ಕೆಲವರಿಗೆ ಕೆಟ್ಟ ಮೇಲೇ ಬುದ್ಧಿ ಬರುವುದು! ಒಂ ದು ಕೈಬರಹ ಉತ್ತಮವೋ ಅಲ್ಲವೋ ಎಂದು ನಿರ್ಧರಿಸುವುದು ಹೇಗೆ? ಇದಕ್ಕೆ ನಾಲ್ಕು ಅಳತೆಗೋಲುಗಳಿವೆ. 1. ಕ್ರಮಬದ್ಧತೆ 2. ಸ್ಪಷ್ಟತೆ 3. ಸೌಂದರ್ಯ 4. ವೇಗ 1. ಕ್ರಮಬದ್ಧತೆ: ಕಳೆದ ಡಿಸೆಂಬರ್‌ನಲ್ಲಿ ನಾನು ದಾಂಡೇಲಿಯಲ್ಲಿ ನಡೆದ ಕೈಬರಹ ಕಾರ್ಯಾಗಾರಕ್ಕೆ ಹೋಗಿದ್ದೆ. ಒಬ್ಬ ಕಾಲೇಜು ವಿದ್ಯಾರ್ಥಿನಿ ಒಂದು ನಿರ್ದಿಷ್ಟ ರೀತಿಯಲ್ಲಿ ಇಂಗ್ಲಿಷ್ `ಎಸ್' ಅಕ್ಷರವನ್ನು ಬರೆದು `ನಾನು ಹೀಗೇ ಬರೆಯುತ್ತೇನೆ. ಅದು ಏಕೆ ತಪ್ಪು?' ಎಂದು ಕೇಳಿದಳು. ಅವಳ ಜೊತೆಯಲ್ಲಿದ್ದ ಗೆಳತಿಯರಿಗೆ ನಾನು ಕೇಳಿದೆ `ಇದು ನಿಮಗೆ `ಎಸ್'ನ ಹಾಗೆ ಕಾಣುತ್ತದೆಯೇ?' ಅವರು `ಇಲ್ಲ' ಎಂದು ತಲೆಯಾಡಿಸಿದರು. ಆಗ ನಾನು ಆ ಹುಡುಗಿಗೆ ಹೇಳಿದೆ `ನೀನು ಬರೆಯುವುದು ಸರ್ವಸಮ್ಮತ ಆಗಿರಬೇಕು. ಇಲ್ಲದಿದ್ದರೆ ನೀನೇ ಒಂದು ಬೇರೆ ಬಗೆಯ ಲಿಪಿಯನ್ನು ಸೃಷ್ಟಿಸಬೇಕಾಗುತ್ತದೆ'. ನಾನು ಚಿಕ್ಕವನಿದ್ದಾಗ ಒಮ್ಮೆ ಸೈಕಲ್‌ನಲ್ಲಿ ಹೋಗುತ್ತಿದ್ದ ನನ್ನ ಗೆಳೆಯನೊಬ್ಬ ರಸ್ತೆ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕೆಳಗೆ ಬಿದ್ದ. ಅವನ ಸಹಾಯಕ್ಕಾಗಿ ನಾನು ಧಾವಿಸಿದಾಗ ಅವನು ಹೇಳಿದ `ನನಗೇನೂ ಆಗಿಲ್ಲ. ನಾನು ಸೈಕಲ್‌ನಿಂದ ಇಳಿಯುವುದೇ ಹೀಗೆ!' 2. ಸ್ಪಷ್ಟತೆ: ನಾವು ಬರೆದ ಅಕ್ಷರಗಳು ಮತ್ತು ಸಂಖ್ಯೆಗಳು ಎಲ್ಲರಿಗೂ ಸರಿಯಾಗಿ ತಿಳಿಯುವಂತೆ ಇರಬೇಕು. ನನ್ನ ಹಳೆಯ ವಿದ್ಯಾರ್ಥಿಯೊಬ್ಬ ತುಂಬಾ ಬುದ್ಧಿವಂತ. ಆದರೆ ಬರವಣಿಗೆ ಅಷ್ಟಕ್ಕಷ್ಟೆ. ಎಸ್ಸೆಸ್ಸೆಲ್ಸಿಯಲ್ಲಿ ಅವನಿಗೆ ಇನ್ನು ಮೂರು ಅಂಕಗಳು ಬಂದಿದ್ದರೆ ಅವನದು ಶೇ 90 ಅಂಕಗಳಾಗುತ್ತಿದ್ದವು. ಅವನು ತನ್ನ ಗಣಿತದ ಉತ್ತರ ಪತ್ರಿಕೆಯ ಜೆರಾಕ್ಸ್ ಪ್ರತಿಯನ್ನು ತರಿಸಿದ. ಆಗ ಅವನಿಗೆ ತಿಳಿಯಿತು, ತಾನು ಬರೆದ ಸಂಖ್ಯೆಯನ್ನು ತಾನೇ ತಪ್ಪಾಗಿ ಓದುತ್ತಿದ್ದೇನೆ ಎಂಬುದು. ಇನ್ನು ಕೆಲವು ಕಡೆ ಅವನ ಅಸ್ಪಷ್ಟ ಬರಹದಿಂದಾಗಿ ಅಂಕಗಳನ್ನು ಕಳೆದುಕೊಂಡಿದ್ದ. ಈಗ ಅವನು ಜಾಗೃತನಾಗಿದ್ದಾನೆ. ಕೆಲವರಿಗೆ ಕೆಟ್ಟ ಮೇಲೇ ಬುದ್ಧಿ ಬರುವುದು. 3. ಸೌಂದರ್ಯ: ಸುಂದರವಾದ ವಸ್ತುಗಳಿಗೆ ಮನಸೋಲದವರಾರು? ಅಮೆರಿಕದಲ್ಲಿ ಒಂದು ಪ್ರಯೋಗ ಮಾಡಿದರಂತೆ (ಅಲ್ಲೇ ಇಂತಹ ಪ್ರಯೋಗಗಳನ್ನೆಲ್ಲ ಮಾಡುವುದು!) ಒಂದು ನಿರ್ದಿಷ್ಟ ಉತ್ಪನ್ನವನ್ನು ಮಾರಾಟ ಮಾಡಲು, ನೋಡಲು ಸುಂದರವಾಗಿರುವ ಸೇಲ್ಸ್ ಗರ್ಲ್ಸ್‌ಗಳ ಒಂದು ಗುಂಪು, ಅಷ್ಟೇನೂ ಸುಂದರವಾಗಿಲ್ಲದ ಹುಡುಗಿಯರ ಇನ್ನೊಂದು ಗುಂಪು. ಯಾವ ಗುಂಪಿನ ಮಾರಾಟ ಹೆಚ್ಚಾಗಿತ್ತು ಎಂದು ನಾನು ಹೇಳಬೇಕಾಗಿಲ್ಲ. ಇನ್ನು ವಿದ್ಯಾರ್ಥಿಗಳ ಕೈಬರಹವಂತೂ ಮೌಲ್ಯಮಾಪನಗೊಳ್ಳುವುದರಿಂದ ಅದು `ವ್ಹಾಹ್! ಅದೆಷ್ಟೊಂದು ಚೆನ್ನಾಗಿದೆ!' ಎಂಬ ಪ್ರತಿಕ್ರಿಯೆ ಗಳಿಸುವಂತೆ ಇರಬೇಕು. (ವಿಷಯ) ಮುಖ್ಯವಾದರೂ (ಧಾರಕ) ಸಹ ಅಲಕ್ಷ್ಯ ಮಾಡುವಂಥದ್ದಲ್ಲ. ಧಾರಕವು ಆಕರ್ಷಕವಾಗಿಲ್ಲದಿದ್ದರೆ ಅದರಲ್ಲೇನಿದೆ ಎಂದು ಯಾರೂ ಕಣ್ಣೆತ್ತಿ ನೋಡುವುದೇ ಇಲ್ಲ. ಕೆಲವು ವಿದ್ಯಾರ್ಥಿಗಳು ತಮ್ಮ ಉತ್ತರದಲ್ಲಿ `ವಿಷಯ' ಇಲ್ಲದಿದ್ದರೂ ಕೇವಲ ತಮ್ಮ ಕೈಬರಹದ ಸೌಂದರ್ಯದಿಂದಲೇ ಪರೀಕ್ಷಕರನ್ನು ಮರುಳು ಮಾಡುತ್ತಾರೆ! 4. ವೇಗ: ಮುದ್ದಾಗಿ ಬರೆಯುವವರ ಬಗೆಗಿನ ಒಂದು ಮುಖ್ಯ ದೂರು ಎಂದರೆ ಅವರು ತುಂಬಾ ನಿಧಾನ ಎಂಬುದು. ಕೆಲವು ವಿದ್ಯಾರ್ಥಿಗಳು ಇಂಗ್ಲಿಷ್ ಅಕ್ಷರಗಳನ್ನು ಬಿಡಿಬಿಡಿಯಾಗಿ, ಸುಂದರವಾಗಿ ಬರೆಯುವುದನ್ನು ನೋಡಿದಾಗ `ಇವರು ದೊಡ್ಡವರಾದ ಮೇಲೂ ಹೀಗೇ ಬರೆಯುತ್ತಾರಾ? ಸಹಿಯನ್ನಾದರೂ ಕೂಡಿರುವಂತೆ ಮಾಡುತ್ತಾರಾ?' ಅನ್ನಿಸುತ್ತದೆ. ವಿದ್ಯಾರ್ಥಿಗಳಿಗಂತೂ ವೇಗ ಅತಿ ಮುಖ್ಯ. ಏಕೆಂದರೆ ಪರೀಕ್ಷೆಗಳಲ್ಲಿ ನಿರ್ದಿಷ್ಟ ಸಮಯದ ಮಿತಿಯೊಳಗೆ ಉತ್ತರ ಬರೆಯಬೇಕಾಗುತ್ತದೆ. ಮನಸ್ಸಿನಲ್ಲಿ ಉತ್ತರಗಳು ಬೇಗ ಮೂಡಬಹುದು. ಆದರೆ ಕೈ ಬರಹದ ವೇಗ ಕಡಿಮೆಯಾದರೆ ಪರೀಕ್ಷೆಯಲ್ಲಿ ಸಮಯ ಸಾಕಾಗುವುದಿಲ್ಲ. ವಿದ್ಯಾರ್ಥಿಗಳಲ್ಲದವರಿಗೂ ವೇಗ ಹೆಚ್ಚಿಸಿಕೊಳ್ಳುವುದು ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ಯಾವುದೇ ಕೆಲಸವನ್ನು ಅಚ್ಚುಕಟ್ಟಾಗಿ ಬೇಗ ಮಾಡಿ ಮುಗಿಸಿದರೆ ನಿಮ್ಮ ಸಾಮರ್ಥ್ಯ ಹೆಚ್ಚು ಎಂದರ್ಥ ಅಲ್ಲವೇ? ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.