ಇಳಿಜಾರು ಮೇಜಿನಲ್ಲಿ ಬರೆಯಿರಿ ಕೆಲವು ವರ್ಷಗಳ ಹಿಂದೆ ಕಾರವಾರಕ್ಕೆ ಹೊಸದಾಗಿ ಬಂದ ಜಿಲ್ಲಾಧಿಕಾರಿ ತಮ್ಮ ಚೇಂಬರ್‌ನಲ್ಲಿ ಒಂದು ಬದಲಾವಣೆ ಮಾಡಿಸಿದರು. ತಮ್ಮ ಸೀಟಿನ ಮುಂದಿದ್ದ ಟೇಬಲ್ ಮೇಲೆ ಒಂದು ಇಳಿಜಾರಾದ ಪ್ಲೈವುಡ್‌ನ ಪ್ಯಾಡ್ ಇರುವಂತೆ ವ್ಯವಸ್ಥೆ ಮಾಡಿಸಿದರು. ಅದು ಏಕೆ ಎಂದು ಕುತೂಹಲದಿಂದ ಪ್ರಶ್ನಿಸಿದವರಿಗೆ ಅವರು ಹೇಳಿದರು `ನನಗೆ ಸ್ವಲ್ಪ ಬೆನ್ನು ನೋವು ಮತ್ತು ಸ್ಪಾಂಡಿಲೈಟಿಸ್ ಇದೆ. ಡಾಕ್ಟರ ಸಲಹೆ ಮೇರೆಗೆ ಈ ಬದಲಾವಣೆ ಮಾಡಿಸಿದ್ದೇನೆ'. ನನ್ನ ವಿದ್ಯಾರ್ಥಿಯೊಬ್ಬ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಪಿ.ಯು.ಸಿ ಓದುತ್ತಿದ್ದ. ಅವನಿಗೆ ಕುತ್ತಿಗೆ ಮತ್ತು ಬೆನ್ನು ಸೇರುವ ಕಡೆ ವಿಪರೀತ ನೋಯುತ್ತಿತ್ತು. ತಜ್ಞ ವೈದ್ಯರ ಬಳಿ ಹೋದಾಗ ಅವರು, ಓದಲು, ಬರೆಯಲು ಅವನು ಹೇಗೆ ಕೂಡುವನೆಂದು ವಿಚಾರಿಸಿದರು. ಅವನು ಹಾಸ್ಟೆಲಿನಲ್ಲಿ ಮಂಚದ ಮೇಲೆ ಕುಳಿತು ಪುಸ್ತಕವನ್ನು ಅದರ ಮೇಲಿಟ್ಟು ಓದುತ್ತಿದ್ದ. ಅವನ ಬರೆಯುವ ಭಂಗಿಗಳಂತೂ ವಿವಿಧವಾಗಿದ್ದವು. ವೈದ್ಯರು ಅವನಿಗೆ ಲಘು ನೋವು ನಿವಾರಕ ಔಷಧಿಗಳನ್ನು ನೀಡಿ ಹೇಳಿದರು `ತಲೆಗೂ ವಿಶ್ರಾಂತಿ ಸಿಗುವಂತೆ ಹಿಂಭಾಗ ಎತ್ತರವಾಗಿರುವ ಕುರ್ಚಿಯಲ್ಲಿ ಕುಳಿತು ಓದು. ಸಾಧ್ಯವಾದರೆ ಬರೆಯಲು ಡೆಸ್ಕ್ ಉಪಯೋಗಿಸು. ದೀರ್ಘಕಾಲ ತಲೆಯನ್ನು ಬಗ್ಗಿಸಿರಬೇಡ'. ನಾವು ಟೇಬಲ್ ಮೇಲೆ ಪುಸ್ತಕ ಇಟ್ಟು ಬರೆಯುವಾಗಲೂ ಕುತ್ತಿಗೆಯನ್ನು ಅಗತ್ಯಕ್ಕಿಂತ ಹೆಚ್ಚು ಬಾಗಿಸುತ್ತೇವೆ. ಪುಸ್ತಕಕ್ಕೆ ನಮ್ಮ ದೃಷ್ಟಿಯು ಲಂಬವಾಗಿರಲಿ (ಪರ್ಪೆಂಡಿಕ್ಯುಲಾರ್) ಎಂಬುದೇ ನಮ್ಮ ಉದ್ದೇಶ. ಏಕೆಂದರೆ ಅದೇ ಸಹಜವಾದ ಸ್ಥಿತಿ. ಆದರೆ ಹೀಗೆ ಮಾಡಿದಾಗ ನಮ್ಮ ಇಡೀ ತಲೆಬುರುಡೆಯ ಭಾರ ಮೃದುವಾದ ಕುತ್ತಿಗೆಯ ಮೇಲೆ ಬೀಳುತ್ತದೆ. ಒಂದೇ ಸಮನೆ ಅದರ ಮೇಲಾಗುವ ಶ್ರಮದಿಂದಾಗಿ ಬೆನ್ನುನೋವು ಬರುವ ಸಾಧ್ಯತೆ ಇರುತ್ತದೆ. ಸ್ಪಾಂಡಿಲೈಟಿಸ್ ಅಥವಾ ಬೆನ್ನು ನೋವು ಯಾರಿಗೂ ಇದ್ದಕ್ಕಿದ್ದಂತೆ ಬರುವುದಿಲ್ಲ. ನಾವು ಕುಳಿತುಕೊಳ್ಳುವ ರೀತಿ, ದೇಹದ ಸ್ಥಿತಿ ಇವುಗಳಿಂದ ನಿಧಾನವಾಗಿ ಅದು ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಚಿಕ್ಕಂದಿನಿಂದಲೇ ಸರಿಯಾದ ಕ್ರಮ ಅನುಸರಿಸದಿದ್ದರೆ ಮುಂದೆ ಸಮಸ್ಯೆಗಳಿಗೆ ಆಹ್ವಾನ ನೀಡಿದಂತೆ ಆಗುತ್ತದೆ. ಈಗಂತೂ 12-15 ವರ್ಷದ ಮಕ್ಕಳೇ ಬೆನ್ನು ನೋವು ಎಂದು ಗೋಳಾಡುತ್ತಾರೆ! ನಿಮ್ಮ ಮನೆಯಲ್ಲಿ ಬರೆಯಲು ಟೇಬಲ್ ಇದ್ದರೆ ಅದನ್ನು ಡೆಸ್ಕ್ ಆಗಿ ಪರಿವರ್ತಿಸುವುದು ಸುಲಭ. ಒಂದು ಪ್ಲೈವುಡ್ ಪ್ಯಾಡಿನ ಹಿಂಭಾಗದಲ್ಲಿ ಕೆಳಗೆ ಮರದ ತುಂಡೊಂದನ್ನು ಇಟ್ಟರೆ ಡೆಸ್ಕ್ ರೆಡಿ. ಈ ಸಲಹೆಯನ್ನು ನಾನು ಕಚೇರಿಯಲ್ಲಿ ಬರೆಯುವ ಕೆಲಸ ಮಾಡುವ ಅನೇಕರಿಗೆ ನೀಡಿ, ಉತ್ತಮ ಪರಿಣಾಮದ ಪ್ರತಿಕ್ರಿಯೆ ಪಡೆದಿದ್ದೇನೆ. ಹಿಂದೆ ಹಳ್ಳಿಗಳಲ್ಲಿ ಶ್ಯಾನುಭೋಗರು ಬರೆಯಲು ನೆಲದ ಮೇಲೆ ಇಡಬಹುದಾದ ಡೆಸ್ಕ್ ಅನ್ನು ಉಪಯೋಗಿಸುತ್ತಿದ್ದರು. (ಚಿತ್ರ 1 ನೋಡಿ) ಅದರ ಮೇಲ್ಮೈ ಇಳಿಜಾರಾಗಿ ಇರುತ್ತಿತ್ತು. ಕಂಪ್ಯೂಟರ್ ಹೋಗಲಿ, ಟೈಪ್‌ರೈಟರ್ ಕೂಡ ಇಲ್ಲದ ಆಗಿನ ಕಾಲದಲ್ಲಿ ಅವರು ಅತಿ ಹೆಚ್ಚು ಬರೆಯಬೇಕಾಗುತ್ತಿತ್ತು. ಅದನ್ನು ಹೇಗೆ ನಿಭಾಯಿಸುತ್ತಿದ್ದರೋ ನೀವೇ ಯೋಚಿಸಿ. ಎರಡು ವರ್ಷಗಳ ಹಿಂದೆ ನಾನು ಧಾರವಾಡದಲ್ಲಿ ನಡೆದ ಕೈ ಬರಹದ ಕಾರ‌್ಯಾಗಾರಕ್ಕೆ ಹೋಗಿದ್ದೆ. ಅದು ನಡೆದದ್ದು `ಬಾಲ ಬಳಗ' ಎಂಬ ವಿನೂತನ ಶಾಲೆಯಲ್ಲಿ. ಅಲ್ಲಿ ಬಾಲವಾಡಿಯಿಂದ 10ನೇ ತರಗತಿವರೆಗೆ ಪ್ರತಿ ವಿದ್ಯಾರ್ಥಿಗೂ ನೆಲದ ಮೇಲೆ ಕುಳಿತು ಬರೆಯಬಹುದಾದ ಒಂದು ಪ್ರತ್ಯೇಕ ಡೆಸ್ಕ್ ಇದೆ. (ಚಿತ್ರ 2 ನೋಡಿ) ಇಂತಹ ಡೆಸ್ಕನ್ನು ಮನೆಯಲ್ಲಿ ಬರೆಯುವಾಗಲೂ ಮಕ್ಕಳು ಉಪಯೋಗಿಸುವುದರಿಂದ ಅವರ ಬರವಣಿಗೆಯಲ್ಲಿ ಶಿಸ್ತು ಬರುತ್ತದೆ.ಇಡೀ ಜಗತ್ತಿನಾದ್ಯಂತ ಎಲ್ಲ ಶಾಲಾ ಕಾಲೇಜುಗಳಲ್ಲೂ ಡೆಸ್ಕ್‌ಗಳು ಇರುವುದೇಕೆ? ಬರೆಯಲು ಇಳಿಜಾರು ಮೇಲ್ಮೈಯೇ ಸೂಕ್ತ ಎಂದಲ್ಲವೇ? ಮುಂದಿನ ವಾರ: ಉತ್ತಮ ಕೈಬರಹದ ನಾಲ್ಕು ಲಕ್ಷಣಗಳು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.