ನಿಮ್ಮ ದೇಹದ ಭಂಗಿ ಹೀಗಿರಲಿ `ನನ್ನ ಕಾಲುಗಳು ಓಡುತ್ತಿರಲಿ, ದೇಹದ ಉಳಿದ ಭಾಗ ವಿಶ್ರಾಂತಿ ಪಡೆಯಲಿ' ಮೇಲಿನ ಮಾತುಗಳನ್ನು ಯಾರಾದರೂ ಓಟಗಾರ ಹೇಳಿದರೆ ಅದೆಷ್ಟು ಅಸಂಬದ್ಧ ಎನಿಸುತ್ತದೆ. ಒಂದು ಮನೆಯಲ್ಲೋ ಕಚೇರಿಯಲ್ಲೋ ಯಾರೋ ಒಬ್ಬರು ಮಾತ್ರ ಕೆಲಸ ಮಾಡುತ್ತಾ, ಉಳಿದವರು ವಿಶ್ರಾಂತಿ ಪಡೆಯುತ್ತಿದ್ದರೆ, ಆ ಕೆಲಸ ಮಾಡುವವರಿಗೆ ಸ್ಫೂರ್ತಿ ಅಥವಾ ಉತ್ಸಾಹ ಇದ್ದೀತೆ? ದೇಶದ ಗಡಿಯಲ್ಲಿ ಸೈನಿಕ ಹೋರಾಡುತ್ತಿರುವಾಗ ಉಳಿದ ಜನ ಮೋಜು ಮಾಡುತ್ತಿದ್ದರೆ, ಆ ಸೈನಿಕನಿಗೆ ಹೇಗನ್ನಿಸಬಹುದು? ಅದೇ ರೀತಿ, ಬರೆಯುವಾಗ ಕೈಗಳು ಕೆಲಸ ಮಾಡುತ್ತಿದ್ದರೆ ದೇಹದ ಉಳಿದ ಭಾಗಗಳು ಅದಕ್ಕೆ ಪೂರಕವಾಗಿರುವಂತೆ ಕಾರ್ಯನಿರತ ಆಗಿರಬೇಕು. ಕೆಲವು ವಿದ್ಯಾರ್ಥಿಗಳು ಮುಂದಿನ ಡೆಸ್ಕಿನ ಮೇಲೆ ಪೂರ್ಣ ಭಾರ ಹಾಕಿ, ಎಡಗೈಯನ್ನು ತಲೆಗೆ ಆಸರೆ ಕೊಟ್ಟು ಬರೆಯುತ್ತಾರೆ. ಇದೆಂತಹ ಬಾಡಿ ಲ್ಯಾಂಗ್ವೇಜ್? ಬೆನ್ನನ್ನು ಹಿಂದಕ್ಕೆ ಒರಗಿಸಿ, ಕೈಯನ್ನು ಪೂರ್ತಿ ಮುಂದೆ ಚಾಚಿ ಬರೆಯುತ್ತಿದ್ದರೆ? ಹಿಂದಿನ ಬೆಂಚಿನ ಕೆಲವು ವಿದ್ಯಾರ್ಥಿಗಳು ಕಡೇ ಪೀರಿಯಡ್ಡಿನಲ್ಲಿ ಹೀಗೆ ಮಾಡುತ್ತಾರೆ. ಹಾಗಾದರೆ ಬರೆಯುವಾಗ ದೇಹದ ಉಳಿದ ಭಾಗಗಳು ಹೇಗಿದ್ದರೆ ಚೆನ್ನ? ಬೆನ್ನು, ಸೊಂಟ: ಬೆನ್ನು ಸಾಧ್ಯವಾದಷ್ಟೂ ನೇರವಾಗಿರಬೇಕು. ಸೊಂಟ ಬಗ್ಗಿರಬಾರದು. ದೀರ್ಘಕಾಲ ಸೊಂಟ ಬಗ್ಗಿಸಿ ಕುಳಿತು ಬರೆದರೆ ಸೊಂಟದ ಸುತ್ತಲೂ ಕೊಬ್ಬು ಶೇಖರವಾಗಿ ಅದು ಟೈರಿನಂತೆ ಊದಿಕೊಳ್ಳುತ್ತದೆ. ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಬೆನ್ನು ನೋವು ಎಂದು ದೂರುವುದಕ್ಕೆ ಅವರು ಬರೆಯುವಾಗ ತಪ್ಪಾದ ದೇಹದ ಸ್ಥಿತಿ ಹೊಂದಿರುವುದೂ ಒಂದು ಕಾರಣ. ತಲೆ ಮತ್ತು ಕುತ್ತಿಗೆ: ತಲೆಯನ್ನು ಅತಿಯಾಗಿ ಮುಂದೆ ಅಥವಾ ಪಕ್ಕಕ್ಕೆ ಬಗ್ಗಿಸಬಾರದು. ಹೀಗೆ ಮಾಡುವುದರಿಂದಲೂ ಸಮಸ್ಯೆಗಳಿಗೆ ಆಹ್ವಾನ ನೀಡಿದಂತೆ ಆಗುತ್ತದೆ. ಕಾಲುಗಳು: ನೆಲಕ್ಕೆ ಅಥವಾ ಫುಟ್ ರೆಸ್ಟಿಗೆ ಕಾಲುಗಳು ಊರಿರಲಿ. ಕಾಲುಗಳನ್ನು ಕುಣಿಸುತ್ತಿರುವುದು ಅಥವಾ ಒಂದು ಕಾಲಿನ ಮೇಲೆ ಇನ್ನೊಂದು ಕಾಲು ಹಾಕಿ ಕುಳಿತುಕೊಂಡು ಬರೆಯುವುದೂ ಸರಿಯಲ್ಲ. ಇವುಗಳೆಲ್ಲ ನಮ್ಮ ಅನಾರೋಗ್ಯಕರವಾದ ಮನಃಸ್ಥಿತಿಯನ್ನು ಸೂಚಿಸುತ್ತವೆ. ಎಡಗೈ: ಇದು ಪುಸ್ತಕವನ್ನೋ ಅಥವಾ ಹಾಳೆಯನ್ನೋ ಹಿಡಿಯಲು ಸಹಾಯ ಮಾಡುತ್ತಿರಲಿ. ಬಲಗೈ: ಇದು ಮೊಣಕೈನಲ್ಲಿ ಸುಮಾರು 90 ಡಿಗ್ರಿಯಷ್ಟು ಬಾಗಿರಲಿ. ದೇಹಕ್ಕೆ ಸಮೀಪವಾಗಿಯೇ ಬಲಗೈ ಇರಬೇಕು. ದೇಹದಿಂದ ಹೊರಕ್ಕೆ ಚಾಚಿರಬಾರದು. ಸಂಪೂರ್ಣ ಬಲಗೈ ಡೆಸ್ಕಿನ ಮೇಲಿರಬಾರದು. ಹಾಗೆ ಮಾಡಿದರೆ ಅದನ್ನು ಸರಿಸುತ್ತಾ ಹೋಗುವುದು ನಿಧಾನವಾಗುತ್ತದೆ. ಕೇವಲ ಬಲಗೈನ ಮುಂಗೈ ಮಾತ್ರ ನಾವು ಬರೆಯುತ್ತಿರುವ ಕಾಗದದ ಮೇಲೋ ಪುಸ್ತಕದ ಮೇಲೋ ಇರಬೇಕು. ದೇಹದ ಭಾರ: ಇದು ಪೃಷ್ಟದ ಮೇಲೆ ಬೀಳುತ್ತಿರಬೇಕು. ಡೆಸ್ಕಿನ ಮೇಲಾಗಲೀ ಹಿಂದಿನ ಪೀಠದ ಭಾಗಕ್ಕಾಗಲಿ ಭಾರ ಬೀಳುವಂತಾಗಿ ಒರಗಿರಬಾರದು. ಏಕೆಂದರೆ ಇದು ವಿಶ್ರಾಂತಿಯ ಸ್ಥಿತಿಯನ್ನು ಸೂಚಿಸುತ್ತದೆ. ನಾವು ಮಾಡುವ ಪ್ರತಿ ಕೆಲಸಕ್ಕೂ ಒಂದು ನಿರ್ದಿಷ್ಟ ದೇಹದ ಭಂಗಿ ಇರಬೇಕಾಗುತ್ತದೆ. ಓಡಲು ಸಿದ್ಧನಾಗಿರುವವನು ಒಂದು ಕಾಲು ಮುಂದೆ ಮತ್ತೊಂದು ಹಿಂದೆ ಇಟ್ಟು ಬಗ್ಗಿದ ಸ್ಥಿತಿಯಲ್ಲಿ ಇರಬೇಕು. ಅದು ಬಿಟ್ಟು ವಿಶ್ರಾಂತಿಯ ಸ್ಥಿತಿಯಲ್ಲಿದ್ದರೆ? ಟಿ.ವಿ ನೋಡುವಾಗ ಸೋಫಾದ ಮೇಲೆ ಪದ್ಮಾಸನ ಹಾಕಿ ಕುಳಿತುಕೋ ಎಂದು ಯಾರೂ ಹೇಳುವುದಿಲ್ಲ. ಅದು ಪ್ರಾಣಾಯಾಮ ಮಾಡುವಾಗ ಬೇಕಾಗುತ್ತದೆ. ಖೊಖೊ ಆಡುವವರು ಒಂದು ನಿರ್ದಿಷ್ಟ ಭಂಗಿಯಲ್ಲಿ ಕುಳಿತುಕೊಳ್ಳಬೇಕಲ್ಲವೇ? ಅದೇ ರೀತಿ ಬರೆಯುವಾಗಲೂ ನಮ್ಮ ದೇಹದ ಸ್ಥಿತಿ (ಬಾಡಿ ಲಾಂಗ್ವೇಜ್) ಹೇಗಿರುತ್ತದೆ ಎಂಬುದು ಮುಖ್ಯವಾಗುತ್ತದೆ. ( ಮುಂದಿನ ವಾರ: ಪುಸ್ತಕ ಮತ್ತು ಕಣ್ಣಿನ ನಡುವಿನ ದೂರ) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.