ಏಕಾಗ್ರತೆ ತರಬಲ್ಲದು ಬರಹ ಬರೆಯುವ ಪುಸ್ತಕಗಳಲ್ಲಿ ಗೆರೆಗಳಿರುವುದೇಕೆ ಎಂದು ಕೇಳಿದರೆ ಬಹಳಷ್ಟು ಜನ `ಸಾಲುಗಳು ನೇರವಾಗಿರಲಿ ಎಂದು' ಎನ್ನುತ್ತಾರೆ. ಅದು ಸರಿಯೆ. ಏಕೆಂದರೆ ಕೆಲವರು ಬಿಳಿ ಹಾಳೆಯಲ್ಲಿ ಬರೆದಾಗ ಸಾಲುಗಳು ಮೇಲೆ ಮೇಲೇರುತ್ತಾ ಅಂತರಿಕ್ಷಕ್ಕೆ ಸಾಗುತ್ತವೆ. ಇನ್ನು ಕೆಲವರ ಸಾಲುಗಳು ಪಾತಾಳವನ್ನು ಇಣುಕಿ ನೋಡುತ್ತಿರುವಂತೆ ಬಗ್ಗುತ್ತವೆ. ಕೆಲವರು ಎರಡು ಗೆರೆಗಳ ನಡುವೆ ಬರೆಯುತ್ತಾರೆ. ಎಲ್ಲರೂ ಗೆರೆಯ ಮೇಲೆ ಬರೆಯುವಾಗ ಹೀಗೆ ಬರೆಯುವುದು ಭಿನ್ನವಾಗಿ ಕಾಣುತ್ತದೆ. ಎರಡು ಗೆರೆಗಳ ನಡುವೆ ಬರೆಯುವವರು ಒಂದು ಬಗೆಯ ಸ್ವಚ್ಛಂದತೆ ಅನುಭವಿಸುತ್ತಾರೆ. ಅವರ ಅಕ್ಷರಗಳು ಎರಡು ಗೆರೆಗಳ ನಡುವೆ ಹೇಗಿದ್ದರೂ ಆಗುತ್ತದೆ. ಇಂತಹ ಅಕ್ಷರಗಳು ಒಂದೇ ಸಮತಲದಲ್ಲಿ ಕುಳಿತಿರುವುದಿಲ್ಲ. (ದೃಷ್ಟಾಂತ 1) ಸಾಲಿನ ಮೇಲೆ ಎಲ್ಲ ಅಕ್ಷರಗಳು ಸರಿಯಾಗಿ ಕುಳಿತಿರುವಂತೆ ಯಾರು ಎಚ್ಚರಿಕೆಯಿಂದ ಬರೆಯುತ್ತಾರೋ ಅವರಿಗೆ `ಏಕಾಗ್ರತೆ' ಬರುತ್ತದೆ. (ದೃಷ್ಟಾಂತ 1) ಏಕಾಗ್ರತೆಯೇ ಜ್ಞಾನದ ಕೀಲಿಕೈ ಅಲ್ಲವೇ? ವಿದ್ಯಾರ್ಥಿಗಳಿಗಂತೂ ಏಕಾಗ್ರತೆ ತುಂಬಾ ಅವಶ್ಯಕ. ಆದ್ದರಿಂದ ಗೆರೆಗಳಿರುವ ಪುಸ್ತಕದಲ್ಲಿ ಬರೆಯುವ ಉದ್ದೇಶ ಕೇವಲ ಸಾಲುಗಳು ನೇರವಾಗಿಇರಲಿ ಎಂದು ಮಾತ್ರವಲ್ಲ ಏಕಾಗ್ರತೆ ವೃದ್ಧಿಸಲಿ ಎಂಬುದೂ ಆಗಿದೆ. ಗೆರೆಗಳ ಗುಣಮಟ್ಟ: ನಾವು ಬರೆಯುವ ಅಕ್ಷರ ಳಲ್ಲಿ ಗೆರೆಗಳ ಗುಣಮಟ್ಟ ಅತಿ ಮುಖ್ಯ. ಕೆಲವು ಭಾಗಗಳಲ್ಲಿ ಗಾಢವಾಗಿ () ಮತ್ತು ಕೆಲವು ಕಡೆ ಪೇಲವ () ಆಗಿದ್ದು ಇರುವಂತಹ ಗೆರೆಗಳು ಸೌಂದರ್ಯವನ್ನು ಹಾಳು ಮಾಡುತ್ತವೆ. ಗೆರೆಗಳು ಯಾವಾಗಲೂ ಸಮರೂಪವಾಗಿರಬೇಕು. ಗೆರೆಗಳ ದಪ್ಪ: ನಮ್ಮ ಅಕ್ಷರದ ಗೆರೆಗಳ ದಪ್ಪವೂ ಒಂದೇ ಸಮನಾಗಿದ್ದರೆ ಚೆನ್ನಾಗಿ ಕಾಣುತ್ತದೆ. ತಮ್ಮ ಪೆನ್ ಮೂಡಿಸುವ ಗೆರೆಗಳ ದಪ್ಪ 0.5 ಮಿ.ಮೀ ಎಂದು ವಿಶ್ವದ ಹೆಚ್ಚಿನ ಕಂಪೆನಿಗಳು ಸಾರುತ್ತವೆ. ಕೆಲವು ಕಡೆ ದಪ್ಪ ಹೆಚ್ಚಾಗಿ ಮತ್ತು ಕೆಲವೆಡೆ ತೆಳುವಾದರೆ ಅಕ್ಷರಗಳ ಅಂದ ಕೆಡುತ್ತದೆ. ವಿದ್ಯಾರ್ಥಿಗಳು ರೇಖಾಗಣಿತದ ಚಿತ್ರ ಬರೆಯುವಾಗ ಅಥವಾ ರಚನೆಗಳನ್ನು ಮಾಡುವಾಗ ಪೆನ್ಸಿಲ್‌ನಿಂದ ಗೆರೆಗಳನ್ನು ಎಳೆಯಬೇಕಾಗುತ್ತದೆ. ಸುತ್ತಲೂ ಮರದ ಆವರಣ ಹೊಂದಿರುವ ಪೆನ್ಸಿಲ್‌ಗಳನ್ನು ಚೂಪು ಮಾಡಿದಾಗ ಅವು ತೆಳುವಾದ ಗೆರೆಯನ್ನು ಮೂಡಿಸುತ್ತವೆ. ಆದರೆ ಒಂದೆರಡು ಗೆರೆ ಎಳೆಯುವುದರಲ್ಲೇ ಅವುಗಳ ತುದಿ ಮೊಂಡಾಗುತ್ತದೆ. ಆ ನಂತರ ಬರೆಯುವ ಗೆರೆಗಳು ದಪ್ಪವಾಗಿರುತ್ತವೆ. ನಿಜವಾಗಿ ಕೈವಾರಕ್ಕೆ () ಪ್ರತ್ಯೇಕ `ಅರ್ಧ ಪೆನ್ಸಿಲ್' ಮತ್ತು ಸರಳ ರೇಖೆ ಎಳೆಯಲು ಇನ್ನೊಂದು ಪೆನ್ಸಿಲ್ ಇರಬೇಕಾದುದು ಅಗತ್ಯ. ಕೆಲವರು ಕೈವಾರಕ್ಕೆ ಸಿಕ್ಕಿಸಿದ ಪೆನ್ಸಿಲ್‌ನಿಂದಲೇ ಸರಳ ರೇಖೆಗಳನ್ನೂ ಎಳೆಯುತ್ತಾರೆ! ವೃತ್ತಗಳನ್ನು ಎಳೆಯುವಾಗ ಕಡಿಮೆ ಒತ್ತಡ ಮತ್ತು ಸರಳ ರೇಖೆಗಳನ್ನು ಎಳೆಯುವಾಗ ಅತಿ ಒತ್ತಡ ಹಾಕುವುದು ಸಾಮಾನ್ಯ. ಅಂತಹ ರೇಖಾಚಿತ್ರಗಳು ಕೆಟ್ಟದಾಗಿ ಕಾಣುತ್ತವೆ. ಗೆರೆಗಳು ಒಂದೇ ಸಮನಾಗಿರುವಂತೆ ಮಾಡಲು 0.5 ಮಿ.ಮೀ ದಪ್ಪದ ಲೆಡ್- ಪೆನ್ಸಿಲ್ ಅಥವಾ ಪೆನ್- ಪೆನ್ಸಿಲ್ ಉಪಯೋಗಿಸುವುದು ಒಳ್ಳೆಯದು. ಇದನ್ನು ಆಗಾಗ್ಗೆ ಚೂಪು ಮಾಡುವ ಕೆಲಸ ಇರುವುದಿಲ್ಲ. ಆದ್ದರಿಂದ ಸಮಯವೂ ಉಳಿತಾಯವಾಗುತ್ತದೆ. ಸಾಲುಗಳ ಆರಂಭ: ಕೆಲವರು ಬರೆದಾಗ ಒಂದೊಂದು ಸಾಲು ಒಂದೊಂದು ಕಡೆಯಿಂದ ಪ್ರಾರಂಭವಾಗಿರುತ್ತದೆ. ಇದು ಸೌಂದರ್ಯಕ್ಕೆ ಮಾರಕ. ಎಲ್ಲ ಸಾಲುಗಳೂ ಒಂದೇ ನೇರದಿಂದ ಪ್ರಾರಂಭವಾಗಿ, ನೋಡಿದವರಿಗೆ ಸ್ಕೇಲಿನಲ್ಲಿ ಗುರುತು ಹಾಕಿಕೊಂಡು ಪ್ರಾರಂಭಿಸಿರುವಂತೆ ಕಾಣುತ್ತಿದ್ದರೆ ಅದರ ಸೊಗಸೇ ಬೇರೆ (ದೃಷ್ಟಾಂತ 2). ಅಪೂರ್ಣ ಮತ್ತು ಗೀಚಿದ ಅಕ್ಷರಗಳು: ಕೆಲವರು ಬರೆಯುವಾಗ ತಾಳ್ಮೆಗೆಡುವುದನ್ನು ಅವರ ಕೈಬರಹದಿಂದಲೇ ಕಂಡುಹಿಡಿಯಬಹುದು. ಅಕ್ಷರಗಳು ಪೂರ್ತಿ ಮುಗಿಯುವುದರೊಳಗೇ ಪೆನ್ನನ್ನು ಹಾಳೆಯಿಂದ ಎತ್ತಿಬಿಡುತ್ತಾರೆ. ಇವು ಅಲ್ಲಲ್ಲೇ ಒಡೆದ ಅಕ್ಷರಗಳಂತೆ ಕಾಣುತ್ತವೆ (ದೃಷ್ಟಾಂತ 3). ಬಸ್ ನಿಲ್ದಾಣಕ್ಕೆ ಮೊದಲೇ ಬಸ್ಸಿನಿಂದ ಇಳಿಯುವಂತೆ ಆಗುತ್ತದೆ ಇದು. ಇನ್ನು ಕೆಲವರು ಅಕ್ಷರಗಳ ಕಡೆಯಲ್ಲಿ ಗೆರೆಗಳನ್ನು ಅಗತ್ಯಕ್ಕಿಂತ ಹೆಚ್ಚಾಗಿ ಎಳೆಯುತ್ತಾರೆ. ಅವುಗಳ ತುದಿ ಮೊನಚಾದ ಸೂಜಿಯಂತೆ ಇರುತ್ತದೆ (ದೃಷ್ಟಾಂತ 3). ಆದರೆ ಅಕ್ಷರ ಮುಗಿಯುವವರೆಗೂ ಅದರ ಮೇಲೆ ನಿಯಂತ್ರಣ ಇಟ್ಟುಕೊಂಡಿರುವುದು ಸರಿಯಾದ ಕ್ರಮ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.