ಮಕ್ಕಳಿಗೆ ಹಾಕಿ ಸಂಸ್ಕಾರದ ಲಸಿಕೆ `ವಿದ್ಯೆಗೆ ಸಂಸ್ಕಾರ ಬೆರೆತರೆ ಹಾಲಿಗೆ ಜೇನು ಬೆರೆತಂತೆ' ಎಂಬ ಮಾತಿದೆ. ಪದವಿ ಪಡೆದವರೆಲ್ಲ ಸುಶಿಕ್ಷಿತರಲ್ಲ; ಸುಶಿಕ್ಷಿತರೆಲ್ಲ ಸುಸಂಸ್ಕೃತರಾಗಿಯೇ ಇರುತ್ತಾರೆ ಎಂದೇನಿಲ್ಲ. ಶಿಕ್ಷಣ ಮತ್ತು ಸಂಸ್ಕಾರ ಭಿನ್ನ ಭಿನ್ನವಾದ, ಆದರೆ ಒಂದಕ್ಕೊಂದು ಪೂರಕವಾಗಿ ಇರಬೇಕಾದ ಪ್ರಕ್ರಿಯೆಗಳು. ಶಿಕ್ಷಣ ಶಾಲಾ ಕಾಲೇಜುಗಳಿಂದ ಪ್ರಾಪ್ತವಾದರೆ, ಸಂಸ್ಕಾರವು ಉತ್ತಮ ಕೌಟುಂಬಿಕ ಹಿನ್ನೆಲೆಯಿಂದಲೂ, ಸತ್ಸಂಗದಿಂದಲೂ ದೊರೆಯುತ್ತದೆ. ಶಿಕ್ಷಣ ಆಯ್ದ ಕೆಲವೇ ವಿಷಯಗಳ ಬಗೆಗಿನ ಜ್ಞಾನವನ್ನಷ್ಟೇ ಮಕ್ಕಳ ಮನಸ್ಸಿನೊಳಗೆ ತುಂಬಿದರೆ, ಸಂಸ್ಕಾರವು ಗುಣ- ನಡತೆಯನ್ನು, ಪ್ರೀತಿ- ಮೌಲ್ಯವನ್ನು ಅವರ ಹೃದಯದೊಳಗೆ ತುಂಬುತ್ತದೆ. ಗುಣವಂತಿಕೆ, ಹೃದಯವಂತಿಕೆ ಇಲ್ಲದ ಶಿಕ್ಷಣ ಪರಿಮಳ ಇಲ್ಲದ ಹೂವಿನಂತೆ, ಮಾತ್ರವಲ್ಲ ಸಮಾಜಕ್ಕೆ ಹಾಗೂ ಸ್ವಂತಕ್ಕೆ ಅಪಾಯಕಾರಿ ಕೂಡಾ ಆಗಬಹುದು. ಶಾಲಾ ಕಾಲೇಜುಗಳಲ್ಲಿ ಕೆಲವು ವರ್ಷಗಳನ್ನು ಕಳೆದ ಮಾತ್ರಕ್ಕೆ, ಇಲ್ಲವೇ ಪದವಿಗಳನ್ನು ಪಡೆದ ಮಾತ್ರಕ್ಕೆ ಒಬ್ಬ ವ್ಯಕ್ತಿ ಸುಶಿಕ್ಷಿತ ಆಗಿರುತ್ತಾನೆ ಎಂದುಕೊಳ್ಳುವಂತಿಲ್ಲ. ನಿಜವಾದ ಶಿಕ್ಷಣವೆಂದರೆ ಒಬ್ಬ ಸಾಮಾನ್ಯ ವ್ಯಕ್ತಿಯನ್ನು ವೀರನೂ, ಧೀರನೂ, ಶೂರನೂ ಆಗಿ ಪರಿವರ್ತಿಸುವ ಪವಿತ್ರವಾದ ಹಾಗೂ ಗುರುತರವಾದ ಪ್ರಕ್ರಿಯೆ. ಅಂತೆಯೇ ಕೇವಲ ವಿಷಯ ಸಂಗ್ರಹಣೆಯಿಂದ ಅಥವಾ ಬರೀ ಬುದ್ಧಿವಂತರಾಗುವುದರಿಂದ ಸಂಸ್ಕಾರ ಪ್ರಾಪ್ತವಾಗುವುದಿಲ್ಲ. ಜ್ಞಾನವನ್ನು ಪಡೆಯುವುದು ಬಹಳ ಮುಖ್ಯವಾದುದು. ಆದರೆ ಸತ್ಕಾರ್ಯಗಳಿಗೆ ಅಂತಹ ಜ್ಞಾನದ ಸದ್ಬಳಕೆ ಕೂಡಾ ಅಷ್ಟೇ ಮುಖ್ಯ. ಹಾಗಿದ್ದರೆ ಈ ಜಗತ್ತಿನಲ್ಲಿರುವ ಭಯೋತ್ಪಾದಕರಲ್ಲಿ ಬಹುತೇಕರು ಪದವೀಧರರಲ್ಲವೇ, ಶಿಕ್ಷಿತರಲ್ಲವೇ? ಹೌದು, ಅವರೆಲ್ಲರೂ ಸುಶಿಕ್ಷಿತರೇ, ಆದರೆ ಸುಸಂಸ್ಕೃತರಲ್ಲ. ಈ ಕಾರಣದಿಂದಲೇ ಅವರು ಭಯವಿಲ್ಲದ ಭಯೋತ್ಪಾದಕರಾಗಿದ್ದಾರೆ, ಸಮಾಜ ದ್ರೋಹಿಗಳಾಗಿದ್ದಾರೆ. ಹಿಂದೆಲ್ಲ ನಮ್ಮ ಹಿರಿಯರು ಅಂತಹ ಹೇಳಿಕೊಳ್ಳುವಂತಹ ಶಿಕ್ಷಣ ಪಡೆದಿರುತ್ತಿರಲಿಲ್ಲ. ಆದರೆ ಅವರು ಸಂಪೂರ್ಣ ಸುಸಂಸ್ಕೃತರಾಗಿದ್ದರು. ಯಾವ ಶಾಲಾ ಕಾಲೇಜುಗಳ ಮೆಟ್ಟಿಲನ್ನು ಹತ್ತದಿದ್ದರೂ, ಈ ಜಗತ್ತೇ ಒಂದು ಶಾಲೆ ಎಂದು ತಿಳಿದು, ತಮ್ಮ ಅನುಭವಗಳನ್ನೇ ಗುರುಗಳನ್ನಾಗಿ ಮಾಡಿಕೊಂಡು, ಒಂದೊಂದು ಅಮೂಲ್ಯವಾದ ಪಾಠವನ್ನು ಅವುಗಳಿಂದ ಕಲಿತು, ಒಳ್ಳೆಯ ಗುಣ ಬೆಳೆಸಿಕೊಂಡು ಸುಸಂಸ್ಕೃತರು ಎನಿಸಿಕೊಂಡರು. ಜೀವನವೆಂಬ ಪರೀಕ್ಷೆಯಲ್ಲಿ ಪಾಸಾದರು. ಎಂತಹ ಕಷ್ಟ-ನಷ್ಟ ಬಂದರೂ ತಾವು ನಂಬಿದ ತತ್ವ- ಸಿದ್ಧಾಂತಗಳಿಗೆ ಅವರು ಎರಡು ಬಗೆದವರಲ್ಲ. ಈ ಹಿನ್ನೆಲೆಯಲ್ಲಿ ಯಾವ ರೀತಿ ಬಾಲ್ಯದಲ್ಲಿ ಮಕ್ಕಳಿಗೆ ನಾವು ರೋಗ ನಿರೋಧಕ ಚುಚ್ಚುಮದ್ದುಗಳನ್ನು, ಲಸಿಕೆಯ ಹನಿಗಳನ್ನು ಕೊಟ್ಟು ಮುಂದೆ ಅವರನ್ನು ಆರೋಗ್ಯವಂತರನ್ನಾಗಿ ಮಾಡುತ್ತೇವೆಯೋ, ಅದೇ ರೀತಿ ಬಾಲ್ಯದಿಂದಲೇ ಮಕ್ಕಳಿಗೆ ಸಂಸ್ಕಾರದ, ನಮ್ಮ ಸಂಸ್ಕೃತಿಯ ಚುಚ್ಚುಮದ್ದುಗಳನ್ನು ನಾವು ಕೊಡಬೇಕು. ಆಗ ಮಾತ್ರ ಆ ಮಗು ಬೆಳೆದು ದೊಡ್ಡದಾದಾಗ ಮೌಲ್ಯಾಧಾರಿತವಾಗಿ ಬದುಕಲು ಬಯಸುವ ಜವಾಬ್ದಾರಿಯುತವಾದ ನಾಗರಿಕ ಪ್ರಜೆಯಾಗುತ್ತದೆ. ಈ ಪ್ರಮುಖ ಕೆಲಸ ಮೊದಲು ಮನೆಯಿಂದಲೇ ಪ್ರಾರಂಭವಾಗಬೇಕು. ಇದರಲ್ಲಿ ತಂದೆ ತಾಯಿಯ ಪಾತ್ರ ಅತಿ ಮುಖ್ಯ. ಮಕ್ಕಳನ್ನು ಹೆತ್ತು, ಹೊತ್ತು ಸಾಕಿ ಸಲಹಿದರೆ ಸಾಲದು. ಜೊತೆಯಲ್ಲಿ ಅವರಿಗೆ ನೀತಿ ಪಾಠಗಳನ್ನು ಹೇಳಿ, ಅವರ ಮನಸ್ಸಿನಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತಬೇಕು. ಸಂಸ್ಕಾರವನ್ನು ತುಂಬಬೇಕು. ಮಕ್ಕಳ ಮನಸ್ಸು ಕೇವಲ ಭತ್ತ ತುಂಬುವ ಚೀಲಗಳಾಗಬಾರದು; ಒಳ್ಳೆಯ ಬೆಳೆ ಬೆಳೆಯುವ ಹಸನಾದ ಹೊಲಗಳೂ ಆಗಬೇಕು. ಹೀಗಾಗಬೇಕಾದರೆ ಹೆತ್ತವರ ಹೊಣೆಗಾರಿಕೆ ಬಹಳ ದೊಡ್ಡದು. ಅವರು ಮಕ್ಕಳಿಗೆ ಆದರ್ಶಪ್ರಾಯರೂ, ನೀತಿಯುತ ಗುರುಗಳೂ ಆಗಲೇಬೇಕಾಗುತ್ತದೆ. ಸತ್ಯ, ಅಹಿಂಸೆ, ನಯ- ವಿನಯ, ಅತಿಥಿ ಸತ್ಕಾರ, ಸಹನೆ- ಸಹಾನುಭೂತಿ, ಪ್ರಾಮಾಣಿಕತೆ, ಕನಿಕರ, ಕಾಳಜಿ, ಪರೋಪಕಾರ, ಪರಧರ್ಮ ಸಹಿಷ್ಣುತೆ, ಕೃತಜ್ಞತಾ ಭಾವ, ಸಾಮಾಜಿಕ ನಿಷ್ಠೆ, ಸಮಾನತೆ ಮುಂತಾದ ನೀತಿ ಸಂಹಿತೆಗಳೇ ಸಂಸ್ಕಾರದ ಭಿನ್ನ ಭಿನ್ನ ರೂಪಗಳು. ಇವೆಲ್ಲವನ್ನೂ ಮಕ್ಕಳಿಗೆ ತಿಳಿಯಪಡಿಸುವ ಕಾರ್ಯಕ್ರಮಗಳು ಶಾಲಾ ಪಠ್ಯದಲ್ಲಿ ಇರುವುದಿಲ್ಲ. ಶಾಲಾ ಕಾಲೇಜುಗಳಲ್ಲಿ ಏನಿದ್ದರೂ ವಿಷಯ ಜ್ಞಾನವನ್ನು ಮಾತ್ರ ತಿಳಿಸಲಾಗುತ್ತದೆ. ಇದು ಸಮಗ್ರ ವ್ಯಕ್ತಿತ್ವ ವಿಕಸನದ ಶಿಕ್ಷಣ ಎನಿಸಲಾರದು. ಜ್ಞಾನದೊಂದಿಗೆ ನೀತಿಯು ಬೆರೆತಾಗ ಮಾತ್ರ ಅದು ವಿವೇಕವಾಗಿ ಪರಿವರ್ತನೆಗೊಳ್ಳುತ್ತದೆ. ಒಳ್ಳೆಯ ಜೀವನವನ್ನು ನಡೆಸಲು ವಿವೇಕ ಮತ್ತು ವಿಕಾಸ ಅತ್ಯವಶ್ಯಕವಾದ ಪ್ರಕ್ರಿಯೆಗಳು. ಪುಸ್ತಕ ಜ್ಞಾನಕ್ಕಿಂತ ವ್ಯವಹಾರ ಜ್ಞಾನ, ಲೋಕಜ್ಞಾನ ಎಂದೆಂದಿಗೂ ಮೇಲು. ಶಾಲಾ ಕಾಲೇಜುಗಳ ಪಠ್ಯಕ್ರಮವೇ ಬೇರೆ, ಜೀವನ ಶಿಕ್ಷಣದ ಪಠ್ಯಕ್ರಮವೇ ಬೇರೆ. ಹಾಗೆಯೇ, ಪುಸ್ತಕದೊಳಗಿನ ಜ್ಞಾನವೇ ಬೇರೆ, ನಿಜಜೀವನದ ವಾಸ್ತವಿಕತೆಯೇ ಬೇರೆ. ಸಂಸ್ಕಾರ ಎಂದರೆ... ಸಂಸ್ಕೃತಿ ಎಂದರೆ ಸಂಸ್ಕಾರ ಹೊಂದಿದ ಕೃತಿ. ಸಂಸ್ಕಾರವೆಂದರೆ `ಸಂಸ್ಕರೋತಿ ಇತಿ ಸಂಸ್ಕಾರ' ಎಂದರ್ಥ. ಸಂಸ್ಕರಿಸುವುದು ಎಂದರೆ ಪರಿಷ್ಕರಿಸುವುದು ಎಂದರ್ಥ. ಅತ್ಯಂತ ದುಃಖಕರವಾದ ಸಂಗತಿಯೆಂದರೆ ಇಂದಿನ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪದವೀಧರರಾಗುತ್ತಿದ್ದಾರೆ, ಆದರೆ ಸುಸಂಸ್ಕೃತರಾಗುತ್ತಿಲ್ಲ. ಇಂತಹವರೇ ಮುಂದೆ ಅನೀತಿ, ಅಧರ್ಮ, ಅವ್ಯವಹಾರಗಳಲ್ಲಿ ತೊಡಗುವುದನ್ನು, ಜಾತಿವಾದಿಗಳಾಗಿರುವುದನ್ನು ನಾವಿಂದು ಕಾಣುತ್ತಿದ್ದೇವೆ. ಸುಶಿಕ್ಷಿತರು ಅಧರ್ಮಿಗಳಾದಾಗ ಆಗುವ ಅಪಾಯ, ಅಶಿಕ್ಷಿತರು ಅಧರ್ಮಿಗಳಾದಾಗ ಆಗುವ ಅಪಾಯಕ್ಕಿಂತ ಎಷ್ಟೋ ಪಾಲು ದೊಡ್ಡದಾಗಿರುತ್ತದೆ. ಶಿಕ್ಷಿತ ದುಷ್ಟರು ಅಶಿಕ್ಷಿತ ದುಷ್ಟರಿಗಿಂತ ಬಹಳ ಅಪಾಯಕಾರಿ. ಇಂದು ನಮ್ಮ ಸುತ್ತಲೂ ನಾವು ನೋಡುತ್ತಿರುವುದು ಎಂತಹ ವಿದ್ಯಾವಂತರನ್ನು? ಮತ್ತೊಬ್ಬರ ಕಷ್ಟಕ್ಕೆ ಮರುಗದವರು, ದಿಢೀರ್ ಹಣಕ್ಕಾಗಿ, ಶ್ರೀಮಂತಿಕೆಗಾಗಿ ಹಾತೊರೆಯುವವರು, ಸಮಾಜದ ಹಿತವನ್ನು ಬಯಸದವರು! ಈ ಹಿನ್ನೆಲೆಯಲ್ಲಿ ಜ್ಞಾನ- ವಿಜ್ಞಾನಗಳು ಬೆಳೆದಂತೆ ನೈತಿಕತೆಯೂ ಜೊತೆ ಜೊತೆಯಾಗಿ ಬೆಳೆಯಬೇಕು. ಇಲ್ಲವಾದರೆ ಈ ಜ್ಞಾನ- ವಿಜ್ಞಾನ ಮಾನವ ಕುಲವನ್ನೇ ನಾಶಪಡಿಸಬಹುದಾದ ಭಯಾನಕ ಸ್ಥಿತಿಗೆ ನಮ್ಮನ್ನು ಕೊಂಡೊಯ್ಯಬಹುದು. ನಮ್ಮ ಉಡುಗೆ ತೊಡುಗೆಗಳು, ಸರಕು ಸಾಮಗ್ರಿಗಳು, ಸೌಕರ್ಯ ಸೌಲಭ್ಯಗಳು ಆಧುನಿಕವಾಗಿರಲಿ, ವಿಜ್ಞಾನದ ಕೊಡುಗೆಯಾಗಿರಲಿ. ಆದರೆ ನಮ್ಮ ಗುಣ ನಡತೆಗಳು, ನೀತಿ ಸಂಹಿತೆಗಳು, ಮೌಲ್ಯ- ಮಾನವೀಯತೆಗಳು ಪ್ರಾಚೀನವಾಗಿರಲಿ, ಸಂಸ್ಕಾರದ ಕೊಡುಗೆಯಾಗಿರಲಿ. ವಿದ್ಯೆಗೆ ಸಂಸ್ಕಾರ ಬೆರೆತರೆ ಹಾಲಿಗೆ ಜೇನು ಬೆರೆತಂತೆ, ಆಗಲೇ ಎಲ್ಲರಿಗೂ ಸುಖ ಶಾಂತಿ. ಎಷ್ಟಾದರೂ ಒಂದು ದೇಶದ ನಿಜವಾದ ಸಂಪತ್ತೆಂದರೆ ಆ ದೇಶದ ಸುಶಿಕ್ಷಿತ, ಸುಸಂಸ್ಕೃತ ಪ್ರಜೆಗಳಲ್ಲವೇ? ಆದ್ದರಿಂದ ಸುಶಿಕ್ಷಿತರೂ ಆಗೋಣ, ಸುಸಂಸ್ಕೃತರೂ ಆಗೋಣ. ಅದೇ ದೇಶದ, ನಾಡಿನ ಸರ್ವಾಂಗೀಣ ಅಭಿವೃದ್ಧಿಯ ಹೆಗ್ಗುರುತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.