ಸ್ಮರಣಶಕ್ತಿ ಇದೆ ಸೂತ್ರ ಪರೀಕ್ಷಾ ಕಾಲ ಹತ್ತಿರ ಬಂದಿದೆ. ಎಲ್ಲ ಮನೆಗಳಲ್ಲೂ ರಾತ್ರಿ ಇಡೀ `ಮಿಡ್‌ನೈಟ್ ಲ್ಯಾಂಪ್' ಉರಿಯುತ್ತಿವೆ. ಮಕ್ಕಳಿಗೆ ಮಾತ್ರವಲ್ಲ, ಪಾಲಕರಿಗೂ ಇದು ಸವಾಲಿನ ಸಮಯ. ಬೆಳಗಿನ ಐದು ಗಂಟೆಗೇ ಎದ್ದು ಮಕ್ಕಳ ಮುಂದೆ ಕುಳಿತು ಓದಿಸುವ ಪಾಲಕರ ಸಂಖ್ಯೆ ಕಡಿಮೆ ಏನಿಲ್ಲ. ಹಾಗೆಯೇ ಹಗಲಿಡೀ ದುಡಿದು ಬಂದರೂ ರಾತ್ರಿ ಪೂರ್ತಿ ಎಚ್ಚರವಿದ್ದು ಮಕ್ಕಳ ತಿಂಡಿ-ಪಾನೀಯ ನೋಡಿಕೊಳ್ಳುವ ಅಮ್ಮಂದಿರೂ ಸಾಕಷ್ಟಿದ್ದಾರೆ. ಆದರೆ ಮಕ್ಕಳು ಎಷ್ಟು ಸಮಯ ಅಭ್ಯಾಸ ಮಾಡುತ್ತಾರೆ ಎನ್ನುವುದು ಮಾತ್ರವಲ್ಲ, ಹೇಗೆ ಅಭ್ಯಾಸ ಮಾಡುತ್ತಾರೆ ಎನ್ನುವುದು ಕೂಡ ಯಶಸ್ಸಿನ ಗುಟ್ಟಾಗುತ್ತದೆ. ಅಂತೆಯೇ ಹಾರ್ಡ್‌ವರ್ಕ್ ಜೊತೆಗೆ ಸ್ಮಾರ್ಟ್‌ವರ್ಕ್ ಕೂಡ ಮುಖ್ಯ ಎನ್ನುವ ಮಾತಿದೆ. ಅದೇನೇ ಇರಲಿ, ಪರಿಣಾಮಕಾರಿಯಾಗಿ ಓದುವುದು, ಓದಿದ್ದನ್ನು ಪುನರ್‌ಮನನ ಮಾಡಿಕೊಳ್ಳುವುದು, ಅದನ್ನು ಪರೀಕ್ಷೆಯ ಸಮಯದಲ್ಲಿ ಸೂಕ್ತ ರೀತಿಯಲ್ಲಿ ಹೊರಗೆಡಹುವಂತಹ ಕೆಲವು ತಂತ್ರಗಳನ್ನು ರೂಢಿಸಿಕೊಂಡರೆ ಪರೀಕ್ಷೆಯು ಭಯದ ಬದಲು ಮೋಜಿನ ಸಂಗತಿಯಾಗಬಲ್ಲದು. ಎವಿಐಒ ... ಸಂಯೋಜನೆ - ದೃಶ್ಯೀಕರಣ - ಕಲ್ಪನೆ - ಸಂಘಟನೆ - ORGANISATIONಪರೀಕ್ಷೆಯ ಬಹುತೇಕ ಯಶಸ್ಸಿಗೆ ಈ ಎರಡೂ ಅಂಶಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಇವು ಕೇವಲ ಪರೀಕ್ಷೆಗೆ ಮಾತ್ರವಲ್ಲ, ಜೀವನದ ಪ್ರತಿ ಹಂತದಲ್ಲೂ ನಮ್ಮನ್ನು ಗೆಲ್ಲಿಸುವ ಮೂಲಮಂತ್ರಗಳು ಎಂದರೂ ತಪ್ಪಿಲ್ಲ. ಆದ್ದರಿಂದ ಈ ಎರಡೂ ಶಕ್ತಿಗಳನ್ನು ವೃದ್ಧಿಸಿಕೊಳ್ಳುವುದು ಮೊದಲ ಪ್ರಯತ್ನವಾಗಬೇಕು. ನಮಗೆ ಎಡ ಮತ್ತು ಬಲ ಮೆದುಳು ಎಂದು ಎರಡು ಭಾಗಗಳಿರುತ್ತವೆ. ಎಡ ಮೆದುಳು ಯಾವುದೇ ಮಾಹಿತಿಯನ್ನು ಸಂಯೋಜಿಸುವ ಮತ್ತು ಸಂಘಟಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಅದೇ ರೀತಿ, ಹೀಗೆ ಪಡೆದ ಮಾಹಿತಿಯನ್ನು ಬಲ ಮೆದುಳು ತನ್ನದೇ ಆದ ರೀತಿಯಲ್ಲಿ ದೃಶ್ಯೀಕರಿಸುವ ಮತ್ತು ಊಹಿಸಿಕೊಳ್ಳುವ ವಿಶೇಷ ನೈಪುಣ್ಯವನ್ನು ಹೊಂದಿರುತ್ತದೆ. ಈ ಎರಡೂ ಶಕ್ತಿಗಳನ್ನು ಸರಿಯಾದ ಸೂತ್ರಗಳ ಮೂಲಕ ಸೂಕ್ತ ರೀತಿಯಲ್ಲಿ ಬಳಸಿಕೊಂಡಾಗ ಯಾವುದೇ ವಿಷಯ ಮರೆತು ಹೋಗುವ, ನೆನಪಿಗೆ ಬಾರದ ಸ್ಥಿತಿ ಉಂಟಾಗುವುದಿಲ್ಲ. ಇಲ್ಲಿದೆ `ಮೆಮೊರಿ ಟೆಕ್ನಿಕ್' ಉದಾಹರಣೆಗೆ: ನಾವು ಈ ಕೆಳಗಿನ ಮಾಹಿತಿಯನ್ನು ಸುಲಭವಾಗಿ ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದುಕೊಳ್ಳೋಣ. ಈ ಮಾಹಿತಿಯನ್ನು ಬಿಡಿ-ಬಿಡಿಯಾಗಿ ಓದಿ ನೆನಪಿನಲ್ಲಿ ಇಟ್ಟುಕೊಳ್ಳಲು ಸಾಕಷ್ಟು ಸಮಯ ಹಿಡಿಯುತ್ತದೆ. ಆದರೆ `ಮೆಮೊರಿ ಟೆಕ್ನಿಕ್' ಸಿದ್ಧ ಸೂತ್ರವನ್ನು ಬಳಸಿ ಇದನ್ನು ಸುಲಭವಾಗಿ ನೆನಪಿಸಿಕೊಳ್ಳಬಹುದು- ಕಂಪ್ಯೂಟರ್, ಬೆಕ್ಕು, ಹಳದಿ, ಟ್ಯೂಬ್‌ಲೈಟ್, ಅಂಗಡಿ, ಬಿಸ್ಕೆಟ್, ಹೊಟ್ಟೆ, ಎತ್ತಿನಗಾಡಿ, ಲ್ಯಾಂಪ್, ಛತ್ರಿ, ಆನೆ, ಸೋಪು, ನೀರು, ಟೇಬಲ್, ಇಲಿ, ಪುಸ್ತಕ, ಟೆಲಿಫೋನ್, ಕೋಳಿ, ಡಾ. ಅಬ್ದುಲ್ ಕಲಾಂ, ದೋಸೆ. ಈ ಎಲ್ಲ ಶಬ್ದಗಳಿಗೆ ಮೊದಲು ಪರಸ್ಪರ ಸಂಬಂಧ ಕಲ್ಪಿಸಬೇಕಾಗುತ್ತದೆ. ಅದೇ ಸಂಯೋಜನೆ. ನಂತರ ಅದನ್ನು ದೃಶ್ಯೀಕರಣಕ್ಕೆ ಅಳವಡಿಸಿಕೊಳ್ಳಬೇಕು. ಅದರೊಂದಿಗೆ ಆ ದೃಶ್ಯವನ್ನು ಕಲ್ಪನೆಗೆ ಇಳಿಸಿಕೊಳ್ಳಬೇಕು ಹಾಗೂ ಕೊನೆಯದಾಗಿ ಅದನ್ನು ವ್ಯವಸ್ಥಿತಗೊಳಿಸಬೇಕು. ಉದಾ: ಅಲ್ಲೊಂದು ದೊಡ್ಡ `ಕಂಪ್ಯೂಟರ್' ಇದೆ. ನಾನು ಅದರ ಮುಂದೆ ಕುಳಿತಾಗೆಲ್ಲ, ಅದರ ಪರದೆಯಿಂದ ಒಂದು `ಬೆಕ್ಕು' ಬರುತ್ತದೆ. ಅದರ ಬಣ್ಣ `ಹಳದಿ'. ಆ ಬಣ್ಣ ನಿಧಾನಕ್ಕೆ `ಟ್ಯೂಬ್‌ಲೈಟ್' ಮೇಲೆ ಹರಡುತ್ತದೆ. ಆ ಟ್ಯೂಬ್‌ಲೈಟ್ `ಅಂಗಡಿ'ಯಲ್ಲಿ ದೊರಕುತ್ತದೆ. ಟ್ಯೂಬ್‌ಲೈಟ್ ಕೊಳ್ಳಲು ಅಂಗಡಿಗೆ ಹೋದಾಗ ಅಲ್ಲಿ ಕೇವಲ `ಬಿಸ್ಕೆಟ್'ಗಳು ಕಾಣುತ್ತವೆ. ಬಿಸ್ಕೆಟ್ ತಿಂದ ಕೂಡಲೇ `ಹೊಟ್ಟೆ' ದೊಡ್ಡದಾಗುತ್ತದೆ ಮತ್ತು ನಡೆಯಲು ಆಗುವುದಿಲ್ಲ. ಆಗ ಒಂದು `ಎತ್ತಿನಗಾಡಿ' ಕಾಣುತ್ತದೆ. ಅದರ ಕೆಳಗೆ ಒಂದು `ಲ್ಯಾಂಪ್' ನೇತುಹಾಕಲಾಗಿದೆ. ಆ ಲ್ಯಾಂಪಿನ ಮೇಲೆ `ಛತ್ರಿ' ಇದೆ. `ಆನೆ' ಬಂದು ಆ ಛತ್ರಿಯನ್ನು ತೆಗೆದುಕೊಂಡು ಹೋಗುತ್ತದೆ. ಆನೆ ಅದನ್ನು `ಸೋಪ್'ನಂತೆ ಬಳಸುತ್ತದೆ. ಅದರ ಕೈಯಿಂದ ಜಾರಿ ಅದು `ನೀರಿನಲ್ಲಿ' ಬೀಳುತ್ತದೆ. ಆ ನೀರನ್ನು `ಟೇಬಲ್' ತೊಳೆಯಲು ಬಳಸಲಾಗುತ್ತದೆ. ಆ ಟೇಬಲ್ ಮೇಲೆ `ಇಲಿ' ಕುಳಿತಿರುತ್ತದೆ. ಅದರ ಕೈಯಲ್ಲಿ `ಪುಸ್ತಕ' ಇರುತ್ತದೆ. ಆ ಪುಸ್ತಕದ ಒಳಗೆ `ಟೆಲಿಫೋನ್' ಇರುತ್ತದೆ. ಆಗ ಒಂದು `ಕೋಳಿ' ಬಂದು ಟೆಲಿಫೋನ್ ಡಯಲ್ ಮಾಡುತ್ತದೆ. ಅದು `ಡಾ. ಅಬ್ದುಲ್ ಕಲಾಂ' ಅವರ ಜೊತೆ ಮಾತನಾಡಲು ಬಯಸುತ್ತದೆ. ಆದರೆ ಅವರು ಆಗ `ದೋಸೆ' ತಿನ್ನುತ್ತಿರುತ್ತಾರೆ. ಹೀಗೆ ಅದರ ಸುತ್ತ ಕಥೆ ಹೆಣೆಯಬೇಕು. ಆದರೆ ಈ ಕಥೆಗೆ ಯಾವುದೇ ತರ್ಕ ಇರುವುದಿಲ್ಲ. ಆಗ ಮೊದಲ ಒಂದು ಅಕ್ಷರವನ್ನು ನೆನಪಿಸಿಕೊಂಡರೆ ಆ ಇಡೀ ಮಾಹಿತಿ ಒಂದಕ್ಕೊಂದು ಹೆಣೆದುಕೊಂಡು ನೆನಪಿನಾಳದಿಂದ ಎದ್ದು ಬರುತ್ತದೆ. ಈ ಸೂತ್ರವನ್ನು ಹೇಗೆ ಅಳವಡಿಸುವುದು? ನಿಮಗೆ ನೀಡಲಾಗಿರುವ ಮಾಹಿತಿಯನ್ನು ಕೂಲಂಕಶವಾಗಿ ಓದಿ ಆ ಮಾಹಿತಿಯಿಂದ ಪ್ರಮುಖ ಶಬ್ದಗಳನ್ನು ಸಂಗ್ರಹಿಸಿ ಆ ಶಬ್ದಗಳನ್ನು ಒಂದರ ಕೆಳಗೆ ಒಂದರಂತೆ ಬರೆಯಿರಿ ಆ ಶಬ್ದಗಳನ್ನು ಮೇಲೆ ತಿಳಿಸಿರುವ ಕಥೆಯ ಸೂತ್ರದಲ್ಲಿ ಅಳವಡಿಸಿಕೊಳ್ಳಿ ಬೇಕಾದಾಗ ಆ ಮಾಹಿತಿಯನ್ನು ತಂತ್ರದ ಸಹಾಯದಿಂದ ನೆನಪು ಮಾಡಿಕೊಳ್ಳಿ ನೆನಪಿನಲ್ಲಿಡಿ- ನಿಮ್ಮ ನೆಚ್ಚಿನ ವಿಷಯಗಳನ್ನು ಮೊದಲು ಓದಿ ಮುಗಿಸಿ ಬಿಡಿ. ಇದರಿಂದ ನಿಮ್ಮ ಆತ್ಮವಿಶ್ವಾಸ ವೃದ್ಧಿಸುತ್ತದೆ ಮತ್ತು ಮುಂದಿನ ವಿಷಯಗಳನ್ನು ಓದಲು ಉತ್ಸಾಹ ಮೂಡುತ್ತದೆ. ಒಂದು ಸಮಯದಲ್ಲಿ ಒಂದೇ ವಿಷಯದ ಮೇಲೆ ಗಮನ ಹರಿಸಿ ಕವಿತೆಗಳನ್ನು ಮನಸ್ಸು ಕೊಟ್ಟು ಓದಿ ಮತ್ತೆ ಮತ್ತೆ ಅಭ್ಯಾಸ ಮಾಡಿ ನಕ್ಷೆ, ರೇಖಾಚಿತ್ರ, ಗ್ರಾಫ್ ಕೆಲಸಗಳನ್ನು ಬರೆದು ತೆಗೆಯಿರಿ ಗೋಡೆಗೆ ಮುಖ ಮಾಡಿ ಕುಳಿತು ಓದಬೇಡಿ ಓದುವ ಸಮಯದಲ್ಲಿ ಸಾಕಷ್ಟು ನೀರು ಕುಡಿಯಿರಿ ಸರಿಯಾಗಿ ನಿದ್ರೆ ಮಾಡಿ ಓದಲು ಕುಳಿತುಕೊಳ್ಳುವ ಮುಂಚೆ ಕೆಲ ಸಮಯ ಧ್ಯಾನ ಮಾಡಿ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.