ಸಮುದಾಯ ವೈದ್ಯಶಾಸ್ತ್ರ ಆರೋಗ್ಯದ ಅಸ್ತ್ರ ಸಮುದಾಯ ವೈದ್ಯಕೀಯ ಶಾಸ್ತ್ರ ಎಂಬುದು ಸಮುದಾಯದ ಆರೋಗ್ಯ ಮತ್ತು ಕಾಯಿಲೆಗಳ ಅಧ್ಯಯನ. ಹೀಗಾಗಿ ಸಾರ್ವಜನಿಕ ಆರೋಗ್ಯ ಅಥವಾ ಸಮುದಾಯ ಆರೋಗ್ಯ ತೀವ್ರಗತಿಯಲ್ಲಿ ಬೆಳವಣಿಗೆ ಹೊಂದುತ್ತಿರುವ ಕ್ಷೇತ್ರವಾಗಿದ್ದು, ಆರೋಗ್ಯ ಸೇವೆ (ಆಸ್ಪತ್ರೆ), ಆರೋಗ್ಯ ಶಿಕ್ಷಣ, ನಡವಳಿಕೆ ವಿಜ್ಞಾನ, ಪರಿಸರ ಆರೋಗ್ಯ ಮೊದಲಾದ ವಿಭಾಗಗಳಲ್ಲಿ ವಿಪುಲ ಉದ್ಯೋಗಾವಕಾಶಗಳನ್ನು ಹೊಂದಿದೆ. ಎಂಬಿಬಿಎಸ್ ಮುಗಿಸಿ 3 ವರ್ಷ ಸಮುದಾಯ ಆರೋಗ್ಯ ವಿಷಯದಲ್ಲಿ ಎಂ.ಡಿ ಮಾಡಿದವರು ಸಮುದಾಯ ವೈದ್ಯಶಾಸ್ತ್ರ ತಜ್ಞರು ಎನಿಸಿಕೊಳ್ಳುತ್ತಾರೆ. ಈ ಅವಧಿಯಲ್ಲಿ ಎಪಿಡಮಾಲಜಿ, ಬಯೊ ಸ್ಟ್ಯಾಟಿಸ್ಟಿಕ್ಸ್, ಆರೋಗ್ಯ ಯೋಜನೆ ಮತ್ತು ಆರೋಗ್ಯ ನಿರ್ವಹಣೆ, ಆರೋಗ್ಯ ಶಿಕ್ಷಣ ಮತ್ತು ಉತ್ತೇಜನ, ಪ್ರಾಥಮಿಕ ವೈದ್ಯಕೀಯ ಆರೈಕೆಗಳಲ್ಲಿ ಪರಿಣತಿ ಹೊಂದುತ್ತಾರೆ. ಸಾರ್ವಜನಿಕ ಆರೋಗ್ಯದ ಬಗ್ಗೆ ತರಬೇತಿ ಪಡೆದುಕೊಳ್ಳುತ್ತಾರೆ. ಜವಾಬ್ದಾರಿಗಳು -ಆರೋಗ್ಯ ಸ್ಥಿತಿಗತಿ ಮತ್ತು ಕಾಯಿಲೆಗಳ ಆಳ ಅಧ್ಯಯನ -ಚಿಕಿತ್ಸೆ ಮತ್ತು ಸಾಧಾರಣ ಕಾಯಿಲೆಗಳ ನಿರ್ವಹಣೆ ಮತ್ತು ತುರ್ತು ಚಿಕಿತ್ಸೆ -ವೈಯಕ್ತಿಕ ಮತ್ತು ಕುಟುಂಬ ಆಧಾರಿತ ಆರೋಗ್ಯ ಅಭಿವೃದ್ಧಿ ಯೋಜನೆಗಳ ಅನುಷ್ಠಾನ -ಸಾಮಾನ್ಯ ರೋಗಗಳ ಸಂಶೋಧನೆ ಮತ್ತು ಸೂಕ್ತ ಪರಿಹಾರ ಸೂಚಿಸುವುದು -ಸಮುದಾಯ ಆರೋಗ್ಯ ಕುರಿತು ಸಮೀಕ್ಷೆ -ಆರೋಗ್ಯ ಸೇವೆಗಳ ಅಭಿವೃದ್ಧಿ ಮತ್ತು ಆರೋಗ್ಯ ಕಾರ್ಯಕ್ರಮಗಳು -ಸಮುದಾಯ ಆರೋಗ್ಯ ಸೇವೆಗಳ ಸುಧಾರಣೆ, ಸಂಶೋಧನೆ -ಸಮುದಾಯ ವೈದ್ಯಕೀಯ ಶಾಸ್ತ್ರದ ನಾನಾ ವಲಯಗಳಲ್ಲಿ ತರಬೇತಿ ಮತ್ತು ಬೋಧನೆ -ಆರೋಗ್ಯ ತಂಡದ ಪರಿಣಾಮಕಾರಿ ನಾಯಕರಾಗಿ ಕಾರ್ಯ ನಿರ್ವಹಣೆ -ನಿರ್ವಾಹಕ ಮತ್ತು ನಾಯಕರಾಗಿ ಸರ್ಕಾರಿ- ಖಾಸಗಿ ಪಾಲುದಾರಿಕೆ ಯೋಜನೆಗಳ ಬಲವರ್ಧನೆ -ಆಸ್ಪತ್ರೆಗಳಲ್ಲಿ ಅಧ್ಯಯನ ಕೇಂದ್ರ ನಿರ್ವಹಣೆ -ಶಾಲೆ- ಕಾಲೇಜುಗಳಲ್ಲಿ ಕ್ಲಿನಿಕ್- ಸಾಮಾಜಿಕ ಘಟಕಗಳಿಗೆ ಚಾಲನೆ ನೀಡುವುದು ಸಮುದಾಯ ವೈದ್ಯಕೀಯ ಕ್ಷೇತ್ರದ ಲಾಭಗಳ ನಡುವೆಯೂ ಅದರ ಭವಿಷ್ಯದ ಬಗ್ಗೆ ಭಾರತದಲ್ಲಿ ಕೆಲ ಗೊಂದಲಗಳಿವೆ. ಸಾರ್ವಜನಿಕ ಆರೋಗ್ಯ ವಲಯದಲ್ಲಿ ತರಬೇತಿ ಹೊಂದಿದ್ದರೂ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇರುವುದಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಸಾರ್ವಜನಿಕ ಆರೋಗ್ಯ ವಿಷಯದ ನೀತಿ ನಿರೂಪಣೆಯನ್ನು ಜನಪ್ರತಿನಿಧಿಗಳು, ಮಂತ್ರಿಗಳೇ ನಿರ್ಧರಿಸುತ್ತಾರೆ. ಅವರಿಗೆ ಆರೋಗ್ಯ ಶಿಕ್ಷಣದ ಬಗ್ಗೆ ಪರಿಣತಿ ಇರುವುದಿಲ್ಲ. ಇಂತಹ ಸ್ಥಿತಿಯಲ್ಲಿ, ಸಮುದಾಯ ವೈದ್ಯಕೀಯ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದವರು ತಮ್ಮ ಸ್ಥಾನದ ಬಗ್ಗೆ ಭೀತಿಯಲ್ಲಿದ್ದಾರೆ. ಆದರೆ ಅವರಿಗೆ ಅಕಾಡೆಮಿ, ಅಂತರ ರಾಷ್ಟ್ರೀಯ ಸಂಸ್ಥೆಗಳಲ್ಲಿ ಉತ್ತಮ ಭವಿಷ್ಯವಿದೆ. ಸಮುದಾಯ ವೈದ್ಯಕೀಯ ಶಾಸ್ತ್ರ ಸಾರ್ವಜನಿಕ ಆರೋಗ್ಯ ವಲಯದೊಂದಿಗೆ ಗುರುತಿಸಿಕೊಳ್ಳಬೇಕು. ಸಂಖ್ಯಾಶಾಸ್ತ್ರ, ಆರ್ಥಿಕತೆ, ಭೌಗೋಳಿಕತೆ, ರೋಗ ತಡೆಯುವುದು, ಲಿಂಗ, ಪರಿಸರ ಆರೋಗ್ಯ ಮೊದಲಾದ ವಿಷಯಗಳಲ್ಲಿ ವಿಶೇಷ ಅಧ್ಯಯನ ನಡೆಸಬೇಕು. ಇದು ವೈದ್ಯಕೀಯ ಮತ್ತು ವೈದ್ಯಕೀಯೇತರ ವಿದ್ಯಾರ್ಥಿಗಳಿಗೆ ಮುಕ್ತವಾಗಿದೆ. ಅತ್ಯಂತ ಪ್ರಮುಖವಾಗಿ ಸರ್ಕಾರ ಆರೋಗ್ಯ ವಲಯದಲ್ಲಿನ ಬದಲಾವಣೆಗೆ ಸ್ಪಂದಿಸಬೇಕು. ಆರೋಗ್ಯ ಕ್ಷೇತ್ರಕ್ಕೆ ಭಾರಿ ಹಣದ ಅಗತ್ಯವಿದ್ದು, ಅದನ್ನು ಪೂರೈಸಬೇಕು. ಆರೋಗ್ಯಕ್ಕೆ ಸಂಬಂಧಿಸಿದ ಪ್ರತಿ ಹಂತದ ನಿರ್ಧಾರದಲ್ಲೂ ಸಾರ್ವಜನಿಕ ಆರೋಗ್ಯ ವೃತ್ತಿಪರರನ್ನು ಬಳಸಿಕೊಳ್ಳಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.