ದಂಡಂ ದಶಗುಣಂ ಅಲ್ಲ, ಅವಗುಣಂ ಶಾಲಾ ಮಕ್ಕಳಿಗೆ ಶಿಕ್ಷೆ ವಿಧಿಸುವುದು, ಅದು ದೈಹಿಕ ಶಿಕ್ಷೆಯೇ ಆಗಿರಬಹುದು ಮತ್ತಾವುದೇ ಸ್ವರೂಪದ್ದಾಗಿರಬಹುದು, ಅನಿವಾರ್ಯವೇ, ಅಗತ್ಯವೇ, ಅವಶ್ಯವೇ, ಸ್ವಾಗತಾರ್ಹವೇ ಇತ್ಯಾದಿ ಪ್ರಶ್ನೆಗಳು ಸಾಮಾಜಿಕ ಮತ್ತು ಶೈಕ್ಷಣಿಕ ವಲಯದಲ್ಲಿ ಉದ್ಭವಿಸಿದ್ದರೆ ಅದು ನಮ್ಮ ಸಮಾಜದ ಗ್ರಹೀತಗಳಲ್ಲಿನ ಕೊರತೆಯನ್ನು ತೋರುವುದೇ ಹೊರತು, ಮಕ್ಕಳ ವರ್ತನೆಗಳಲ್ಲಿನ ಲೋಪಗಳನ್ನಲ್ಲ. ಸಾಮಾನ್ಯವಾಗಿ ಇಂದಿನ ಮಕ್ಕಳ ಶೈಕ್ಷಣಿಕ ಸಾಧನೆ ಮತ್ತು ಇಚ್ಚಾಶಕ್ತಿಯನ್ನು ಪರಾಮರ್ಶಿಸುವಾಗ ಒಂದು ಪೀಳಿಗೆಯ ಹಿಂದಿನವರೂ ಸಹ ನಮ್ಮ ಕಾಲದಲ್ಲಿ... ಎಂದು ರಾಗ ಎಳೆಯುತ್ತಲೇ ಮಾತು ಬೆಳೆಸುತ್ತಾರೆ. ನಿಜ, ವಿದ್ಯಾರ್ಥಿ ಜೀವನ ಎಲ್ಲ ಕಾಲದಲ್ಲೂ ಇದ್ದದ್ದೇ. ಅಷ್ಟೇ ವಾಸ್ತವ ಎಂದರೆ ವಿದ್ಯಾರ್ಥಿ ಜೀವನದಲ್ಲಿನ ಏಳು ಬೀಳುಗಳು, ತಪ್ಪು ಒಪ್ಪುಗಳು ಮತ್ತು ಸಾಧನೆ- ವೈಫಲ್ಯಗಳು. ಭಾರತೀಯ ಸಮಾಜದ ಸಂದರ್ಭದಲ್ಲಿ ನೋಡುವುದಾದರೆ ಶಿಕ್ಷಣ ಎಂದ ಕೂಡಲೇ ಗುರು ಪರಂಪರೆಗೆ ಹಾರಿಬಿಡುವುದೇ ಒಂದು ಪರಂಪರೆಯಾಗಿ ಬಿಟ್ಟಿದೆ. `ಗುರು ಬ್ರಹ್ಮ, ಗುರು ವಿಷ್ಣು' ಎಂಬ ಶ್ಲೋಕದ ಮೂಲಕ ಗುರುವನ್ನು ದೈವೀಕವಾಗಿ ಕಾಣುವ ಒಂದು ಸಂಪ್ರದಾಯ ನಮ್ಮ ಸಮಾಜದಲ್ಲಿ ಬೇರು ಬಿಟ್ಟಿರುವುದರ ಹಿಂದೆ ಅನೇಕ ಅರ್ಧ ಸತ್ಯಗಳು ಅಡಗಿರುವುದನ್ನು ಗಮನಿಸಬೇಕಿದೆ. ಪ್ರಸ್ತುತ ಚರ್ಚೆಯ ವಿಚಾರದಿಂದ ವಿಮುಖವಾಗುವ ಆರೋಪ ಹೊರಿಸಿದರೂ, ಕೆಲವು ಅಂಶಗಳನ್ನು ಇಲ್ಲಿ ಸ್ಪಷ್ಟಪಡಿಸುವುದು ಅಗತ್ಯ. ಗುರು ಪರಂಪರೆಯ ಶ್ರೇಷ್ಠತೆ ಮತ್ತು ಪರಿಣಾಮ ಅಗಾಧವಾದುದು. ಗುರುವೇ ಸರ್ವಸ್ವ ಎಂದು ಪರಿಗಣಿಸಿದ್ದ ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ದೈವೀಕ ಸ್ವರೂಪ ಪಡೆದ ಈ ಪರಂಪರೆಯ ಹರಿಕಾರರು ಸರ್ವ ಶಿಕ್ಷಣಕ್ಕೆ ಏಕೆ ಒತ್ತು ನೀಡಲಿಲ್ಲ ಎಂಬ ಪ್ರಶ್ನೆ ನಮ್ಮ ಮನದಾಳದಲ್ಲಿ ಉದ್ಭವಿಸದಿದ್ದರೆ, ಬಹುಶಃ ನಮ್ಮ ಅನೇಕ ಪ್ರಶ್ನೆಗಳು ನಿಗೂಢವಾಗಿಯೇ ಉಳಿದುಬಿಡುತ್ತವೆ. ಭಾರತ ಇತಿಹಾಸದ ಗುರು ಪರಂಪರೆಯಲ್ಲಿ ಶಿಕ್ಷೆ ಎನ್ನುವುದು ಒಂದು ನಿರ್ದಿಷ್ಟ ಸಮುದಾಯದ ಐಚ್ಚಿಕ ಅಭಿವ್ಯಕ್ತಿಯಾಗಿತ್ತು ಎನ್ನುವುದನ್ನು ಇಲ್ಲಿ ಮರೆಯುವಂತಿಲ್ಲ. ಗುರು ಪರಂಪರೆಯ ಅವಕೃಪೆಗೆ ಪಾತ್ರರಾಗಿ ಶಿಕ್ಷಣದಿಂದ ವಂಚಿತರಾದ ಬಹುಸಂಖ್ಯಾತರಿಗೆ ಶಿಕ್ಷಣ ಒಲಿಯಲು ಪರಕೀಯರ ಔದಾರ‌್ಯ ಬೇಕಾಗಿದ್ದು ಇತಿಹಾಸ. ಶಿಕ್ಷೆಯ ಅಂಜಿಕೆ ಇಲ್ಲದಿದ್ದರೆ ವಿದ್ಯಾರ್ಥಿಗಳಲ್ಲಿ ಶಿಸ್ತು ಬೆಳೆಯುವುದಿಲ್ಲ ಎಂಬ ಸಾರ್ವತ್ರಿಕ ಅನಿಸಿಕೆಗೂ ಇದೇ ಪರಂಪರೆಯೇ ನಾಂದಿ ಹಾಡಿರುವುದನ್ನೂ ಅಲ್ಲಗಳೆಯುವಂತಿಲ್ಲ. ಸಮಕಾಲೀನ ಸಂದರ್ಭದಲ್ಲಿ ಮಕ್ಕಳನ್ನು ದಂಡಿಸುವುದು ಏಕೆ ಎಂಬ ಪ್ರಶ್ನೆ ಮೂಡಿದಾಗ ಥಟ್ಟನೆ ಹೊಳೆಯುವುದು ಶಿಸ್ತು, ಸಂಯಮ ಮತ್ತು ಶ್ರದ್ಧೆಯನ್ನು ಬೆಳೆಸುವ ಸಲುವಾಗಿ ಎಂಬ ಉತ್ತರ. `ನಮ್ಮ ಕಾಲದಲ್ಲಿ ಶಿಕ್ಷಕರ ಭಯ ಇದ್ದುದರಿಂದಲೇ ನಮ್ಮಲ್ಲಿ ಶಿಸ್ತು ಬೆಳೆದಿದೆ, ಆದರೆ ನಮ್ಮ ಮಕ್ಕಳಲ್ಲಿ ಶಿಕ್ಷೆಯ ಭಯವೇ ಇಲ್ಲದೆ ಅಶಿಸ್ತು ತಾಂಡವಾಡುತ್ತಿದೆ' ಎಂಬ ಪೋಷಕರ ಅಳಲು ಪೂರ್ಣ ಸತ್ಯವಲ್ಲ. ಏಕೆಂದರೆ ಉಗ್ರ ಶಿಕ್ಷೆ ನೀಡುವಂತಹ ಶಿಕ್ಷಕರ ಶಾಲೆಗಳಲ್ಲೂ ಅಶಿಸ್ತು ಅಂದಿಗೂ ತಾಂಡವವಾಡುತ್ತಿತ್ತು. ಇದು ನಾವು ನೋಡುವ ದೃಷ್ಟಿಯನ್ನು ಅವಲಂಬಿಸುವ ಒಂದು ವಿದ್ಯಮಾನ. ಸಮಕಾಲೀನ ಸಂದರ್ಭದಲ್ಲಿ ಆಧುನಿಕ ತಂತ್ರಜ್ಞಾನ ಮತ್ತು ಸಾಮಾನ್ಯ ಜ್ಞಾನ ವ್ಯಾಪ್ತಿಯನ್ನು ಪರಿಗಣಿಸಿದರೆ, ಇಂದಿನ ಮಕ್ಕಳಲ್ಲಿ ಹೆಚ್ಚಿನ ಕ್ರಿಯಾಶೀಲತೆ ಕಂಡುಬರುತ್ತದೆ. ಆದರೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣ ಎನ್ನುವುದು ವಾಣಿಜ್ಯೀಕರಣಗೊಂಡು ಉದ್ಯೋಗ ಮತ್ತು ಭವಿಷ್ಯವನ್ನು ರೂಪಿಸಿಕೊಳ್ಳುವ ಚಿಮ್ಮುಹಲಗೆಯಾಗಿ ಪರಿಣಮಿಸಿದೆ. ಪರಿಣಾಮ ಮಕ್ಕಳಿಂದ ನಾವು ಸದಾ ಉತ್ತಮ ಸಾಧನೆ (?)ಯನ್ನೇ ಬಯಸುತ್ತೇವೆ. ಇಲ್ಲಿ ಸಾಧನೆ ಎಂದರೆ ವಿದ್ಯಾರ್ಥಿಗಳಲ್ಲಿ ಅಂತರ್ಗತವಾಗಿರುವ ಅಥವಾ ರೂಢಿಸಿಕೊಂಡಿರುವ ಸೂಕ್ಷ್ಮ ಪ್ರತಿಭೆಗಳು ಗಣನೆಗೆ ಬರುತ್ತಿಲ್ಲ. ಪರೀಕ್ಷೆಯಲ್ಲಿ ಗಳಿಸುವ ಅಂಕಗಳು ಅಥವಾ ಶ್ರೇಣಿಗಳೇ ಮುಂಚೂಣಿಗೆ ಬರುತ್ತಿವೆ. ಒಂದನೇ ತರಗತಿಯ ಪ್ರವೇಶದಿಂದ ಸ್ನಾತಕೋತ್ತರ ಪದವಿಯವರೆಗೂ ಇದೇ `ಅಂಕ ಪರಂಪರೆ' ವಿಸ್ತಾರವಾಗಿದ್ದು, ಮಕ್ಕಳಲ್ಲಿನ ಸುಪ್ತ ಪ್ರತಿಭೆ ಬೆಳಕಿಗೆ ಬಂದರೂ ಮಾನ್ಯತೆ ಪಡೆಯದೆ ಸೊರಗುತ್ತದೆ. ಪ್ರತಿ ವರ್ಷ ಒಂದು ಫ್ಯಾಷನ್ ಷೋನಂತೆ ನಡೆಯುವ ಪ್ರತಿಭಾ ಕಾರಂಜಿಗಳಲ್ಲಿ ಇದು ಸ್ಪಷ್ಟವಾಗಿ ವ್ಯಕ್ತವಾಗುತ್ತದೆ. ಜಾತಿ ಸಮುದಾಯಗಳನ್ನು ಪ್ರತಿನಿಧಿಸುವ ಸಂಘಟನೆಗಳು ಆಯಾಯ ಜಾತಿಯ ಪ್ರತಿಭಾವಂತ ಮಕ್ಕಳನ್ನು ಪ್ರತಿ ವರ್ಷ ಸನ್ಮಾನಿಸುವಾಗ ಪರಿಗಣಿಸುವುದು ಮಕ್ಕಳು ಗಳಿಸಿದ ಅಂಕಗಳನ್ನೇ ಹೊರತು, ಅವರಲ್ಲಿ ಇರಬಹುದಾದ ಸುಪ್ತ ಪ್ರತಿಭೆಯನ್ನಲ್ಲ. ಇದು ಶೈಕ್ಷಣಿಕ ರಂಗವನ್ನು ಕಾಡುತ್ತಿರುವ ಒಂದು ವ್ಯಾಧಿ ಎಂದೇ ಹೇಳಬಹುದು. ಈ ಹಿನ್ನೆಲೆಯಲ್ಲಿ ನೋಡಿದಾಗ ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷೆ ನೀಡುವುದು ವಿದ್ಯಾರ್ಥಿಗಳು ಎಸಗಿದ ತಪ್ಪುಗಳಿಗಾಗಿ ಅಲ್ಲ. ಪೋಷಕರು ಮತ್ತು ಶಿಕ್ಷಕರು ಬಯಸುವ ಅಥವಾ ಅಪೇಕ್ಷಿಸುವ ಮಟ್ಟಿಗೆ ಅವರು ಸಾಧನೆ ತೋರುವುದಿಲ್ಲ ಎಂಬ ಕಾರಣಕ್ಕಾಗಿ. ಇದು ಅಕ್ಷಮ್ಯ ಮತ್ತು ಅಸಂಬದ್ಧ ವರ್ತನೆ. ಶಿಕ್ಷೆ ನೀಡಲು ಇರುವ ಮತ್ತೊಂದು ಕಾರಣ ಎಂದರೆ ಮಕ್ಕಳನ್ನು ಹದ್ದುಬಸ್ತಿನಲ್ಲಿ ಇಟ್ಟು ಶಿಸ್ತು ಬೆಳೆಸುವ ಹಂಬಲ. ಮಾನವನ ಮೂಲಭೂತ ಗುಣಗಳಲ್ಲಿ ಮುಖ್ಯವಾಗಿ ಕಾಣುವುದು ನಿಯಂತ್ರಿಸುವ ವಾಂಛೆ, ಅಧಿಕಾರ ಚಲಾಯಿಸುವ ಆಕಾಂಕ್ಷೆ. ಹೆಚ್ಚು ನಿಯಂತ್ರಣ ಸಾಧಿಸಿದಷ್ಟೂ ತಮ್ಮ ಉನ್ನತ ಸ್ಥಾನಕ್ಕೆ ಗರಿ ಮೂಡುತ್ತದೆ ಎಂಬ ಭಾವನೆ ಸಹಜವಾಗಿಯೇ ಮೂಡುತ್ತದೆ. ಆದರೆ ನಿಯಂತ್ರಣ ಸಾಧಿಸುವ ಮನೋಭಾವ ಅಹಮಿಕೆಯನ್ನೂ ಬೆಳೆಸುತ್ತದೆ, ನಿಯಂತ್ರಣ ತಪ್ಪಿದಾಗ ಆಕ್ರೋಶವನ್ನೂ ಬೆಳೆಸುತ್ತದೆ. ಹಾಗಾಗಿಯೇ ಹಲವು ಶಾಲೆಗಳಲ್ಲಿ ಮಕ್ಕಳನ್ನು ಸಾಯುವಂತೆ ಹೊಡೆದ ಘಟನೆಗಳು ಸಂಭವಿಸಿವೆ. ದೇಶದ ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿ ವೃಂದವನ್ನು ಶಿಸ್ತು, ಸಂಯಮಬದ್ಧರನ್ನಾಗಿ ಮಾಡಲು ಅವರ ಮನವನ್ನು ಗೆಲ್ಲುವ, ಹೃದಯವನ್ನು ಗೆಲ್ಲುವ ಸಾಮರ್ಥ್ಯ ಹೊಂದಿರಬೇಕಾದುದು ಅಗತ್ಯ. ಈ ಸಾಮರ್ಥ್ಯ ಅಥವಾ ಮನೋವೃತ್ತಿ ಇಲ್ಲದೇ ಹೋದಲ್ಲಿ ಶಿಕ್ಷೆ ಅನಿವಾರ್ಯ ಎನಿಸುತ್ತದೆ. ಶೈಕ್ಷಣಿಕ ಅಭಿವೃದ್ಧಿಗೆ ಅವಶ್ಯವಾಗಿರುವುದು ಮಾನವೀಯ ಪರಿಸರ ಮತ್ತು ಮಾನವತೆಯ ಸ್ಪರ್ಶ. ಇದನ್ನು ಮಕ್ಕಳಿಗೆ ಪೋಷಕರನ್ನು ಹೊರತುಪಡಿಸಿ ಶಿಕ್ಷಕರು ಮಾತ್ರ ನೀಡಲು ಸಾಧ್ಯ. `ಗುರು ಬ್ರಹ್ಮ, ಗುರು ವಿಷ್ಣು' ಇತ್ಯಾದಿಗಳನ್ನು ಈ ದೃಷ್ಟಿಯಿಂದ ನೋಡಿದಾಗ, ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲಿ ಶಿಕ್ಷಣದ ಪರಿಕಲ್ಪನೆ ಶಿಕ್ಷೆಯಿಂದ ಹೊರತಾಗಲು ಸಾಧ್ಯ. ಶಿಕ್ಷಣದಿಂದ ವಂಚಿತರಾಗುವ, ಶಿಕ್ಷೆಯಿಂದ ಮುಕ್ತಿ ಹೊಂದಿರುವ ಜನಸಮುದಾಯಗಳಿಗೆ ಮತ್ತೊಮ್ಮೆ ಶಿಕ್ಷೆಯ ಸ್ಪರ್ಶ ಬೇಕಿಲ್ಲ. ಪ್ರೀತ್ಯಾದರಗಳ ಮಾನವೀಯ ಸ್ಪರ್ಶ ಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.