ಪ್ರಶ್ನೆ - ಉತ್ತರ ಪ್ರೀತಿ ಸರಾಫ, ಬಿಜಾಪುರ ನಾನು ಕಂಪ್ಯೂಟರ್ ವಿಜ್ಞಾನದಲ್ಲಿ ಬಿ.ಎಸ್ಸಿ ಓದುತ್ತಿದ್ದೇನೆ. ನನಗೆ ಗಗನಸಖಿ ಆಗಬೇಕೆಂಬ ಆಸೆ ಇದೆ. ಅದಕ್ಕಾಗಿ ನಾನು ಯಾವ ಪದವಿ ಪಡೆಯಬೇಕು ತಿಳಿಸಿ. ಅಲ್ಲದೆ ನನ್ನ ತಾಯಿಗೆ ಹೆಚ್ಚು ಹಣ ನೀಡಿ ಓದಿಸುವ ಶಕ್ತಿ ಇಲ್ಲ. ಹಾಗಾಗಿ ಬಿ.ಎಸ್ಸಿ ನಂತರ ನಾನು ಯಾವ ಕೋರ್ಸು ಮಾಡಿದರೆ ಉದ್ಯೋಗಾವಕಾಶಗಳು ಅಧಿಕವಾಗಿ ಇರುತ್ತವೆ? - ಗಗನಸಖಿಯಾಗಿ ಕೆಲಸ ಮಾಡಲು ಇಚ್ಛಿಸುವ ನೀವು ಮಾಡಬೇಕಾದ ಕೋರ್ಸ್ ಮತ್ತು ಸಂಬಂಧಪಟ್ಟ ಸಂಸ್ಥೆಗಳ ವಿವರಗಳನ್ನು ಏರ್ ಇಂಡಿಯಾ ಅಥವಾ ಇನ್ನಾವುದೇ ಖಾಸಗಿ ವಿಮಾನಯಾನ ಸಂಸ್ಥೆಗಳ (://.., ..) ವೆಬ್‌ಸೈಟ್‌ನಲ್ಲಿ ಪಡೆಯಬಹುದು. ಇದರ ಹೊರತಾಗಿ ಬಿ.ಎಸ್ಸಿ ನಂತರ ಎಂ.ಎಸ್ಸಿ ಪದವಿ ಪಡೆಯಲು ವಿದ್ಯಾಭ್ಯಾಸವನ್ನು ಮುಂದುವರಿಸಬಹುದು. ಅನಂತರ ಕಾಲೇಜಿನ ಅಧ್ಯಾಪಕರಾಗಿ ಕೆಲಸ ಮಾಡಲು ಅರ್ಹರಾಗಿರುತ್ತೀರಿ ಅಥವಾ ಯು.ಪಿ.ಎಸ್.ಸಿ / ಕೆ.ಪಿ.ಎಸ್.ಸಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡು ಸೂಕ್ತವಾದ ಉದ್ಯೋಗ ಪಡೆಯಬಹುದು. ಮಹಾದೇವ, ಬೆಳಗಾವಿ ನಾನು ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಡಿಪ್ಲೊಮಾ ಮುಗಿಸಿದ್ದೇನೆ. ಈಗ ದೂರಶಿಕ್ಷಣದ ಮೂಲಕ ಬಿ.ಟೆಕ್ ಮಾಡಬೇಕೆಂದಿದ್ದೇನೆ. ಈ ಪದವಿಗೆ ಸರ್ಕಾರಿ ಮತ್ತು ಖಾಸಗಿ ಕಂಪೆನಿಗಳಲ್ಲಿ ಮಾನ್ಯತೆ ಇದೆಯೇ? ಬಿ.ಟೆಕ್ ಮಾಡಲು ಯಾವ ವಿಶ್ವವಿದ್ಯಾಲಯವನ್ನು ಆಯ್ಕೆ ಮಾಡಿಕೊಂಡರೆ ಒಳ್ಳೆಯದು? - ದೂರ ಶಿಕ್ಷಣದ ಮೂಲಕ ಪಡೆಯುವ ಬಿ.ಟೆಕ್ ಪದವಿಗೆ ಇತರ ಯಾವುದೇ ಪದವಿಗೆ ದೊರಕುವ ಮಾನ್ಯತೆ ಇರುತ್ತದೆ. ಆದ್ದರಿಂದ ನೀವು ಬಿ.ಟೆಕ್ ಪದವಿಯನ್ನು ದೂರಶಿಕ್ಷಣದ ಮೂಲಕ ಪಡೆದು ಸರ್ಕಾರಿ, ಖಾಸಗಿ ಕಂಪೆನಿಗಳಲ್ಲಿ ಉದ್ಯೋಗ ಪಡೆಯಬಹುದು. ಈ ಪದವಿಗಳನ್ನು ನೀವು ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯ ಮತ್ತು ಖಾಸಗಿ ವಿಶ್ವವಿದ್ಯಾಲಯಗಳಾದ ಮಣಿಪಾಲ, ಬಿಟ್ಸ್ ಇತ್ಯಾದಿ ಯಾವುದನ್ನಾದರೂ ಆಯ್ಕೆ ಮಾಡಿಕೊಳ್ಳಬಹುದು. ಪ್ರತೀಕ್ಷಾ ಕಟಾರಿ ನಾನು 2011ರಲ್ಲಿ ಪಿ.ಯು.ಸಿ ಪರೀಕ್ಷೆಯಲ್ಲಿ ಭಾಷಾ ವಿಷಯಗಳನ್ನು ಬಿಟ್ಟು ಪಿ.ಸಿ.ಎಂ.ಬಿ ವಿಷಯಗಳಲ್ಲಿ ಉತ್ತೀರ್ಣಳಾಗದೆ ಒಂದು ವರ್ಷ ವ್ಯಯವಾಗಿತ್ತು. ನಂತರ 2012ರ ಪರೀಕ್ಷೆಯಲ್ಲಿ ಪಿ.ಎಂ.ಬಿ. ಪಾಸು ಮಾಡಿಕೊಂಡಿದ್ದೇನೆ. ಆದರೆ ರಸಾಯನ ಶಾಸ್ತ್ರದಲ್ಲಿ ಎರಡೂ ಪರೀಕ್ಷೆಗಳಲ್ಲಿ ಮತ್ತೆ ಫೇಲ್ ಆಗಿದ್ದೇನೆ. ಈಗ ಮತ್ತೆ ಈ ಪರೀಕ್ಷೆಯನ್ನು ತೆಗೆದುಕೊಳ್ಳುವುದು ಒಳಿತೇ ಅಥವಾ ಇದರ ಹೊರತಾಗಿ ಯಾವುದಾದರೂ ಕೋರ್ಸುಗಳಿದ್ದರೆ ತಿಳಿಸಿಕೊಡಿ. ನನಗೆ ವಿಜ್ಞಾನದಲ್ಲಿ ಮುಂದುವರಿಯಬೇಕೆಂಬ ಆಸೆ ಇದೆ. ಆದರೆ ತುಂಬಾ ಗೊಂದಲವಿದೆ. ದಯಮಾಡಿ ಸೂಕ್ತ ಸಲಹೆ ಕೊಡಿ. - ಸದ್ಯಕ್ಕೆ ರಸಾಯನ ಶಾಸ್ತ್ರದ ವಿಷಯವನ್ನು ಮತ್ತೆ ಅಭ್ಯಾಸ ಮಾಡಿ ಪರೀಕ್ಷೆ ತೆಗೆದುಕೊಂಡು ಪಿ.ಯು.ಸಿ ಮುಗಿಸುವುದು ಸೂಕ್ತ. ನಂತರ ರಸಾಯನ ಶಾಸ್ತ್ರ ಕಠಿಣ ಎನಿಸಿದರೆ ಅದರ ಹೊರತಾಗಿ ಬೇರೆ ಐಚ್ಛಿಕ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಬಿ.ಎಸ್ಸಿ ಪದವಿಗಾಗಿ ವಿದ್ಯಾಭ್ಯಾಸವನ್ನು ಮುಂದುವರಿಸಬಹುದು. ವಿಜ್ಞಾನದಲ್ಲೇ ಆಸಕ್ತಿ ಇರುವ ನೀವು ಯಾವುದೇ ಗೊಂದಲಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಪ್ರಯತ್ನ ಪಟ್ಟರೆ ಅಸಾಧ್ಯವಾದುದು ಯಾವುದೂ ಇಲ್ಲ. ಅನಿವಾರ್ಯವಾಗಿ ಕೆಲವು ಸಂದರ್ಭಗಳಲ್ಲಿ, ಅಂದುಕೊಂಡಂತೆ ಎಲ್ಲವೂ ನಡೆಯದೇ ಇರಬಹುದು. ಆದ್ದರಿಂದ ಕೈಕಟ್ಟಿ ಕುಳಿತುಕೊಳ್ಳುವ ಅವಶ್ಯಕತೆ ಇಲ್ಲ. ರವಿಕುಮಾರ ರಾವ್ ನಾನು ಇ.ಸಿ ವಿಭಾಗದಲ್ಲಿ ಡಿಪ್ಲೊಮಾ ಮುಗಿಸಿ, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಬಿ.ಎಸ್ಸಿ (ಐ.ಟಿ) ಮುಗಿಸಿದ್ದೇನೆ. ಜೊತೆಗೆ ನನಗೆ ಐ.ಟಿ ಕಂಪೆನಿಯಲ್ಲಿ 3 ವರ್ಷ ಕೆಲಸ ಮಾಡಿದ ಅನುಭವ ಇದೆ. ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕೆಂಬ ಆಸೆ. ಆ ದರೆ ಬಿಟ್ಸ್‌ನ ಎಂ.ಎಸ್.ಗಾಗಲೀ ಅಥವಾ ಕೆ.ಎಸ್.ಒ.ಯು.ನ ಎಂ.ಟೆಕ್.ಗಾಗಲೀ ನಾನು ಅರ್ಹನಾಗಿರುವುದಿಲ್ಲ. ಹಾಗಾಗಿ ಕೆ.ಎಸ್.ಒ.ಯು.ನಲ್ಲೇ ಎಂ.ಎಸ್ಸಿ (ಐ.ಟಿ) ಮಾಡೋಣವೆಂದರೆ ಅದಕ್ಕೆ ಉತ್ತಮ ಭವಿಷ್ಯವಿಲ್ಲ ಎನ್ನುತ್ತಿದ್ದಾರೆ. ಹಾಗಾಗಿ ನನಗೆ ಉಳಿದಿರುವ ಏಕೈಕ ಆಯ್ಕೆ ಎಂ.ಸಿ.ಎ. ಯಾವುದನ್ನು ಆರಿಸಿಕೊಳ್ಳುವುದೋ ತಿಳಿಯುತ್ತಿಲ್ಲ. ದಯಮಾಡಿ ಸೂಕ್ತ ಮಾರ್ಗದರ್ಶನ ಕೊಡಿ. - ಬಿ.ಎಸ್ (ಐ.ಟಿ) ಪದವಿಯ ಆಧಾರದ ಮೇಲೆ ನೀವು ಮಾಹಿತಿ ತಂತ್ರಜ್ಞಾನ ಕಂಪೆನಿಯ ಕೆಲಸದಲ್ಲಿ ಮುಂದುವರಿಯಿರಿ. ಇದರ ಜೊತೆಗೆ ಎಂ.ಎಸ್ಸಿ (ಐ.ಟಿ) ಯನ್ನು ಕರ್ನಾಟಕ ಮುಕ್ತ ವಿ.ವಿ.ಯಲ್ಲಿ ಪಡೆಯಲು ವಿದ್ಯಾಭ್ಯಾಸವನ್ನು ಮುಂದುವರಿಸಿ. ನಿಮ್ಮ ಅನುಭವ ಮತ್ತು ಸ್ನಾತಕೋತ್ತರ ಪದವಿಯ ಆಧಾರದ ಮೇಲೆ ಉದ್ಯೋಗದಲ್ಲಿ ಉನ್ನತ ಶ್ರೇಣಿಗೆ ಸೇರಲು ಸಾಧ್ಯ. ಎಲ್ಲ ಪದವಿಗಳಿಗೂ ತನ್ನದೇ ಆದ ಮಾನ್ಯತೆ ಇರುತ್ತದೆ. ಆದ್ದರಿಂದ ಯಾವುದೇ ನಿರ್ದಿಷ್ಟವಾದ ಪದವಿಗೆ ಭವಿಷ್ಯವಿಲ್ಲ ಎನ್ನುವುದು ತಪ್ಪು ಗ್ರಹಿಕೆ. ಕಿರಣ್ ತೋಪಾಳಕಟ್ಟಿ ನಾನು ಸಿವಿಲ್ ವಿಭಾಗದಲ್ಲಿ ಬಿ.ಇ ಅಂತಿಮ ವರ್ಷದಲ್ಲಿ ಓದುತ್ತಿದ್ದು, ಏರೋಸ್ಪೇಸ್ ವಿಚಾರದಲ್ಲಿ ಅತೀವವಾದ ಅಸಕ್ತಿ ಇದೆ. ಮುಂದೆ ಎಂ.ಟೆಕ್ ಮಾಡಲು ಯಾವ ವಿಷಯವನ್ನು ಆಯ್ಕೆ ಮಾಡಿಕೊಳ್ಳಲಿ? - ಬಿ.ಇ ಪದವಿಯ ನಂತರ ಏರೋಸ್ಪೇಸ್ ವಿಷಯದಲ್ಲಿ ಆಸಕ್ತಿ ಇದ್ದರೆ ಎಂ.ಟೆಕ್ ಸ್ನಾತಕೋತ್ತರ ಪದವಿಗೆ ಅದೇ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕು. ಆದ್ದರಿಂದ ಎಂ.ಟೆಕ್ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯಲು ಗೇಟ್ ಪರೀಕ್ಷೆಗೆ ಬೇಕಾದ ಪೂರ್ವ ಸಿದ್ಧತೆಯನ್ನು ಈಗಿನಿಂದಲೇ ಪ್ರಾರಂಭಿಸಿ. ಬಸವರಾಜ ತೋರಿ ನಾನು ಮಾಹಿತಿ ವಿಜ್ಞಾನದಲ್ಲಿ ಬಿ.ಇ ಮುಗಿಸಿ ಈಗ ಶಾಸಗಿ ಕಾಲೇಜೊಂದರಲ್ಲಿ ಉಪನ್ಯಾಸಕ ವೃತ್ತಿಯಲ್ಲಿದ್ದೇನೆ. ಈಗ ದೂರಶಿಕ್ಷಣದಲ್ಲಿ ಎಂ.ಟೆಕ್ ಮಾಡಬಹುದೇ? ಹೀಗೆ ಮಾಡಿದರೆ ಅದಕ್ಕೆ ಯು.ಜಿ.ಸಿ ವೇತನಶ್ರೇಣಿ ದೊರಕುವುದೇ ಅಥವಾ ನೇರ ತರಗತಿಗಳಿಗೆ ಹೋಗಿ ಮಾಡಿದರೆ ಮಾತ್ರ ಇದು ಸಾಧ್ಯವೇ? - ಉಪನ್ಯಾಸಕ ವೃತ್ತಿಯಲ್ಲಿರುವ ನೀವು ದೂರಶಿಕ್ಷಣದಲ್ಲಿ ಎಂ.ಟೆಕ್ ಸ್ನಾತಕೋತ್ತರ ಪದವಿ ಪಡೆಯಬಹುದು ಮತ್ತು ಈ ಪದವಿಗೆ ನೇರ ತರಗತಿಗಳಿಗೆ ಹಾಜರಾಗಿ ಪಡೆಯುವ ಪದವಿಗೆ ಇರುವ ಮಾನ್ಯತೆ ಇರುತ್ತದೆ. ಆದ್ದರಿಂದ ನಿಮ್ಮ ಮುಂದಿನ ಭವಿಷ್ಯದ ದೃಷ್ಟಿಯಿಂದ ಯಾವುದೇ ಆತಂಕ ಇರಲಾರದು. ಅಭಿಷೇಕ್ ಶೇಠ್ ನಾನು 10ನೇ ತರಗತಿ ಓದುತ್ತಿದ್ದೇನೆ. ನನಗೆ ಪೈಲಟ್ ಆಗಬೇಕೆಂಬ ಬಯಕೆ ಇದೆ. ದಯಮಾಡಿ ಸೂಕ್ತ ಸಲಹೆ, ಮಾರ್ಗದರ್ಶನ ಕೊಡಿ. - 10ನೇ ತರಗತಿಯ ನಂತರ ವಿದ್ಯಾಭ್ಯಾಸವನ್ನು ವಿಜ್ಞಾನದಲ್ಲಿ ಮುಂದುವರಿಸಿ ಒಂದು ಪದವಿಯನ್ನು ಗಳಿಸಬೇಕು. ನಂತರ ಸರ್ಕಾರಿ ಅಥವಾ ಖಾಸಗಿ ಪೈಲಟ್ ತರಬೇತಿ ಶಾಲೆಗೆ ಪ್ರವೇಶ ಪಡೆದು ಅದಕ್ಕೆ ಸಂಬಂಧಪಟ್ಟ ತರಬೇತಿ ಪಡೆದು ನೀವು ಪೈಲಟ್ ಹುದ್ದೆಯನ್ನು ಗಳಿಸಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.