ವಾಣಿಜ್ಯ ನಗರಿಗೆ ವಿಜ್ಞಾನ ಲೋಕ ಇತ್ತೀಚಿನ ದಿನಗಳಲ್ಲಿ `ನೋಡಿ ನಲಿ- ಆಡಿ ಕಲಿ~ ಎಂಬುದು ಹೆಚ್ಚು ಪ್ರಚಲಿತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಶಾಲೆಗಳು, ಕಾಲೇಜುಗಳಲ್ಲಿ ಆಗಾಗ ವಸ್ತುಪ್ರದರ್ಶನಗಳನ್ನು ನಡೆಸಲಾಗುತ್ತದೆ. ವಿಜ್ಞಾನಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸಿ, ಮಾದರಿಗಳನ್ನು ಪ್ರದರ್ಶಿಸಲಾಗುತ್ತದೆ. ಇಂತಹ ಕಾರ್ಯಕ್ರಮಗಳ ಮುಂದುವರಿದ ಭಾಗವಾಗಿಯೇ ಅಲ್ಲಲ್ಲಿ ವಿಜ್ಞಾನ ವಸ್ತುಸಂಗ್ರಹಾಲಯಗಳನ್ನು ಸ್ಥಾಪಿಸಲಾಗುತ್ತಿದೆ. ಈ ನಿಟ್ಟಿನಲ್ಲಿ, ದಾವಣಗೆರೆ ಜಿಲ್ಲೆಯ ಹುಳುಪಿನಕಟ್ಟೆ ಗ್ರಾಮದಲ್ಲಿ ರಾಜ್ಯದ ಮೂರನೇ ವಿಜ್ಞಾನ ವಸ್ತುಸಂಗ್ರಹಾಲಯ ಹಾಗೂ ಪಿರಮಿಡ್ ಸ್ಥಾಪನೆ ಮಾಡಲು ಜಿಲ್ಲಾಡಳಿತ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಸಿದ್ಧತೆ ನಡೆದಿದೆ. ಉದ್ದೇಶಿತ ಮ್ಯೂಸಿಯಂಗಾಗಿ ಗ್ರಾಮದಲ್ಲಿ ನಾಲ್ಕು ಎಕರೆ ಜಮೀನನ್ನು ಗುರುತಿಸಿ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಲಾಗಿದೆ. ಜಿಲ್ಲಾ ಅನ್ವೇಷಣೆ ನಿಧಿ (ಡಿಸ್ಟ್ರಿಕ್ಟ್ ಇನೋವೇಟಿವ್ ಫಂಡ್) ಅಡಿಯಲ್ಲಿ 1 ಕೋಟಿ ರೂಪಾಯಿ ಅನುದಾನ ಬಿಡುಗಡೆ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಪ್ರಸಕ್ತ ದಿನಗಳಲ್ಲಿ ಎಂಜಿನಿಯರಿಂಗ್, ವೈದ್ಯಕೀಯದಂತಹ ಕೋರ್ಸ್‌ಗಳತ್ತ ವಿದ್ಯಾರ್ಥಿಗಳು ಹೆಚ್ಚಿನ ಒಲವು ತೋರುತ್ತಿದ್ದಾರೆ. ಪೋಷಕರೂ ತಮ್ಮ ಮಕ್ಕಳನ್ನು ಮೂಲವಿಜ್ಞಾನದ ಬದಲು ಇತರ ಕೋರ್ಸ್‌ಗಳಿಗೆ ಸೇರಿಸುವುದಕ್ಕೇ ಮನಸ್ಸು ಮಾಡುತ್ತಿದ್ದಾರೆ. ಇದರಿಂದಾಗಿ ಮೂಲವಿಜ್ಞಾನದ ಬಗ್ಗೆ ಒಂದರ್ಥದಲ್ಲಿ `ತಾತ್ಸಾರ ಮನೋಭಾವ~ವೇ ಬೆಳೆದುಬಿಟ್ಟಿದೆ. ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸರ್ಕಾರ ವಿಜ್ಞಾನದ ಪ್ರಚಾರ ಹಾಗೂ ಬಲವರ್ಧನೆಗೆ ರೂಪಿಸಿರುವ ಯೋಜನೆಯಲ್ಲಿ ವಿಜ್ಞಾನ ವಸ್ತುಸಂಗ್ರಹಾಲಯ ಹಾಗೂ ಗೋಪುರ ನಿರ್ಮಾಣ ಸಹ ಸೇರಿವೆ. ಏನಿದು ಯೋಜನೆ? ಕೇಂದ್ರ ಸರ್ಕಾರದ ಯೋಜನೆ ಇದು. ಶಿಕ್ಷಣ ಇಲಾಖೆ `ಹೊಂದಾಣಿಕೆ ಅನುದಾನ~ವಾಗಿ (ಮ್ಯಾಚಿಂಗ್ ಗ್ರ್ಯಾಂಟ್) 10 ಲಕ್ಷ ರೂಪಾಯಿ ಕೊಟ್ಟರೆ ಕೇಂದ್ರ ಸರ್ಕಾರದಿಂದ ಒಂದು ಕೋಟಿ ರೂಪಾಯಿ ದೊರೆಯುತ್ತದೆ. `ಬೆಂಗಳೂರಿನ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ- ನೆಹರು ಮ್ಯೂಸಿಯಂ ರೀತಿಯಲ್ಲಿ ಇಲ್ಲಿಯೂ ವಸ್ತುಸಂಗ್ರಹಾಲಯ ಹಾಗೂ ವಿಜ್ಞಾನ ಗೋಪುರ ಮೈದಳೆಯಲಿದೆ. ರಾಜ್ಯದಲ್ಲಿ ಬೆಂಗಳೂರು, ತುಮಕೂರು ಹೊರತುಪಡಿಸಿದರೆ ಮೂರನೇ ಸಂಗ್ರಹಾಲಯ ಎಂಬ ಖ್ಯಾತಿಗೆ ಭಾಜನವಾಗಲಿದೆ. ಇದರಿಂದಾಗಿ ಮಾದರಿಗಳನ್ನು ವೀಕ್ಷಿಸಿ ವಿಜ್ಞಾನದ ವಿಷಯಗಳ ಅರಿವು ಹೊಂದುವುದಕ್ಕೆ ವಿದ್ಯಾರ್ಥಿಗಳು ಇನ್ನು ಮುಂದೆ ಬೆಂಗಳೂರಿಗೆ ಹೋಗಬೇಕಾದ ಪ್ರಮೇಯ ಇರುವುದಿಲ್ಲ. ಈ ಭಾಗದ ಹಾಗೂ ಉತ್ತರ ಕರ್ನಾಟಕದ ವಿಜ್ಞಾನ ಶಿಕ್ಷಕರು, ವಿದ್ಯಾರ್ಥಿಗಳು, ಆಸಕ್ತರಿಗೆ ಇದರಿಂದ ಬಹಳಷ್ಟು ಉಪಯೋಗ ಆಗಲಿದೆ~ ಎನ್ನುತ್ತಾರೆ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಿ.ಎ.ರಾಜಶೇಖರ. ಪ್ರೌಢಶಾಲಾ ಹಂತದಿಂದಲೇ ವಿದ್ಯಾರ್ಥಿಗಳಿಗೆ ವಿಜ್ಞಾನದ ಮಾಹಿತಿಯನ್ನು ಪರಿಣಾಮಕಾರಿಯಾಗಿ ನೀಡಬೇಕಾದ ಅಗತ್ಯವಿದೆ. ಈ ಮೂಲಕ ಮೂಲವಿಜ್ಞಾನ ಬಲವರ್ಧನೆಯೂ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ವಿಜ್ಞಾನ ಗೋಪುರ ನೆರವಾಗಲಿದೆ. ಮೂಲವಿಜ್ಞಾನವಾದ ಭೌತಶಾಸ್ತ್ರ, ರಸಾಯನಶಾಸ್ತ್ರ, ಖಗೋಳಶಾಸ್ತ್ರ, ಅಂಗರಚನಾ ಶಾಸ್ತ್ರ... ಹೀಗೆ ಅನೇಕ ವಿಷಯಗಳಿಗೆ ಸಂಬಂಧಿಸಿದಂತೆ ಮಾದರಿಗಳನ್ನು ಇಲ್ಲಿ ಪ್ರದರ್ಶಿಸಲಾಗುವುದು. ಪ್ರೌಢಶಾಲೆ, ಪಿ.ಯು.ಸಿ ಹಾಗೂ ಪದವಿ ಪಠ್ಯಗಳಿಗೆ ಸಂಬಂಧಿಸಿದ ಮಾದರಿಗಳನ್ನು ಅಳವಡಿಸಲಾಗುವುದು ಎಂದು ವಿವರಿಸುತ್ತಾರೆ ಅವರು. `ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿರುವ ಬಹುತೇಕ ಸರ್ಕಾರಿ ಶಾಲೆಗಳ ಮಕ್ಕಳು ಬೆಂಗಳೂರಿಗೆ ಹೋಗಿ, ಪ್ರಯೋಗಾಲಯ ಅಥವಾ ಮ್ಯೂಸಿಯಂಗಳನ್ನು ವೀಕ್ಷಿಸುವುದು ಕಷ್ಟವಾಗುತ್ತದೆ. ಶೈಕ್ಷಣಿಕ ಪ್ರವಾಸದ ಸಂದರ್ಭದಲ್ಲಿಯೂ ಇಂತಹ ಪ್ರಯತ್ನ ಅಪರೂಪವೇ ಸರಿ. ಹೀಗಾಗಿ, ವಿಜ್ಞಾನ ಮ್ಯೂಸಿಯಂ ಸಮೀಪದಲ್ಲೇ ಇದ್ದರೆ ವೀಕ್ಷಿಸುವುದಕ್ಕೂ ಸುಲಭವಾಗುತ್ತದೆ. ಸಾಮಾನ್ಯ ಮಕ್ಕಳು ಸಹ ಮ್ಯೂಸಿಯಂ ವೀಕ್ಷಿಸಿ, ಮಾಹಿತಿ ಪಡೆಯಲು ಅನುಕೂಲ ಮಾಡಿಕೊಡುವ ಉದ್ದೇಶ ಹೊಂದಲಾಗಿದೆ. ಇದರಿಂದ ಬೆಂಗಳೂರೇತರ ನಗರಗಳಲ್ಲಿಯೂ ವಿಜ್ಞಾನ ಪ್ರಚಾರ ಮಾಡಿದಂತಾಗುತ್ತದೆ ~ ಎಂದು ಅವರು ಮಾಹಿತಿ ನೀಡುತ್ತಾರೆ. ದಾವಣಗೆರೆ ನಗರ ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಹೊಂದುತ್ತಿದೆ. ಹತ್ತಾರು ವಿಜ್ಞಾನ ಕಾಲೇಜುಗಳು ಇವೆ. ಈ ನಿಟ್ಟಿನಲ್ಲಿ, ವಿಜ್ಞಾನ ಮ್ಯೂಸಿಯಂ `ಆಕರ್ಷಕ ಶೈಕ್ಷಣಿಕ ಪ್ರವಾಸಿ ಕೇಂದ್ರ~ವಾಗಿ ರೂಪುಗೊಳ್ಳುವ ನಿರೀಕ್ಷೆ ಇದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.