ಯಕ್ಷಗಾನ ಶಾಲೆಯಲ್ಲಿ ಸಂಚಲನ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆ ಶಿಕ್ಷಣದ ಉದ್ದೇಶ. ಪಠ್ಯ ಚಟುವಟಿಕೆ ಶೈಕ್ಷಣಿಕ ಸಾಧನೆಗೆ ಪೂರಕವಾದರೆ, ಪಠ್ಯೇತರ ಚಟುವಟಿಕೆಗಳ ಮೂಲಕ ವಿದ್ಯಾರ್ಥಿ ತನ್ನ ವ್ಯಕ್ತಿತ್ವ ರೂಪಿಸಿಕೊಳ್ಳಲು ಮತ್ತು ಶೈಕ್ಷಣಿಕ ಕ್ಷೇತ್ರದಿಂದಾಚೆ ಮಹತ್ವದ್ದನ್ನು ಸಾಧಿಸಲು ಸಾಧ್ಯ. ಪುಸ್ತಕದ ಜ್ಞಾನದ ಜೊತೆಗೆ ಈ ನೆಲದ ಕಲೆ- ಸಂಸ್ಕೃತಿಯ ಅರಿವು ಸಹ ಮಕ್ಕಳಿಗಿದ್ದರೆ ಕಲೆ ಉಳಿಯುತ್ತದೆ, ಅಲ್ಲದೆ ಮುಂದಿನ ಜನಾಂಗಕ್ಕೂ ಅದನ್ನು ದಾಟಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಉಡುಪಿಯ ಯಕ್ಷಗಾನ ಕಲಾರಂಗ ಸಂಸ್ಥೆಯ ಯಕ್ಷ ಶಿಕ್ಷಣ ಟ್ರಸ್ಟ್ ಕಾರ್ಯೋನ್ಮುಖವಾಗಿದೆ. ಪುಸ್ತಕದ ಪಾಠ ಮಾತ್ರವಲ್ಲದೆ ಕರಾವಳಿ ಸಂಸ್ಕೃತಿಯ ಪ್ರತೀಕ ಮತ್ತು ಹೆಗ್ಗುರುತಾದ ಯಕ್ಷಗಾನ ಕಲೆಯನ್ನು ಪರಿಸರದ ಮಗು ಕಲಿಯಬೇಕು ಎಂಬ ಕಾರಣಕ್ಕೆ ಉಡುಪಿ ತಾಲ್ಲೂಕಿನ ಸಾವಿರಾರು ಮಕ್ಕಳಿಗೆ ಶಾಲೆಯಲ್ಲೇ ಯಕ್ಷಗಾನ ಶಿಕ್ಷಣವನ್ನು ಕಲಾರಂಗ ನೀಡುತ್ತಿದೆ. ವಿಶಿಷ್ಟ ಕಲೆ, ಗಂಡು ಕಲೆ, ಕರಾವಳಿ ಕಲೆ ಎಂದು ಗುರುತಿಸಿಕೊಳ್ಳುವ ಯಕ್ಷಗಾನವನ್ನು ಈ ಭಾಗದ ಸಾವಿರಾರು ಮಕ್ಕಳು ಕಲಿಯುತ್ತಿದ್ದಾರೆ. ಪ್ರತಿ ಶಾಲೆಯ ಆಸಕ್ತ ಮಕ್ಕಳಿಗೆ ಯಕ್ಷಗಾನ ಕಲಿಸುವ ಕಾಯಕ ಆರು ವರ್ಷಗಳಿಂದಲೂ ನಡೆಯುತ್ತಿದೆ. ಈಗಾಗಲೇ ಸುಮಾರು ಆರು ಸಾವಿರಕ್ಕೂ ಅಧಿಕ ಮಕ್ಕಳು ಪಾಠದ ಜೊತೆ ಯಕ್ಷಗಾನವನ್ನೂ ಕಲಿತಿದ್ದಾರೆ. ಕಲೆಯನ್ನು ವೃತ್ತಿಯಾಗಿಸಿಕೊಳ್ಳಲು ಮತ್ತು ವೃತ್ತಿ ಬೇರೆಯದಾದರೂ ಪ್ರವೃತ್ತಿಯಾಗಿ ಉಳಿಸಿಕೊಳ್ಳಲು ಮಕ್ಕಳಿಗೆ ಈ ಮೂಲಕ ಸುವರ್ಣ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಉಚಿತವಾಗಿ ತರಬೇತಿ ನೀಡುವುದರಿಂದ ಆಸಕ್ತರು ಯಾವುದೇ ಅಡ್ಡಿ ಆತಂಕ ಇಲ್ಲದೆ ಯಕ್ಷಗಾನ ಕಲಿಯಲು ಅನುಕೂಲವಾಗಿದೆ. ಯೋಜನೆಯ ಬೀಜಾಂಕುರ ಮಕ್ಕಳಿಗೆ ಯಕ್ಷಗಾನ ಕಲಿಸಬೇಕು, ಅದರಲ್ಲೂ ಶಾಲೆಯಲ್ಲೇ ತರಬೇತಿ ನೀಡಬೇಕು ಎಂಬ ಯೋಚನೆ ಬಂದದ್ದು 2007ರ ಫೆಬ್ರುವರಿ ತಿಂಗಳಲ್ಲಿ. ಕಲಾರಂಗದ ಅನೌಪಚಾರಿಕ ಸಭೆಯಲ್ಲಿ. ಯಕ್ಷ ಶಿಕ್ಷಣ ಟ್ರಸ್ಟ್ ಆರಂಭಿಸಿ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡಬೇಕು ಎಂದು ಆಗ ನಿರ್ಧರಿಸಲಾಯಿತು. ಒಂಬತ್ತು ಮಂದಿಯನ್ನು ಒಳಗೊಂಡ ವಿಶ್ವಸ್ಥ ಮಂಡಳಿಯನ್ನು ರಚಿಸಲಾಯಿತು. ಉಡುಪಿ ಮತ್ತು ಆಸುಪಾಸಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮಕ್ಕಳಿಗೆ ಅನುಭವಿ ಕಲಾವಿದರಿಂದ ಯಕ್ಷಗಾನ ತರಬೇತಿ ಕೊಡಿಸುವ ತೀರ್ಮಾನಕ್ಕೆ ಬರಲಾಯಿತು. ಇಂತಹ ಚಿಂತನೆಯನ್ನು ವ್ಯಕ್ತಪಡಿಸಿದ ಶಾಸಕ ಕೆ. ರಘುಪತಿ ಭಟ್ ಅವರನ್ನೇ ಟ್ರಸ್ಟ್‌ಗೆ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಪರ್ಯಾಯ ಪೀಠಾಧಿಪತಿಗಳು ಗೌರವ ಅಧ್ಯಕ್ಷರಾಗಿರುತ್ತಾರೆ. ಸೋದೆ ವಾದಿರಾಜ ಮಠದ ವಿಶ್ವವಲ್ಲಭ ಸ್ವಾಮೀಜಿ ಈಗಿನ ಗೌರವ ಅಧ್ಯಕ್ಷರು. ಸ್ಥಳೀಯ ಕಲೆ ಇರಲಿ ಅಥವಾ ರಾಜ್ಯದ ಇತರ ಯಾವುದೇ ಕಲೆ ಆಗಿರಲಿ ಅದನ್ನು ಮಕ್ಕಳಿಗೆ ಹೇಳಿಕೊಡುವಂತಹ ಯೋಜನೆ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಇಲ್ಲ. ಆದ್ದರಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಮುಖ್ಯೋಪಾಧ್ಯಾಯರ ಅನುಮತಿ ಪಡೆಯಲಾಗಿದೆ. ಅಲ್ಲದೆ ಸರ್ಕಾರದಿಂದ ಆಕ್ಷೇಪ ಬರಬಾರದು ಎಂಬ ಕಾರಣಕ್ಕೆ ಅಲ್ಲಿಂದ ನಿರಾಕ್ಷೇಪಣೆಯನ್ನೂ ಪಡೆದುಕೊಳ್ಳಲಾಗಿದೆ. ತರಬೇತಿ ಹೇಗೆ? ಶಿಕ್ಷಕರು ಬಿಡುವಿನ ವೇಳೆಯ ಬಗ್ಗೆ ಟ್ರಸ್ಟ್‌ಗೆ ಮೊದಲೇ ಮಾಹಿತಿ ನೀಡಿರುತ್ತಾರೆ. ವಾರದಲ್ಲಿ ಎರಡು ದಿನ ಒಂದೂವರೆ ಗಂಟೆ ಅವಧಿಯ ತರಬೇತಿ ನಡೆಯುತ್ತದೆ. ಒಟ್ಟು 48 ಶಾಲೆಗಳ 1500ಕ್ಕೂ ಅಧಿಕ ಮಕ್ಕಳು ಯಕ್ಷಗಾನ ತರಬೇತಿ ಪಡೆಯುತ್ತಿದ್ದಾರೆ. ಸುಮಾರು 24 ಮಂದಿ ಯಕ್ಷಗಾನ ಅನುಭವಿಗಳು ಗುರುಗಳಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಗೌರವ ಸಂಭಾವನೆಯನ್ನು ನೀಡಲಾಗುತ್ತಿದೆ. ಬರೀ ತರಬೇತಿ ನೀಡಿದರೆ ಸಾಕೇ, ಅವರ ಪ್ರತಿಭಾ ಸಾಮರ್ಥ್ಯ ಪ್ರದರ್ಶಿಸಲು ಅವಕಾಶ ಇಲ್ಲದಿದ್ದರೆ? ಇದಕ್ಕೂ ಉಪಾಯ ಕಂಡುಕೊಳ್ಳಲಾಗಿದೆ. ಪ್ರತಿ ವರ್ಷ ಮಕ್ಕಳ ಯಕ್ಷಗಾನ ಪ್ರದರ್ಶನವನ್ನು ಸರಣಿ ಕಾರ್ಯಕ್ರಮವಾಗಿ ಏರ್ಪಡಿಸಲಾಗುತ್ತದೆ. ಉಡುಪಿಯ ರಾಜಾಂಗಣ ಮತ್ತು ಬ್ರಹ್ಮಾವರದಲ್ಲಿ ಈ ಪ್ರದರ್ಶನಗಳು ನಡೆಯುತ್ತಿವೆ. ಉಡುಪಿ ರಾಜಾಂಗಣದಲ್ಲಿ ಪ್ರದರ್ಶನ ನೀಡಬೇಕು ಎಂಬ ಬಯಕೆ ಪ್ರಸಿದ್ಧ ಕಲಾವಿದರಲ್ಲಿಯೂ ಇರುತ್ತದೆ. ಘನತೆಯ ಪ್ರತೀಕ ಎನಿಸಿರುವ ಈ ರಾಜಾಂಗಣದಲ್ಲಿ ಕಲೆ ಪ್ರದರ್ಶಿಸಿ ಸೈ ಎನಿಸಿಕೊಂಡರೆ ಅವರು ಎಲ್ಲಿಯೂ ಜನ ಮನ್ನಣೆಗೆ ಪಾತ್ರರಾಗುತ್ತಾರೆ ಎಂಬ ನಂಬಿಕೆ ಬಹಳ ಕಾಲದಿಂದಲೂ ಇದೆ. ಇಂತಹ ವೇದಿಕೆಯಲ್ಲಿ ಮಕ್ಕಳಿಗೆ ಪ್ರದರ್ಶನಕ್ಕೆ ಅವಕಾಶ ನೀಡುವುದರಿಂದ ಅವರ ಆತ್ಮವಿಶ್ವಾಸ ಇಮ್ಮಡಿಗೊಳ್ಳುತ್ತದೆ. ಪಠ್ಯ ಶಿಕ್ಷಣಕ್ಕೂ ಪೂರಕ ಉಡುಪಿ ತಾಲ್ಲೂಕಿನ ಶಾಲೆಗಳಲ್ಲಿ ಅತ್ಯಧಿಕ ಅಂಕ ಗಳಿಸಿರುವ ಬಹುತೇಕ ವಿದ್ಯಾರ್ಥಿಗಳು ಯಕ್ಷಗಾನ ಶಿಕ್ಷಣ ಪಡೆದವರು. ಅತ್ಯಧಿಕ ಅಂಕ ಗಳಿಸಿದವರು ತಮ್ಮ ಸಾಧನೆಗೆ ಯಕ್ಷಗಾನ ಕಲಿಕೆ ಪೂರಕವಾದ ಬಗ್ಗೆ ಹೇಳಿದ್ದಾರೆ. 'ಯಕ್ಷಗಾನದ ವಿದ್ಯಾರ್ಥಿಗಳಾಗಿರುವ ಮಕ್ಕಳು ಶೈಕ್ಷಣಿಕವಾಗಿಯೂ ಅತ್ಯುತ್ತಮ ಸಾಧನೆ ಮಾಡುತ್ತಿರುವುದನ್ನು ನಾವು ಗಮನಿಸಿದ್ದೇವೆ. ಮಕ್ಕಳಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸ ಬೆಳೆಸುವಲ್ಲಿ ಯಕ್ಷಗಾನ ತರಬೇತಿ ಮುಖ್ಯ ಪಾತ್ರ ವಹಿಸುತ್ತಿರುವುದು ಸಂತಸ ತಂದಿದೆ. ಕೇವಲ ಪಾಠ ಪ್ರವಚನಗಳಿಗೆ ಸಮಯ ಮೀಸಲಿಟ್ಟರೆ ಸಾಧನೆ ಸಾಧ್ಯ ಎಂದು ಭಾವಿಸುವ ಪೋಷಕರಿಗೂ ಇದೊಂದು ಸಂದೇಶ' ಎಂದು ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಅಭಿಪ್ರಾಯಪಡುತ್ತಾರೆ. `ಜಾತಿ, ಧರ್ಮ, ಪ್ರಾಂತ್ಯ ಭೇದವಿಲ್ಲದೆ ಯಕ್ಷಗಾನ ಪಸರಿಸುತ್ತಿರುವುದು ಇನ್ನೊಂದು ಗಮನಾರ್ಹವಾದ ಬೆಳವಣಿಗೆ. ಶಾಲೆಗಳಲ್ಲಿ ಎಲ್ಲ ಜಾತಿ- ಧರ್ಮದ ಮಕ್ಕಳಿದ್ದಾರೆ. ಅಲ್ಲದೆ ರಾಜ್ಯದ ಮೂಲೆ ಮೂಲೆಗಳಿಂದ ಬಂದು ಇಲ್ಲಿ ಕಲಿಯುತ್ತಿರುವವರ ಸಂಖ್ಯೆಯೂ ದೊಡ್ಡದಿದೆ. ಕ್ರೈಸ್ತರು, ಮುಸ್ಲಿಂ ಧರ್ಮದವರೂ ಕಲೆಯ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ. ಸಾಮಾಜಿಕವಾಗಿಯೂ ಇದು ಸಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂಬುದಕ್ಕೆ ಇದೇ ಸಾಕ್ಷಿ. ಯಕ್ಷಗಾನ ಕಲಿಯುವ ಮಕ್ಕಳಲ್ಲಿ ಶೇ 50ರಷ್ಟು ಬಾಲಕಿಯರು ಎಂಬುದು ಸಹ ಅಷ್ಟೇ ಮುಖ್ಯವಾಗಿ ಗಮನಿಸಬೇಕಾದ ಅಂಶ' ಎಂದು ಅವರು ಹೇಳುತ್ತಾರೆ. ಉತ್ತಮ ಅವಕಾಶ ಎಳೆಯ ವಯಸ್ಸಿನಲ್ಲೇ ಕಲೆಯ ಸಂಪರ್ಕ ಬೆಳೆಸಲು ಟ್ರಸ್ಟ್ ಮಕ್ಕಳಿಗೆ ಸಹಕಾರಿಯಾಗಿದೆ. ಯಕ್ಷಗಾನ ಕಲಿತ ನಾಲ್ವರು ವಿದ್ಯಾರ್ಥಿಗಳಿಗೆ ರಾಜ್ಯದ ಪ್ರಸಿದ್ಧ ಆಳ್ವಾಸ್ ಶಾಲೆಯಲ್ಲಿ ಉಚಿತವಾಗಿ ಪ್ರವೇಶ ನೀಡಲಾಗಿದೆ.ಪ್ರತಿ ವರ್ಷ ಸುಮಾರು 20 ಲಕ್ಷ ರೂಪಾಯಿ ಮಕ್ಕಳ ಯಕ್ಷ ಶಿಕ್ಷಣಕ್ಕೆ ಖರ್ಚಾಗುತ್ತಿದೆ. ಕಲಾರಂಗ ದಾನಿಗಳ ಮೂಲಕ ಹಣವನ್ನು ಸಂಗ್ರಹಿಸಿ ಸರಿದೂಗಿಸುತ್ತಿದೆ. ಶಾಸಕರೇ ಅಧ್ಯಕ್ಷರಾಗಿರುವುದರಿಂದ ಹಣ ಸಂಗ್ರಹಣೆಗೆ ಸಹಕಾರಿಯಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.