ಪರೀಕ್ಷೆಗಳನ್ನುಪಳಗಿಸೋಣ! ಏಳನೇ ತರಗತಿಯಲ್ಲಿ ಓದುತ್ತಿರುವ ಮೃಣಾಲಿನಿಗೆ ಕನ್ನಡ ಭಾಷೆಯ ವ್ಯಾಕರಣ ಭಾಗ ಕಷ್ಟವಾಗುತ್ತದೆ. ಪರೀಕ್ಷೆಗಳಲ್ಲಿ ಸಂಧಿಗಳನ್ನು ಗುರುತಿಸುವುದು, ಸಮಾಸಗಳನ್ನು ಹೆಸರಿಸುವುದು ಬಂದಾಗ ಅಂಕಗಳು ಕೈತಪ್ಪಿ ಹೋಗುತ್ತವೆ. ಆದರೂ, ಆಕೆ ಕನ್ನಡದಲ್ಲಿ `ಎ~ ಶ್ರೇಣಿ ಪಡೆಯುತ್ತಾಳೆ. ಏಕೆಂದರೆ, ಆಕೆ ಕನ್ನಡದಲ್ಲಿ ಚೆನ್ನಾಗಿ ಮಾತನಾಡುತ್ತಾಳೆ. ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವಾಗ ಮೃಣಾಲಿನಿಯೇ ನಿರೂಪಕಿ. ಆಕೆ ಕವಯತ್ರಿ ಕೂಡಾ. ಶಾಲೆಯ ಗೋಡೆ ಪತ್ರಿಕೆಯಲ್ಲಿ ಪ್ರತಿ ತಿಂಗಳೂ ಆಕೆಯ ಕವನಗಳು ಪ್ರಕಟವಾಗುತ್ತವೆ. ಜೊತೆಗೆ, ಆಕೆಯ ಅಕ್ಷರಗಳು ಮುದ್ದಾಗಿವೆ! *** ಮೋಹನ ಎಂಟನೇ ತರಗತಿಯ ವಿದ್ಯಾರ್ಥಿ. ತನ್ನ ಶಾಲೆಯ ವಿದ್ಯಾರ್ಥಿ ಸರ್ಕಾರದಲ್ಲಿ ಪರಿಸರ ಮತ್ತು ಸ್ವಚ್ಛತೆಯ ಮಂತ್ರಿ. ವಿಜ್ಞಾನ ಸಂಘದ ಸದಸ್ಯ ಕೂಡಾ. ಶಾಲೆಯ ಕೈತೋಟ ನಿರ್ವಹಣೆ ಮತ್ತು ಸ್ವಚ್ಛತೆ ಕಾಪಾಡಲು ಮೋಹನನಿಗೆ ಯಾರೂ ಹೇಳಬೇಕಾಗಿಲ್ಲ. ಸ್ವಯಂ ಪ್ರೇರಣೆಯಿಂದ ಅವನು ಈ ಕೆಲಸವನ್ನು ಮಾಡುತ್ತಾನೆ. ತನ್ನ ಗೆಳೆಯರನ್ನು ಒಂದುಗೂಡಿಸಿ ಶಾಲಾ ಉದ್ಯಾನದ ನಿರ್ವಹಣೆಯಲ್ಲಿ ತೊಡಗುತ್ತಾನೆ. ಕಳೆ ಕೀಳುವುದು, ಗಿಡಗಳಿಗೆ ನೀರುಣಿಸುವುದು ಮುಂತಾದ ಕೆಲಸಗಳನ್ನು ಮಾಡಿದ ನಂತರವೇ ಆತ ಶಾಲೆಯಿಂದ ಮನೆಗೆ ತೆರಳುತ್ತಾನೆ. ಸ್ಥಳೀಯ ಹಕ್ಕಿಗಳು ಮತ್ತು ಗಿಡಗಳ ಬಗ್ಗೆ ಅವನಿಗೆ ಸಾಕಷ್ಟು ಜ್ಞಾನವಿದೆ. ಈ ಕಾರಣದಿಂದಾಗಿಯೇ ಮೋಹನ ವಿಜ್ಞಾನ ಮತ್ತು ಕಾರ್ಯಶಿಕ್ಷಣ ವಿಷಯಗಳಲ್ಲಿ ಉತ್ತಮ ಶ್ರೇಣಿಗಳನ್ನು ಪಡೆಯುತ್ತಾನೆ. *** ಶಾಲೆಯ ಅಥ್ಲೆಟಿಕ್ ಚಾಂಪಿಯನ್ ಮೇಘನಾ ಏಳನೇ ತರಗತಿಯ ವಿದ್ಯಾರ್ಥಿನಿ. ಓಟ ಮತ್ತು ಜಿಗಿತದ ವಿವಿಧ ಸ್ಪರ್ಧೆಗಳಲ್ಲಿ ತನ್ನ ವಲಯ ಮತ್ತು ಜಿಲ್ಲೆಯ ತಂಡಗಳನ್ನು ಆಕೆ ಪ್ರತಿನಿಧಿಸಿದ್ದಾಳೆ. ಶಾಲೆಯ ಕಿರಿಯರಿಗೆ ಆಕೆ ತರಬೇತುದಾರಳು ಕೂಡಾ! ಆದ್ದರಿಂದ ತನ್ನ ರಿಪೋರ್ಟ್ ಕಾರ್ಡಿನಲ್ಲಿ ದೈಹಿಕ ಶಿಕ್ಷಣ ವಿಷಯಕ್ಕೆ ಉತ್ತಮ ಗ್ರೇಡ್‌ಗಳನ್ನು ಪಡೆಯುತ್ತಾಳೆ. ಆಕೆ ಉತ್ತಮ ಮಿಮಿಕ್ರಿ ಮತ್ತು ರಂಗೋಲಿ ಕಲಾವಿದೆಯೂ ಆಗಿರುವುದರಿಂದ ಕಲಾ ಶಿಕ್ಷಣದಲ್ಲೂ ಒಳ್ಳೆಯ ಶ್ರೇಣಿಗಳು ದೊರೆಯುತ್ತವೆ. ಗಣಿತ ಮತ್ತು ಸಮಾಜ ವಿಜ್ಞಾನ ವಿಷಯಗಳಲ್ಲಿ ಆಕೆ ಹಿಂದಿರುವಳಾದರೂ ಒಟ್ಟಾರೆ ಗ್ರೇಡ್ ತೃಪ್ತಿಕರವೇ ಆಗಿರುವುದರಿಂದ ಆಕೆಯ ಪೋಷಕರು ಖುಷಿಯಾಗಿದ್ದಾರೆ. ಆಕೆಯ ಕ್ರೀಡಾ ಸಾಧನೆಗಳಿಗೆ ಬೆಂಬಲವಾಗಿ ನಿಂತಿದ್ದಾರೆ.ಮೌಲ್ಯಮಾಪನ ಹೀಗೆಲ್ಲಾ ಇದ್ದರೆ ಎಷ್ಟು ಚೆನ್ನಾಗಿತ್ತು ಎಂದು ಅನಿಸುವುದಿಲ್ಲವೇ? *** ಹೌದು, 2005ರ ರಾಷ್ಟ್ರೀಯ ಪಠ್ಯಕ್ರಮ ನೆಲೆಗಟ್ಟು ಮತ್ತು 2009ರ ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ ಎರಡೂ ಮೌಲ್ಯಮಾಪನ ಹೀಗೆಯೇ ಇರಬೇಕು ಎಂದು ಸೂಚಿಸುತ್ತವೆ! ಪರೀಕ್ಷೆ ಮತ್ತು ಮೌಲ್ಯಮಾಪನ ಎರಡೂ ಒಂದೇ ಎಂಬ ಜನಪ್ರಿಯ ಗ್ರಹಿಕೆಯನ್ನು ಭೇದಿಸದೇ ಇದ್ದರೆ ಎಲ್ಲ ಶೈಕ್ಷಣಿಕ ಸುಧಾರಣೆಗಳೂ ನಿಷ್ಫಲವಾಗಬಹುದು ಎಂದು 2005ರ ರಾಷ್ಟ್ರೀಯ ಪಠ್ಯಕ್ರಮ ನೆಲೆಗಟ್ಟು ಅಭಿಪ್ರಾಯ ಪಡುತ್ತದೆ. ಲಿಖಿತ ಪರೀಕ್ಷೆಗಳನ್ನು ಕೇಂದ್ರವಾಗಿರಿಸಿಕೊಂಡು ನಡೆಯುವ ಕಲಿಕೆ-ಬೋಧನೆ ಪ್ರಕ್ರಿಯೆಗಳನ್ನು ಗಮನದಲ್ಲಿ ಇರಿಸಿಕೊಂಡೇ ಈ ಮಾತನ್ನು ಉಲ್ಲೇಖಿಸಲಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಕಲಿಕೆ ಎಂಬುದನ್ನು ಕಂಠಪಾಠ ಎಂದೇ ತಿಳಿದುಕೊಂಡಿರುವುದಕ್ಕೂ ಮತ್ತು ಕಲಿಕೆಯು ಸಂಪೂರ್ಣವಾಗಿ ಪಠ್ಯಪುಸ್ತಕ ಕೇಂದ್ರಿತವಾಗಿರುವುದಕ್ಕೂ ಮೌಲ್ಯಮಾಪನ ಪ್ರಕ್ರಿಯೆಯನ್ನು ತಪ್ಪಾಗಿ ಗ್ರಹಿಸಿರುವುದೇ ಕಾರಣ. ಮೌಲ್ಯಮಾಪನವು ಶಿಕ್ಷಣದ ಅವಿಭಾಜ್ಯ ಅಂಗ. ಭಯದ ವಾತಾವರಣವನ್ನು ಸೃಷ್ಟಿಸಿ ಮಗುವನ್ನು ಕಲಿಯುವಂತೆ ಮಾಡುವುದು ಮೌಲ್ಯಮಾಪನದ ಉದ್ದೇಶವಲ್ಲ. ಮಕ್ಕಳಿಗೆ `ನಿಧಾನ ಕಲಿಯುವವರು~ `ಪ್ರತಿಭಾವಂತರು~ `ಸಮಸ್ಯಾತ್ಮಕ ಮಕ್ಕಳು~ ಮುಂತಾದ ಹಣೆಪಟ್ಟಿ ಕಟ್ಟುವುದೂ ಮೌಲ್ಯಮಾಪನದ ಕೆಲಸವಲ್ಲ. ಹೀಗೆ ಮಾಡುವುದರಿಂದ ಕಲಿಕೆಯ ಸಂಪೂರ್ಣ ಜವಾಬ್ದಾರಿಯನ್ನು ಮಕ್ಕಳ ಮೇಲೆ ಹೊರಿಸಿದಂತಾಗುತ್ತದೆ. ಮಾತ್ರವಲ್ಲ, ಈ ಕೆಲಸವನ್ನು ತಪ್ಪು ಫಲಿತಾಂಶದ ಆಧಾರದ ಮೇಲೆ ಮಾಡಿದಂತಾಗುತ್ತದೆ. ಶಿಕ್ಷಣವು ಮಗುವಿಗೆ ಬದುಕಲು ಕಲಿಸಬೇಕು. ನಾಗರಿಕ ಜವಾಬ್ದಾರಿಗಳನ್ನು ಅರ್ಥಪೂರ್ಣವಾಗಿ ನಿಭಾಯಿಸುವ ಮತ್ತು ವ್ಯಕ್ತಿಯ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಶಿಕ್ಷಣ ಇಂದಿನ ಅಗತ್ಯ. ಇಂತಹ ಶಿಕ್ಷಣವನ್ನು ನೀಡುವಲ್ಲಿ ನಾವೆಷ್ಟು ಸಫಲರಾಗಿದ್ದೇವೆ ಎಂಬ ಬಗ್ಗೆ ವಿಶ್ವಾಸಾರ್ಹ ಹಿಮ್ಮೋಹಿತಿಯನ್ನು ನೀಡುವಲ್ಲಿ ಮೌಲ್ಯಮಾಪನವು ನೆರವಾಗುತ್ತದೆ. ಮಗುವಿಗೂ ತನ್ನ ಗುರಿ- ಸಾಧನೆಗಳನ್ನು ಮತ್ತು ತನ್ನ ಮಿತಿಗಳನ್ನು ಗುರುತಿಸಲು, ಮುಂದಿನ ಕಲಿಕೆಯನ್ನು ಯೋಜಿಸಲು ಸಹಕರಿಸುತ್ತದೆ. ಲಿಖಿತ ಉತ್ತರಗಳನ್ನು ಬಯಸುವ ಪರೀಕ್ಷೆಯು ಮೌಲ್ಯಮಾಪನದ ಒಂದು ತಂತ್ರವಷ್ಟೇ! ಮಗುವಿನ ಉರು ಹೊಡೆಯುವ ಸಾಮರ್ಥ್ಯವನ್ನು ಅಳೆಯುವ, ಸ್ಮರಣ ಶಕ್ತಿಯನ್ನು ಮೌಲ್ಯಾಂಕನಗೊಳಿಸುವ ಆದರೆ, ಮಗುವಿನ ಸೃಜನಶೀಲತೆ, ವಿಶ್ಲೇಷಣಾ ಮನೋಭಾವ, ಹೊಸ ಸಂದರ್ಭಕ್ಕೆ ಪ್ರತಿಕ್ರಿಯಿಸುವ ರೀತಿಯನ್ನು ಅಳೆಯುವಲ್ಲಿ ಅಸಡ್ಡೆ ತೋರುವ ಪರೀಕ್ಷೆಗಳಿಗಾಗಿ ನಮ್ಮ ಮಕ್ಕಳು ಸಿದ್ಧಗೊಳ್ಳುತ್ತಾ ಬಾಲ್ಯದ ಧಾರಾಳ ಸಂತಸ ಮತ್ತು ರಚನಾತ್ಮಕ ಚೈತನ್ಯವನ್ನು ಕಳೆದುಕೊಳ್ಳುತ್ತಿದ್ದಾರೆಂಬ ಆತಂಕ ಎದುರಾಗಿದೆ. ಮೌಲ್ಯಮಾಪನ ಕ್ರಿಯೆಯಲ್ಲಿ ಲಿಖಿತ ಪರೀಕ್ಷೆಗಳು ಮಹತ್ವದ ಪಾತ್ರವನ್ನೇ ವಹಿಸುತ್ತವೆ. ಆದರೆ, ಅವುಗಳನ್ನು ಹೇಗೆ ವಿನ್ಯಾಸಗೊಳಿಸಲಾಗಿದೆ, ಶೈಕ್ಷಣಿಕ ಉದ್ದೇಶಗಳನ್ನು ಅಳೆಯುವಲ್ಲಿ ಮತ್ತು ಈಡೇರಿಸುವಲ್ಲಿ ಅವು ಸಕ್ಷಮವಾಗಿವೆಯೇ ಎಂಬ ಪ್ರಶ್ನೆಗಳು ಬಹು ಮುಖ್ಯ. ಪರೀಕ್ಷೆ ಎಷ್ಟು ಉತ್ತಮವಾಗಿದೆ ಎಂಬುದನ್ನು ಮಕ್ಕಳ ಉತ್ತರಗಳಲ್ಲಿ ಹುಡುಕುವ ಬದಲು ವಿದ್ಯಾರ್ಥಿಗಳು ಎದುರಿಸಿದ ಪ್ರಶ್ನೆಗಳ ಮೂಲಕವೇ ತೀರ್ಮಾನಿಸಬಹುದು! ವಿದ್ಯಾರ್ಥಿಗಳು ತಮಗೆ ತಾವೇ ಎಷ್ಟು ಪ್ರಶ್ನೆಗಳನ್ನು ಹಾಕಿಕೊಳ್ಳುವಂತೆ ಪರೀಕ್ಷೆಗಾಗಿ ಸಿದ್ಧಪಡಿಸಿದ ಪ್ರಶ್ನೆಪತ್ರಿಕೆಯು ಪ್ರೇರೇಪಿಸಿದೆ ಎಂಬುದು ಪರೀಕ್ಷೆಯ ಯಶಸ್ಸಿನ ನಿರ್ಧರಿಸುತ್ತದೆ. ಇಷ್ಟಾಗಿಯೂ, ಲಿಖಿತ ಪರೀಕ್ಷೆಗಳ ಮೂಲಕವೇ ಮಗುವಿನ ಸರ್ವಾಂಗೀಣ ಬೆಳವಣಿಗೆಯನ್ನು ಅಳತೆ ಮಾಡಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಹತ್ತಾರು ವಿಧದ ತಂತ್ರಗಳು ಮತ್ತು ಸಾಧನಗಳನ್ನು ಬಳಸಬೇಕಾಗಿದೆ. ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ಮಗುವಿನ ಕಲಿಕೆಯ ಬಗ್ಗೆ ಸ್ಪಷ್ಟ ಚಿತ್ರಣ ಪಡೆಯಲು ಶಿಕ್ಷಕರು ನೀಡುವ ತೀರ್ಪುಗಳೇ ಅಂತಿಮವಲ್ಲ. ಆದರೆ, ಶಿಕ್ಷಕರ ತೀರ್ಪುಗಳು ಬಹಳ ಮುಖ್ಯವಾಗಿರುವುದೂ ಸುಳ್ಳಲ್ಲ. ಇಂತಹ ತೀರ್ಪುಗಳು ಹೆಚ್ಚು ಸ್ಪಷ್ಟವೂ, ವಿಶ್ವಾಸಾರ್ಹವೂ ಮತ್ತು ಮಗುವಿನ ಸರ್ವಾಂಗೀಣ ಬೆಳವಣಿಗೆಯನ್ನು ಆಧರಿಸಿಯೂ ಇರಬೇಕಾದದ್ದು ಅವಶ್ಯಕ. ಶಿಕ್ಷಕರು ಬಳಸುವ ಮೌಲ್ಯಮಾಪನ ತಂತ್ರಗಳು ಮಗುವಿನ ಬಲ ಮತ್ತು ದೌರ್ಬಲ್ಯಗಳಿಗೆ ಸಂವೇದನಾಶೀಲ ಆಗಿರಬೇಕು. ಈ ಮೂಲಕ ಮೌಲ್ಯಮಾಪನವು ಮಾನವೀಯಗೊಳ್ಳಬೇಕಾಗಿದೆ. ಪಾತ್ರೆಯಲ್ಲಿನ ಒಂದು ಅಗಳು ಬೆಂದಿದೆಯೆಂದರೆ ಇಡೀ ಪಾತ್ರೆಯ ಅನ್ನ ಬೆಂದಿದೆ ಎಂಬ ತೀರ್ಮಾನಕ್ಕೆ ಬರುವುದು ಮಕ್ಕಳ ಕಲಿಕೆಯ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ತೀರಾ ತಪ್ಪಾದ ಮಾರ್ಗ. ಪ್ರತಿ ಮಗುವೂ ಭಿನ್ನ ಸಾಮಾಜಿಕ ಮತ್ತು ಕೌಟುಂಬಿಕ ಹಿನ್ನೆಲೆಯನ್ನು ಹೊಂದಿರುತ್ತದೆ. ಮಗುವಿಗೆ ದೊರೆಯುವ ಅನುಭವಗಳು, ಅವನ್ನು ಗ್ರಹಿಸುವ ರೀತಿ ವಿಭಿನ್ನವಾಗಿರುತ್ತದೆ. ಆದ್ದರಿಂದಲೇ ಮೌಲ್ಯಮಾಪನವು ಮಗುವಿನ ಅನನ್ಯತೆಯನ್ನು ಗಣನೆಗೆ ತೆಗೆದುಕೊಳ್ಳುವುದು ಅವಶ್ಯಕ. ಈ ಎಲ್ಲ ಕಾರಣಗಳಿಂದಾಗಿ, ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ವಿಧಾನಗಳನ್ನು ಅಳವಡಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಭಾಷೆ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನಗಳ ಜೊತೆಗೆ ದೈಹಿಕ ಶಿಕ್ಷಣ, ಕಲಾ ಶಿಕ್ಷಣ, ಕಾರ್ಯ ಶಿಕ್ಷಣ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳನ್ನು ಪಠ್ಯ ವಿಷಯಗಳನ್ನಾಗಿ ಸೇರಿಸಲಾಗಿದೆ. ಈ ಎಲ್ಲವುಗಳನ್ನು ಒಳಗೊಂಡೇ ಮಗುವಿನ ಶೈಕ್ಷಣಿಕ ಸಾಧನೆಗಳನ್ನು ಅಳೆಯುವ ಪದ್ಧತಿ ಈ ವರ್ಷದಿಂದ ಪ್ರಾರಂಭವಾಗಿದೆ. ಪ್ರತಿ ಪಠ್ಯ ವಿಷಯದ ಸಾಧನೆಯನ್ನೂ ಸಂಕಲನಾತ್ಮಕ ಮತ್ತು ರೂಪಣಾತ್ಮಕ ಮೌಲ್ಯಮಾಪನಗಳ ಮೂಲಕ ಅಳೆಯಲಾಗುತ್ತದೆ. ಸೆಮಿಸ್ಟರ್‌ನ ಅಂತ್ಯದಲ್ಲಿ ನಡೆಯುವ ಲಿಖಿತ ಪರೀಕ್ಷೆಗಳೇ ಸಂಕಲನಾತ್ಮಕ ಮೌಲ್ಯಮಾಪನದ ಪ್ರಮುಖ ಸಾಧನ. ಪಠ್ಯವಿಷಯವೊಂದರ ಕಲಿಕೆಗೆ ಸಂಬಂಧಿಸಿದ ಸಾಧನೆಗಳನ್ನು ಮಗುವಿನ ಸಹಜ ವರ್ತನೆಗಳಲ್ಲಿ ವಿವಿಧ ಸಾಧನ ಮತ್ತು ತಂತ್ರಗಳ ಸಹಾಯದಿಂದ ಹುಡುಕುವುದೇ ರೂಪಣಾತ್ಮಕ ಮೌಲ್ಯಮಾಪನ. ರೂಪಣಾತ್ಮಕ ಮೌಲ್ಯಮಾಪನವು ಕಾರ್ಯರೂಪದಲ್ಲಿ ತೀರಾ ಹೊಸದಾದ ಪರಿಕಲ್ಪನೆ. ಇದಕ್ಕೆ ಅಗತ್ಯವಾದ ಸಾಧನಗಳು, ತಂತ್ರಗಳು ಮತ್ತು ಅಳತೆಗೋಲುಗಳನ್ನು ಪ್ರತಿ ಮಗುವಿನ ವೈಶಿಷ್ಟ್ಯವನ್ನು ಲಕ್ಷಿಸಿಕೊಂಡೇ ರೂಪಿಸಬೇಕಾದ ಅನಿವಾರ್ಯತೆ ಇರುವುದರಿಂದ ಶಿಕ್ಷಕಿಯರಿಗೆ ಹೆಚ್ಚಿನ ವೃತ್ತಿಪರ ಬೆಂಬಲದ ಅಗತ್ಯವಿದೆ. ಭಾಷೆಯ ಸೃಜನಶೀಲ ಬಳಕೆಯನ್ನಾಗಲಿ, ಬದುಕಿನ ನಿರ್ಧಾರ ತೆಗೆದುಕೊಳ್ಳುವಾಗ ವಿಜ್ಞಾನದ ವಿಧಾನಗಳನ್ನು ಅನುಸರಿಸುವುದನ್ನಾಗಲಿ, ಅಭಿವ್ಯಕ್ತಿಯಲ್ಲಿ ಗಣಿತವನ್ನು ಪರಿಣಾಮಕಾರಿಯಾಗಿ ಬಳಸುವುದನ್ನಾಗಲಿ ಅಳೆಯಬೇಕಾದರೆ ಶಿಕ್ಷಕಿಯು ಮೌಲ್ಯಮಾಪನವನ್ನು ತರಗತಿಯ ಸಂವಹನದ ಭಾಗವಾಗಿ ಗ್ರಹಿಸುತ್ತಾ, ಉದ್ದೇಶ ಪೂರ್ವಕ ಸಂದರ್ಭಗಳನ್ನು ಕಲಿಕೆಯ ಪರಿಸರದಲ್ಲೇ ಸೃಷ್ಟಿಸಿಕೊಳ್ಳ ಬೇಕಾಗುತ್ತದೆ. ಶೈಕ್ಷಣಿಕ ಸಾಧನೆಗಳ ಜೊತೆಗೆ, ಮಗುವಿನ ಸಾಮಾಜಿಕ, ಭಾವನಾತ್ಮಕ, ವೈಜ್ಞಾನಿಕ ಕೌಶಲಗಳು, ಮೌಲ್ಯ ರೂಪಣೆ ಹಾಗೂ ಮನೋಧೋರಣೆಗಳಲ್ಲಿನ ಧನಾತ್ಮಕ ಅಂಶಗಳನ್ನು ಗುರುತಿಸುವ ಮೂಲಕ ಸಮಗ್ರ ವ್ಯಕ್ತಿತ್ವದ ಮೌಲ್ಯಮಾಪನ ನಡೆಯಬೇಕು. ಇದು ಅನಿವಾರ್ಯ ಕೂಡಾ. ನಮ್ಮ ಪ್ರಜಾಪ್ರಭುತ್ವದ ಗುರಿ- ಉದ್ದೇಶಗಳನ್ನು ಈಡೇರಿಸಲು ಲಾಯಕ್ಕಾದ ಉತ್ಪನ್ನದಾಯಕ ಮಾನವ ಸಂಪನ್ಮೂಲದ ಸೃಷ್ಟಿಗೆ ಶಿಕ್ಷಣವಲ್ಲದೆ ಬೇರೆ ಯಾವ ಸಾಧನವಿದೆ? ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.