ಪ್ರಶ್ನೆ ಉತ್ತರ ಗಾನವಿ ರಾಜನ್, ತುಮಕೂರು ನಾನು ಬಿ.ಇ ಓದುತ್ತಿದ್ದೇನೆ. ನನಗೆ ಈ ವರ್ಷ ಪಾಸಾಗುವ ಲಕ್ಷಣಗಳೇ ಕಾಣುತ್ತಿಲ್ಲ. ಕಾರಣ ನನಗೆ ಗಣಿತ ಅತ್ಯಂತ ಕಠಿಣ ಎನಿಸುತ್ತಿದೆ. ಓದಲು ಆಗುತ್ತಿಲ್ಲ. ನಾನು 2 ವರ್ಷದ ಹಿಂದೆ ಪಿ.ಯು ಮುಗಿಸಿದ್ದೆ. ಈಗ ಮತ್ತೆ ಸಿ.ಇ.ಟಿ ಪರೀಕ್ಷೆ ತೆಗೆದುಕೊಂಡು ನನಗೆ ಅತೀವ ಇಷ್ಟ ಎನಿಸಿದ್ದ ವೈದ್ಯಕೀಯ ಕ್ಷೇತ್ರಕ್ಕೆ ಹೋಗಬಹುದೇ? ದಯಮಾಡಿ ಸೂಕ್ತ ಸಲಹೆ ಕೊಡಿ. ನಿಮ್ಮ ಪರಿಸ್ಥಿತಿ, ಅನೇಕ ವಿದ್ಯಾರ್ಥಿಗಳು ಅಭಿರುಚಿ ಮತ್ತು ಗುರಿಯ ಸ್ಪಷ್ಟತೆ ಇಲ್ಲದೆ ಸಿಕ್ಕಿಕೊಳ್ಳುವ ಪಂಜರದಂತಾಗಿದೆ. ಆಸಕ್ತಿ ಬೇರೆಯೇ ಇದ್ದು, ಪರಿಸ್ಥಿತಿಗಳ ಒತ್ತಡದಿಂದ ಬೇರೆ ಆಯ್ಕೆ ಮಾಡಿಕೊಳ್ಳುವ ಅನೇಕ ವಿದ್ಯಾರ್ಥಿಗಳು ನಿಮ್ಮಂತೆಯೇ ಸಂಕಟದಲ್ಲಿದ್ದಾರೆ. ನಿಮಗೆ ಗಣಿತ ದುರ್ಗಮವಾಗಿದ್ದು ವೈದ್ಯಕೀಯ ಕ್ಷೇತ್ರ ಅತ್ಯಾಕರ್ಷಕವಾಗಿದ್ದರೆ, ಪುನಃ ಸಿ.ಇ.ಟಿ ಬರೆದು ವೈದ್ಯಕೀಯ ಕ್ಷೇತ್ರವನ್ನೇ ಆರಿಸಿಕೊಳ್ಳುವುದು ಸೂಕ್ತ. ವೈದ್ಯಕೀಯ ಕ್ಷೇತ್ರವನ್ನು ಆರಿಸಿಕೊಳ್ಳುವುದು ಸೂಕ್ತ. ತುಂಬಾ ಸ್ಪರ್ಧಾತ್ಮಕ ಆಗಿರುವ ವೈದ್ಯಕೀಯ ಕ್ಷೇತ್ರವನ್ನು ಪ್ರವೇಶಿಸಲು, ಎಂಜಿನಿಯರಿಂಗ್‌ಗಿಂತ ಉತ್ತಮ ರ‌್ಯಾಂಕ್ ಅನ್ನು ನೀವು ಪಡೆಯಬೇಕಾಗುತ್ತದೆ. ಇದಕ್ಕೆ ತುಂಬಾ ಪರಿಶ್ರಮ ಮತ್ತು ಯೋಜನಾಬದ್ಧ ಸಿದ್ಧತೆ ಬೇಕಾಗುತ್ತದೆ. ನೀವು ಈ ಬಗ್ಗೆ ಬೇಗ ತೀರ್ಮಾನ ತೆಗೆದುಕೊಂಡು ಈ ವರ್ಷವೇ ಸಿ.ಇ.ಟಿ ತೆಗೆದುಕೊಳ್ಳುವುದು ಸೂಕ್ತ. ಭರತ್ ಕದನದಾಳೆ ನಾನು ದೂರಶಿಕ್ಷಣ ಮಾಧ್ಯಮದಲ್ಲಿ ಮಧುರೈ ಕಾಮರಾಜ್ ವಿಶ್ವವಿದ್ಯಾಲಯದಲ್ಲಿ ಬಿ.ಬಿ.ಎ (ಬಿಸಿನೆಸ್ ಅಡ್ಮಿನಿಸ್ಟ್ರೇಷನ್) ಮಾಡುತ್ತಿದ್ದೇನೆ. ಇದಕ್ಕೆ ಮೊದಲು ರೇಷ್ಮೆ (ಸೆರಿಕಲ್ಚರ್) ವಿಷಯದಲ್ಲಿ ಜೆ.ಒ.ಸಿ ಕೋರ್ಸ್ ಮುಗಿಸಿದ್ದೇನೆ. ನಾನು ಈಗ ಸರ್ಕಾರಿ ಕೆಲಸಗಳಾದ ವಿ.ಎ, ಎಸ್.ಡಿ.ಎ ಇನ್ನಿತರ ಉದ್ಯೋಗಗಳನ್ನು ಅರಸಬಹುದೇ ಅಥವಾ ಬಿ.ಬಿ.ಎ ಮುಗಿಯದೆ ಯಾವುದೇ ಸರ್ಕಾರಿ ಕೆಲಸ ಸಿಗುವುದಿಲ್ಲವೇ? ನೀವು ಮಧುರೈ ಕಾಮರಾಜ್ ವಿಶ್ವವಿದ್ಯಾಲಯಲ್ಲಿ ಬಿ.ಬಿ.ಎ ಮಾಡುತ್ತಿರುವುದು ಒಳ್ಳೆಯ ಸಂಗತಿ. ಸೆರಿಕಲ್ಚರ್ ವಿಷಯದಲ್ಲಿ ಜೆ.ಒ.ಸಿ ಕೋರ್ಸ್‌ನ್ನು ಮುಗಿಸಿರುವುದರಿಂದ ಈ ಕ್ಷೇತ್ರದಲ್ಲೂ ಉದ್ಯೋಗವನ್ನು ಅರಸಬಹುದು. ಬಿ.ಬಿ.ಎ ಮುಗಿಸಿದ ನಂತರ ನೀವು ಖಾಸಗಿ ಕಂಪೆನಿಗಳಲ್ಲಿ ವಾಣಿಜ್ಯ ಸಂಬಂಧಿ ಉದ್ಯೋಗಗಳನ್ನು ಪಡೆಯಬಹುದು. ಸರ್ಕಾರಿ ಉದ್ಯೋಗಕ್ಕಾಗೇ ನೀವು ಕಾಯಬೇಕಾಗಿಲ್ಲ. ಖಾಸಗಿ ಕ್ಷೇತ್ರದಲ್ಲಿ ಉದ್ಯೋಗಗಳು ವಿಪುಲವಾಗಿವೆ. ಸರ್ಕಾರಿ ಕ್ಷೇತ್ರದಲ್ಲಿ ಸೇವಾ ಭದ್ರತೆ ಮಾತ್ರ ಇರುತ್ತದೆ. ಆದರೆ ಖಾಸಗಿ ಕ್ಷೇತ್ರದಲ್ಲಿ ಆರೋಗ್ಯಕರ ಸ್ಪರ್ಧೆ, ನಿಮ್ಮ ಸಾಮರ್ಥ್ಯಕ್ಕೆ ತಕ್ಕ ಪುರಸ್ಕಾರ ಮತ್ತು ಉದ್ಯೋಗಗಳನ್ನು ನಿಮ್ಮ ಇಚ್ಛೆಗೆ ತಕ್ಕಂತೆ ಬದಲಾಯಿಸಿಕೊಳ್ಳುವ ಸಾಮರ್ಥ್ಯ ಇರುತ್ತದೆ. ಆದ್ದರಿಂದ ನೀವು ಸರ್ಕಾರಿ ಉದ್ಯೋಗಗಳ ಚಿಂತೆಯನ್ನು ಬಿಟ್ಟು, ಖಾಸಗಿ ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯುವ ಸ್ಪರ್ಧೆಗೆ ಸಿದ್ಧರಾಗಿ. ತುಕಾರಾಮ್ ನಾನು ಡೈರಿ ತಂತ್ರಜ್ಞಾನದಲ್ಲಿ ಬಿ.ಟೆಕ್ ಮುಗಿಸಿದ್ದೇನೆ. ಕೆ.ಎ.ಎಸ್ ಪರೀಕ್ಷೆ ತೆಗೆದುಕೊಳ್ಳ ಬೇಕೆಂದಿದ್ದೇನೆ. ಆದರೆ ಕೆ.ಎ.ಎಸ್ ಪಠ್ಯಕ್ರಮದಲ್ಲಿ ಡೈರಿ ತಂತ್ರಜ್ಞಾನ ಇರುವುದಿಲ್ಲ. ನನಗೆ ಸಾಮಾನ್ಯ ಜ್ಞಾನ ಅತ್ಯಂತ ಕಡಿವೆು ಇದ್ದು, ಏನು ಮಾಡುವುದೋ ತೋಚುತ್ತಿಲ್ಲ. ದಯಮಾಡಿ ಸೂಕ್ತ ಮಾರ್ಗದರ್ಶನ ಕೊಡಿ. ಈಗಾಗಲೇ ಡೈರಿ ತಂತ್ರಜ್ಞಾನದಲ್ಲಿ ಬಿ.ಟೆಕ್ ಮುಗಿಸಿರುವ ನೀವು ಈ ಕ್ಷೇತ್ರದಲ್ಲೇ ಮೊದಲು ಉದ್ಯೋಗ ಹುಡುಕಿಕೊಳ್ಳುವುದು ಒಳ್ಳೆಯದು. ನೀವು ಈಗಾಗಲೇ ಪ್ರಾವೀಣ್ಯತೆ ಪಡೆದಿರುವ ಕ್ಷೇತ್ರದಲ್ಲಿ ಉದ್ಯೋಗವನ್ನು ಪಡೆಯುವುದು ಮತ್ತು ಯಶಸ್ಸನ್ನು ಗಳಿಸುವುದು ಸುಲಭ. ಕೆ.ಎ.ಎಸ್ ನಿಮ್ಮ ಕನಸಾಗಿದ್ದರೆ ಅದನ್ನು ನನಸಾಗಿಸಿಕೊಳ್ಳಲು ಸತತ ಪರಿಶ್ರಮ ಮತ್ತು ಯೋಜನಾಬದ್ಧ ಸಿದ್ಧತೆ ಬೇಕು. ನಿಮ್ಮ ಸಾಮಾನ್ಯ ಜ್ಞಾನವನ್ನು ಅಭಿವೃದ್ಧಿಪಡಿಸಿಕೊಳ್ಳಿ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ಮಾರ್ಗದರ್ಶಿ ಪುಸ್ತಕಗಳನ್ನು ಮತ್ತು ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳನ್ನು ಅಭ್ಯಾಸ ಮಾಡಿ. ಕೆ.ಎ.ಎಸ್.ನಲ್ಲಿ ನಿಮ್ಮ ಓದಿಗೆ ಹತ್ತಿರದ ವಿಷಯಗಳಾದ ಜೀವ ವಿಜ್ಞಾನ, ರಸಾಯನ ವಿಜ್ಞಾನಗಳನ್ನು ಪರೀಕ್ಷೆಗೆ ತೆಗೆದುಕೊಳ್ಳಬಹುದೇ ಯೋಚಿಸಿ. ನಿಮಗೆ ವಿಜ್ಞಾನ ವಿಚಾರದಲ್ಲೇ ಹೆಚ್ಚಿನ ಆಸಕ್ತಿ ಇದ್ದರೆ ಮುಕ್ತ ವಿಶ್ವವಿದ್ಯಾನಿಲಯದ ಮೂಲಕ ಬಿ.ಎಸ್ಸಿ ಓದಲು ಪ್ರಾರಂಭಿಸಿ. ಈ ಓದು ಕೆ.ಎ.ಎಸ್ ಪರೀಕ್ಷೆಗೆ ಪೂರಕವಾಗಿರುತ್ತದೆ. ಬಿ.ಟೆಕ್ ಓದಿನಿಂದ ಒಂದು ಮಟ್ಟದ ಪ್ರಬುದ್ಧತೆಯನ್ನು ಗಳಿಸಿರುವ ನಿಮಗೆ ಸ್ವತಂತ್ರವಾಗಿ ಇತಿಹಾಸ, ಸಮಾಜ ವಿಜ್ಞಾನ, ಅರ್ಥಶಾಸ್ತ್ರ ಮೊದಲಾದ ಮಾನವಿಕ ವಿಜ್ಞಾನ ವಿಷಯಗಳನ್ನು ಅಭ್ಯಾಸ ಮಾಡುವುದೂ ಕಷ್ಟವಾಗುವುದಿಲ್ಲ. ಪ್ರಮೋದ್ ನಾನು ಕನ್ನಡ ವಿಷಯದಲ್ಲಿ ಎಂ.ಎ. ಮತ್ತು ಎಂ.ಎಡ್ ಮಾಡಿಕೊಂಡಿದ್ದೇನೆ. ಪಿ.ಜಿ.ಡಿ.ಸಿ.ಎ. ಕೂಡ ಮುಗಿಸಿದ್ದೇನೆ. ನನಗೆ ಈಗ 29 ವರ್ಷ. ಐ.ಎ.ಎಸ್ ಅಧಿಕಾರಿ ಆಗಬೇಕೆಂಬ ಮಹದಾಸೆ ಇದೆ. ಅಲ್ಲದೆ ಕನ್ನಡದಲ್ಲಿ ಜೆ.ಆರ್.ಎಫ್ ಪರೀಕ್ಷೆಯನ್ನೂ ತೆಗೆದುಕೊಳ್ಳಬೇಕೆಂದಿದ್ದೇನೆ. ಆದರೆ ನನಗೆ ಯಾವುದೇ ಉದ್ಯೋಗವಿಲ್ಲ. ಮನೆಯಲ್ಲಿ ಎಲ್ಲರೂ ಮದುವೆಗೆ ಒತ್ತಾಯಿಸುತ್ತಿದ್ದಾರೆ. ಯು.ಪಿ.ಎಸ್.ಸಿ.ಗೆ ತಯಾರಿ ನಡೆಸಲೋ, ಜೆ.ಆರ್.ಎಫ್ ಪರೀಕ್ಷೆ ತೆಗೆದುಕೊಳ್ಳಲೋ, ಉದ್ಯೋಗ ಹುಡುಕಲೋ ಅಥವಾ ಮದುವೆಯಾಗಲೋ ಎಂಬ ವಿಚಾರಗಳಲ್ಲಿ ಬಹಳಷ್ಟು ಗೊಂದಲ ಇದೆ. ದಯಮಾಡಿ ಮಾರ್ಗದರ್ಶನ ನೀಡಿ. ನೀವು ಮೊದಲು ಸೂಕ್ತ ಉದ್ಯೋಗಕ್ಕೆ ಸೇರಿಕೊಳ್ಳುವುದು ಒಳ್ಳೆಯದು. ಸಾಕಷ್ಟು ಓದಿದ್ದಾಗಿದೆ. ಉದ್ಯೋಗವನ್ನು ಮಾಡುತ್ತಾ ನೀವು ಎನ್.ಇ.ಟಿ ಅಥವಾ ಯು.ಪಿ.ಎಸ್.ಸಿ ಪರೀಕ್ಷೆ ತೆಗೆದುಕೊಳ್ಳಬಹುದು. ಉದ್ಯೋಗಕ್ಕೆ ಸೇರಿದ ನಂತರ ಮದುವೆ ಮಾಡಿಕೊಳ್ಳಬಹುದು, ಐ.ಎ.ಎಸ್ ಪರೀಕ್ಷೆಯನ್ನೂ ತೆಗೆದುಕೊಳ್ಳಬಹುದು. ಒಂದು ಉದ್ಯೋಗದ ಆಧಾರದ ಮೇಲೆ ಇವನ್ನೆಲ್ಲ ಮಾಡುವುದು ಒಳ್ಳೆಯದು. ಅರ್ಜುನ ನಾನು ಮೆಕ್ಯಾನಿಕಲ್ ಎಂಜಿನಿಯರಿಂಗ್ ಅಂತಿಮ ವರ್ಷದಲ್ಲಿ ಓದುತ್ತಿದ್ದೇನೆ. ಮುಂದೆ ಕಂಪೆನಿಗಳಲ್ಲಿ ಕೆಲಸಕ್ಕೆ ಸೇರಲು ಬಿ.ಇ ಹೊರತಾಗಿ ಬೇಕಾದ ಇತರ ಕೋರ್ಸುಗಳ ಬಗ್ಗೆ ಮಾಹಿತಿ ಕೊಡಿ. ಕೆಲವರು ಜಾವ, ಸಿ, ಸಿ++ ಓದು ಎನ್ನುತ್ತಾರೆ. ಮತ್ತೆ ಕೆಲವರು ಕಾಟಿಯಾ, ಆಟೋಕ್ಯಾಡ್ ಮಾಡು ಎನ್ನುತ್ತಾರೆ. ಇನ್ನು ಕೆಲವರು ಎಸ್.ಎ.ಪಿ ತರಬೇತಿ ತೆಗೆದುಕೊ ಎನ್ನುತ್ತಾರೆ. ತುಂಬಾ ಗೊಂದಲ ಎನಿಸುತ್ತಿದೆ. ಎಂಜಿನಿಯರಿಂಗ್ ಓದಿನ ಅಂತಿಮ ವರ್ಷ ಬಹಳ ಪ್ರಮುಖವಾದ ಘಟ್ಟ. ಅತ್ಯಂತ ಶ್ರದ್ಧೆಯಿಂದ ಓದಿ, ಕಠಿಣ ವ್ಯಾಸಂಗ ಮಾಡಿ ಹೆಚ್ಚು ಅಂಕಗಳನ್ನು ಗಳಿಸುವ ಪ್ರಯತ್ನ ಮಾಡಬೇಕು. ಸರಾಸರಿ ಶೇಕಡಾ ಅಂಕ ಉತ್ತಮಪಡಿಸಿಕೊಳ್ಳುವ ಪ್ರಯತ್ನ ಮಾಡಿ. ಇದರ ಜೊತೆಗೆ ಸಮಯವಿದ್ದರೆ ಬೇರೆ ಕಂಪ್ಯೂಟರ್ ಕೋರ್ಸುಗಳನ್ನೂ ತೆಗೆದುಕೊಳ್ಳುವುದು ಒಳ್ಳೆಯದು. ನಿಮಗೆ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲೇ ಮುಂದುವರಿಯುವ ಆಸಕ್ತಿ ಇದ್ದರೆ, ಸ್ಯಾಪ್ ಕೋರ್ಸ್‌ನಲ್ಲಿ ತರಬೇತಿ ಪಡೆಯಬಹುದು. ನಿಮ್ಮ ಆಸಕ್ತಿ ಮತ್ತು ಮುಂದಿನ ಉದ್ಯೋಗದ ಕನಸಿನ ಮೇಲೆ ನಿಮ್ಮ ಆಯ್ಕೆ ಅವಲಂಬಿತವಾಗಿರಲಿ. ಸ್ನೇಹಿತರ ಮಾತುಗಳನ್ನು ಮಾತ್ರ ಕೇಳಿ ಅಥವಾ ಅವರು ತೆಗೆದುಕೊಂಡಿದ್ದಾರೆ ಎನ್ನುವ ಕಾರಣಕ್ಕಾಗಿ ಕೋರ್ಸುಗಳನ್ನು ಆಯ್ಕೆ ಮಾಡಿಕೊಳ್ಳಬೇಡಿ. ಮಂಜುನಾಥ, ಬೆಂಗಳೂರು ಮಾಹಿತಿ ವಿಜ್ಞಾನ (ಐ.ಎಸ್) ವಿಭಾಗದ ವಿದ್ಯಾರ್ಥಿಗಳಿಗೆ ಉತ್ತಮವಾದ ಭವಿಷ್ಯವಿಲ್ಲ, ಉದ್ಯೋಗ ಲಭಿಸುವುದು ಕಷ್ಟ, ಕಂಪೆನಿಗಳು ಸಿ.ಎಸ್ ವಿದ್ಯಾರ್ಥಿಗಳನ್ನು ಅಪೇಕ್ಷಿಸುತ್ತವೆ ಎಂದೆಲ್ಲ ನನ್ನ ಗೆಳೆಯರು ಹೇಳುತ್ತಿದ್ದಾರೆ. ಇದು ಸತ್ಯವೇ? ಮಾಹಿತಿ ವಿಜ್ಞಾನ ಮತ್ತು ಕಂಪ್ಯೂಟರ್ ವಿಜ್ಞಾನ ಒಂದೇ ತರಹದ ಕೋರ್ಸುಗಳು. ಕೆಲವು ವಿಷಯ/ ಪತ್ರಿಕೆಗಳಷ್ಟೇ ಬೇರೆ ಬೇರೆಯಾಗಿದ್ದು, ಹೆಚ್ಚು ಪತ್ರಿಕೆಗಳು ಎರಡಕ್ಕೂ ಸಾಮಾನ್ಯ. ಕ್ಯಾಂಪಸ್ ಸಂದರ್ಶನದಲ್ಲಿ ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ವಿದ್ಯಾರ್ಥಿಗಳನ್ನೇ ಆಯ್ಕೆ ಮಾಡಿಕೊಳ್ಳುವಾಗ ಮಾಹಿತಿ ವಿಜ್ಞಾನದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳದಿರಲು ಕಾರಣವಿಲ್ಲ. ಆದ್ದರಿಂದ ನೀವು ಸ್ನೇಹಿತರ ಮಾತುಗಳಿಂದ ವಿಚಲಿತರಾಗಬೇಕಿಲ್ಲ. ಕಂಪೆನಿಗಳು ನಿಮ್ಮನ್ನು ಉದ್ಯೋಗಕ್ಕೆ ಆಯ್ಕೆ ಮಾಡಿಕೊಳ್ಳುವಾಗ ಯಾವ ವಿಷಯದಲ್ಲಿ ಬಿ.ಇ. ಮಾಡಿದ್ದೀರಿ ಎಂಬುದಕ್ಕಿಂತ, ನಿಮ್ಮ ಸಂವಹನ ಸಾಮರ್ಥ್ಯ, ಸಮಸ್ಯೆಗಳನ್ನು ಬಿಡಿಸುವ ಚಾತುರ್ಯ, ಕಷ್ಟಕರ ಸಂದರ್ಭಗಳನ್ನು ನಿರ್ವಹಿಸುವ ಕೌಶಲ ಇವು ಮುಖ್ಯವಾಗುತ್ತವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.