ವಿಶ್ವಕೋಶ ಸಂಸ್ಕೃತದ ಸಂಜೀವಿನಿ ಭಾರತೀಯ ಪ್ರಾಚೀನ ಜ್ಞಾನ ಭಂಡಾರವೇ ಹುದುಗಿರುವ ಸಂಸ್ಕೃತ ಕೆಲವರ ದೃಷ್ಟಿಯಲ್ಲಿ ಮೃತ ಭಾಷೆ ಎಂದೇ ಕರೆಸಿಕೊಂಡಿರಬಹುದು. ಆದರೆ ಅದರಲ್ಲಿರುವ ಸಮಗ್ರ ಜ್ಞಾನವನ್ನು ಮಾತ್ರ ಯಾರೂ ನಿರ್ಲಕ್ಷ್ಯ ಮಾಡಲಾಗದು. ಬೇಕಾದ ಮಾಹಿತಿಯನ್ನು ಕ್ಷಣಮಾತ್ರದಲ್ಲಿ ನೀಡುವ ವೇಗದೂತ ಮಾಧ್ಯಮ `ವಿಶ್ವಕೋಶ~ದಲ್ಲೂ (ವಿಕಿಪೀಡಿಯಾ) ಸಂಸ್ಕೃತ ಭಾಷೆ ಈಗ ಸೌರಭ ಬೀರುತ್ತಿದ್ದು, ಸಂಸ್ಕೃತಾಭಿಮಾನಿಗಳನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. 2003ರ ಡಿಸೆಂಬರ್‌ನ್ಲ್ಲಲೇ ಸಂಸ್ಕೃತ ವಿಶ್ವಕೋಶ ಆರಂಭವಾಗಿತ್ತು. ಆದರೆ 2011ರ ಮೇ ತಿಂಗಳವರೆಗೂ ಅದರಲ್ಲಿ ಸಂಗ್ರಹವಾದ ಲೇಖನಗಳು 4,000 ಮಾತ್ರ. ಅದರ ಗುಣಮಟ್ಟವೂ ಉತ್ತಮವಾಗಿರಲಿಲ್ಲ. ಇದನ್ನರಿತ ಬೆಂಗಳೂರಿನ `ಸಂಸ್ಕೃತ ಭಾರತಿ~ ಸಂಸ್ಥೆಯು ತನ್ನ ವಿಸ್ತೃತ ಕಾರ್ಯಜಾಲವನ್ನು ಬಳಸಿ ಸಂಸ್ಕೃತ ವಿಶ್ವಕೋಶವನ್ನು ಮಾಹಿತಿ ಸಮೃದ್ಧವನ್ನಾಗಿ ಮಾಡುವ ಕಾರ್ಯಕ್ಕೆ ಕೈಹಾಕಿದೆ. ಪರಿಣಾಮವಾಗಿ ಕೇವಲ 8 ತಿಂಗಳಿನಲ್ಲೇ ಅದರ ಲೇಖನಗಳ ಸಂಖ್ಯೆ ದುಪ್ಪಟ್ಟಾಗಿದೆ. `2011ರ ಡಿಸೆಂಬರ್‌ನಲ್ಲಿ ಸಂಸ್ಕೃತ ವಿಶ್ವಕೋಶದಲ್ಲಿ ಸಂಗ್ರಹವಾದ ಲೇಖನಗಳ ಸಂಖ್ಯೆ 8,100ಕ್ಕೆ ಏರಿದೆ. ಇಂಗ್ಲಿಷ್ ವಿಶ್ವ ಕೋಶವನ್ನು ಸರಿಗಟ್ಟಲು ಇನ್ನೂ ಬಹಳ ದೂರ ಸಾಗಬೇಕಾಗಿದ್ದರೂ ನಿಧಾನಕ್ಕೆ ಸಂಸ್ಕೃತದಲ್ಲಿ ಮಾಹಿತಿ ಸಂಗ್ರಹ, ಕ್ರೋಡೀಕರಣ, ವಿನಿಮಯ, ಪ್ರಕಟಣೆ, ಪ್ರಚಾರ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಮಾಹಿತಿ ಸಂಗ್ರಹ ಹಾಗೂ ಜಾಲತಾಣಕ್ಕೆ ಅಳವಡಿಸಲು ಸಂಸ್ಕೃತ ಭಾರತಿಯು ಬೆಂಗಳೂರಿನ ಗಿರಿನಗರದಲ್ಲಿರುವ `ಅಕ್ಷರಂ~ ಕಚೇರಿ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ~ ಎಂದು ಸಂಸ್ಕೃತ ಭಾರತಿಯ ಡಾ. ಸುಮನಾ ತಿಳಿಸುತ್ತಾರೆ. ಸಂಸ್ಕೃತ ಭಾರತಿಯು `ಡಬ್ಲ್ಯುಡಬ್ಲ್ಯುಡಬ್ಲ್ಯು.ಎಸ್‌ಎ.ವಿಕಿಪಿಡಿಯಾ.ಆರ್ಗ್~ಗೆ ಒಂದು ಸ್ಪಷ್ಟ ರೂಪು ನೀಡಿದೆ. ಸಂಪೂರ್ಣ ದೇವನಾಗರಿ ಲಿಪಿಯಲ್ಲೇ ಸಂಸ್ಕೃತದ ಮಾಹಿತಿ ಸಿಗುವುದು ಇದರ ವಿಶೇಷ. ವಿಶ್ವಕೋಶ ವ್ಯವಸ್ಥೆಯಲ್ಲಿ ವಿಕಿಸ್ತೋತ್ರ, ವಿಕಿಕೋಶ, ವಿಕಿ ಪುಸ್ತಕ, ವಿಕಿ ಸುಭಾಷಿತ, ವಿಕಿ ವಾರ್ತೆಗಳು ಎಂಬ ಪ್ರಮುಖ ಉಪ ವಿಭಾಗಗಳಿವೆ. ಪ್ರಾಚೀನ ಸಂಸ್ಕೃತ ಗ್ರಂಥಗಳ ಸಂಗ್ರಹಣಾ ಕಾರ್ಯಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದೆ. ನೀವು ಈ ತಾಣಕ್ಕೆ ಲಾಗ್ ಆನ್ ಆಗುತ್ತಿದ್ದಂತೆ, `ಸ್ವಾಗತಂ~ ಎಂದು ದೇವನಾಗರಿ ಲಿಪಿಯಲ್ಲಿ ಬರೆದ ಸಂಸ್ಕೃತ ಭಾಷಾ ಉಕ್ತಿ ಸ್ವಾಗತಿಸುತ್ತದೆ. ಪ್ರಮುಖಃ ಲೇಖಃ, ವಾರ್ತಾಃ, ಜ್ಞಾಯತೇ ಕಿಂ ಭವತಾ, ಸುಭಾಷಿತಂ, ಪ್ರಮುಖ ಚಿತ್ರಂ, ವಿಶ್ವವಿಜ್ಞಾನ ಕೋಶ, ಭಾಷಾ ಚ ಸಾಹಿತ್ಯಂ, ಗಣಿತಂ, ಶಾಸ್ತ್ರಂ, ಭೂಮಿಶಾಸ್ತ್ರಂ, ಸಾಂಕೇತಿಕ ವಿದ್ಯಾ, ತತ್ವಜ್ಞಾನಂ, ಧರ್ಮಃ, ಇತಿಹಾಸ, ಜೀವಚರಿತಂ, ಕಲಾಸಂಸ್ಕೃತಿ ವ್ಯವಹಾರದಶಾ ಚ, ಕ್ರೀಡಾ, ವಿಕಿ ಸಮಾಜಃ, ಸಂಸ್ಕೃತ ಭಾಷಾ ಸಹಾಯಿ, ವಿಕಿ ವರ್ತಮಾನಃ, ಸಂಸ್ಕೃತ-ಇಂಗ್ಲಿಷ್, ಇಂಗ್ಲಿಷ್- ಸಂಸ್ಕೃತ ವಿಶ್ವಕೋಶ ಹೀಗೆ ವಿವಿಧ ವಿಭಾಗಗಳ ಅಡಿ ಬೇಕಾದ ಮಾಹಿತಿಗಳನ್ನು ಸಂಸ್ಕೃತ ಪ್ರಿಯರು ಪಡೆಯಬಹುದು. ವಿಶ್ವಕೋಶದ ನಿರ್ವಹಣೆಗಾಗಿ ತಂಡದ ಇಬ್ಬರು ಸದಸ್ಯರು ಸಂಪೂರ್ಣವಾಗಿ ಕೆಲಸ ಮಾಡಿ ಸುಮಾರು ಸಾವಿರಕ್ಕೂ ಹೆಚ್ಚು ಸೂಚನೆಗಳನ್ನು, ಸಂಸ್ಕೃತ ಭಾಷಾಂತರ ಹಾಗೂ ಪರಿಷ್ಕರಣೆಗಳನ್ನು ಮಾಡಿದ್ದಾರೆ. 18 ಸಂಪಾದಕರು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತ್ದ್ದಿದು ಸಂಸ್ಕೃತ ವಿಶ್ವಕೋಶಕ್ಕೆ ಪ್ರತಿ ತಿಂಗಳು ಸರಾಸರಿ 4,24,103 ಓದುಗರಿದ್ದಾರೆ. ಅತ್ಯಂತ ಪ್ರಭಾವಶಾಲಿ ಎಂದೆನಿಸಿರುವ ಅಂತರ್ಜಾಲ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಕಾರ್ಯ ಮಾಡಿದರಷ್ಟೇ ಸಂಸ್ಕೃತ ಭಾಷೆ ಅಭಿವೃದ್ಧಿ ವೇಗವಾಗಿ ಆಗಲು ಸಾಧ್ಯ. ಇಷ್ಟರಲ್ಲೇ ಆಗಬೇಕಾದ ಕಾರ್ಯಕ್ಕೆ `ಸಂಸ್ಕೃತ ಭಾರತಿ~ ಉತ್ಸಾಹದಿಂದ ಮುಂದಾಗಿದೆ. ಈ ಕಾರ್ಯಕ್ಕೀಗ ಸಂಸ್ಕೃತ ವಿದ್ವಾಂಸರು, ಜ್ಞಾನಿಗಳು, ಪಂಡಿತರು ಕೈಜೋಡಿಸುವ ಅಗತ್ಯವಿದೆ. ಹಲವು ಮಠಗಳು, ವಿದ್ವಾಂಸರು ಈಗಲೂ ವೇದಾಧ್ಯಯನಗಳನ್ನು ನಡೆಸಿಕೊಂಡು ಬರುತ್ತಿದ್ದು, ದೇಶದಾದ್ಯಂತ ಸಾವಿರಾರು ಸಂಸ್ಕೃತ ಪಾಠಶಾಲೆಗಳು ಅಸ್ತಿತ್ವದಲ್ಲಿವೆ. ಹತ್ತಾರು ಸಂಸ್ಕೃತ ವಿ.ವಿಗಳು ಕೆಲಸ ಮಾಡುತ್ತಿವೆ. ಇವರೆಲ್ಲರ ಸಹಯೋಗ ದೊರೆತರೆ ಸಂಸ್ಕೃತ ವಿಶ್ವಕೋಶಕ್ಕೆ ಅಮೂಲ್ಯ ಮಾಹಿತಿ ಕಣಜವಾಗಿ ರೂಪುಗೊಳ್ಳುವುದರಲ್ಲಿ ಸಂಶಯವೇ ಇಲ್ಲ. ಸಂಸ್ಕೃತ ಮತ್ತೆ ಜನರ ಭಾಷೆಯಾಗಬೇಕೆನ್ನುವ ಪ್ರಯತ್ನಗಳು ಅಲ್ಲಲ್ಲಿ ನಡೆಯುತ್ತಿದ್ದರೂ, ವಿವಿಧ ಭಾಷೆಗಳ ಪೈಪೋಟಿ ನಡುವೆ ಈ ಗುರಿ ತಲುಪುವುದು ಸುಲಭದ ಮಾತಲ್ಲ. ಈ ನಿಟ್ಟಿನಲ್ಲಿ `ಸಂಸ್ಕೃತ ವಿಶ್ವಕೋಶ~ ಸಂಸ್ಕೃತ ಭಾಷೆಗೆ ಸಂಜೀವಿನಿ ಆಗಲೂಬಹುದು! ಸಂಸ್ಕೃತ ಕೀಲಿಮಣೆಯಲ್ಲಿನ ಸ್ವರ ಮತ್ತು ವ್ಯಂಜನಾಕ್ಷರಗಳು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.