹನದ ಸಾಮರ್ಥ್ಯ, ಭಾಷಾ ಕೌಶಲಗಳಾದ ಆಲಿಸುವುದು, ಮಾತನಾಡುವುದು, ಓದುವುದು, ಬರೆಯುವುದನ್ನು ನಾಲ್ಕು ವರ್ಷಗಳ ಕಲಿಕಾ ಅವಧಿಯಲ್ಲಿ ಬೆಳೆಸುವುದಕ್ಕೆ ಒತ್ತು ಕೊಡಲಾಗುತ್ತಿದೆ. ಈ ಅವಧಿಯಲ್ಲಿ 250 ರಿಂದ 1000 ಶಬ್ದಗಳನ್ನು ಸರಳವಾಗಿ ಮತ್ತು ಸರಾಗವಾಗಿ ಕಲಿಸಿ ಪದಪುಂಜಗಳ ಸಹಾಯದಿಂದ ವಾಕ್ಯ ರಚಿಸಿ, ಔಪಚಾರಿಕವಾಗಿ ಉಪಯೋಗಿಸುವಂತೆ ಮಾಡಲು ಗಮನ ನೀಡಲಾಗುತ್ತದೆ. ಈ ಪಠ್ಯಕ್ರಮವನ್ನು ಪರಿಚಯಿಸಿದಾಗ ಐದು ಮುಖ್ಯ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಲಾಗಿತ್ತು. ಅವುಗಳೆಂದರೆ ಕತೆ ಹೇಳುವುದು, ದೈಹಿಕವಾಗಿ ಪ್ರತಿಕ್ರಿಯಿಸುವ ಚಟುವಟಿಕೆ, ಸಂಭಾಷಣೆಯ ಅಭ್ಯಾಸ, ಪ್ರಾಸಬದ್ಧ ಹಾಡುಗಳು, ಭಾಷಾ ಸಂಬಂಧಿ ಆಟಗಳು. ಈ ಪೈಕಿ ಕತೆ ಹೇಳುವುದು ಪಠ್ಯದ ಮುಖ್ಯ ಭಾಗವಾಗಿತ್ತು. ಈಗಾಗಲೇ ಸರ್ಕಾರಿ ಕಿರಿಯ ಪ್ರಾಥಮಿಕ ತರಗತಿಗಳಿಗೆ ಇಂಗ್ಲಿಷ್‌ನ್ನು ಪರಿಚಯಿಸಿ ಐದು ವರ್ಷಗಳಾದವು. ಆದರೆ ಈ ಯೋಜನೆ ಜಾರಿಗೆ ಶಿಕ್ಷಕರಿಗೆ ನಿರಂತರ ಮತ್ತು ಕ್ರಮಬದ್ಧವಾಗಿ ತರಬೇತಿ ನೀಡುತ್ತಾ ಬಂದರೂ ಅನೇಕ ಶಾಲೆಗಳಲ್ಲಿ ಅದು ಸಂಪೂರ್ಣ ಯಶಸ್ವಿಯಾಗಿಲ್ಲ. ಅದಕ್ಕೆ ಕಾರಣ ಹೀಗಿರಬಹುದು. - ಸರಿಯಾಗಿ ಪಠ್ಯ ಓದಿಕೊಂಡು ಗ್ರಹಿಸುವುದು, ಕತೆ ನಿರೂಪಣೆ, ಆಕರ ಪುಸ್ತಕಗಳನ್ನು ಸರಿಯಾಗಿ ಗ್ರಹಿಸಿಕೊಂಡು ಮಕ್ಕಳಿಗೆ ಕ್ರಮಬದ್ಧವಾಗಿ ಹೇಳಲು ಅನೇಕ ಶಿಕ್ಷಕರಿಗೆ ಭಾಷಾ ಪ್ರಾವೀಣ್ಯತೆಯ ಕೊರತೆ ಇದೆ. - ಕಿರಿಯ ತರಗತಿಗಳಿಗೆ ಇಂಗ್ಲಿಷ್‌ನ್ನು `ಕಡ್ಡಾಯ~ ಮಾಡದೇ ಇರುವುದರಿಂದ ಬಹಳ ಶಾಲೆಗಳಲ್ಲಿ ಅದು ನಿರ್ಲಕ್ಷ್ಯಕ್ಕೊಳಗಾಗಿದೆ. -ಮಕ್ಕಳ ಇಂಗ್ಲಿಷ್ ಕಲಿಕೆಯ ಪ್ರಗತಿಯಲ್ಲಿ ಮೌಲ್ಯಮಾಪನ ಮಾಡದೇ ಇರುವುದು. - ಬೋಧನೆ, ಕಲಿಕಾ ಹಂತದಲ್ಲಿ ಪರಿಣಾಮಕಾರಿ ಮೇಲುಸ್ತುವಾರಿಯ ಲೋಪ. -ಇಂಗ್ಲಿಷ್‌ನ್ನು ಸಾಂಪ್ರದಾಯಿಕ ಪದ್ಧತಿಯಲ್ಲೇ ಕಲಿಸಬೇಕು ಎಂಬುದು ಅನೇಕ ಶಿಕ್ಷಕರ ಗ್ರಹಿಕೆ. ಹೀಗಾಗಿ ಅವರು ವರ್ಣಮಾಲೆಯಿಂದಲೇ ಬೋಧಿಸುವುದು ಸೂಕ್ತ ಎಂದು ತಿಳಿದು ಅದೇ ಪದ್ಧತಿಯಿಂದ ಪಾಠ ಶುರು ಮಾಡುತ್ತಾರೆ. -ಪೋಷಕರೂ ತಮ್ಮ ಮಕ್ಕಳು ಆರಂಭಿಕ ಹಂತದಲ್ಲೇ ಇಂಗ್ಲಿಷ್ ಮಾತನಾಡುವ, ಬರೆಯುವ ಸಾಮರ್ಥ್ಯ ಗಳಿಸಬೇಕು ಎಂದು ಅಪೇಕ್ಷಿಸುತ್ತಾರೆ. ಇದರಿಂದ ಮಕ್ಕಳ ಮೇಲೆ ಒತ್ತಡ ಬೀಳುತ್ತದೆ. -ಮೌಖಿಕ ಕೌಶಲಗಳನ್ನು (ಆಲಿಸುವುದು, ಮಾತನಾಡುವುದು) ಶಿಕ್ಷಕರು ಬೋಧಿಸದೇ ಇರುವುದು. ಇನ್ನೊಂದು ಮುಖ್ಯವಾದ ಅಂಶವನ್ನು ತಿಳಿದುಕೊಳ್ಳುವುದು ಸೂಕ್ತ. ಮಾತೃಭಾಷೆಯಾಗಿ ಪ್ರಥಮ ಭಾಷೆಯನ್ನು ಗಳಿಸುವುದಕ್ಕೂ ಮತ್ತು ದ್ವಿತೀಯ ಭಾಷೆಯಾಗಿ ಇಂಗ್ಲಿಷ್‌ನ್ನು ಗಳಿಸುವುದಕ್ಕೂ ಬಹಳಷ್ಟು ವ್ಯತ್ಯಾಸ ಇದೆ. ದ್ವಿತೀಯ ಭಾಷೆಯ ಪ್ರಾವೀಣ್ಯತೆಯು ಪ್ರಥಮ ಭಾಷೆಯ ಪ್ರಾವೀಣ್ಯತೆಯಂತೆ ಸಹಜವಾಗಿಯೇ ಪೂರ್ಣವಾಗಿ ವೃದ್ಧಿಸುವುದಿಲ್ಲ. ಹೀಗಾಗಿ ಶಿಕ್ಷಕರು ಮಕ್ಕಳಿಗೆ ಸರಿಯಾಗಿ ಕಲಿಯುವಂತಹ ವಾತಾವರಣವನ್ನು ಸೃಷ್ಟಿಸಬೇಕಾಗುತ್ತದೆ. ಈ ಮೂಲಕ ಅವರು ಸ್ವಾಭಾವಿಕವಾಗಿ ಸಹಜ ಸಾಮರ್ಥ್ಯದಿಂದ ಭಾಷೆಯನ್ನು ಗಳಿಸುವಂತೆ ಮಾಡಬೇಕಾಗುತ್ತದೆ. ಆದಾಗ್ಯೂ ವಿಪುಲವಾದ ಅವಕಾಶಗಳಿಂದ ವೈವಿಧ್ಯಮಯವಾದ, ಅರ್ಥಪೂರ್ಣವಾದ ಅಂಶಗಳನ್ನು ಮಕ್ಕಳಲ್ಲಿ ತುಂಬಬೇಕು. ಅಲ್ಲದೆ ನಿಜವಾದ ಅಗತ್ಯ ಮತ್ತು ಆಸಕ್ತಿ ಹುಟ್ಟಿಸಿ ಸಾಕಷ್ಟು ಕಾಲಾವಕಾಶವನ್ನು ಕೊಟ್ಟು ಆರಂಭಿಕ ಹಂತದಲ್ಲಿ ಭಾಷೆಯನ್ನು ಕಲಿಯುವಂತೆ ಪ್ರೇರೇಪಿಸುವುದು ಮುಖ್ಯ. ಕಲಿಕೆ ಹೀಗಿರಲಿ ಸರ್ಕಾರಿ ಕಿರಿಯ ಪ್ರಾಥಮಿಕ ತರಗತಿಗಳಿಗೆ ಒಂದು ಭಾಷೆಯಾಗಿ ಇಂಗ್ಲಿಷ್ ಕಲಿಸುವ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕೆಲ ಸಲಹೆಗಳು ಇಲ್ಲಿವೆ: 1, 2, 3, 4ನೇ ತರಗತಿಗಳಿಗೆ ಇಂಗ್ಲಿಷ್‌ನ್ನು ಒಂದು ಭಾಷೆಯಾಗಿ ಬೋಧಿಸುವುದನ್ನು ಕಡ್ಡಾಯ ಮಾಡಬೇಕು. ವಿದ್ಯಾರ್ಥಿಗಳ ಕಲಿಕೆಯ ಮೌಲ್ಯಮಾಪನ ಮಾಡುವಾಗ ನಲಿ-ಕಲಿ ಮಾದರಿ ಅನುಸರಿಸಬಹುದು. ಪೂರಕ ಸಾಧನಗಳ ಸಹಾಯದಿಂದ ಓದಲು, ಬರೆಯಲು ಮತ್ತು ಅಗತ್ಯ ಇರುವ ಇತರ ಕೌಶಲಗಳನ್ನು ವೃದ್ಧಿಸಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಈ ಯೋಜನೆಯ ಯಶಸ್ಸಿಗೆ ಶಿಕ್ಷಕರ ಆಸಕ್ತಿ, ಸಮರ್ಪಣಾ ಮನೋಭಾವ ಹಾಗೂ ಮುಖ್ಯ ಶಿಕ್ಷಕರ ಜವಾಬ್ದಾರಿ ಬಹಳ ದೊಡ್ಡದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.