ಕಣ್ಣು- ಪುಸ್ತಕದ ಅಂತರ ಹೀಗಿರಲಿ ನಮ್ಮ ಕಣ್ಣು ಮತ್ತು ನಾವು ಬರೆಯುವ ಪುಸ್ತಕದ ನಡುವೆ ಎಷ್ಟು ಅಂತರ ಇರಬೇಕು ಎಂದು ಯೋಚಿಸಿದಾಗ ಎರಡು ಅಂಶಗಳು ಮುಂದೆ ಬರುತ್ತವೆ. ಮೊದಲನೆಯದು, ಯಾವುದು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು ಎಂಬುದು. ಎರಡನೆಯದು, ನೋಟದ ದೃಷ್ಟಿಯಿಂದ ಯಾವುದು ಸೂಕ್ತ ಎಂಬುದು. ನಾನು ನನ್ನ ಕಣ್ಣಿನ ವೈದ್ಯರ ಬಳಿ ಒಂದು ಪ್ರಶ್ನೆ ಕೇಳಿದೆ, `ಡಾಕ್ಟ್ರೇ, ಬರೆಯುವಾಗ ಕಣ್ಣಿಗೂ ಪುಸ್ತಕಕ್ಕೂ ಇರಬೇಕಾದ ಸರಿಯಾದ ದೂರ (ಆಪ್ಟಿಮಮ್) ಎಷ್ಟು?' ಎಂದು. ಉತ್ತರವನ್ನು ಅವರ ಮಾತುಗಳಲ್ಲೇ ಕೇಳಿ: `ನಮ್ಮ ಕಣ್ಣಿನ ಮುಂಭಾಗದಲ್ಲಿ ಒಂದು ಉನ್ನತ ಮಸೂರ (ಕಾನ್‌ವೆಕ್ಸ್ ಲೆನ್ಸ್) ಇರುತ್ತದೆ. ಅದಕ್ಕೆ ಸಂಪಾತ ದೂರ (ಫೋಕಲ್ ಲೆಂತ್) ಎಂಬುದು ಇರುತ್ತದೆ. ಕಣ್ಣಿನ ಅಕ್ಷಿಪಟದ (ರೆಟೀನಾ) ಮೇಲೆ ಪ್ರತಿಬಿಂಬಗಳು ಸರಿಯಾಗಿ ಬಿದ್ದಾಗ ಮಾತ್ರ ನಮಗೆ ವಸ್ತುಗಳು ಸರಿಯಾಗಿ ಕಾಣುತ್ತವೆ. ಆದರೆ ಕಣ್ಣಿನ ಮಸೂರದ ವಿಶೇಷವೆಂದರೆ ಇದು ಗಾಜಿನಿಂದ ಮಾಡಿದ್ದಲ್ಲ, ಬದಲಾಗಿ ಸಜೀವ ಕೋಶಗಳಿಂದ ರಚಿತವಾಗಿದೆ. ಸುತ್ತಲೂ ಇದನ್ನು ಹಿಡಿದಿರುವ ಸಿಲಿಯಂ ಸ್ನಾಯುಗಳು ಮಸೂರದ ಔನ್ನತ್ಯವನ್ನು (ಕಾನ್‌ವೆಕ್ಸಿಟಿ) ಹೆಚ್ಚು ಅಥವಾ ಕಡಿಮೆ ಮಾಡುತ್ತದೆ. ನಾವು ದೂರದ ವಸ್ತುಗಳನ್ನು ನೋಡುವಾಗ ಇದು ತೆಳ್ಳಗಾಗಿಯೂ ಮತ್ತು ಸಮೀಪದ ವಸ್ತುಗಳನ್ನು ನೋಡುವಾಗ ದಪ್ಪವಾಗಿಯೂ ಬದಲಾಗುತ್ತದೆ. `ವಯಸ್ಸಿನ ಆಧಾರದ ಮೇಲೆ ಕಣ್ಣಿಗೆ `ಸ್ಪಷ್ಟ ದೃಶ್ಯದ ಕನಿಷ್ಠ ದೂರ' (ಲೀಸ್ಟ್ ಡಿಸ್ಟೆನ್ಸ್ ಆಫ್ ಡಿಸ್ಟಿಂಕ್ಟ್ ವಿಷನ್) ಎಂಬ ಅಳತೆಯೊಂದಿದೆ. ಸುಮಾರು 12 ರಿಂದ 15 ವರ್ಷ ವಯಸ್ಸಿನ ಮಕ್ಕಳಿಗೆ ಇದು 25 ಸೆಂಟಿ ಮೀಟರ್ ಆಗಿದೆ. ಅಂದರೆ ಪುಸ್ತಕವನ್ನು ಯಾವಾಗಲೂ ಅಷ್ಟೇ ದೂರದಲ್ಲಿ ಇಟ್ಟುಕೊಳ್ಳಬೇಕೆಂದು ಅರ್ಥವಲ್ಲ. ಇದು ಕನಿಷ್ಠ. ಇದಕ್ಕಿಂತ ದೂರ ಇರುವುದೇ ಕ್ಷೇಮ. ಟಿ.ವಿ.ಗೂ ವೀಕ್ಷಕರಿಗೂ ಕನಿಷ್ಠ 7 ಅಡಿ ಅಂತರ ಇರಬೇಕೆಂದರೆ ಯಾವಾಗಲೂ ಅಷ್ಟೇ ಇರಬೇಕೆಂದಲ್ಲ. ಅದಕ್ಕಿಂತ ಹೆಚ್ಚಾಗಿಯೇ ಇರುವುದು ಒಳ್ಳೆಯದು. `ಮೇಲಿನ ಅಳತೆಯು ಚಿಕ್ಕ ಮಕ್ಕಳಲ್ಲಿ ಇನ್ನೂ ಕಡಿಮೆ ಇರುತ್ತದೆ ಮತ್ತು ದೊಡ್ಡವರಲ್ಲಿ ಸ್ವಲ್ಪ ಹೆಚ್ಚಾಗಿರಬಹುದು. ನನ್ನ ಪ್ರಕಾರ ಸರಾಸರಿ 35 ಸೆಂ.ಮೀ ದೂರ ಇರುವುದು ಉತ್ತಮ. ತೀರಾ ಹತ್ತಿರದಿಂದ ನೋಡುತ್ತಾ ದೀರ್ಘಕಾಲ ಬರೆಯುವುದರಿಂದ ದೃಷ್ಟಿದೋಷ ಉಂಟಾಗುವ ಸಂಭವ ಇರುತ್ತದೆ'. ಈಗ ನೋಟದ ವಿಷಯಕ್ಕೆ ಬರೋಣ. ದೂರಕ್ಕೂ ಮತ್ತು ಎಷ್ಟು ವಿಸ್ತಾರವಾದ ಅಥವಾ ಗಾತ್ರದ ದೃಶ್ಯ ನಮಗೆ ಕಾಣುವುದು ಎಂಬುದಕ್ಕೂ ಒಂದು ಸಂಬಂಧ ಇದೆ. ಇದನ್ನೇ ವಿಷುಯಲ್ ಆ್ಯಂಗಲ್ ಎನ್ನುತ್ತಾರೆ. (ಮೇಲಿನ ಚಿತ್ರ ನೋಡಿ). ನಾವು ಬರೆಯುವಾಗ ನಮ್ಮ ದೃಷ್ಟಿ ಕೇವಲ ಅಕ್ಷರಗಳ ಕಡೆ ಕೇಂದ್ರೀಕೃತವಾಗದೆ ಇಡೀ ಪುಟದ ವಿನ್ಯಾಸ ಹೇಗಿದೆ ಎಂಬುದರ ಅರಿವು ನಮಗಿರುವುದು ಸೂಕ್ತ. ಚಿತ್ರ ಕಲಾವಿದರು ಆಗಾಗ್ಗೆ ಕ್ಯಾನ್‌ವಾಸಿನಿಂದ ದೂರ ನಿಂತು ಪರೀಕ್ಷಿಸುತ್ತಿರುತ್ತಾರೆ. ಆದರೆ ಬರೆಯುವವರು ಹಾಗೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಸಾಕಷ್ಟು ಅಂತರ ಇರಬೇಕು. ತೀರಾ ಹತ್ತಿರದಿಂದ ನೋಡುತ್ತಾ ಬರೆಯುವವರಿಗೆ ತಮ್ಮ ಬರವಣಿಗೆ ಇಡೀ ಪುಟದಲ್ಲಿ ಹೇಗೆ ಕಾಣುತ್ತಿದೆ ಎಂಬ ಅರಿವೇ ಇರುವುದಿಲ್ಲ. ಅಂಥವರು ಬಿಳಿ ಹಾಳೆಯಲ್ಲಿ ಬರೆದರೆ ಸಾಲುಗಳು ತೀರಾ ಕೆಳಗೆ ಇಳಿಯುತ್ತಿರುತ್ತವೆ ಅಥವಾ ಅಂತರಿಕ್ಷಕ್ಕೆ ಹೋಗುತ್ತಿರುತ್ತವೆ. ಒಂದು ಪುಸ್ತಕದ ಮೇಲಿನ ಸಾಲಿನಲ್ಲಿ ಬರೆಯುವಾಗ ಮತ್ತು ಅತಿ ಕೆಳಗಿನ ಸಾಲುಗಳಲ್ಲಿ ಬರೆಯುವಾಗ ಅಂತರವು ವ್ಯತ್ಯಾಸವಾಗುತ್ತದೆ. ಅಂತಹ ಸಂದರ್ಭದಲ್ಲಿ ಕೈಯನ್ನೇ ಯಾವಾಗಲೂ ಹೊಂದಿಸುವುದಕ್ಕಿಂತ ಪುಸ್ತಕವನ್ನು ಸ್ವಲ್ಪ ಹೊಂದಿಸಿ ಇಟ್ಟುಕೊಳ್ಳುವುದು ಒಳ್ಳೆಯದು. ಕೈಯನ್ನು ಪೂರ್ತಿ ಚಾಚಿ ಬರೆಯುವುದು ನಿರಾಸಕ್ತಿಯನ್ನು ತೋರಿಸುತ್ತದೆ. (ಮುಂದಿನ ವಾರ: ಪುಸ್ತಕ, ಕಣ್ಣಿನ ಕೋನ ಮತ್ತು ಬರೆಯುವ ಮೇಲ್ಮೈ) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.