ಶಿಕ್ಷಕ ಅಮ್ಮನೂ ಆಗಬೇಕು ಅಪ್ಪನೂ ಆಗಬೇಕು ಮಕ್ಕಳಿಗೆ ಶಿಕ್ಷೆ ಅನಿವಾರ್ಯವೇ ಎಂಬ ವಿಷಯ ಇತ್ತೀಚೆಗೆ ಮಾಧ್ಯಮಗಳಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ನಾವೆಲ್ಲರೂ ಈ ವಿಷಯದ ಒಂದು ಮುಖವನ್ನು ಮಾತ್ರ ನೋಡುತ್ತಿದ್ದೇವೆ. ಮಗುವಿಗೆ ಮಾನಸಿಕವಾಗಿ, ದೈಹಿಕವಾಗಿ ನೋವಾಗುತ್ತಿದೆ, ಹಾಗಾಗಿ ಎಲ್ಲವನ್ನೂ ಪ್ರೀತಿಯಿಂದ ಗೆಲ್ಲಬಹುದು, ಪ್ರೀತಿಯಿಂದ ಕಲಿಸಿ ಎನ್ನುವುದಷ್ಟೇ ನಮ್ಮ ವಾದ. ಆದರೆ ಇದು ಮೇಲ್ನೋಟಕ್ಕೆ ಕಾಣುವಷ್ಟು ಸರಳವಾಗಿಲ್ಲ ಹಾಗೂ ಇದನ್ನು ನಾವು ಬೇರೆ ಬೇರೆ ಆಯಾಮಗಳಲ್ಲಿ ನೋಡಬೇಕಾದ ಅಗತ್ಯವಿದೆ. ಒಮ್ಮೆ ನಮ್ಮ ಸಮಾಜದ ಹಿರಿಯರನ್ನು, ಗಣ್ಯರನ್ನು, ಸಾಧಕರನ್ನು ಅವರ ಬಾಲ್ಯದ ಬಗ್ಗೆ ಮಾತನಾಡಿಸಿ ನೋಡಿ. ಅವರು ತಮ್ಮ ಪ್ರಾಥಮಿಕ ಅಥವಾ ಪ್ರೌಢಶಾಲೆಯ ಒಬ್ಬ ಶಿಕ್ಷಕರನ್ನಾದರೂ ನೆನಪಿಸಿಕೊಂಡು, ಅವರು ಬೈದು ಬುದ್ಧಿ ಹೇಳದಿದ್ದರೆ ನಾನು ಇಂದು ಈ ಮಟ್ಟದಲ್ಲಿ ಇರುತ್ತಿರಲಿಲ್ಲ ಎಂದು ಹೇಳಿಯೇ ತೀರುತ್ತಾರೆ. ಕೆಲವರು ತಮಗಾದ ದೈಹಿಕ ಶಿಕ್ಷೆಯ ಬಗ್ಗೆಯೂ ಹೇಳುತ್ತಾರೆ. ಅಂದರೆ ಶಿಕ್ಷಣದಲ್ಲಿ ಶಿಕ್ಷೆಯ ಭಯ ಅಗತ್ಯ ಸಂದರ್ಭದಲ್ಲಿ ಅನಿವಾರ್ಯ. ಹಾಗೆಂದು ವಿವೇಚನೆ ಇಲ್ಲದೆ, ನಿಜವಾದ ಕಾಳಜಿ ಇಲ್ಲದೆ, ಇತರ ಮಾನಸಿಕ ಒತ್ತಡಗಳಿಂದ ಕ್ರೂರವಾಗಿ ಶಿಕ್ಷಿಸುವ ಶಿಕ್ಷಕರನ್ನು ನಾನು ಸಹ ಬಲವಾಗಿ ಖಂಡಿಸುತ್ತೇನೆ. ಏಕೆಂದರೆ ಪ್ರೀತಿ ಇಲ್ಲದವರು ನಿಂದಿಸುವ ಮತ್ತು ಶಿಕ್ಷಿಸುವ ಹಕ್ಕನ್ನೂ ಕಳೆದುಕೊಳ್ಳುತ್ತಾರೆ. ಶಾಲೆ ಸಜ ಒಂದು ಪುಟ್ಟ ಸಮಾಜ. ಇಲ್ಲಿಯೂ ಅನೇಕ ಸ್ಥರದ, ಸಮುದಾಯದ, ವಿಭಿನ್ನ ಪರಿಸರದ ಮಕ್ಕಳು ಇರುತ್ತಾರೆ. ವೈವಿಧ್ಯಮಯ ಪರಿಸರದಿಂದ ಶಾಲೆಗೆ ಬರುವ ಮಗು, ಕೇವಲ ಐದು ವರ್ಷ ತುಂಬಿಸಿಕೊಂಡು ಮಾತ್ರ ಬಂದಿರುವುದಿಲ್ಲ. ಜೊತೆಗೆ ತನ್ನ ವಂಶವಾಹಿ ಹಾಗೂ ಪರಿಸರದಿಂದ ಅನೇಕ ಗುಣಗಳನ್ನೂ ತಂದಿರುತ್ತದೆ. ಹೆಚ್ಚಿನ ಮಕ್ಕಳು ಮೊದಲನೇ ತಲೆಮಾರಿನ ಕಲಿಕಾರ್ಥಿಗಳಾಗಿರುತ್ತಾರೆ. ಇಂತಹ ಸಂದರ್ಭಗಳಲ್ಲಿ ಹೆಚ್ಚಿನ ಪೋಷಕರು ಮಕ್ಕಳನ್ನು ತಿದ್ದಿತೀಡಿ ಸುಂದರ ಮೂರ್ತಿಗಳನ್ನಾಗಿ ಮಾಡಬೇಕೆಂಬ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ಬದಲಾಗಿ ಮಕ್ಕಳಿಂದಲೇ ಬೀಡಿ, ಸಿಗರೇಟು, ಮದ್ಯ ತರಿಸಿಕೊಳ್ಳುವ ಹಾಗೂ ಸದಾ ಜಗಳ ಕಾಯುವ ತಂದೆ ತಾಯಿಯರನ್ನು ನಾನೇ ಕಣ್ಣಾರೆ ಕಂಡಿದ್ದೇನೆ. ಇಂತಹ ಸಂದಿಗ್ಧ ಮನಃಸ್ಥಿತಿಯಿಂದ ಬರುವ ಮಗುವಿನ ಭವಿಷ್ಯ ರೂಪಿಸುವ ಗುರುತರ ಜವಾಬ್ದಾರಿ ಶಿಕ್ಷಕನದ್ದಾಗಿರುತ್ತದೆ. ಜೊತೆಗೆ ಬಾಲ್ಯದ ಸಹಜ ಗುಣಗಳಾದ ಕೀಟಲೆ, ಜಗಳ, ಸುಳ್ಳು ಹೇಳುವುದು (ಮಕ್ಕಳು ಸುಳ್ಳು ಹೇಳುವುದಿಲ್ಲ ಎನ್ನುತ್ತಾರೆ. ಆದರೆ ಅವರಷ್ಟು ಸುಂದರವಾಗಿ ಸುಳ್ಳು ಹೇಳಬಲ್ಲವರು ಯಾರೂ ಇಲ್ಲ) ಒಮ್ಮಮ್ಮೆ ಕಳ್ಳತನವೂ ಸೇರಿರುತ್ತದೆ. ಮನೆಯಲ್ಲಿರುವ ಇಬ್ಬರು ಮಕ್ಕಳನ್ನು ನಿಭಾಯಿಸುವುದೇ ಕಷ್ಟವಾಗಿರುವಾಗ ಶಿಕ್ಷಕ ಇಡೀ ತರಗತಿಯ ಅಷ್ಟೂ ಮಕ್ಕಳನ್ನು ಸಂಭಾಳಿಸಬೇಕಾಗುತ್ತದೆ. ಅವರ ಮನಸ್ಸನ್ನು ಹದಗೊಳಿಸಿ, ಮೆದುಗೊಳಿಸಿ ಪಠ್ಯದಲ್ಲಿ ಮತ್ತು ಸಹಪಠ್ಯದಲ್ಲಿ ಸಮಗ್ರವಾಗಿ ತೊಡಗುವಂತೆ ಮಾಡಬೇಕಾಗುತ್ತದೆ. ಇಷ್ಟಲ್ಲದೆ ಅವರ ಗುಣಗಳನ್ನು ತಿದ್ದಿ ತೀಡಿ, ನೈತಿಕ ಮೌಲ್ಯಗಳನ್ನು ಬೆಳೆಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಅಮ್ಮನಾಗಬೇಕಾಗುತ್ತದೆ, ಅಪ್ಪನೂ ಆಗಬೇಕಾಗುತ್ತದೆ. ಹೀಗೆ ಪೋಷಕ ಸ್ಥಾನವನ್ನೂ ನಿರ್ವಹಿಸುವ ಶಿಕ್ಷಕರು, ಮಗುವನ್ನು ತಿದ್ದುವಲ್ಲಿ ಕೊನೆಯ ಅಸ್ತ್ರವಾಗಿ ಶಿಕ್ಷೆಯನ್ನು ಬಳಸುತ್ತಾರೆ. ಬಹುಪಾಲು ಶಿಕ್ಷಕರು ಪ್ರೀತಿಯನ್ನೇ ಪ್ರಥಮ ಸಾಧನವಾಗಿ ಬಳಸುತ್ತಾರೆ. ಆದರೆ ಎಲ್ಲರಿಗೂ ಇದೇ ತಂತ್ರ ಅನ್ವಯ ಆಗುವುದಿಲ್ಲ. ಕೆಲವೊಮ್ಮೆ ಪೆಟ್ಟಿನ ರುಚಿಯನ್ನು ತೋರಿಸಬೇಕಾಗುತ್ತದೆ. ಈ ಶಿಕ್ಷೆಯ ಭಯ ಅನೇಕ ಮಕ್ಕಳನ್ನು ಶಿಸ್ತಿಗೆ ಒಳಪಡಿಸಿ ಶಿಕ್ಷಣದಲ್ಲಿ ತೊಡಗಿಸುವಲ್ಲಿ ಯಶಸ್ವಿಯೂ ಆಗುತ್ತದೆ. ಹೇಗೆ ಸಮಾಜವೊಂದನ್ನು ಕಾನೂನಿನ ಭಯ, ಶಿಕ್ಷೆಯ ಭಯವಿಲ್ಲದೆ ಕೇವಲ ಪ್ರೀತಿಯಿಂದಲೇ, ಸಲಹೆ ನೀಡುವುದರಿಂದಲೇ ಸರಿ ದಾರಿಗೆ ತರಲು ಸಾಧ್ಯವಿಲ್ಲವೋ ಹಾಗೇ ಭವಿಷ್ಯದ ಪ್ರಜೆಗಳಾಗುವ ಮಕ್ಕಳನ್ನು ಗಿಡವಾಗಿದ್ದಾಗಲೇ ಬಗ್ಗಿಸುವ ಸಲುವಾಗಿ ಶಿಕ್ಷೆಯ ಭಯ (ಶಿಕ್ಷೆಯೇ ಅಲ್ಲ) ಅನಿವಾರ್ಯವಾಗುತ್ತದೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ಶಿಕ್ಷಣ ಹಕ್ಕು ಕಾಯ್ದೆಯ ಪ್ರಕಾರ ಮಗುವನ್ನು ಗದರಿಸುವಂತಿಲ್ಲ, ನಿಂದಿಸುವಂತಿಲ್ಲ, ದೊಡ್ಡದಾಗಿ ಕಣ್ಣು ಬಿಡುವಂತಿಲ್ಲ, ಅಂದ ಮೇಲೆ ಪೆಟ್ಟುಗಳು ದೂರದ ಮಾತೇ ಸರಿ. ಜೊತೆಗೆ ಈ ನಿಯಮಗಳನ್ನು ಉಲ್ಲಂಘಿಸಿದ ಶಿಕ್ಷಕರಿಗೆ ಇಂತಿಂತಹ ಶಿಕ್ಷೆ, ದಂಡ ಇತ್ಯಾದಿಗಳ ವಿವರವೂ ಇದೆ. ಪರಿಸ್ಥಿತಿ ಹೀಗಿರುವಾಗ, ಇನ್ನು ಮುಂದೆ ಶಿಕ್ಷಕರು ರಿಸ್ಕ್ ತೆಗೆದುಕೊಂಡು ಮಗುವನ್ನು ತಿದ್ದುವ ಕೆಲಸಕ್ಕೆ ಕೈಹಾಕುತ್ತಾರೆಯೇ? ವಿಪರ್ಯಾಸವೆಂದರೆ ಇದರ ಎಲ್ಲ ಪರಿಣಾಮಗಳೂ ಆಗುವುದು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ವರ್ಗದ ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳ ಮೇಲೆಯೇ. ಈ ಶೋಷಿತ ವರ್ಗ ಮತ್ತೊಂದು ಅತ್ಯಾಧುನಿಕ ಶೋಷಣೆಗೆ ಒಳಗಾದಂತಾಗುತ್ತದೆ ಅಷ್ಟೆ. ಇತ್ತೀಚೆಗೆ ಸಣ್ಣಪುಟ್ಟದ್ದಕ್ಕೆಲ್ಲ ಆತ್ಮಹತ್ಯೆ ಮಾಡಿಕೊಳ್ಳುವ ಮಕ್ಕಳನ್ನು ನೋಡುತ್ತಿದ್ದೇವೆ. ಇದರರ್ಥ ನಾವು ಗಟ್ಟಿಯಾಗಿ ನಿಂತು ಪರಿಸ್ಥಿತಿಯನ್ನು ಧೈರ್ಯವಾಗಿ ಎದುರಿಸಬಲ್ಲ ಮಕ್ಕಳನ್ನು ನಿರ್ಮಿಸುವಲ್ಲಿ ವಿಫಲರಾಗಿದ್ದೇವೆ. ಅನೇಕ ಸಂದರ್ಭಗಳಲ್ಲಿ ಮನೆ ಹಾಗೂ ಶಾಲೆಯಲ್ಲಿ ಮಗುವಿನ ಇಚ್ಛೆಯಂತೆಯೇ ನಡೆಯುವ ವಾತಾವರಣ ನಿರ್ಮಾಣವಾಗಿರುತ್ತದೆ. (ಇದಕ್ಕೆ ಕಾರಣ ಒಂದು ಅಜ್ಞಾನ, ಇನ್ನೊಂದು, ಅತಿಯಾದ ಜ್ಞಾನ!) ಇದರಿಂದ ಮಕ್ಕಳಲ್ಲಿ ಸಹನೆ, ಸಹಕಾರ, ತ್ಯಾಗ, ಹೊಂದಾಣಿಕೆ ಎಂಬ ಮೌಲ್ಯಗಳು ಇಲ್ಲವಾಗಿವೆ. ಪರಿಣಾಮ, ಅವರ ಇಷ್ಟಕ್ಕೆ ವಿರೋಧ ಬಂದಲ್ಲಿ ಹೇಡಿಯಂತೆ ಆತ್ಮಹತ್ಯೆಗೆ ಶರಣಾಗುತ್ತಾರೆ. ಶಾಲೆಯಲ್ಲಿನ ಸಣ್ಣಪುಟ್ಟ ನಿಂದೆ, ಅವಮಾನಗಳನ್ನೇ ಸಹಿಸದ ಮಗು, ಭವಿಷ್ಯದ ಬದುಕಿನಲ್ಲಿ ಬರುವ ಸಮಸ್ಯೆಗಳನ್ನು ಹೇಗೆ ಎದುರಿಸುತ್ತದೆ?, ಹೇಗೆ ನಿಭಾಯಿಸುತ್ತದೆ? ಆಯಿಷಾ ವಿಚಾರದಲ್ಲಿಯೂ ಆದ ತೊಂದರೆ ಇದೇ ಎನಿಸುತ್ತದೆ. ಆಕೆ ಮಾನಸಿಕ ಸಂಘರ್ಷವನ್ನು ನಿಭಾಯಿಸುವಲ್ಲಿ ವಿಫಲಳಾದ ಪರಿಣಾಮವಾಗಿ ತನ್ನನ್ನು ತಾನು ಶಿಕ್ಷಿಸಿಕೊಂಡಳು. ಮಕ್ಕಳ ಹಕ್ಕುಗಳು, ನಾರ್ವೆ ದೇಶದ ಕಾನೂನುಗಳು... ಹೀಗೆ ಅನೇಕ ವಿಷಯಗಳು ಚರ್ಚೆಯಾಗುತ್ತಿರುವ ಈ ಸಂದರ್ಭದಲ್ಲಿ ಒಂದು ಅಂಶವನ್ನು ನಾವು ಗಮನಿಸಬೇಕು. ಒಂದು ಮಗು ಇತರರಿಗೆ ತೊಂದರೆ ನೀಡದೆ, ತನಗೂ ತೊಂದರೆ ಮಾಡಿಕೊಳ್ಳದೆ ಬೆಳೆಯಬೇಕಾದದ್ದು ಅದರ ಹಕ್ಕು. ಮಾನವ ಹಕ್ಕುಗಳ ನೆಪದಲ್ಲಿ ಮಗು ಎಲ್ಲ ದೃಷ್ಟಿಯಿಂದಲೂ ಆರೋಗ್ಯಕರವಾಗಿ ಬೆಳೆಯುವ ಹಕ್ಕನ್ನು ಕಿತ್ತುಕೊಳ್ಳುತ್ತಿದ್ದೇವೆ. ಪರಿಣಾಮವಾಗಿ ಬಾಲಾಪರಾಧಿಗಳ ಹೆಚ್ಚಳಕ್ಕೂ ಕಾರಣವಾಗಿದ್ದೇವೆ. ಒಟ್ಟಾರೆ ಇದೆಲ್ಲದರ ಮಧ್ಯೆಯೂ ಭವಿಷ್ಯದ ಸಮಾಜ ನಿರ್ಮಾತೃಗಳಾದ ಮಕ್ಕಳಿಗೆ ಸೋಲುವುದನ್ನು ಕಲಿಸಿ, ಸೋಲು ಸಹಿಸುವುದನ್ನು ಕಲಿಸಿ, ಅದೇ ಸೋಲನ್ನು ಗೆಲುವಿನ ಸೋಪಾನ ಮಾಡಿಕೊಂಡು ಆತ್ಮವಿಶ್ವಾಸದಿಂದ ಮುನ್ನುಗ್ಗುವ ಛಲವನ್ನು ಬೆಳೆಸಿ, ಸಮಾಜದೊಂದಿಗೆ ಹೊಂದಿಕೊಂಡು ಹೋಗುವ ಮಗುವನ್ನು ನಿರ್ಮಿಸಬೇಕಾದ ಜವಾಬ್ದಾರಿ ಶಿಕ್ಷಕರು ಸೇರಿದಂತೆ ಎಲ್ಲರ ಮೇಲೂ ಇದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.