ನಾ ಪಾಸಾಗೋದು ಹೇಗೆ ಅಂಕಲ್? (ನಪಾಸಾದ ವಿದ್ಯಾರ್ಥಿಯೊಡನೆ ನಡೆಸಿದ ಸಂದರ್ಶನ) ವರ್ಷಕ್ಕೆ ಇರೋವೇ 365 ದಿನಗಳು ಅಂಕಲ್. ಅದರಲ್ಲಿ 52 ರವಿವಾರಗಳನ್ನು ಕಳೆಯಿರಿ. 313 ಉಳಿದವು. ಆರೋಗ್ಯ ಸರಿಯಿರಬೇಕಾದರೆ ಪ್ರತಿ ದಿನ 8 ತಾಸು ನಿದ್ದೆ ಅವಶ್ಯ. ಲೆಕ್ಕ ಹಾಕಿ. 122 ದಿನ ನಿದ್ದೆಗೆ. ಉಳಿದವು 141 ದಿವಸ.ಆಟ ಆಡಿದರೆ ಮಾತ್ರ ದೇಹಸ್ಥಿತಿ ಸರಿಯಾಗಿ ಉಳಿಯುತ್ತದೆ. ಪ್ರತಿ ದಿನ ಒಂದು ತಾಸು ಆಟಕ್ಕೆ ಅಂತ ಹಿಡಿದರೆ ವರ್ಷಕ್ಕೆ 15 ದಿನ. ಕಳೆಯಿರಿ 141 ರಲ್ಲಿ. ಉಳಿದವು 126. ಇನ್ನು ಊಟಕ್ಕೆ ಬನ್ನಿ, ಟಿಫಿನ್ನಿಗೆ ಬನ್ನಿ ಎನ್ನುತ್ತಾರೆ ಗೆಳೆಯರು. ಇದಕ್ಕೆ ಪ್ರತಿ ದಿನ ಎರಡು ತಾಸು ಅಂತ ಹಿಡಿದರೆ 30 ದಿನ ಆದವು. ಕಳೆಯಿರಿ 96 ಉಳಿದವು. ಮನುಷ್ಯ ಸಮಾಜ ಜೀವಿ ಅಂದ್ಮೇಲೆ ಗೆಳೆಯರ ಕೂಡ, ಗೆಳತಿಯರ ಕೂಡ ಮಾತಾಡದೆ ಇರಲಿಕ್ಕಾಗ್ತದೆಯೇ? ನಿತ್ಯ ಒಂದು ತಾಸು ಅಂತ ಹಿಡಿದರೂ 15 ದಿನ ಹೋದವು. ಉಳಿದವು 81. ಈಗೀಗ ಸ್ಕೂಲಿನಲ್ಲಿ ಮೇಲಿಂದ ಮೇಲೆ ಪರೀಕ್ಷೆಗಳನ್ನ ಇಡ್ತಿದ್ದಾರೆ. ವರ್ಷಕ್ಕೆ 35 ದಿನ ಪರೀಕ್ಷೆಗೇ ಹೋಗಿಬಿಡ್ತವೆ. 81ರಲ್ಲಿ 35 ದಿನ ಕಳೆದರೆ ಉಳಿದವು 46 ದಿನ. ಹಬ್ಬ ಹರಿದಿನ ಅಂತ ಬಂದಾಗ ಮನೆಯವರು ತಲೆ ತಿಂತಾರೆ. ಅತ್ತ ಇತ್ತ ಅಂತ ಓಡಾಡಿಸ್ತಾರೆ. ಈಗೀಗ ಹಬ್ಬಗಳೂ ಹೆಚ್ಚಾಗ್ತಾನೇ ಹೊರಟಿವೆ. ಸದ್ಯಕ್ಕೆ ರಾಮನ ಜಯಂತಿ, ಕೃಷ್ಣನ ಜಯಂತಿ ಅಂತ ಆಚರಿಸ್ತಿದಾರೆ. ಇನ್ಮುಂದೆ ಆ ದೇವರುಗಳ ಮದುವೆ ವಾರ್ಷಿಕೋತ್ಸವಗಳನ್ನೂ ಅಷ್ಟೇ ಅದ್ದೂರಿಯಾಗಿ ಆಚರಿಸ್ಬಹುದೋ ಏನೋ. ಹೋಗ್ಲಿ ಬಿಡಿ ಅಂಕಲ್ ಅದಕ್ಕೆ ಈಗ್ಲೇ ಯಾಕೆ ತಲೆ ಕೆಡಿಸಿಕೊಳ್ಳೋದು? ವರ್ಷಕ್ಕೆ ಈಗಿನ ಹಬ್ಬಗಳು 40. ಕಳೆದರೆ ಉಳಿದವು 6 ದಿನಗಳು ಮಾತ್ರ.ಮನುಷ್ಯ ಅಂದ್ಮೇಲೆ ಕಾಯಿಲೆ ಕಸಾಲೆ ಇದ್ದದ್ದೇ. ಬಹಳ ಬೇಡ, ನೆಗಡಿ ಕೆಮ್ಮಿಗೆ ಅಂತ ಹಿಡಿದರೂ 3 ದಿನ ಕಳೆಯಿರಿ. ಉಳಿದವು 3. ಈ ವಯಸ್ಸಿನಲ್ಲಿ ಗೆಳೆಯ/ ಗೆಳತಿಯರ ಕೂಡ ಸಿನೇಮಾ ನೋಡಲಿಕ್ಕೆ, ಅವರ ಬರ್ತ್‌ಡೇ ಪಾರ್ಟಿಗಳಿಗೆ ಹೋಗದಿದ್ದರೆ ಅವರು ಬೇಜಾರು ಮಾಡಿಕೊಳ್ಳೋದಿಲ್ವೇ? ವರ್ಷಕ್ಕೆ ಬರೀ 2 ದಿನ ಅಂದ್ರೆ ಉಳಿಯೋದು ಒಂದೇ ಒಂದು ದಿನ. ಅಂಕಲ್, ಬೇರೆಯವರ ಬರ್ತ್‌ಡೇ ಪಾರ್ಟಿಗಳಿಗೆ ಹೋಗೋ ನಾನು ನನ್ನ ಬರ್ತ್‌ಡೇ ಆಚರಿಸಿಕೊಳ್ಳೋದು ಬೇಡವೇ? ಕಡೆಗೆ ಉಳಿದ ಅದೂ ಒಂದು ದಿನ ಹೋಗೇಬಿಟ್ಟಿತು. ಹೀಗಾದ್ಮೇಲೆ ನಾನು ಓದೋದು ಹೇಗೆ, ಪಾಸಾಗೋದು ಹೇಗೆ ಅಂಕಲ್? ಹೇಗೆ? ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.