ಓದುವವರ ಬಗ್ಗೆ ಕಾಳಜಿ ಇರಲಿ ನಾವು ಬರೆಯುವಾಗ `ಇದನ್ನು ಯಾರೋ ನೋಡುತ್ತಾರೆ, ಓದುತ್ತಾರೆ. ಆದ್ದರಿಂದ ಎಲ್ಲರೂ ಮೆಚ್ಚುವಂತೆ ನಾನು ಬರೆಯಬೇಕು' ಎಂಬುದನ್ನು ನೆನಪಿಟ್ಟುಕೊಂಡರೆ ಸಾಕು, ನಮ್ಮ ಬರವಣಿಗೆಯಲ್ಲಿ ಸುಧಾರಣೆ ಕಾಣುತ್ತದೆ. ಒಂದು ಸರಳ ಸೂತ್ರವೆಂದರೆ ಓದುವವರು ಪುಸ್ತಕವನ್ನು ಹೇಗೆ ಮತ್ತು ಯಾವ ಕೋನದಲ್ಲಿ ಹಿಡಿದಿರುತ್ತಾರೋ ಬರೆಯುವಾಗಲೂ ಅದೇ ಕೋನ ಇರಬೇಕು. ನೋಡುವವರಿಗೆ ಹೇಗೆ ಕಾಣುತ್ತದೆ ಎಂದು ಬರೆಯುವಾಗಲೇ ನಮಗೆ ಅರಿವಿರಬೇಕು. ಹಾಗೆಯೇ ಓದುವವರು ಯಾವ ದಿಕ್ಕು ಅಥವಾ ಕೋನದಿಂದ ಓದುತ್ತಾರೋ ಬರೆಯುವಾಗಲೂ ಸುಮಾರಾಗಿ ಅದೇ ಕೋನ ಇರಬೇಕು. ಓದುವವರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದೆ, ನಿರ್ಲಕ್ಷ್ಯದಿಂದ ಬರೆಯುವವರ ಸುಧಾರಣೆಯಾಗುವುದು ಕಷ್ಟ. ನಾವು ಬರೆದದ್ದನ್ನು ಓದುವವರು ಶಿಕ್ಷಕರಾದರಂತೂ, ಬರೆಯುವಾಗ ನಾವು ಇನ್ನಷ್ಟು ಎಚ್ಚರಿಕೆ ವಹಿಸಬೇಕಾದುದು ಅಗತ್ಯ. ಏಕೆಂದರೆ ನಾವು ಬರೆದುದನ್ನು ಓದಿ ನೋಡಿ ಅವರು ಮಾರ್ಕ್ಸ್ ಹಾಗೂ ರಿಮಾರ್ಕ್ಸ್ (ಪ್ರತಿಕ್ರಿಯೆ) ಎರಡನ್ನೂ ನೀಡುತ್ತಾರೆ. ದುರದೃಷ್ಟವೆಂದರೆ ನಾವು `ಬರೆಯಬೇಕು, ಬರೆಯುತ್ತೇವೆ' ಎಂಬಲ್ಲಿಗೆ ನಮ್ಮ ಯೋಚನೆ ನಿಂತುಬಿಡುತ್ತದೆ. ಮುಂದೆ ಯಾರು ಓದುತ್ತಾರೆ ಅಥವಾ ಇಲ್ಲ ಎಂಬುದನ್ನು ನಾವು ಯೋಚಿಸುವುದೇ ಇಲ್ಲ. ಪುಸ್ತಕದ ಕೋನ: ಕೆಲವರು ಪುಸ್ತಕವನ್ನು 90 ಡಿಗ್ರಿಯಷ್ಟು ತಿರುಗಿಸಿಟ್ಟುಕೊಂಡು ಬರೆಯುತ್ತಿರುತ್ತಾರೆ. ಇದು ಓದುಗರ ಬಗ್ಗೆ ಬರೆಯುವವರಿಗೆ ಇರುವ ತೀವ್ರ ನಿಷ್ಕಾಳಜಿಯನ್ನು ಸೂಚಿಸುತ್ತದೆ. ಕಣ್ಣಿನ ಕೋನ: ಕೆಲವರು ತಲೆಯನ್ನು ಎಡಕ್ಕೆ ವಾಲಿಸಿ, ಡೆಸ್ಕಿಗೆ ಒರಗಿಸುವಂತೆ ಇಟ್ಟುಕೊಂಡು ಬರೆಯುತ್ತಿರುವುದನ್ನೂ ನೀವು ನೋಡಿರಬಹುದು. ಇನ್ನು ಕೆಲವರು ಪುಸ್ತಕವನ್ನು ಬಲಗೈ ಕಡೆಗೆ ತಮ್ಮಿಂದ ದೂರದಲ್ಲಿ ಹಿಡಿದು, ಒಂದು ಕೋನದಿಂದ ಪುಸ್ತಕವನ್ನು ನೋಡುತ್ತಾ ಬರೆಯುತ್ತಿರುತ್ತಾರೆ. ಕಣ್ಣಿನ ದೃಷ್ಟಿಯು ಪುಸ್ತಕಕ್ಕೆ ಸಾಧ್ಯವಾದಷ್ಟೂ ಲಂಬವಾಗಿರಬೇಕೆಂಬ (ಪರ್ಪೆಂಡಿಕ್ಯುಲಾರ್) ಸೂತ್ರದ ಉಲ್ಲಂಘನೆಯಾಗಿದೆ ಇದು. ಪುಸ್ತಕದ ಮೇಲ್ಮೈ: ನಾವು ಹಾಳೆಯ ಮೇಲೆ ಬರೆಯುವಾಗ ನೇರವಾಗಿ ಟೇಬಲ್ ಅಥವಾ ನೆಲದ ಮೇಲೆ ಇಟ್ಟುಕೊಂಡು ಬರೆಯುವುದು ಸೂಕ್ತವಲ್ಲ. ಹೀಗೆ ಬರೆದಾಗ ಬಾಲ್ ಪೆನ್‌ನಿಂದ ಮೂಡುವ ಗೆರೆಗಳು ತೆಳುವಾಗಿರುತ್ತವೆ. ಏಕೆಂದರೆ ಅದು ಗಟ್ಟಿಯಾದ ಮೇಲ್ಮೈ. ಅದೇ ರೀತಿ ಹಾಳೆಯನ್ನು ನೇರವಾಗಿ ಮೆತ್ತಗಿರುವ ಒಂದು ದಿಂಬಿನ ಮೇಲೆ ಇಟ್ಟುಕೊಂಡು ಬರೆಯುವುದೂ ಸೂಕ್ತವಲ್ಲ. ನಾವು ಬರೆಯುವ ಮೇಲ್ಮೈ ತೀರಾ ಗಟ್ಟಿ ಅಥವಾ ಅತಿ ಮೆದುವಾಗಿರುವುದು ಸರಿಯಲ್ಲ. ಒಂದು ಪ್ಯಾಡ್‌ಗೆ 3-4 ಹಾಳೆಗಳನ್ನು ಜೋಡಿಸಿಟ್ಟು ಮೇಲಿನ ಹಾಳೆಯಲ್ಲಿ ಬರೆಯುವುದು ಒಳ್ಳೆಯದು. ಪುಸ್ತಕ ಅಥವಾ ಹಾಳೆಯ ಮೇಲೆ ಬರೆಯುವಾಗ ಅದು ಕುಗ್ಗುವುದು ಮತ್ತು ಬರೆಯುವುದನ್ನು ನಿಲ್ಲಿಸಿದೊಡನೆ ಉಬ್ಬುವುದು ಆಗುತ್ತಿದ್ದರೂ ಅಕ್ಷರಗಳು ಅಂದಗೆಡುತ್ತವೆ. ಇಂತಹ ಸಂದರ್ಭದಲ್ಲಿ ಎಡಗೈನಿಂದ ಹಾಳೆಯು ಏರಿಳಿತಗೊಳ್ಳದಂತೆ ಒತ್ತಿ ಹಿಡಿಯುವುದು ಸೂಕ್ತ. ಎಂಜಿನಿಯರಿಂಗ್ ಡ್ರಾಯಿಂಗ್ ಮಾಡುವವರು ಹಾಳೆಗಳು ಏರಿಳಿತಗೊಳ್ಳದಂತೆ ಬೋರ್ಡಿನ ಸುತ್ತಲೂ ಕ್ಲಿಪ್ ಹಾಕಿರುವುದನ್ನು ನೀವು ನೋಡಿರಬಹುದು. ನಾವು ಪುಸ್ತಕದ ಅತಿ ಕೆಳಗಿನ ಸಾಲುಗಳಲ್ಲಿ ಬರೆಯುವಾಗ ಅಕ್ಷರಗಳು ಕೆಟ್ಟು ಹೋಗುತ್ತವೆ. ಇದಕ್ಕೆ ಕಾರಣ ನಮ್ಮ ಮುಂಗೈ ಡೆಸ್ಕಿನ ಮೇಲಿರುತ್ತದೆ. ಆದರೆ ದಪ್ಪವಾದ ಪುಸ್ತಕದ ಮೇಲ್ಮೈ ಸ್ವಲ್ಪ ಎತ್ತರದಲ್ಲಿ ಇರುತ್ತದೆ. ನಾವು ಬರೆಯುವಾಗ ಮುಂಗೈ ಮತ್ತು ಬರೆಯುವ ಮೇಲ್ಮೈಗಳು ಒಂದೇ ಸಮತಲದಲ್ಲಿ ಇರುವುದು ಅವಶ್ಯಕ. ಆದ್ದರಿಂದ ಆ ಪುಸ್ತಕದಷ್ಟೇ ದಪ್ಪದ ಇನ್ನೊಂದು ಪುಸ್ತಕವನ್ನು ಡೆಸ್ಕಿನ ಮೇಲಿಟ್ಟು, ಎರಡೂ ಒಂದೇ ಸಮತಲದಲ್ಲಿ ಇರುವಂತೆ ಮಾಡಿಕೊಳ್ಳಬಹುದು. (ಚಿತ್ರ ನೋಡಿ). ಅಣಕು ಪ್ರವೇಶ ಪರೀಕ್ಷೆ ಎಫ್.ಐ.ಐ.ಟಿ.ಜೆ.ಇ.ಇ ಶೈಕ್ಷಣಿಕ ಸಂಸ್ಥೆಯು `ಯುಎಸ್‌ಎ ಯೂನಿವ್ ಕ್ವೆಸ್ಟ್' ಎಂಬ ಮುಕ್ತ ಅಣಕು ಎಸ್.ಎ.ಟಿ ಪರೀಕ್ಷೆ ಆಯೋಜಿಸಿದೆ. ಇದು ಒಂದು ಪ್ರವೇಶ ಪರೀಕ್ಷೆ ಅಲ್ಲ. ಎಸ್.ಎ.ಟಿ ಪರೀಕ್ಷೆ ಹೇಗೆ ನಡೆಯುತ್ತದೋ ಅದರ ಒಂದು ನಿಜವಾದ ಅನುಭವವನ್ನು ವಿದ್ಯಾರ್ಥಿಗಳಿಗೆ ನೀಡುವುದು ಮತ್ತು ಈ ಮೂಲಕ, ಅಮೆರಿಕದ ಅತ್ಯುತ್ತಮ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶಾತಿಗೆ ನೆರವು ಕಲ್ಪಿಸುವುದು ಈ ಯೋಜನೆಯ ಪ್ರಮುಖ ಉದ್ದೇಶ. ಇದೇ 24ರಂದು ನಡೆಯಲಿರುವ ಈ ಪರೀಕ್ಷೆಯು ಎಸ್.ಎ.ಟಿ ರೀಸನಿಂಗ್, ಎಸ್.ಎ.ಟಿ ಸಬ್ಜೆಕ್ಟ್ ಹಾಗೂ ಎ.ಪಿ ಪರೀಕ್ಷೆಗಳಿಗೆ ವಿವರವಾದ ಪೂರ್ವ ಸಿದ್ಧತಾ ಯೋಜನೆಯನ್ನು ನೀಡುವ ಮೊದಲ ಯೋಜನೆಯಾಗಿದೆ. `ಐ.ಐ.ಟಿ ಹಾಗೂ ಎನ್.ಐ.ಟಿ.ಗಳಂತಹ ಸಂಸ್ಥೆಗಳಲ್ಲಿ ವೃತ್ತಿಪರ ಕೋರ್ಸುಗಳಿಗೆ ಸೀಟುಗಳು ಸೀಮಿತ ಸಂಖ್ಯೆಯಲ್ಲಿ ಇರುವುದರಿಂದ ಸಾವಿರಾರು ವಿದ್ಯಾರ್ಥಿಗಳು ಪ್ರವೇಶಾವಕಾಶದಿಂದ ವಂಚಿತರಾಗುತ್ತಾರೆ. ದೆಹಲಿ ವಿಶ್ವವಿದ್ಯಾಲಯದಲ್ಲಿ ಶೇ 90ರಷ್ಟು ಅಂಕ ಗಳಿಸಿದ ವಿದ್ಯಾರ್ಥಿಯೂ ತಿರಸ್ಕೃತನಾಗುತ್ತಾನೆ. ಬಹುತೇಕ ದೇಶದ ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಇದೇ ಪರಿಸ್ಥಿತಿ ಇದೆ. ಇವೆಲ್ಲದರ ಫಲವಾಗಿ ನಿರಾಶೆಗೊಳಗಾದ ವಿದ್ಯಾರ್ಥಿ ಸಮುದಾಯದಲ್ಲಿ ಹೊಸ ಅರಿವು ಹಾಗೂ ಭರವಸೆ ಮೂಡಿಸಲು ಈ ಪರೀಕ್ಷೆಯ ಮೂಲಕ ಪರ್ಯಾಯ ಮಾರ್ಗ ಹುಡುಕುವ ಪ್ರಯತ್ನ ನಡೆಸಲಾಗಿದೆ. ಜಗತ್ತಿನ ಅತ್ಯುತ್ತಮ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯುವುದು ಭಾರತದ ಯಾವುದೇ ಕಾಲೇಜು/ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆಯುವುದಕ್ಕಿಂತ ಹೆಚ್ಚು ಸುಲಭ ಮತ್ತು ಲಾಭದಾಯಕ ಎಂಬುದನ್ನು ಮನವರಿಕೆ ಮಾಡಿಕೊಡುವುದು ಸಹ ನಮ್ಮ ಉದ್ದೇಶ' ಎಂದು ಸಂಸ್ಥೆ ಹೇಳಿದೆ. ಈ ವರ್ಷದ ಏಪ್ರಿಲ್ 7, ಮೇ 26, ಸೆಪ್ಟೆಂಬರ್ 29, ನವೆಂಬರ್ 24 ಹಾಗೂ ಡಿಸೆಂಬರ್ 22ರಂದು ಸಹ ಈ ಪರೀಕ್ಷೆ ಬರೆಯಲು ಅವಕಾಶವಿದೆ. ಪರೀಕ್ಷೆಯ ಜೊತೆಗೆ 500 ರೂಪಾಯಿ ಶುಲ್ಕದೊಂದಿಗೆ ಏಪ್ರಿಲ್ 1ರ ನಂತರ ಯುಎಸ್‌ಎ ಯೂನಿವ್ ಕ್ವೆಸ್ಟ್ ಆನ್‌ಲೈನ್ ಫ್ಲೆಕ್ಸಿ 2 ಪರೀಕ್ಷಾ ಸರಣಿಯೂ ನಡೆಯುತ್ತದೆ. ವಿದ್ಯಾರ್ಥಿಗಳು ಎಸ್.ಎ.ಟಿ, ಎ.ಪಿ ಹಾಗೂ ಟೋಫೆಲ್‌ಗಳಿಗೆ ಉತ್ತಮ ರೀತಿಯಲ್ಲಿ ಸಿದ್ಧತೆ ನಡೆಸಿಕೊಳ್ಳಲು ಈ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು. 150 ರೂಪಾಯಿ ನೋಂದಣಿ ಶುಲ್ಕದೊಂದಿಗೆ ಯುಎಸ್‌ಎ ಯೂನಿವ್ ಕ್ವೆಸ್ಟ್ ಮುಕ್ತ ಅಣಕು ಎಸ್.ಎ.ಟಿ ಪರೀಕ್ಷೆಗೆ ಜನವರಿ 5ರಿಂದ ನೋಂದಣಿ ಕಾರ್ಯ ಪ್ರಾರಂಭವಾಗಿದೆ. ಆಸಕ್ತರು ಆನ್‌ಲೈನ್ ನೋಂದಣಿಗೆ .. ಇಲ್ಲಿಗೆ ಲಾಗಾನ್ ಆಗಬಹುದು. ಆಫ್‌ಲೈನ್ ನೋಂದಣಿಗೆ ಸಮೀಪದ ಎಫ್.ಐ.ಐ.ಟಿ.ಜೆ.ಇ.ಇ ಕೇಂದ್ರವನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ 080-41135682/ 41148491 ಸಂಪರ್ಕಿಸಬಹುದು. ಮುಂದಿನ ವಾರ: ಬರೆಯಲು ಇಳಿಜಾರು ಮೇಜು ಸೂಕ್ತ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.