ಆಯಿಷಾ ಎಂಬ ದೀವಿಗೆ `ಮಿಸ್, ಅಯಸ್ಕಾಂತವನ್ನು ಎರಡಾಗಿ ಕತ್ತರಿಸಿದರೆ ಏನಾಗುತ್ತದೆ?, `ದಯವಿಟ್ಟು ಮಿಸ್, ಒಂದೇ ಒಂದು ನಿಮಿಷ ಮಿಸ್, ಅಸಂಖ್ಯಾತ ಕಾಂತಗಳನ್ನು ಒಂದೇ ದಿಕ್ಕಿನಲ್ಲಿ ಸಾಲಾಗಿ ಜೋಡಿಸಿದರೆ ಅದರ ವಿಜಾತಿ ಧೃವವನ್ನು ಆಕರ್ಷಿಸುವ ಗುಣ ಏನಾಗುತ್ತದೆ?' `ಮಿಂಚಿನಲ್ಲಿರುವ ವಿದ್ಯುತ್ತಿಗೂ ಕಂಬದಲ್ಲಿರುವ ವಿದ್ಯುತ್ತಿಗೂ ಏನು ವ್ಯತ್ಯಾಸ?' `ಮಿಂಚಿನಲ್ಲಿ ವಿದ್ಯುತ್ ಹೇಗೆ ಪ್ರವಹಿಸುತ್ತದೆ?'... ಆ ಮಗುವಿನ ಇಂತಹ ಕುತೂಹಲದ ಹಲವಾರು ಪ್ರಶ್ನೆಗಳು ಶಿಕ್ಷಕರನ್ನು ದಿಗ್ಭ್ರಾಂತಗೊಳಿಸುತ್ತಿದ್ದವು. `ವೆಟ್ರೋಟ್ ಸ್ಟೂಡೆಂಟ್ ಕಿನ್‌ಲಿ ಬರೆದ ದಿ ಟ್ರುತ್ ಆಫ್ ಮ್ಯೋಗ್ನೆಟ್ಸ್ ಪುಸ್ತಕ ಸುಂದರವಾಗಿದೆ, ನೀವೂ ಓದುತ್ತೀರಾ ಮಿಸ್' ಎಂದು ಆ ಮಗು ಕೇಳಿದಾಗಲಂತೂ ಶಿಕ್ಷಕಿಗೆ ವಿದ್ಯುತ್ ಶಾಕ್ ಹೊಡೆದ ಅನುಭವ. ಉತ್ತರ ಪತ್ರಿಕೆಯಲ್ಲಿ ಸರಿಯಾಗಿ ಅಂಕ ಕೊಡದಿರುವ ಬಗ್ಗೆ ಆ ಬಾಲೆ ವಿಚಾರಿಸಿದ್ದಕ್ಕೆ ರಸಾಯನ ಶಾಸ್ತ್ರ ಶಿಕ್ಷಕಿ ಕೊಟ್ಟದ್ದು ಬೆತ್ತದ ಏಟಿನ ರುಚಿ. ಇತಿಹಾಸದ ಮಿಸ್‌ಗೆ `ಅಶೋಕನನ್ನು ಬೌದ್ಧ ಮತಕ್ಕೆ ಮತಾಂತರಿಸಿದವರು ಯಾರು?' ಎಂದು ಕೇಳಿದಾಗ, ಅವರಿಂದ ಉತ್ತರ ಬರಲಿಲ್ಲ. ಅದಕ್ಕೆ ತಾನೇ `ಉಪಗುಪ್ತ ಮಿಸ್' ಎಂದಳು. `ಉತ್ತರ ಗೊತ್ತಿದ್ದೂ ನನ್ನನ್ನೇ ಪ್ರಶ್ನಿಸುವೆಯಾ ತಲೆಹರಟೆ' ಎಂದು ಅವರು ಬೈದದ್ದು ಸಾಲದೆ ನಾಲ್ಕೇಟನ್ನೂ ಹಾಕಿದರು. ಪ್ರತಿ ತರಗತಿಯಲ್ಲೂ ಪ್ರಶ್ನೆ ಕೇಳುವ, ಕಲಿಯುವ ಕುತೂಹಲದಿಂದ ಪಠ್ಯಕ್ಕೆ ಪೂರಕವಾದ ಗ್ರಂಥಗಳನ್ನು ಜಿಲ್ಲಾ ಗ್ರಂಥಾಲಯದಿಂದ ಎರವಲು ಪಡೆದು ಓದಿ, ಶಿಕ್ಷಕರಿಗೇ ಮಾರ್ಗದರ್ಶನ ಮಾಡುವಷ್ಟು ಪ್ರಬುದ್ಧತೆ ಗಳಿಸಿಕೊಂಡಿದ್ದ ಆಯಿಷಾ, ಸಹಜವಾಗಿಯೇ ಶಿಕ್ಷಕರ ಕೆಂಗಣ್ಣಿಗೆ ಗುರಿಯಾಗಿ ಒದೆ ತಿನ್ನುವುದು, ಟ್ಯೂಷನ್‌ಗೆ ಹೋಗಲು ಬಡತನ ಅಡ್ಡಬಂದದ್ದರಿಂದ ಅದೇ ಟ್ಯೂಷನ್ ಟೀಚರ್ ಅನವಶ್ಯಕವಾಗಿ ಕಡಿಮೆ ಅಂಕ ನೀಡಿ ಅನ್ಯಾಯ ಮಾಡಿದ್ದು, 11ನೇ ತರಗತಿಯ ಲೆಕ್ಕಗಳನ್ನು 10ನೇ ತರಗತಿಯ ಈ ಪುಟ್ಟಿ ಮಾಡಿದ್ದಕ್ಕಾಗಿ ದಂಡನೆಗೆ ಪಾತ್ರವಾದದ್ದು... ಈ ರೀತಿಯ ಘಟನೆಗಳು ದಿನನಿತ್ಯ ನಡೆಯುತ್ತಲೇ ಹೋಗುತ್ತವೆ. ಆದರೆ ಆ ಮಗು ತನ್ನ ಸೋಲನ್ನು ಎಂದೂ ಒಪ್ಪಿಕೊಳ್ಳಲಿಲ್ಲ. ವಿಪರ್ಯಾಸವೆಂದರೆ, ಎಲ್ಲ ಶಿಕ್ಷಕರೂ ದಂಡವನ್ನೇ ತಮ್ಮ ಪ್ರಮುಖ ಅಸ್ತ್ರ ಮಾಡಿಕೊಳ್ಳುವ ಮುಖಾಂತರ ಅರಳುವ ಆ ಹೂವನ್ನು ಮೊಗ್ಗಿನಲ್ಲೇ ಚಿವುಟಿ ಹಾಕಿದ್ದು. ಇಂತಹ ಅದೆಷ್ಟು ಮಕ್ಕಳು ಈ ಬಗೆಯ ಕೂಪದಲ್ಲಿ ನರಳುತ್ತಿದ್ದಾರೋ? ಆಯಿಷಾ ತನ್ನಂತಹವಳಿಗೆ ಈ ಜಗತ್ತಿನಲ್ಲಿ ಬೆಲೆ ಇಲ್ಲ ಎಂಬುದನ್ನು ಶಿಕ್ಷಕರ ವರ್ತನೆಯಿಂದ ಮನಗಾಣುತ್ತಾಳೆ. ಅವರ ಹೊಡೆತಕ್ಕೆ ಆಕೆ ಎಷ್ಟು ರೋಸಿಹೋಗಿದ್ದಳೆಂದರೆ, ಅದಕ್ಕೆ ಏನಾದರೂ ಪರಿಹಾರ ಕಂಡುಕೊಳ್ಳಲೇ ಬೇಕು ಎಂದು ಬಯಸಿ, ನೈಟ್ರಸ್ ಆಕ್ಸೈಡ್ ಮತ್ತು ಎಥೆನಾಲ್ ಮಿಶ್ರಣವನ್ನು ಕಪ್ಪೆಗೆ ಚುಚ್ಚಿ ಪ್ರಯೋಗ ಮಾಡಿ ಅದು ಮರಗಟ್ಟಿದ್ದನ್ನು ಖಚಿತಪಡಿಸಿಕೊಳ್ಳುತ್ತಾಳೆ. ನಂತರ ಅದನ್ನು ತಾನೂ ಚುಚ್ಚಿಕೊಂಡು, ಸ್ಕೇಲ್ ತೆಗೆದುಕೊಂಡು `ನನ್ನನ್ನು ಹೊಡೆಯಿರಿ ನೋಡೋಣ, ನನಗೆ ಏನೂ ಆಗುವುದಿಲ್ಲ. ಮರಗಟ್ಟುವ ಔಷದ ಚುಚ್ಚಿಕೊಂಡಿದ್ದೀನಿ, ಇನ್ನು ಮುಂದೆ ಹೇಗೆ ಹೊಡೆದರೂ ನೋವಾಗುವುದಿಲ್ಲ ಮಿಸ್, ಹೇಗೆ ಬೇಕಾದರೂ ಹೊಡೆದುಕೊಳ್ಳಿ' ಎನ್ನುವ ಮಾತು ಶಿಕ್ಷಣ ರಂಗವನ್ನು ಅಂತಿಮ ಗಂಟೆಯಂತೆ ಎಚ್ಚರಿಸುತ್ತದೆ. ಆಕೆಯ ನೆಚ್ಚಿನ ಶಿಕ್ಷಕಿ ಸತ್ತು ಬಿದ್ದಿರುವ ಕಪ್ಪೆಯನ್ನು ನೋಡಿ, ತಕ್ಷಣ ಅವಳನ್ನು ಆಸ್ಪತ್ರೆಗೆ ಸಾಗಿಸುತ್ತಾರೆ. ಆಯಿಷಾ ದಾರಿ ಮಧ್ಯದಲ್ಲೇ `ಶಿಕ್ಷಕಿಯರೇ ನಾನು ಇನ್ನು ಮುಂದೆ ನಿಮಗೆ ಹೊಡೆಯಲು ಸಿಗುವುದೇ ಇಲ್ಲ' ಎಂದು ಅಣಕಿಸುವಂತೆ ಇಹಲೋಕವನ್ನೇ ತ್ಯಜಿಸುತ್ತಾಳೆ. ಹೀಗೆ ಪ್ರಶ್ನೆಗಳನ್ನು ಕೇಳುತ್ತಾ, ಅರಿವಿನಂಗಳದಲ್ಲಿ ನಲಿಯುತ್ತಾ, ಹೊಸದನ್ನು ಕಲಿಯುತ್ತಾ, ಕಲಿಸುತ್ತಾ ಸಾಗುವ ಹತ್ತನೇ ತರಗತಿ ವಿದ್ಯಾರ್ಥಿನಿ ಆಯಿಷಾ ಅನಾಥೆಯಾಗಿದ್ದದ್ದು ಮತ್ತು ತನ್ನ ವಯಸ್ಸಿನ ಮಟ್ಟಕ್ಕಿಂತ ಹೆಚ್ಚಿಗೆ ತಿಳಿದದ್ದೇ ಅಪರಾಧ ಎನ್ನುವಂತಹ ವಿಚಿತ್ರ ಗತಿಗೆ ಸಿಕ್ಕಿ, ಹೊಡೆತ ತಿಂದು, ಅಂತಿಮವಾಗಿ ಪ್ರಾಣವನ್ನೇ ಕಳೆದುಕೊಳ್ಳುವ ಹೃದಯ ಕರಗಿಸುವ ನೈಜ ಘಟನೆಯು ಪುಟ್ಟ ಕೃತಿಯಾಗಿ `ಆಯಿಷಾ' ಎಂಬ ಹೆಸರಿನಲ್ಲಿ ತಮಿಳಿನಲ್ಲಿ ರಚನೆಯಾಗಿದೆ. ಶಿಕ್ಷಕರು ಸಿದ್ಧತೆ ಇಲ್ಲದೆ ಬೋಧನೆಯಲ್ಲಿ ತೊಡಗುವುದು, ಮಕ್ಕಳ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಡಲಾರದೇ ಜಾರಿಕೊಳ್ಳುವುದು, ಹೆಚ್ಚು ತಿಳಿದ ಆಯಿಷಾಳನ್ನು ಮತ್ಸರದಿಂದ ಕಾಣುತ್ತಾ ದಂಡವನ್ನೇ ಉತ್ತರವಾಗಿ ಬಳಸಿಕೊಳ್ಳುವುದು... ಇಂತಹ ಅನೇಕ ಅಂಶಗಳು ಪುಸ್ತಕದಲ್ಲಿ ದಾಖಲಾಗಿ ಓದುಗರ ಮನಸ್ಸು ಗೆಲ್ಲುತ್ತಾ, ವಾಸ್ತವದಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಅಣಕಿಸುವಂತಿವೆ. ತಮ್ಮ ಜ್ಞಾನವನ್ನು ಅಪ್‌ಡೇಟ್ ಮಾಡಿಕೊಳ್ಳುತ್ತಾ, ಮಕ್ಕಳಲ್ಲಿನ ಕುತೂಹಲ ತಣಿಸುತ್ತಾ, ಅವರ ಪ್ರತಿಭೆಗೆ ನೀರೆರೆಯಬೇಕು ಎಂಬ ಸಂದೇಶವನ್ನು ಸಾರುವಲ್ಲಿ ಈ ಪುಟ್ಟ ಕೃತಿ ಯಶ ಕಂಡಿದೆ. ವಿಜ್ಞಾನ ಪ್ರಶ್ನೋತ್ತರ ಮಾಲಿಕೆಯನ್ನು ತಮಿಳು ಭಾಷೆಯಲ್ಲಿ ತರಲು ಪ್ರೇರಣೆಯಾದ ಆಯಿಷಾಳ ಬಲಿದಾನವನ್ನು ಕಣ್ಣೀರು ತುಂಬಿಕೊಂಡು ನೆನೆಸಿಕೊಳ್ಳುವ ಅವಳ ವಿಜ್ಞಾನದ ಶಿಕ್ಷಕಿ ಇತರರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ. ಅವರು ಇತರ ಶಿಕ್ಷಕಿಯರಂತೆ ಆಯಿಷಾಳನ್ನು ವ್ಯಂಗ್ಯವಾಗಿ ಗೇಲಿ ಮಾಡಿದವರಲ್ಲ. ಅವಳ ಅಸಂಖ್ಯಾತ ಪ್ರಶ್ನೆಗಳಿಗೆ ಅಚ್ಚರಿಯಿಂದಲೇ ಉತ್ತರಿಸಿದವರು. ಆಯಿಷಾಳಿಂದಾಗಿ ಈ ಶಿಕ್ಷಕಿಯೂ ಓದಿಗಾಗಿ ಹಂಬಲಿಸುವಂತಾಗಿತ್ತು. ಆಯಿಷಾಳನ್ನು ಹೆಚ್ಚು ಇಷ್ಟಪಡುತ್ತಿದ್ದ ಈ ಶಿಕ್ಷಕಿ, ಮಾರ್ಗ ಮಧ್ಯದಲ್ಲೇ ಮಗುವಿನ ಭವಿಷ್ಯ ಮುರುಟಿಹೋದದ್ದನ್ನು ಕಂಡು ನೊಂದು, ತಮ್ಮ ಸಹೋದ್ಯೋಗಿಗಳಿಗೆ `ಇನ್ನೇನು, ನಿಮಗೆ ತೃಪ್ತಿ ತಾನೆ, ಪಾಪಿಗಳೇ, ನನ್ನ ಆಯಿಷಾಳನ್ನು, ಬುದ್ಧಿವಂತ ಮಗುವನ್ನು ಕೊಂದು ತಿಂದುಬಿಟ್ಟಿರಲ್ಲ. ಹೋಗಿ, ನಿಮ್ಮ ತರಗತಿಗಳು ಇನ್ನೂ ಸರಳವಾಗಿರುತ್ತವೆ. ಅರಿವಿಗೆ ಅಲ್ಲಿ ಕೆಲಸವಿಲ್ಲ' ಎಂದು ಹೇಳುವ ನೋವಿನ ಮಾತುಗಳು ಕರುಳನ್ನು ಚುರುಕ್ ಎನ್ನಿಸುತ್ತವೆ. ತಮ್ಮ ನೆಚ್ಚಿನ ವಿದ್ಯಾರ್ಥಿನಿಗಾಗಿ `ನೋಡು, ನಿನಗಾಗಿ, ನೀನು ಕೇಳಿದ ಎಲ್ಲ ಪ್ರಶ್ನೆಗಳಿಗೂ ಉತ್ತರವನ್ನು ಹುಡುಕಿ ಹುಡುಕಿ ಬರೆದಿಟ್ಟಿದ್ದೇನೆ' ಎನ್ನುತ್ತಾ, ಬಾಲೆಯ ಪ್ರಶ್ನೆಗಳನ್ನಾಧರಿಸಿ `ಆಯಿಷಾ' ಸೇರಿದಂತೆ 12 ಪುಸ್ತಕಗಳ ಸರಣಿಯನ್ನೇ ಬರೆದಿದ್ದಾರೆ ಎಂದರೆ ಆಶ್ಚರ್ಯವಲ್ಲದೇ ಮತ್ತೇನು? ಇನ್ನಾದರೂ ಶಿಕ್ಷಕರು ನಮ್ಮ ನಡುವೆ ಇರುವ ಅಸಂಖ್ಯಾತ ಆಯಿಷಾರ ಸೃಜನಶೀಲತೆಯನ್ನು ಗಮನಿಸಬೇಕು. ಮಕ್ಕಳ ಅಹವಾಲಿಗೆ ಮನಕೊಡಬೇಕು. ತಾವು ದೊಡ್ಡವರು, ಜ್ಞಾನಿಗಳು ಎಂಬ ಅಹಂನ್ನು ತೆಗೆದಿಟ್ಟು, ಮಕ್ಕಳ ಹೊಸ ಹುಡುಕಾಟಕ್ಕೆ ಪ್ರೇರಣೆ ನೀಡಬೇಕು. ಹಾಗಾದಲ್ಲಿ ಆಯಿಷಾಳ ಬದುಕಿಗೆ ಅರ್ಥ ಸಿಗುತ್ತದೆ. `ಆಯಿಷಾ' ಕೃತಿಯನ್ನು ಆರ್.ನಟರಾಜನ್ ರಚಿಸಿದ್ದಾರೆ. ಚೆನ್ನೈನ ಭಾರತಿ ಪುಸ್ತಕಾಲಯಂ ಪ್ರಕಟಿಸಿದ್ದು, ಕನ್ನಡಕ್ಕೆ ಬಿ.ಗಂಗಾಧರ್ ಅವರು ಅನುವಾದಿಸಿ, ಚಿಂತನ ಪುಸ್ತಕದವರು ಪ್ರಕಟಿಸಿದ್ದಾರೆ. ಕೆಲವೇ ನಿಮಿಷಗಳಲ್ಲಿ ಓದಿ ಮುಗಿಸಬಹುದಾದ, ಕೇವಲ 36 ಪುಟಗಳ ಈ ಚಿಕ್ಕ ಹೊತ್ತಿಗೆ ನೀಡುವ ಸಂದೇಶ ಬಹು ದೊಡ್ಡದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.