ಆಯಿಷಾ ಮಾಡಿದ್ದು ಸರಿಯೇ? ಇದು ಪರಮೇಶ್ವರಯ್ಯ ಸೊಪ್ಪಿಮಠ ಅವರ `ಆಯಿಷಾ ಎಂಬ ದೀವಿಗೆ' (ಶಿಕ್ಷಣ ಪುರವಣಿ 7.1.2013) ಲೇಖನಕ್ಕೆ ಪ್ರತಿಕ್ರಿಯೆ ಅಲ್ಲ. ಆ ಲೇಖನ ಓದುವುದಕ್ಕೆ ಮುಂಚೆ ಆಯಿಷಾ ಪ್ರಕರಣದ ಬಗ್ಗೆ ನನಗೆ ಹೆಚ್ಚು ತಿಳಿದಿರಲಿಲ್ಲ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನನ್ನ ಅಭಿಪ್ರಾಯ ಮತ್ತು ವಿಚಾರಗಳನ್ನು ಓದುಗರ ಮುಂದೆ ಇಡುತ್ತಿದ್ದೇನೆ. ಇದು ಒಂದು ರೀತಿಯಲ್ಲಿ ಈಗಿನ ಕಾಲದ ತಂದೆ ತಾಯಿಗಳು ಮಕ್ಕಳನ್ನು ಬೆಳೆಸುವ ರೀತಿಗೆ ಪ್ರತಿಕ್ರಿಯೆ ಎನ್ನಬಹುದು. ಕಲಿಯುವ ಮಕ್ಕಳಲ್ಲಿ ಪ್ರಕೃತಿಯ ಬಗ್ಗೆ, ಜೀವ ಜಗತ್ತಿನ ಬಗ್ಗೆ ಕುತೂಹಲ ಸಹಜವೇ. ನಲಿಯುತ್ತಾ ಕಲಿಯುವುದು, ಕಲಿಯುತ್ತಾ ನಲಿಯುವುದು (ನಲಿ-ಕಲಿ) ಪ್ರಾಥಮಿಕ ಮತ್ತು ಪ್ರೌಢ ಹಂತಗಳಲ್ಲಿ ಕಲಿಕಾ ಸಿದ್ಧಾಂತವಾಗಿದೆ. ಮಕ್ಕಳು ಕುತೂಹಲದಿಂದ ಕೇಳುವ ಪ್ರಶ್ನೆಗಳಿಗೆ ಸಮಂಜಸವಾಗಿ ಉತ್ತರಿಸಿ ಅವರ ಕುತೂಹಲವನ್ನು ತಣಿಸುವುದು ಮನೆಯಲ್ಲಿ ಪಾಲಕರ, ಶಾಲೆಯಲ್ಲಿ ಶಿಕ್ಷಕರ ಕರ್ತವ್ಯ. ಆದರೆ ಮಕ್ಕಳು ಕೇಳುವ ಪ್ರಶ್ನೆಗಳು ಅಸಾಮಾನ್ಯವಾಗಿದ್ದರೆ (ಸಾಮಾನ್ಯ ಜ್ಞಾನಕ್ಕೆ ಅತೀತ) ಪ್ರಶ್ನೆ ಕೇಳುವಾಗಿನ ಅವರ ವರ್ತನೆ ಪಾಲಕರಿಗಾಗಲಿ, ಶಿಕ್ಷಕರಿಗಾಗಲಿ ತಲೆಹರಟೆ ಎನಿಸುವುದೂ ಸಹಜವೆ. ಅಯಸ್ಕಾಂತವನ್ನು ಎರಡಾಗಿ ಕತ್ತರಿಸಿದರೆ ಏನಾಗುತ್ತದೆ? ಅಸಂಖ್ಯಾತ ಕಾಂತಗಳನ್ನು ಒಂದೇ ದಿಕ್ಕಿನಲ್ಲಿ ಜೋಡಿಸಿದರೆ ಅವುಗಳ ವಿಜಾತಿ ಧೃವವನ್ನು ಆಕರ್ಷಿಸುವ ಗುಣ ಏನಾಗುತ್ತದೆ? ಮಿಂಚಿನಲ್ಲಿರುವ ವಿದ್ಯುತ್ತಿಗೂ ಕಂಬದಲ್ಲಿರುವ ವಿದ್ಯುತ್ತಿಗೂ ಏನು ವ್ಯತ್ಯಾಸ? ಮಿಂಚಿನಲ್ಲಿ ವಿದ್ಯುತ್ ಹೇಗೆ ಪ್ರವಹಿಸುತ್ತದೆ?- ಆಯಿಷಾಳ ಇಂಥ ಪ್ರಶ್ನೆಗಳು ಶಿಕ್ಷಕರನ್ನು ದಿಗ್ಭ್ರಾಂತಗೊಳಿಸುತ್ತಿದ್ದುದೂ ಸಹಜವೆ. ಏಕೆಂದರೆ ಶಿಕ್ಷಕರೇನು ವಿಜ್ಞಾನಿಗಳಲ್ಲ, ಸಂಶೋಧಕರಲ್ಲ. ಮಕ್ಕಳು ತಮ್ಮ ಕುತೂಹಲವನ್ನು ವ್ಯಕ್ತಪಡಿಸುವ ರೀತಿ ಪಾಲಕರಿಗಾಗಲಿ, ಶಿಕ್ಷಕರಿಗಾಗಲಿ ಅತಿ ಎನಿಸಬಾರದು. ಶಿಕ್ಷಕರು ಆಯಿಷಾಳಂಥ ಅತಿ ಬುದ್ಧಿವಂತ ಮಕ್ಕಳು ಕೇಳುವ ಪ್ರಶ್ನೆಗಳನ್ನು ಸವಾಲು ಎಂದುಕೊಳ್ಳದೆ ಮಕ್ಕಳೊಂದಿಗೆ ಸೌಮ್ಯವಾಗಿ ವರ್ತಿಸಿ ಅವರನ್ನು ಸೌಮ್ಯವಾಗಿಸಬೇಕು. `ಕುತೂಹಲ ಆವಿಷ್ಕಾರದ ತಾಯಿ' ಎಂಬ ಜಾಗತಿಕ ಸತ್ಯದ ಬೆಳಕಿನಲ್ಲಿ, ಮಕ್ಕಳಲ್ಲಿ ಕುತೂಹಲ ಇರಬೇಕು. ಕುತೂಹಲ ಹುಟ್ಟುವಂತೆ ಮಾಡಬೇಕು ಮತ್ತು ಅವರ ಕುತೂಹಲವನ್ನು ಜ್ಞಾನದಾಹದ ಭಾಗವೆಂದು ತಿಳಿದು ಸಸ್ಯಗಳಿಗೆ ನೀರುಣಿಸುವಂತೆ ತಣಿಸಬೇಕು. ಮಕ್ಕಳ ಕಲಿಕೆಯಲ್ಲಿ ಕುತೂಹಲ ವಿಟಮಿನ್ ಇದ್ದಂತೆ. ಆದರೆ ಮಕ್ಕಳಲ್ಲಿನ ಕುತೂಹಲಕ್ಕೆ ಎಲ್ಲ ಸಂದರ್ಭಗಳೂ ಅನುಕೂಲಕರ ಆಗಿರುವುದಿಲ್ಲ. ಮಕ್ಕಳು ತಮ್ಮ ಕುತೂಹಲವನ್ನು ವ್ಯಕ್ತಪಡಿಸುವ ರೀತಿಯಲ್ಲಿ ಹುಡುಕುವಿಕೆ, ಮೊರೆ ಮತ್ತು ನಯ ವಿನಯ ಇರಬೇಕೇ ವಿನಃ ಸವಾಲಿರಬಾರದು. ಮಕ್ಕಳು ಸವಾಲಿನಂತೆ ಕೇಳುವ ಪ್ರಶ್ನೆಗಳು ಶಿಕ್ಷಕರಿಗೂ ಸವಾಲಾಗುತ್ತವೆ. ಆಯಿಷಾಳ ಪ್ರಕರಣದಲ್ಲಿ ಆದದ್ದೂ ಇದೇ. ಆಯಿಷಾ ಕೇಳಿದ ಪ್ರಶ್ನೆಗಳು ಶಿಕ್ಷಕರನ್ನು ಕೆರಳಿಸಿದವು. ಅವಳು ಶಿಕ್ಷಕರು ನೀಡಿದ ಶಿಕ್ಷೆಗೆ ಗುರಿಯಾಗಿ ನೊಂದುಕೊಂಡಿದ್ದಳು. ಅಷ್ಟಕ್ಕೇ ತನ್ನಂಥವರಿಗೆ ಈ ಜಗತ್ತಿನಲ್ಲಿ ಬೆಲೆ ಇಲ್ಲ ಎಂದೇಕೆ ಭಾವಿಸಿ ವ್ಯಥೆಪಟ್ಟುಕೊಳ್ಳಬೇಕಿತ್ತು? ಇಲ್ಲಿ ತನ್ನಂಥವಳು ಎಂದರೆ ಅತಿ ಬುದ್ಧಿವಂತೆ ಎಂದಲ್ಲವೆ? ಅವಳು ನೈಟ್ರಸ್ ಆಕ್ಸೈಡ್ ಮತ್ತು ಎಥೆನಾಲ್ ಮಿಶ್ರಣವನ್ನು ಕಪ್ಪೆಗೆ ಚುಚ್ಚಿ ಪ್ರಯೋಗ ಮಾಡಿ ಅದರಿಂದ ಕಪ್ಪೆ ಮರಗಟ್ಟಿದ್ದನ್ನು ಖಚಿತಪಡಿಸಿಕೊಂಡು ಅದೇ ಪ್ರಯೋಗವನ್ನು ತನ್ನ ಮೇಲೂ ಮಾಡಿಕೊಂಡಿದ್ದು ಸರಿಯೇ? ಅತಿ ಬುದ್ಧಿವಂತಿಕೆ, ಅತಿ ಜಾಣತನ ಎಲ್ಲ ಸಂದರ್ಭಗಳಲ್ಲೂ ಅಪಾಯಕಾರಿಯೇ. ತಮ್ಮ ಮಕ್ಕಳು ಅತಿ ಬುದ್ಧಿವಂತರಾಗಬೇಕೆಂದು ಪಾಲಕರು ಬಯಸುತ್ತಾರೆ. ಅತಿ ಬುದ್ಧಿವಂತಿಕೆ ಇದ್ದರೆ ಶೇಕಡಾ ನೂರರಷ್ಟು ಅಂಕಗಳು. ಬಹುತೇಕ ಪಾಲಕರು ಮಕ್ಕಳ ಯಶಸ್ಸನ್ನು ಅಳೆಯುವುದು ಅಂಕಗಳ ಆಧಾರದ ಮೇಲೆಯೇ ಅಲ್ಲವೇ? ಆದರೆ ವಯಸ್ಸಿಗೆ ಮೀರಿದ ಬುದ್ಧಿವಂತಿಕೆ ಮಕ್ಕಳಲ್ಲಿ ಆವೇಗವನ್ನು ಹೆಚ್ಚಿಸಿ ಅವರ ವ್ಯಕ್ತಿತ್ವಕ್ಕೆ ಮಾರಕವಾಗುತ್ತದೆ. ತಂದೆ ತಾಯಿ ತಮ್ಮ ಮಕ್ಕಳ ಐ.ಕ್ಯು ಬಗ್ಗೆ ತುಂಬಾ ಜಾಗರೂಕರಾಗಿರುತ್ತಾರೆ. ಐ.ಕ್ಯು ಮಟ್ಟ ಹೆಚ್ಚಿದ್ದರೆ ಹಿಗ್ಗು, ಹೆಮ್ಮೆ, ಕಮ್ಮಿಯಿದ್ದರೆ ಕೊರಗು, ನಿರಾಶೆ. ಐ.ಕ್ಯು ಮಟ್ಟ ಕಡಿಮೆ ಇರುವ ಮಕ್ಕಳ ತಂದೆ ತಾಯಿಗಳು ಐ.ಕ್ಯು ಮಟ್ಟವನ್ನು ಹೆಚ್ಚಿಸಲು ನವನವೀನ ಉಪಾಯಗಳನ್ನು ಅನುಸರಿಸುತ್ತಾರೆ. ಆಯಿಷಾಳ ತಂದೆ ತಾಯಿಗಳೂ ಹಾಗೇ ಇದ್ದರೇನೋ! ಮಕ್ಕಳಲ್ಲಿನ ಅತಿ ಬುದ್ಧಿವಂತಿಕೆಯನ್ನು ಪಾಲಕರು ಪ್ರೀತಿ ಮತ್ತು ಹೆಮ್ಮೆಯಿಂದ ಮೆಚ್ಚಿಕೊಳ್ಳಬಹುದು. ಆದರೆ ಶಿಕ್ಷಕರೇಕೆ ಮೆಚ್ಚಿಕೊಂಡಾರು? ಈ ಸೂಕ್ಷ್ಮದ ಅರಿವು ಆಯಿಷಾಳಿಗೆ ಇರಲಿಲ್ಲ. ಅದು ಅವಳ ತಪ್ಪಲ್ಲ, ಅವಳಿಗೆ ಆ ಅರಿವು ಮೂಡಿಸದ ಅವಳ ತಂದೆ ತಾಯಿಯ ತಪ್ಪು. ಹತ್ತನೇ ತರಗತಿಯ ವಿದ್ಯಾರ್ಥಿನಿಯಾದ ಅವಳಲ್ಲಿ ಸೋಲು ಗೆಲುವಿನ ಪ್ರಶ್ನೆ ಏಕೆ ಬರಬೇಕಿತ್ತು? ತರಗತಿಯಲ್ಲಿ ಎಲ್ಲರಿಗಿಂತ ತಾನೇ ಜಾಣೆ ಎನಿಸಿಕೊಳ್ಳಬೇಕೆಂಬ ಅವಳ ಅಸಹಜ, ಅಸಾಮಾನ್ಯ ಹಂಬಲ ಅವಳನ್ನು ಅಪಾಯದ ಕಡೆಗೆ ಹೆಜ್ಜೆ ಇಡಿಸಿರಬಹುದು. ತಾನು ಸತ್ತರೂ ಚಿಂತೆ ಇಲ್ಲ, ತನಗೆ ಶಿಕ್ಷೆ ನೀಡಿದ ಶಿಕ್ಷಕರನ್ನು ಕಟಕಟೆಯಲ್ಲಿ ನಿಲ್ಲಿಸಬೇಕೆಂಬ ಹುಚ್ಚು ಆವೇಶಕ್ಕೆ ಆಯಿಷಾ ಬಲಿಯಾದಳು ಎನಿಸುತ್ತದೆ. ಇಲ್ಲಿ (ಆಯಿಷಾ ಪ್ರಕರಣದಲ್ಲಿ) ಆಯಿಷಾ ಅಸಾಮಾನ್ಯ ಪ್ರಶ್ನೆಗಳನ್ನು ಕೇಳಿದ್ದು, ಶಿಕ್ಷಕರು ನೀಡುತ್ತಿದ್ದ ಶಿಕ್ಷೆಯಿಂದ ನೊಂದುಕೊಂಡು ಕಪ್ಪೆಯ ಮೇಲೆ ಮಾಡಿದ ಪ್ರಯೋಗವನ್ನು ತನ್ನ ಮೇಲೆ ಮಾಡಿಕೊಂಡಿದ್ದು ಗಂಭೀರ ಎನಿಸಿ, ಶಿಕ್ಷಕರು ನೀಡುತ್ತಿದ್ದ ಶಿಕ್ಷೆ ಗೌಣ ಎನಿಸುತ್ತದೆ. ಏಕೆಂದರೆ ಸ್ವಾಮಿ ವಿವೇಕಾನಂದ, ಮಹಾತ್ಮಗಾಂಧಿ, ಡಾ. ರಾಧಾಕೃಷ್ಣನ್‌ರಂಥ ಶೈಕ್ಷಣಿಕ ಚಿಂತಕರ ಪ್ರಕಾರ, ವ್ಯಕ್ತಿತ್ವ ವಿಕಸನವೇ ಶಿಕ್ಷಣದ ಉದ್ದೇಶ. ವ್ಯಕ್ತಿತ್ವ ವಿಕಸನ ಪ್ರಕ್ರಿಯೆ ಆರಂಭವಾಗುವುದು ಶಾಲೆಯಿಂದಲ್ಲ; ಮನೆಯಿಂದ. ಆಯಿಷಾ ಎಲ್ಲರಿಗಿಂತ ತಾನೇ ಜಾಣೆ ಎನಿಸಿಕೊಳ್ಳಬೇಕೆಂಬ ಹುಚ್ಚು ಹಂಬಲಕ್ಕೆ ಬೀಳದಿದ್ದರೆ ಅನಾಹುತ ಆಗುತ್ತಿರಲಿಲ್ಲ. ಆಯಿಷಾಳಂತೆ ಎಲ್ಲರಿಗಿಂತ ತಾನೇ ಬುದ್ಧಿವಂತ/ ಬುದ್ಧಿವಂತೆ ಎನಿಸಿಕೊಳ್ಳಬೇಕೆಂಬ ಮಕ್ಕಳ ಮತ್ತು ತಮ್ಮ ಮಕ್ಕಳು ಅತಿ ಬುದ್ಧಿವಂತರಾಗಬೇಕೆಂದು ಬಯಸುವ ಈ ಕಾಲದ ತಂದೆ ತಾಯಿಗಳ ಮನೋವೇಗವನ್ನು ಕಲ್ಪಿಸಿಕೊಂಡರೆ, ನಾಗಾಲೋಟದ ಕುದುರೆಗಳ ಚಿತ್ರ ಕಣ್ಮುಂದೆ ಬರುತ್ತದೆ. ಆ ಕುದುರೆಗಳಿಗೆ ಓಡುವುದೊಂದೇ ಗೊತ್ತಿರುತ್ತದೆ, ಮುಟ್ಟಬೇಕಾದ ಗುರಿ ಗೊತ್ತಿರುವುದಿಲ್ಲ. ಇನ್ನಾದರೂ ತಂದೆ ತಾಯಿ ಮಕ್ಕಳನ್ನು ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಒಂದು ಕ್ಲುಪ್ತ ಮಟ್ಟದಲ್ಲಿ (ನಾರ್ಮಲ್ ಲೆವೆಲ್) ಬೆಳೆಸಬೇಕು. ಅಂಥ ಪಾಠವನ್ನು ಆಯಿಷಾ ಪ್ರಕರಣದಿಂದ ಕಲಿಯಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.