ಶಿಕ್ಷಣದ ಗುಣಮಟ್ಟ ಅಳೆಯಬಹುದೇ? ಅದೊಂದು ರಾಜ್ಯ ಮಟ್ಟದ ಕಾರ್ಯಾಗಾರ. ಅಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ವಿಶ್ಲೇಷಣಾತ್ಮಕ ಚರ್ಚೆಗಳು ನಡೆದಿದ್ದವು. `ಗುಣಮಟ್ಟದ ಶಿಕ್ಷಣ ಎಂದರೇನು~ ಎಂಬ ಪ್ರಶ್ನೆ ಎಲ್ಲರನ್ನೂ ನಾನಾ ರೂಪದಲ್ಲಿ ಕಾಡಿತ್ತು. ಸಾಮಾನ್ಯವಾಗಿ ಗುಣಾತ್ಮಕತೆ (ಕ್ವಾಲಿಟಿ) ಎಂಬ ಶಬ್ದವು ಒಂದು ವ್ಯವಸ್ಥೆ ಅಥವಾ ವಸ್ತುವಿನ ಗುಣ, ಯೋಗ್ಯ, ಉತ್ಕೃಷ್ಟ ಅಥವಾ ಶ್ರೇಷ್ಠ ಎಂಬ ಅರ್ಥವನ್ನು ನೀಡುತ್ತದೆ. ಶಿಕ್ಷಣದ ಅವಶ್ಯಕತೆ ಮತ್ತು ಅದನ್ನು ಪರಿಭಾವಿಸಿಕೊಳ್ಳುವ ರೀತಿ ಸಾಂಸ್ಥಿಕ ರೂಪದಲ್ಲಿ ಮತ್ತು ವ್ಯಕ್ತಿಗತವಾಗಿ ಕಾಲದಿಂದ ಕಾಲಕ್ಕೆ ಹೇಗೆ ಬದಲಾಗುತ್ತದೆ, ಆಯಾಯ ಕಾಲಕ್ಕೆ ಅನುಗುಣವಾಗಿ ಅದನ್ನು ಹೇಗೆ ವ್ಯಾಖ್ಯಾನಿಸಲಾಗಿದೆ ಎಂಬುದೇ ವಿಶೇಷ. ಅದು ಹಾಗೆಯೇ ಇರಬೇಕು. ನಿನ್ನೆ ಗುಣಮಟ್ಟ ಎಂದು ಶಿಕ್ಷಣದಲ್ಲಿ ಕರೆಸಿಕೊಂಡದ್ದು ನಾಳೆ ಬೇರೆಯದೇ ಆಗಿರುತ್ತದೆ. ಕಾರಣ ಅಷ್ಟೊಂದು ಕ್ಷಿಪ್ರಗತಿಯಲ್ಲಿ ಓಡುತ್ತಿದೆ ವಿಶ್ವ. ಒಂದು ಸ್ಥಿರೀಕರಿಸಿದ ವ್ಯಾಖ್ಯಾನಕ್ಕೆ ಅಥವಾ ಹೇಳಿಕೆಗೆ ಬದ್ಧವಾಗಲು ಎಂದಿಗೂ ಸಾಧ್ಯವೇ ಇಲ್ಲ. ಶಾಲೆಗೆ ಮೂಲ ಸೌಕರ್ಯ ಒದಗಿಸುವುದು, ಹಾಜರಾದ ಎಲ್ಲ ಮಕ್ಕಳಲ್ಲಿ ಅಪೇಕ್ಷಿತ ಕಲಿಕೆಯನ್ನು ಉಂಟು ಮಾಡುವುದು, ಹೊರಗಿರುವ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವುದು, ಅರ್ಹ ವಯಸ್ಸಿನ ಮಕ್ಕಳು 8 ವರ್ಷಗಳ ಕಡ್ಡಾಯ ಶಿಕ್ಷಣ ಪಡೆಯುವುದು, ತರಗತಿಗೆ ಅಗತ್ಯವಾದ ಶಿಕ್ಷಕರನ್ನು ನೇಮಿಸುವುದು... ಎಂಬಿತ್ಯಾದಿ ಹೇಳಿಕೆಗಳಲ್ಲಿನ ಅರ್ಥಗ್ರಹಿಕೆಯಷ್ಟೇ ಗುಣಮಟ್ಟವೇ ಅಥವಾ ಈ ಪದದ ಅರ್ಥ ಶಾಲೆಯ ಸುತ್ತವಷ್ಟೇ ಗಿರಕಿ ಹೊಡೆಯಬೇಕೇ? ಶಿಕ್ಷಣಕ್ಕೆ ಒಲವು ತೋರುವ ಪೋಷಕನ ದೃಷ್ಟಿಯಲ್ಲಿ ಇದು ಮತ್ತಾವುದೋ ರೂಪ ಪಡೆದುಕೊಳ್ಳುತ್ತದೆ. ಶಾಲೆಗೆ ಮಗು ಹೋಗಲು ಇರುವ ಸೌಕರ್ಯ, ಸುಸಜ್ಜಿತ ಕಟ್ಟಡ, ಅಲ್ಲಿಗೆ ಬರುವ ಶಿಕ್ಷಕರ ಪ್ರತಿಷ್ಠೆ ಇತ್ಯಾದಿ ಸನ್ನಿವೇಶಗಳನ್ನು, ನಿತ್ಯ ಮನೆಪಾಠ ನೀಡುತ್ತಾ ಬರವಣಿಗೆಗೆ ಪ್ರೇರಕವಾಗುವ ಕಲಿಕೆಯನ್ನು ಗುಣಮಟ್ಟ ಎನ್ನುವವರೂ ಇದ್ದಾರೆ. `ಒಂದಿಷ್ಟು ಓದು ಬರಹ ಬಂದ್ರೆ ಸಾಕು ಸ್ವಾಮಿ!~ ಎನ್ನುವ ಜನಪದರಿಗೆ ಇದರ ರೂಪವೇ ಬೇರೆಯದ್ದು. `ಮಗುವಿನ ಬೌದ್ಧಿಕ ಸಾಮರ್ಥ್ಯಕ್ಕೆ ನಿಲುಕುವ ಉತ್ಕೃಷ್ಟ ಪಠ್ಯವಸ್ತು ಇರಬೇಕು~ ಎನ್ನುವ ತಜ್ಞರನ್ನು, `ಬದುಕಲು ಕಲಿಸುವ ದಾರಿಯೇ ಶಿಕ್ಷಣದ ಗುಣಮಟ್ಟ~ ಎನ್ನುವ ದಾರ್ಶನಿಕರನ್ನು ಹಾಗೂ `ಸಂವಿಧಾನಾತ್ಮಕ ಆಶಯಗಳನ್ನು ಪೂರೈಸುತ್ತಾ, ದೇಶದ ಅಭಿವೃದ್ಧಿಗೆ ಬೆಂಬಲವಾಗಿ ನಿಲ್ಲುವಂತಹ ತರಗತಿಯ ನಿರ್ದೇಶನವೇ ಗುಣಮಟ್ಟ~ ಎನ್ನುವ ವಿಚಾರವಾದಿಗಳನ್ನೂ ಕಾಣುತ್ತೇವೆ. 1986ರ ರಾಷ್ಟ್ರೀಯ ಶಿಕ್ಷಣ ನೀತಿಯ ನಂತರ ಗುಣಮಟ್ಟ ಕುರಿತಂತೆ ಮೂಡಿಬಂದ ಚಿಂತನೆ `ಪೀಠೋಪಕರಣ- ಕೊಠಡಿ- ಶಿಕ್ಷಕ~ ಎಂದು ಬೆಸೆದುಕೊಂಡಿತ್ತಾದರೂ, ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (ಎನ್‌ಸಿಎಫ್)- 2005 ಜೀವನದ ಸವಾಲುಗಳನ್ನು ಎದುರಿಸಲು ಸಿದ್ಧಗೊಳಿಸುವ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿದೆ. ಉದಾತ್ತ ಮೌಲ್ಯಗಳಿಗೆ ಶಿಕ್ಷಣದ ತಿರುಳನ್ನು ನೀತಿ ನಿರೂಪಕರು ತಳಕು ಹಾಕಿದರೆ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಇದರ ಆಶಯ ಮತ್ತು ಕಾಣ್ಕೆ ವಿಶಿಷ್ಟವಾದದ್ದು. ಗುಣಮಟ್ಟ ಎನ್ನುವ ಪದವನ್ನು ವಿವಿಧ ಸಂಸ್ಥೆಗಳು, ನೀತಿಗಳಲ್ಲಿ ಹೇಗೆ ವ್ಯಾಖ್ಯಾನಿಸಲಾಗಿದೆ ಎಂಬುದಕ್ಕೆ ಕೆಲವು ಉದಾಹರಣೆಗಳು ಹೀಗಿವೆ. ಗುಣಮಟ್ಟದ ಶಿಕ್ಷಣ (ಯುನಿಸೆಫ್ 2000ದ ವ್ಯಾಖ್ಯಾನ) - ಆರೋಗ್ಯಕರ, ಪೌಷ್ಟಿಕ ಆಹಾರ - ಸುರಕ್ಷಿತ, ರಕ್ಷಣಾತ್ಮಕ ಮತ್ತು ಲಿಂಗ ಸೂಕ್ಷ್ಮ ಶಿಕ್ಷಣ - ಸಂಪನ್ಮೂಲ ಮತ್ತು ಸೌಲಭ್ಯ - ಸಾಕ್ಷರತೆ, ಗಣಿತಜ್ಞತೆ ಮತ್ತು ಬದುಕಿನ ಕೌಶಲಗಳು, ಲಿಂಗ, ಆರೋಗ್ಯ, ಪೋಷಣೆ, ಏಡ್ಸ್ ತಡೆಗಟ್ಟುವಿಕೆ, ಶಾಂತಿ ಮುಂತಾದ ಕ್ಷೇತ್ರಗಳಲ್ಲಿ ಮೂಲ ಕೌಶಲಗಳನ್ನು ಗಳಿಸಿಕೊಳ್ಳುವ ಪಠ್ಯಕ್ರಮ ಹಾಗೂ ಸಾಮಗ್ರಿಗಳು -ಶಿಕ್ಷಕರ ತರಬೇತಿ, ಕಲಿಕೆ, ವ್ಯವಸ್ಥಿತ ಪ್ರಕ್ರಿಯೆಗಳು -ಸಕಾರಾತ್ಮಕ ಜ್ಞಾನ, ಕೌಶಲ ಮತ್ತು ವರ್ತನೆಗಳು -ಸಮುದಾಯಗಳ ಭಾಗವಹಿಸುವಿಕೆ ಯುನೆಸ್ಕೊ- 2005ರ ಪ್ರಕಾರ ಗುಣಮಟ್ಟದ ಚೌಕಟ್ಟು -ಬೋಧನೆ ಮತ್ತು ಕಲಿಕೆ -ಕಲಿಕೆಯ ಸಮಯ -ಬೋಧನೆಯ ವಿಧಾನಗಳು -ನಿರ್ಧರಿಸುವಿಕೆ, ಪ್ರತಿಕ್ರಿಯೆ, ಪ್ರೋತ್ಸಾಹ -ವರ್ಗಗಾತ್ರ, ಬೋಧನೆ ಮತ್ತು ಕಲಿಕೆಯ ವಸ್ತುಗಳು -ಭೌತಿಕ ಸೌಕರ್ಯ, ಮಾನವ ಸಂಪನ್ಮೂಲ -ಶಾಲಾ ಆಡಳಿತ ಗುಣಮಟ್ಟದ ಆಯಾಮಗಳು, ಸರ್ವ ಶಿಕ್ಷಣ ಅಭಿಯಾನ- 2010 - ಮೂಲಭೂತ ವ್ಯವಸ್ಥೆ, ಸೌಲಭ್ಯಗಳು - ಶಾಲೆಯ ನಿರ್ವಹಣೆ ಮತ್ತು ಸಮುದಾಯದ ಬೆಂಬಲ - ಶಾಲೆ ಮತ್ತು ತರಗತಿಯ ಪರಿಸರ - ಪಠ್ಯಕ್ರಮ, ಬೋಧನೆ ಮತ್ತು ಕಲಿಕೆಯ ವಸ್ತುಗಳು - ಶಿಕ್ಷಕ ಮತ್ತು ಶಿಕ್ಷಕರ ತಯಾರಿ - ಅವಕಾಶ, ಸಮಯ (ಬೋಧನೆ- ಕಲಿಕೆ ಸಮಯ) - ತರಗತಿಯ ಪದ್ಧತಿಗಳು, ಪ್ರಕ್ರಿಯೆ - ಮೌಲ್ಯಮಾಪನ, ಮೇಲ್ವಿಚಾರಣೆ, ಪರಿವೀಕ್ಷಣೆ - ಸಮುದಾಯದ ಭಾಗವಹಿಸುವಿಕೆ ಹಾಗೂ ಒತ್ತಾಸೆ ಗುಣಮಟ್ಟದ ಮೂಲಗಳು, ಸರ್ವ ಶಿಕ್ಷಣ ಅಭಿಯಾನ- 2011 -ಶಿಕ್ಷಣದ ಸೂಕ್ತ ಗುರಿ -ಪಠ್ಯಕ್ರಮ ಮತ್ತು ಅದರ ಪ್ರಮುಖ ಪಾತ್ರ -ಸೂಕ್ತ ತರಗತಿಗಳಲ್ಲಿ ಕಲಿಕೆ -ವಿಷಯ ಸಮತೋಲನ ಮತ್ತು ವಯಸ್ಸಿನ ಸೂಕ್ತ ಪಠ್ಯಕ್ರಮ -ಕಲಿಕೆಯ ವಸ್ತುಗಳು -ಶಿಕ್ಷಣದ ನೀತಿ- ಭಾಷಾ ನೀತಿ ಮಾರುಕಟ್ಟೆ, ಸಾಮಾಜಿಕ, ಸಾಂಸ್ಕೃತಿಕ ಅಂಶಗಳು, ಸಹಾಯ ತಂತ್ರಗಳು, ಬೆಂಬಲ ವ್ಯವಸ್ಥೆ, ಸಾರ್ವಜನಿಕ ಸಂಪನ್ಮೂಲಗಳು, ರಾಷ್ಟ್ರೀಯ ಆಡಳಿತ, ಜಾಗತೀಕರಣ, ರಾಷ್ಟ್ರೀಯ ಗುಣಮಟ್ಟ, ಪೋಷಕರ ಬೆಂಬಲ, ಲಭ್ಯವಿರುವ ಸಮಯ ಇತ್ಯಾದಿ ಸಂದರ್ಭಗಳು ಸಹ ಗುಣಮಟ್ಟದ ಚೌಕಟ್ಟಿನ ಮೇಲೆ ಪ್ರಭಾವ ಬೀರುತ್ತವೆ. ಮೇಲ್ಕಂಡ ಸಂದರ್ಭಗಳಲ್ಲಿ ದೂರದರ್ಶಿತ್ವ ಬದಲಾದಂತೆ ಶಿಕ್ಷಣದ ಅಪೇಕ್ಷೆಗಳು ಉತ್ಕೃಷ್ಟತೆಯೆಡೆಗೆ ಅಭಿವ್ಯಕ್ತಗೊಳ್ಳುವುದನ್ನು ಕಾಣಬಹುದು. ಗುಣಮಟ್ಟ ಸಾಧಿಸುವಿಕೆ ನಿಧಾನಗತಿಯ ಪ್ರಕ್ರಿಯೆ. ತಕ್ಷಣದ ಪರಿಣಾಮವನ್ನು ಮೌಲೀಕರಣಗೊಳಿಸಲು ಸಾಧ್ಯವಿಲ್ಲ. ನಿರಂತರ ಅನುಪಾಲನೆಯಿಂದ ಅದರ ಖಚಿತತೆಯ ಮಟ್ಟ ಲಭ್ಯವಾಗುತ್ತದೆ. ಅನೇಕ ಪ್ರಯೋಗಗಳು ಮತ್ತು ಮೇಲ್ವಿಚಾರಣೆ, ಪರಿಷ್ಕೃತ ಸಾಧನ- ಸಲಕರಣೆಗಳ ವ್ಯವಸ್ಥಿತ ಬಳಕೆ ಅವಶ್ಯ. ರಾಷ್ಟ್ರೀಯ ಅಭಿವೃದ್ಧಿ ಸೂಚ್ಯಂಕದಲ್ಲಿ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನಾ ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಹಾಗೂ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯಂತಹ ವ್ಯವಸ್ಥೆಗಳು ಆಗಿಂದಾಗ್ಗೆ ನೀಡುವ ಪ್ರಗತಿ ವರದಿಯನ್ನು ಆಧರಿಸಿ ನಾವು ಎತ್ತ ಸಾಗಿದ್ದೇವೆ ಎಂಬುದನ್ನು ಅವಲೋಕನಕ್ಕೆ ಒಳಪಡಿಸಲಾಗಿದೆ. 2005-06ನೇ ಸಾಲಿನಲ್ಲಿ ಕರ್ನಾಟಕ ಶಾಲಾ ಗುಣಮಟ್ಟ ಸಂಸ್ಥೆಯು (ಕೆಎಸ್‌ಕ್ಯುಎಒ) ರಾಜ್ಯದಲ್ಲಿ ಸ್ಥಾಪನೆಯಾಗುವ ಮೂಲಕ ಶಾಲಾ ಸನ್ನಿವೇಶವನ್ನು ವಿಸ್ತಾರವಾದ ಮೌಲ್ಯಾಂಕನಕ್ಕೆ ಒಳಪಡಿಸಿದ್ದನ್ನು ಸ್ಮರಿಸಬಹುದು. ವಿವಿಧ ಸಹಭಾಗಿತ್ವದ ಸಂಸ್ಥೆಗಳು ವರದಿ ಮೂಲಕ ಗುಣಮಟ್ಟ ಸಾಧಿಸಲು ಸಹಕರಿಸುತ್ತಿವೆ. ಒಟ್ಟಾರೆ ಹೇಳುವುದಾದರೆ ಶೈಕ್ಷಣಿಕ ವಿಚಾರದ ಆಳ ಮತ್ತು ಹರವು ವಿಶಾಲವಾದದ್ದು. ಸಂಕೀರ್ಣ ಎನಿಸಿಕೊಂಡರೂ ಗ್ರಹಿಕೆಗೆ ನಿಲುಕುವಂತದ್ದು. ಶಿಕ್ಷಣದ ಭಿನ್ನ ಮಗ್ಗುಲುಗಳು ಇತರರ ದೃಷ್ಟಿಕೋನಕ್ಕೆ ಅನುಗುಣವಾಗಿ ತೆರೆದುಕೊಳ್ಳುವಷ್ಟು ಸುಲಭ. ವಿವಿಧ ಆಯಾಮಗಳಿಗೊಬ್ಬ ವಿಚಾರವಾದಿಯಾಗಲಿ, ತಜ್ಞನಾಗಲಿ, ದಾರ್ಶನಿಕನಾಗಲಿ ವಿಕಾಸ ಹೊಂದುತ್ತಾ, ತಮ್ಮ ನಿಲುವನ್ನು ಮಂಡಿಸಲು ಇಲ್ಲಿ ಸಾಧ್ಯವಿದೆ. ಇಷ್ಟಾಗಿಯೂ ಶಿಕ್ಷಣದ ಉದಾತ್ತ ಗುರಿಗಳೆಲ್ಲವೂ ಸಾಕಾರಗೊಳ್ಳಬೇಕಾದ ಮೂಲ ತಾಣ ಅಂತಿಮವಾಗಿ ಶಾಲಾ ಸನ್ನಿವೇಶವನ್ನು ಮತ್ತು ವಿದ್ಯಾರ್ಥಿಗಳ ಕಲಿಕೆಯನ್ನು, ಸುತ್ತುವರಿದಿರುವ ಒಂದಿಷ್ಟು ಸಮುದಾಯವನ್ನು ಅವಲಂಬಿಸಿ ನಿಲ್ಲುತ್ತವೆ. ಹೊಣೆಗಾರಿಕೆ- ಬದ್ಧತೆ- ಉತ್ತರದಾಯಿತ್ವದ ಬಗೆಗಿನ ಜಿಜ್ಞಾಸೆಗಳು ವ್ಯವಸ್ಥೆಯಲ್ಲಿ ಇರುವವರನ್ನು ಕೇಂದ್ರೀಕರಿಸಿಕೊಳ್ಳುತ್ತವೆ ಹೊರತು ಆಚೆಗೆ ವಿಸ್ತರಣೆಗೊಳ್ಳುವುದಿಲ್ಲ. ಸಾಮಾಜಿಕವಾಗಿ ಕಾಣಸಿಗುವ ಸಾರ್ವತ್ರಿಕ ಚರ್ಚೆಗಳು ಖಾಸಗಿ- ಸರ್ಕಾರಿ ಎಂಬ ಮನ್ನಣೆಯಲ್ಲಿಯೇ ಕಳೆದುಹೋಗುತ್ತಿರುವುದು ದುರಂತ. ಪ್ರಜಾಸತ್ತಾತ್ಮಕವಾಗಿ ಸ್ವಯಂ ಜಾಗೃತಗೊಂಡು ನಿರ್ವಹಿಸಬೇಕಾದ ಜವಾಬ್ದಾರಿ, ಹಂಚಿಕೊಂಡ ನಾಯಕತ್ವ ಮತ್ತು ಆ ದಿಕ್ಕಿನೆಡೆಗೆ ಚಿಂತನೆ ತೀರಾ ವಿರಳ. ಗುಣಮಟ್ಟವನ್ನು ವೈವಿಧ್ಯಮಯವಾಗಿ ಚಿತ್ರಿಸುವ ಎಲ್ಲರೂ ಅದರ ಸಾರ್ಥಕತೆಯೆಡೆಗೆ ಎಷ್ಟು ಕೈಜೋಡಿಸಿದ್ದೇವೆ ಎನ್ನುವುದರ ಮೇಲೆ ಬೆಳಕು ಚೆಲ್ಲುವುದೇ ಈ ಲೇಖನದ ಉದ್ದೇಶ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.